ವಾಚಕರ ವಾಣಿ
ಬಹಿರ್ದೆಸೆಗೆ ಹೋಗಿ ಕೆರೆಯಲ್ಲಿ ನೀರು ಮುಟ್ಟುವ ಸಂದರ್ಭದಲ್ಲಿ ಜಾರಿಬಿದ್ದ ಮಕ್ಕಳನ್ನು ರಕ್ಷಿಸಲು ಹೋದ ಹಿರಿಯರು ಹಾಗೂ ಆ ಇಬ್ಬರೂ ಮಕ್ಕಳು ಮೃತರಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ವರದಿಯಾಗಿದೆ. ದೇಶದ ಎಲ್ಲ ಕುಟುಂಬಗಳೂ ಶೌಚಾಲಯ ಬಳಸಬೇಕೆಂಬ ಯೋಜನೆ ಹಲವು ವರ್ಷಗಳಿಂದ ಜಾರಿಯಲ್ಲಿದೆ. ಕೇಂದ್ರ ಸರ್ಕಾರ ‘ಸ್ವಚ್ಛ ಭಾರತ’ ಅಭಿಯಾನದ ಹೆಸರಿನಲ್ಲಿ ದೇಶವು ಬಯಲು ಶೌಚಮುಕ್ತವಾಗಿದೆಯೆಂದು ಘೋಷಿಸಲು ಹೊರಟಿದೆ. ಜತೆಗೆ, ಸ್ವಚ್ಛ ಭಾರತ ಯೋಜನೆಗೆ ವಿವಿಧ ಮೂಲಗಳಿಂದ ಸಾಕಷ್ಟು ಹಣ ಸಂಗ್ರಹಿಸುತ್ತಿದೆ. ಹೀಗಿದ್ದಾಗ್ಯೂ, ನೀರು ಮುಟ್ಟಲು ಹೋಗಿ ಪ್ರಾಣ ಕಳೆದುಕೊಂಡವರ ಪ್ರಕರಣ ನೋಡಿದರೆ ಬಯಲು ಶೌಚಮುಕ್ತ ಯೋಜನೆಯ ನೈಜಸ್ಥಿತಿ ಅರ್ಥವಾಗುತ್ತದೆ.
⇒ಈ. ಬಸವರಾಜು, ಬೆಂಗಳೂರು
‘ಬಿ’ ಖಾತೆ ಆಸ್ತಿಯನ್ನು ‘ಎ’ ಖಾತೆಯಾಗಿ ಪರಿವರ್ತನೆ ಮಾಡಿಕೊಡುವುದಾಗಿ ರಾಜ್ಯ ಸರ್ಕಾರ ನಿರ್ಧರಿಸಿರುವುದು ಸರಿಯಷ್ಟೇ. ಇದು ಹಲವು ವರ್ಷಗಳಿಂದ ‘ಬಿ’ ಖಾತೆ ಆಸ್ತಿ ಹೊಂದಿದವರ ಕನಸು ಕೂಡ ಆಗಿತ್ತು. ಸದ್ಯ ‘ಬಿ’ ಖಾತೆದಾರರಿಗೆ ಖುಷಿಯ ವಿಚಾರವಾದರೂ ಬಿಸಿತುಪ್ಪದಂತಾಗಿದೆ. ‘ಎ’ ಖಾತೆ ಪರಿವರ್ತನೆಗೆ ಲಕ್ಷಗಟ್ಟಲೆ ಹಣ ಕಟ್ಟಬೇಕೆಂದು ತಿಳಿದು ಗಾಬರಿಯಾಗುತ್ತಿದೆ. ಅದೂ ನೂರು ದಿನದೊಳಗೆ ಹೊಂದಿಸುವುದು ಹೇಗೆ ಎಂಬ ಚಿಂತೆಯಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ‘ಬಿ’ ಖಾತೆದಾರರ ಕಷ್ಟಕ್ಕೆ ನೆರವಾಗಬೇಕಿದೆ.
⇒ನಂದಕುಮಾರ್, ಬೆಂಗಳೂರು
‘ಶೀಲ ಶಂಕಿಸಿ ಪತ್ನಿಯ ಕೊಲೆ’, ‘ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ ಪತಿ ಬಂಧನ’, ‘ಪತ್ನಿಯ ಶೀಲವನ್ನು ಶಂಕಿಸಿ ಹತ್ಯೆಗೈದ ಪತಿ’ –ಇಂತಹ ಶೀರ್ಷಿಕೆಯಡಿ ಕೊಲೆ ಸುದ್ದಿಗಳು ವರದಿಯಾಗುತ್ತಿರುತ್ತವೆ. ಇದು ಕೊಲೆ ಅಷ್ಟೇ. ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದಾನೆ ಎಂಬುದು ಕೊಲೆಗಾರನ ಸಮಜಾಯಿಷಿ ಅಷ್ಟೇ. ಕೊಲೆಗಾರನ ಮಾತನ್ನು ನಂಬಿ ಮೃತ ಮಹಿಳೆಯ ಶೀಲ ಶಂಕಿಸಿ ಸಾರ್ವಜನಿಕವಾಗಿ ಅವಮಾನಿಸುವುದು ಅಮಾನವೀಯವಲ್ಲವೆ?
⇒ಪಿ.ಜೆ. ರಾಘವೇಂದ್ರ, ಮೈಸೂರು
ಕೇಂದ್ರ ಸರ್ಕಾರವು ನಕ್ಸಲರ ಹತ್ಯೆಯನ್ನು ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ಭೂಮಾಲೀಕರ ಅಟ್ಟಹಾಸ ಮತ್ತು ಅಧಿಕಾರಿಗಳ ಭ್ರಷ್ಟಾಚಾರ ವಿರೋಧಿಸಿಯೇ ದೇಶದಲ್ಲಿ ನಕ್ಸಲರು ಹುಟ್ಟಿಕೊಂಡಿದ್ದು ಎನ್ನುವುದು ಸರ್ವವಿದಿತ. ನಕ್ಸಲರು ಆಯ್ದುಕೊಂಡ ಮಾರ್ಗ ಹಿಂಸೆಯಿಂದ ಕೂಡಿತ್ತು. ಆರಂಭದಲ್ಲಿ ಭ್ರಷ್ಟಾಚಾರ ಎಸಗುವವರನ್ನೂ ಹತ್ಯೆ ಮಾಡುತ್ತಿದ್ದರು. ಕೊನೆಯಲ್ಲಿ ತಮ್ಮ ಅಸ್ತಿತ್ವಕ್ಕಾಗಿ ನಿರಪರಾಧಿಗಳನ್ನು ಗುರಿಯಾಗಿಸಿಕೊಂಡಿರಬಹುದು. ಸರ್ಕಾರ ಸ್ವಯಂಪ್ರೇರಿತವಾಗಿ ಭ್ರಷ್ಟಾಚಾರವನ್ನು ಕೊನೆಗೊಳಿಸಿದ್ದರೆ, ನಕ್ಸಲ್ ಸಿದ್ಧಾಂತ ತನಗೆ ತಾನೇ ಕೊನೆಗೊಳ್ಳುತ್ತಿತ್ತು. ಸರ್ಕಾರ, ಆರ್ಥಿಕ ವ್ಯವಸ್ಥೆಯನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡಿದರೆ ನಾಗರಿಕ ವ್ಯವಸ್ಥೆಯು ಅದನ್ನು ವಿರೋಧಿಸಲು ಮತ್ತೊಂದು ಸಂಘಟನೆಯನ್ನು ಕಟ್ಟುತ್ತದೆ. ಆರ್ಥಿಕ ಅಸಮಾನತೆ ಮುಂದುವರಿದರೆ ಸಂಘರ್ಷವೂ ಒಂದಲ್ಲಾ ಒಂದು ರೂಪದಲ್ಲಿ ಉಳಿಯಲಿದೆ.
⇒ಪ್ರಶಾಂತ್ ಕೆ.ಸಿ., ಚಾಮರಾಜನಗರ
ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ವೀರಶೈವ ಆಗಮ, ವೇದ ಮತ್ತು ಸಂಸ್ಕೃತ ಪಾಠಶಾಲೆಯ ಶಿಕ್ಷಕ ವೀರೇಶ ಹಿರೇಮಠ, ವಿದ್ಯಾರ್ಥಿಯನ್ನು ಅಮಾನುಷವಾಗಿ ಥಳಿಸಿರುವುದು ಅಮಾನವೀಯ. ನಾವೂ ವಿದ್ಯಾರ್ಥಿಗಳಾಗಿದ್ದಾಗ ನಮ್ಮನ್ನೂ ಶಿಕ್ಷಕರು ಸರಿಯಾಗಿಯೇ ಥಳಿಸುತ್ತಿದ್ದರು. ಆದರೆ, ವೀರೇಶರಂತೆ ಎಂದೂ ದಂಡಿಸಿರಲಿಲ್ಲ. ಸತ್ಯ, ಅಹಿಂಸೆ, ದಯಾ, ಕ್ಷಮೆ ಆದರ್ಶ ಗುರುವಿನ ಗುಣಗಳು. ಗುರುಕುಲದ ‘ಸಂಸ್ಕಾರ’ವಿಲ್ಲದ, ‘ಸಂಸ್ಕೃತ’ ಬೋಧಿಸುವ ಗುರುವಿನ ಕ್ರೌರ್ಯದ ನಡೆಯೂ ಗುರುಧರ್ಮವು ಅಧರ್ಮದತ್ತ ಸಾಗುತ್ತಿರುವುದಕ್ಕೆ ನಿದರ್ಶನದಂತಿದೆ.
⇒ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ದೇಶದ ಪ್ರತಿಷ್ಠಿತ ಜ್ಞಾನಕೇಂದ್ರಗಳಲ್ಲಿ ಒಂದಾಗಿದೆ. 1911ರಲ್ಲಿ ಶಿಲಾನ್ಯಾಸಗೊಂಡ ಈ ಸಂಸ್ಥೆಗೆ ಸುಮಾರು 371 ಎಕರೆ ಪ್ರದೇಶವನ್ನು 1907ರಲ್ಲಿ ಜೆಮ್ ಶೆಡ್‌ಜಿ ಟಾಟಾ ಅವರಿಗೆ ದಾನವಾಗಿ ನೀಡಿದ್ದು, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂಬುದು ಇತಿಹಾಸ. ವಿಜ್ಞಾನ, ಶಿಕ್ಷಣ, ಮಹಿಳಾ ಸಬಲೀಕರಣ, ವಿದ್ಯುತ್ ಉತ್ಪಾದನೆ, ಕೈಗಾರಿಕಾ ಅಭಿವೃದ್ಧಿ ಸೇರಿ 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಒಡೆಯರ್ ಅವರ ದೂರದೃಷ್ಟಿಯ ಕಾರ್ಯಗಳು ಕರ್ನಾಟಕವನ್ನು ದೇಶದ ಪ್ರಗತಿಪರ ರಾಜ್ಯವನ್ನಾಗಿ ರೂಪಿಸಿವೆ. ಅವರ ಆ ದೂರದೃಷ್ಟಿಯಿಂದ ಪ್ರಸ್ತುತ ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನದ ನೆಲೆಬೀಡಾಗಿದೆ. ಹಾಗಾಗಿ, ಐಐಎಸ್‌ಸಿ ‘ಮುಖ್ಯದ್ವಾರ’ದಲ್ಲಿ ನಾಲ್ವಡಿ ಅವರ ಭವ್ಯ ಪ್ರತಿಮೆ ಸ್ಥಾಪಿಸುವುದು ಸಮಂಜಸ.
ರಾ. ಪ್ರಕಾಶ್ ಅರಸ್, ಡಾ. ಜೆ. ಶಾಂತಿ ಪ್ರಸಾದ್,
ಎ. ಅಶೋಕ್ ಅರಸ್, ಲೋಕನಾಥ್ ಎ,. ಗಣೇಶ್ ಕಾಳೇಕರ್,
ಎನ್.ಜಿ. ಉಮೇಶ್, ಮಂಜುನಾಥ್ ಬೋನ್ಸ್ಲೆ, ಬೆಂಗಳೂರು
ಅನ್ನ ಬೆಂದಿದೆಯೊ ಇಲ್ಲವೊ
ತಿಳಿಯಲು ಒಂದೇ ಒಂದು
ಅಗುಳು ಅನ್ನ ಸಾಕು,
ಸರ್ಕಾರದ ಆಡಳಿತ ವೈಖರಿ
ಅರಿಯಲು ಇನ್ನೆಷ್ಟು ರಸ್ತೆ
ಗುಂಡಿಗಳು ಬೀಳಬೇಕು!
ಮಲ್ಲಿಕಾರ್ಜುನ, ಸುರಧೇನುಪುರ