ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 17 ಜೂನ್ 2025, 19:19 IST
Last Updated 17 ಜೂನ್ 2025, 19:19 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ವೆಬ್‌ಕಾಸ್ಟಿಂಗ್‌ ಔಚಿತ್ಯಪೂರ್ಣ

ದೇಶದ ಎಲ್ಲ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಚುನಾವಣಾ ಆಯೋಗವು ಮುಂದಾಗಿರುವುದು ಔಚಿತ್ಯಪೂರ್ಣ (ಪ್ರ.ವಾ., ಜೂನ್ 17). ಇದರಿಂದ ಪ್ರಜಾಪ್ರಭುತ್ವದ ನೈಜ ಮೌಲ್ಯಗಳು ಯಶಸ್ವಿಯಾಗಿ ಅನುಷ್ಠಾನ
ಗೊಳ್ಳಲು ಸಾಧ್ಯವಾಗಲಿದೆ. ಜೊತೆಗೆ, ನಕಲು ಮತದಾನಕ್ಕೆ ಕಡಿವಾಣ ಬೀಳಲಿದೆ. ಪ್ರಾದೇಶಿಕ ಪಕ್ಷಗಳು ಹಾಗೂ ರಾಷ್ಟ್ರೀಯ ಪಕ್ಷಗಳು ಪಕ್ಷಾತೀತವಾಗಿ ಬದ್ಧತೆ ಪ್ರದರ್ಶಿಸಿ ಒಮ್ಮತದಿಂದ ಸಹಕಾರ ನೀಡಿದಾಗಲಷ್ಟೇ ಆಯೋಗದ ಉದ್ದೇಶಗಳು ಸಾಕಾರಗೊಳ್ಳಲು ಸಾಧ್ಯ.

ADVERTISEMENT

⇒ಜಯವೀರ ಎ.ಕೆ., ರಾಯಬಾಗ 

ಕೆಆರ್‌ಎಸ್ ಜಲಾಶಯ: ಭದ್ರತೆ ಲೋಪ

ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಬಲದಂಡೆ ನಾಲೆಯ ದುರಸ್ತಿ ಕಾರ್ಯ ನಡೆಯುವ ವೇಳೆ ಕೂಲಿ ಕಾರ್ಮಿಕರ ಜೊತೆ ತೆರಳಿ ಜಲಾಶಯದಲ್ಲಿ ನೀರು ಖಾಲಿಯಾಗುತ್ತಿರುವುದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ವ್ಯಕ್ತಿಗಳನ್ನು ಬಂಧಿಸಿರುವುದು ವರದಿಯಾಗಿದೆ (ಪ್ರ.ವಾ., ಜೂನ್ 15). ಇಲ್ಲಿ ಜಲಾಶಯದ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ತಳೆದಿರುವ ಭದ್ರತಾ ವಿಭಾಗ ಹಾಗೂ ಅವಕಾಶ ಸಿಕ್ಕಾಗ ಜಲಾಶಯದೊಳಗೆ ನುಸುಳಿರುವ ವ್ಯಕ್ತಿಗಳ ತಪ್ಪು ಎದ್ದು ಕಾಣುತ್ತದೆ. ರೀಲ್ಸ್‌ ಮಾಡಲು ಆರೋಪಿಗಳು ಜಲಾಶಯದೊಳಗೆ ನುಸುಳಿರುವುದು ಅಲ್ಲಿನ ಭದ್ರತಾ ಲೋಪಕ್ಕೆ ಕನ್ನಡಿ ಹಿಡಿದಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ. 

⇒ಕೆ.ಎಂ. ನಾಗರಾಜು, ಮೈಸೂರು

ಬಾಲ್ಯವಿವಾಹ: ಕಠಿಣ ಶಿಕ್ಷೆ ವಿಧಿಸಿ

ಚಾಮರಾಜನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕವಿತ ಬಿ.ಟಿ. ಅವರು, ತಮ್ಮ ಲೇಖನದಲ್ಲಿ (ಪ್ರ.ವಾ., ಜೂನ್ 16) ಬಾಲ್ಯವಿವಾಹಕ್ಕೆ ಕಾರಣಗಳು ಮತ್ತು ಅದರಿಂದಾಗುವ ದುಷ್ಪರಿಣಾಮ ಕುರಿತು ಮಾಹಿತಿ ನೀಡಿದ್ದಾರೆ. ಈ ಅನಿಷ್ಟ ಪದ್ಧತಿಯ ಮೂಲೋತ್ಪಾಟನೆಗೆ ಪರಿಹಾರ ಕೂಡ ಸೂಚಿಸಿದ್ದಾರೆ.

ಬಾಲ್ಯವಿವಾಹ ತಡೆ ಕಾಯ್ದೆಯಡಿ ತಪ್ಪಿತಸ್ಥರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಲು ಅವಕಾಶವಿದೆ. ಶಿಕ್ಷೆಗೆ ಹೆದರದವರು ಬುದ್ಧಿಮಾತು ಹೇಳಿದರೆ ಕೇಳುವುದಿಲ್ಲ. ಬಾಲ್ಯವಿವಾಹ ಮಾಡಿದ ಪೋಷಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಈ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು. ಆಗಷ್ಟೇ ಸುಧಾರಣೆ ಕಾಣಲು ಸಾಧ್ಯ.

⇒ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು 

ಗುಂಡುತೋಪು ಸಂರಕ್ಷಣೆಗೆ ನಿರ್ಲಕ್ಷ್ಯ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣವನ್ನು ‘ಜೈವಿಕ ವೈವಿಧ್ಯ ವನ’ ಅಥವಾ ‘ಪಾರಂಪರಿಕ ತಾಣ’ವಾಗಿ ಘೋಷಿಸುವಂತೆ ಪರಿಸರ ಕಾರ್ಯಕರ್ತರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಇದೇ ಮಾದರಿಯಲ್ಲಿ ಹಳ್ಳಿಗಳಲ್ಲಿರುವ ‘ಗುಂಡುತೋಪು’ಗಳನ್ನೂ ‘ಪಾರಂಪರಿಕ ತಾಣ’
ಗಳನ್ನಾಗಿ ಘೋಷಿಸಬೇಕಿದೆ. ಇದರಿಂದ ಪರಿಸರ ಸಂರಕ್ಷಣೆಯ ಜೊತೆಗೆ ಗ್ರಾಮೀಣ ಪರಂಪರೆಯೂ ಉಳಿಯಲಿದೆ. ಅಭಿವೃದ್ಧಿ ಹೆಸರಿನಲ್ಲಿ ಗುಂಡುತೋಪು, ಹುಲ್ಲುಗಾವಲು, ಗ್ರಾಮಾರಣ್ಯ, ಕೆರೆ- ಕುಂಟೆಗಳ ಜೊತೆಗೆ ಜಲಮೂಲಗಳು ನಾಶವಾಗುತ್ತಿವೆ. ಇದರಿಂದಾಗಿ ಜೀವ ವೈವಿಧ್ಯಕ್ಕೆ ಧಕ್ಕೆ ಉಂಟಾಗಿದೆ. ಸರ್ಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ಸಣ್ಣ ಅರಣ್ಯಗಳ ಅಭಿವೃದ್ಧಿಗೂ ಒತ್ತು ನೀಡಿದರೆ ಜೀವಿವೈವಿಧ್ಯ ಉಳಿಯಲಿದೆ. 

⇒ಜಿ. ಬೈರೇಗೌಡ, ನೆಲಮಂಗಲ 

ಜಾತೀಯತೆ ನಿರ್ಮೂಲನೆಯಾಗಲಿ

ಕೇಂದ್ರ ಸರ್ಕಾರವು ಜನಗಣತಿಯ ಜೊತೆಗೆ ಜಾತಿ ಜನಗಣತಿ ನಡೆಸುವುದಾಗಿ ಹೇಳಿದೆ. ರಾಜ್ಯದಲ್ಲಿ ಹತ್ತು ವರ್ಷಗಳ ಹಿಂದೆ ನಡೆದಿದ್ದ ಜಾತಿ ಜನಗಣತಿ ವರದಿಯು (ಆರ್ಥಿಕ, ಸಾಮಾಜಿಕ ಸಮೀಕ್ಷೆ) ಮಾನ್ಯತೆ ಕಳೆದುಕೊಂಡಿದೆ. ಹೊಸದಾಗಿ ಜಾತಿ ಜನಗಣತಿ ನಡೆಸುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ. ಈಗಿನ ಬಹುತೇಕ ಜನನಾಯಕರು ಜಾತೀಯತೆ ವಿರುದ್ಧ ಉದ್ದುದ್ದ ಭಾಷಣ ಮಾಡುತ್ತಲೇ ಬಂದಿದ್ದಾರೆ. ಆದರೆ, ಜಾತೀಯತೆ ನಿರ್ಮೂಲನೆಯಾಗಿಲ್ಲ. ‌ಸಂವಿಧಾನವು ಸಾಮಾಜಿಕವಾಗಿ ಹಿಂದುಳಿದ ಜಾತಿಗಳ ಶ್ರೇಯೋಭಿವೃದ್ಧಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿದೆ ಎಂಬುದು ನಿಜ. ಆದರೆ, ಇದು ಜಾರಿಗೊಂಡು ಹಲವು ದಶಕಗಳೇ ಉರುಳಿದರೂ ಇನ್ನೂ ಮೀಸಲಾತಿಗಾಗಿ ಪೈಪೋಟಿ ನಡೆಯುತ್ತಿರುವುದು ದುರಂತ.‌

⇒ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.