ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 26 ಫೆಬ್ರುವರಿ 2026, 23:30 IST
Last Updated 26 ಫೆಬ್ರುವರಿ 2026, 23:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ದಲಿತ ಸಿಎಂ: ಪೂರ್ಣಾವಧಿಗೆ ಇರಲಿ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು ತಾರಕಕ್ಕೇರಿದೆ. ದಲಿತರಿಗೆ ಸಿಎಂ ಪಟ್ಟ ನೀಡಲಿ ಎಂದು ಕೆಲವರು ಕೇಳುತ್ತಿರುವುದು ತಪ್ಪೇನಲ್ಲ. ಆದರೆ, ಅಧಿಕಾರ ಬಿಟ್ಟುಕೊಡುವ ಮನಸ್ಸು ಸಿದ್ದರಾಮಯ್ಯನವರಿಗೆ ಇದ್ದಂತಿಲ್ಲ. ನನ್ನ ಬದಲು ದಲಿತರಲ್ಲಿ ಇಂಥವರು ಸಿಎಂ ಆಗಲಿ ಎಂದು ಹೇಳಿ ಕುರ್ಚಿ ಬಿಟ್ಟುಕೊಟ್ಟರೆ ಅವರಿಗೆ ಹೆಚ್ಚಿನ ಗೌರವ ಪ್ರಾಪ್ತವಾಗುತ್ತದೆ. ಆದರೆ, ಅವರಿಗೆ ಮನಸ್ಸಿಲ್ಲ; ಸದ್ಯಕ್ಕೆ ಅಂತಹ ಸನ್ನಿವೇಶವೂ ಹದಗೊಂಡಿಲ್ಲ. ಸರ್ಕಾರದ ಅವಧಿ ಇನ್ನು ಎರಡು ವರ್ಷವಷ್ಟೇ ಇದೆ. ಈ ಅರೆಕಾಲಿಕ ಅವಧಿಗೆ ದಲಿತರಿಗೆ ಸಿಎಂ ಗಾದಿ ಕೇಳುವ ಬದಲು, ಮುಂದೆ ಪೂರ್ಣಾವಧಿಗೆ ಸಿಎಂ ಆಗುವುದೇ ಸೂಕ್ತವೂ ತೃಪ್ತಿಕರವೂ ಆಗುತ್ತದೆಯಲ್ಲವೇ?

⇒ಗೋವಿಂದು, ಬೆಂಗಳೂರು 

ADVERTISEMENT

ಜನರ ಜೀವ ಹಿಂಡುತ್ತಿದೆ ವಿಷಕಾರಿ ಹೊಗೆ

ಸಂವಿಧಾನದ 21ನೇ ಅನುಚ್ಛೇದದ ಬದುಕುವ ಹಕ್ಕಿನಡಿ ಆರೋಗ್ಯಕರ ಮತ್ತು ಮಾಲಿನ್ಯರಹಿತ ವಾತಾವರಣವು ಪ್ರತಿಯೊಬ್ಬ ಭಾರತೀಯನ ಮೂಲಭೂತ ಹಕ್ಕು. ರಾಜ್ಯ ನೀತಿ ನಿರ್ದೇಶಕ ತತ್ತ್ವದ ಅಡಿ ಸ್ವಚ್ಛ ವಾತಾವರಣ ಕಾಪಾಡುವುದು ರಾಜ್ಯದ ಕರ್ತವ್ಯ. ಅನುಚ್ಛೇದ 51ಎ(ಜಿ) ಅಡಿ ಪ್ರಕೃತಿ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸಂವಿಧಾನದ ಆಶಯದಂತೆ ಮೂಲಭೂತ ಹಕ್ಕನ್ನು ಕಾಪಾಡಲು ಕೊಪ್ಪಳ ಜಿಲ್ಲೆಯಲ್ಲಿ ಬಲ್ಡೋಟಾ ಕಾರ್ಖಾನೆಯಿಂದ ಆಗುತ್ತಿರುವ ಪರಿಸರ ಮಾಲಿನ್ಯದ ವಿರುದ್ಧ ಜನತೆ ಹೋರಾಡುತ್ತಿದ್ದಾರೆ. ಆದರೆ, ಸರ್ಕಾರ ಪರಿಹಾರಾತ್ಮಕ ಕ್ರಮಕೈಗೊಳ್ಳುತ್ತಿಲ್ಲ. ಆಡಳಿತ ನಡೆಸುವವರು ಸಂವಿಧಾನ ಪಾಲಿಸದೆ ತೋರುವ ಅಸಡ್ಡೆ ಸರಿಯಲ್ಲ. ಪ್ರಜಾತಂತ್ರದಲ್ಲಿ ಪ್ರಜೆಗಳ ಆಶಯ ಮತ್ತು ಅವಶ್ಯಕತೆಗಿಂತ ಮಿಗಿಲಾದುದು ಏನಿದೆ?

⇒ಮಾದಪ್ಪ ಎಸ್. ಕಠಾರಿ, ವಿಜಯಪುರ 


ರಾಜ್ಯ ಸರ್ಕಾರದ ಹಳಿ ತಪ್ಪಿದ ಆರ್ಥಿಕ ಸ್ಥಿತಿ

‘ಹಿಂದಿನ ಸರ್ಕಾರದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು; ತಮ್ಮ ಅವಧಿಯಲ್ಲಿ ಸರಿಪಡಿಸಿ ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿಪರ ಆಡಳಿತ ನೀಡುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಹೇಳಿದ್ದರು. ಆದರೆ, ಈಗ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಒದ್ದಾಟ. ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸಿಲ್ಲ.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ನೀಡದಿರುವುದರಿಂದ ಬೀದಿಗಿಳಿದಿದ್ದಾರೆ. ನೇಮಕಾತಿಗೆ ಮನಸ್ಸು ಮಾಡುತ್ತಿಲ್ಲ. ಈ ಎಲ್ಲಾ ಬೆಳವಣಿಗೆ ನೋಡಿದರೆ ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿ ಅಂಚಿಗೆ ತಲಪಿದೆಯೇ ಎಂಬ ಗುಮಾನಿ ಕಾಡದಿರದು.

ಸುರೇಶ್ ಬಾಗಿಲ್ಮನೆ, ಕುರುಗೋಡು 

ಎಂಜಿನ್ ಆಫ್ ಮಾಡಿ, ಪರಿಸರ ಸಂರಕ್ಷಿಸಿ 

ರಸ್ತೆಯಲ್ಲಿ ಕೆಲವು ರೆಡ್ ಸಿಗ್ನಲ್‌ಗಳ ಬಳಿ ಕಾಯುವ ಸಮಯ 100 ಸೆಕೆಂಡಿಗಿಂತ ಹೆಚ್ಚಿರುತ್ತದೆ. ಈ ವೇಳೆ ವಾಹನದ ಎಂಜಿನ್ ಸ್ವಿಚ್‌ಆಫ್ ಮಾಡುವುದು ಎರಡು ರೀತಿಯಲ್ಲಿ ಫಲಕಾರಿ: ಮೊದಲನೆಯ
ಲಾಭ ಇಂಧನ ಉಳಿತಾಯ. ವಾಹನದ ಎಂಜಿನ್ ಅನ್ನು ಮತ್ತೆ ಚಾಲನೆಗೊಳಿಸಲು ಸ್ವಲ್ಪ ಹೆಚ್ಚು ಇಂಧನ ಖರ್ಚು ಆದರೂ ಒಟ್ಟಾರೆ ಇಂಧನ ಉಳಿತಾಯ ಆಗುತ್ತದೆ. ಬೆಂಗಳೂರಿನಲ್ಲಿ ಕೋಟಿಗೂ ಹೆಚ್ಚು ವಾಹನಗಳಿವೆ. ಈ ಪೈಕಿ ದಿನವೊಂದರಲ್ಲಿ ಅರ್ಧದಷ್ಟು ವಾಹನಗಳು ರಸ್ತೆಗೆ ಇಳಿಯುತ್ತವೆ. ಪ್ರತಿ ವಾಹನವು 1 ಮಿ.ಲೀ ಇಂಧನ ಉಳಿತಾಯ ಮಾಡುತ್ತದೆಂದು ಅಂದಾಜಿಸಿದರೂ 5 ಸಾವಿರ ಲೀ. ನಷ್ಟು ಇಂಧನ ಉಳಿಯುತ್ತದೆ. ಎರಡನೆಯದಾಗಿ, ಎಂಜಿನ್ ಹೊಗೆ ಕಡಿಮೆ ಆಗಿ ಸುತ್ತಲಿನ ಪರಿಸರ ಮಾಲಿನ್ಯದಿಂದ ಮುಕ್ತವಾಗುತ್ತದೆ. ಇದರ ಲಾಭವನ್ನು ಹಣದಿಂದ ಅಳೆಯಲಾಗದು.

⇒ಲಕ್ಷ್ಮಣ್ ಗೊರ್ಲಕಟ್ಟೆ, ಮೈಸೂರು 

ಗಿರಿ–ಗುರಿ

ಶಾಸಕರ ಬಯಕೆ

ಮಂತ್ರಿಗಿರಿ!

ನಿರುದ್ಯೋಗಿಗಳ ಕೋರಿಕೆ

ಸರ್ಕಾರಿ ನೌಕರಿ!

ಸಿಎಂ ಒಪ್ಪುತ್ತಾರೆ

ಇಬ್ಬರದೂ ಸರಿ ಸರಿ!

ಆದರೆ, ಈಡೇರಿಸುವವರಾರು

ಡಿಸಿಎಂ ಅವರ ಗುರಿ!

 ಮ.ಗು. ಬಸವಣ್ಣ, ಮೈಸೂರು

ವಿಷಯುಕ್ತ ಹಣ್ಣುಗಳ ಬಗ್ಗೆ ಇರಲಿ ಜಾಗೃತಿ

ಮಾರುಕಟ್ಟೆಯಲ್ಲಿ ವಿಷಕಾರಿ ಹಣ್ಣು, ತರಕಾರಿ ಮಾರಾಟ ಹೆಚ್ಚಾಗುತ್ತಿದೆ. ಇದರಿಂದ ನಾಗರಿಕರು ಗಾಬರಿಪಡುವಂತಾಗಿದೆ. ಈಗ ಬಿಸಿಲಿನ ಝಳ ಹೆಚ್ಚುತ್ತಿದ್ದು, ಕಲ್ಲಂಗಡಿ ಹಣ್ಣು ತಿನ್ನೋಣವೆಂದರೂ ಭಯ ಆವರಿಸಿದೆ. ದಿನನಿತ್ಯದ ಬಳಕೆಗೆ ತರಕಾರಿಗಳನ್ನು ಖರೀದಿಸಲು ಭಯಪಡುವಂತಾಗಿದೆ. ಸಾವಯವ ತರಕಾರಿಯಲ್ಲೂ ಸೀಸದ ಅಂಶ ಹೆಚ್ಚಾಗಿರುವ ಸುದ್ದಿಯು ಭೀತಿ ಹೆಚ್ಚಿಸಿರುವುದು ಸುಳ್ಳಲ್ಲ. ಇಷ್ಟಾದರೂ ಸರ್ಕಾರ ಸುಮ್ಮನಿದೆ. ನಿರ್ಲಕ್ಷ್ಯ ಮಾಡದೆ ತುರ್ತು ಕ್ರಮಕೈಗೊಳ್ಳಬೇಕಿದೆ. 

⇒ಸಿ. ಸಿದ್ದರಾಜು ಆಲಕೆರೆ, ಮಂಡ್ಯ 

ಉದ್ಯೋಗ ‘ಗ್ಯಾರಂಟಿ’ ಆಗಬೇಕಲ್ಲವೆ?

ಕಳೆದ ಮೂರು ವರ್ಷಗಳಲ್ಲಿ ಸುಮಾರು ನಲವತ್ತು ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿರುವುದಾಗಿ ರಾಜ್ಯ ಸರ್ಕಾರ ನೀಡಿರುವ ಹೇಳಿಕೆ ಪ್ರಶ್ನಾರ್ಹ. ಅಧಿಕೃತ ದಾಖಲೆ ಪ್ರಕಾರ, 8,251 ಹುದ್ದೆಗಳಷ್ಟೆ ಭರ್ತಿಯಾಗಿವೆ. ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುವುದು ಸರಿಯಲ್ಲ. ಇದು ಉದ್ಯೋಗ ಆಕಾಂಕ್ಷಿಗಳಲ್ಲಿ ಅಸಮಾಧಾನವನ್ನು ಹೆಚ್ಚಿಸಲಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಷ್ಟೇ ಸರ್ಕಾರದ ಜವಾಬ್ದಾರಿಯಲ್ಲ. ಯುವಕರಿಗೆ ಉದ್ಯೋಗ ನೀಡುವುದೂ ಗ್ಯಾರಂಟಿಯಲ್ಲವೆ? ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಹೊಸ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಿ.

 ಮುತ್ತು ಕುಂಟೋಜಿ, ದೇವರಹಿಪ್ಪರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.