ವಾಚಕರ ವಾಣಿ
‘ಉದಯರವಿ’ ಔದಾರ್ಯ ಮುಂದುವರಿಸಿ
ಕುವೆಂಪು ಅವರ ಮಗಳು ತಾರಿಣಿ ಚಿದಾನಂದ, ಅಳಿಯ ಪ್ರೊ.ಕೆ. ಚಿದಾನಂದಗೌಡ ಮೈಸೂರಿನಲ್ಲಿರುವ ‘ಉದಯರವಿ’ ನಿವಾಸದ ಹಸ್ತಾಂತರಕ್ಕೆ ಮೊದಲು ₹5 ಕೋಟಿ, ನಂತರ ₹10 ಕೋಟಿ, ₹15 ಕೋಟಿಯ ಜೊತೆಗೆ ಮನೆ, ನಿವೇಶನ ಸೇರಿ ಉದ್ದುದ್ದದ ಬೇಡಿಕೆ ಇರಿಸಿದ್ದಾರೆಂದು ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದ್ದಾರೆ (ಪ್ರ.ವಾ., ಜ. 31). ಆದರೆ, ‘ಪರಿಸ್ಥಿತಿಯ ಲಾಭ’ ಬಯಸುವ ಮಾರ್ಗವೂ ನ್ಯಾಯೋಚಿತವಾಗಿರಲಿ. ಭೌತಿಕ ಮನೆಯೊಂದನ್ನು ಕಟ್ಟಿ ನಿನ್ನೆಲ್ಲ ಶಕ್ತಿಯನ್ನು ಅದರಲ್ಲಿ ಇರಿಸಬೇಡ. ಜಗತ್ತಿನಾದ್ಯಂತ ನಿನ್ನಲ್ಲಿನ ಚೇತನವನ್ನು ಪಸರಿಸು ಎಂದು ಹೇಳುವುದಕ್ಕಾಗಿಯೇ ಕುವೆಂಪು ‘ಓ ನನ್ನ ಚೇತನ’ ಕವನದಲ್ಲಿ ಪ್ರಸ್ತಾಪಿಸಿರುವ ‘ಮನೆಯನೆಂದು ಕಟ್ಟದಿರು’ ಎಂಬ ಪದಪುಂಜವು ಕುಟುಂಬದವರ ಹೃದಯವನ್ನೇ ತಟ್ಟುತ್ತಿಲ್ಲ ಎನಿಸುತ್ತವೆ.
‘ಉದಯರವಿ’ ನಿವಾಸದಲ್ಲಿ ಕುವೆಂಪುರವರು ಗೇಯ್ದ ಕನ್ನಡ-ಕಾಯಕ-ಕೈಂಕರ್ಯದ ಚೆಂಬೆಳಕನ್ನು ಸ್ಮಾರಕ ರೂಪದಲ್ಲಿ ಜತನದಿಂದ ಕಾಪಿಡುವ, ಚಿಂತನೆಗಳನ್ನು ವಿಸ್ತರಿಸಲು ಕುಟುಂಬದ ಬೇಡಿಕೆಗಳು ಅಡ್ಡಿಯಾದರೆ ಅದೊಂದು ನಾಡಿನ ದುರಂತ. ಸ್ವತಃ ಕುವೆಂಪು ಕಟ್ಟಿದ ಮನೆಯನ್ನು ಸ್ಮಾರಕವಾಗಿಸುವ ನಿಟ್ಟಿನಲ್ಲಿ ಕುಟುಂಬದವರ ‘ಔಚಿತ್ಯಪೂರ್ಣ ಔದಾರ್ಯ’ವು ‘ಹಣದ ಮುಂದೆ ಗೌಣ’ವಾಗುತ್ತಿರುವುದಕ್ಕೆ ನಾಡಿನ ಪ್ರಜ್ಞಾವಂತರು ಚಿಂತಿಸುವಂತಾಗಿದೆ. ‘ಕುವೆಂಪು ನುಡಿತೋರಣ’ದಲ್ಲಿ ಬಡವರ ಮತ್ತು ಶ್ರೀಮಂತರ ನಡುವಣ ಅಂತರ ಖಂಡಿತ ಕಡಿಮೆಯಾಗಬೇಕೆಂದು ಹೇಳಿದ ಕುವೆಂಪು ಅವರನ್ನೇ ಅಣಕಿಸುವಂತೆ ಕುಟುಂಬದವರ ಬೇಡಿಕೆಗಳು ಇರಬಾರದು.
– ಸಿದ್ಧಗಂಗಯ್ಯ ಹೊಲತಾಳು; ಪ್ರೊ. ಎಲ್. ಮಣಿಗಯ್ಯ, ತುಮಕೂರು; ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು
__________
ಪ್ರತಿದಿನವೂ ಮೊಳಗಲಿ ‘ನೀರಿನ ಗಂಟೆ’
ಮಕ್ಕಳಿಗೆ ನೀರು ಕುಡಿಯುವಂತೆ ಜ್ಞಾಪಿಸಲು ಶಾಲೆಯಲ್ಲಿ ನೀರಿನ ಗಂಟೆ ಕಡ್ಡಾಯ
ಗೊಳಿಸಿರುವ ಆದೇಶ ಕಾಗದದಲ್ಲಷ್ಟೆ ಇದೆ. ವಾಸ್ತವದಲ್ಲಿ ಇನ್ನೂ ಹಲವು ಶಾಲೆಗಳ ಹೊಸ್ತಿಲು ತುಳಿದಿಲ್ಲ. ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಇದು ಕಡ್ಡಾಯವಾಗಿ ಜಾರಿಯಾಗಬೇಕು. ಏಕೆಂದರೆ ನೀರು ಕುಡಿಯದ ಮಕ್ಕಳು ಬೇಗ ಸುಸ್ತಾಗುತ್ತಾರೆ. ಕಿಡ್ನಿಯಲ್ಲಿ ಕಲ್ಲು, ನಿರ್ಜಲೀಕರಣ, ಕಣ್ಣಿನ ಉರಿ, ಮೂತ್ರದ ಸೋಂಕಿನಂತಹ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಶಿಕ್ಷಕರು ಇದರ ಬಗ್ಗೆ ಕಾಳಜಿ ತೋರಿಸಬೇಕಿದೆ.
– ಸಂಧ್ಯಾ ಎಚ್.ಎಸ್., ಹಂಪಿ
________
ಐಟಿಐ ಸಿಬ್ಬಂದಿ ಸಂಕಟ: ಸರ್ಕಾರ ಕಿವುಡು
‘ತಮ್ಮದು ನುಡಿದಂತೆ ನಡೆಯುವ ಸರ್ಕಾರ’ವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಖಾಸಗಿ ಐಟಿಐಗಳ ವಿಷಯದಲ್ಲಿ ನುಡಿದಂತೆ ನಡೆಯುತ್ತಿಲ್ಲ. ಏಳು ವರ್ಷ ಪೂರೈಸಿರುವ ಅನುದಾನರಹಿತ ಐಟಿಐ ಕಾಲೇಜುಗಳಿಗೆ ವೇತನ ಅನುದಾನ ನೀಡುವಂತೆ 1997ರ ಆದೇಶ ನೆನಪಿಸಿದರೆ ಉತ್ತರ ಕೊಡದೆ ಜಾರಿಕೊಳ್ಳುತ್ತಾರೆ. ಹಾಗಾದರೆ ಹಿಂದಿನ ಸರ್ಕಾರದ ಆದೇಶಗಳಿಗೆ ಯಾವುದೇ ಬೆಲೆ ಇಲ್ಲವೇ? ಕಳೆದ ಹದಿನೆಂಟು ವರ್ಷಗಳಿಂದ ವೇತನಾನುದಾನವಿಲ್ಲದೇ ಐಟಿಐಗಳ ತಂತ್ರಜ್ಞರು ಹಾಗೂ ಸಿಬ್ಬಂದಿ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಆದರೂ ಸರ್ಕಾರ ಅವರ ನೋವಿಗೆ ಕಿವಿಯಾಗುವುದೇ?
– ಎಸ್.ಎಂ. ನೆರಬೆಂಚಿ, ಹುಬ್ಬಳ್ಳಿ
_________
ರಾಷ್ಟ್ರೀಯ ಹಲಸಿನ ಮಂಡಳಿ ಸ್ಥಾಪಿಸಿ
ದೇಶದಲ್ಲಿ ಕಾಫಿ, ಚಹ ಮತ್ತು ಸಂಬಾರ ಪದಾರ್ಥಗಳ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿಗಳಿವೆ. ಇದೇ ಮಾದರಿಯಲ್ಲೇ ಹಲಸಿನ ಹಣ್ಣಿನ ಮಂಡಳಿ ಸ್ಥಾಪಿಸಬೇಕಿದೆ. ವಿಶ್ವದಲ್ಲೇ ಅತಿಹೆಚ್ಚು ಹಲಸು ಬೆಳೆಯುವ ದೇಶ ಭಾರತ. ಕರ್ನಾಟಕವೊಂದರಲ್ಲೇ ವಾರ್ಷಿಕ ಸುಮಾರು 4 ಲಕ್ಷ ಟನ್ ಉತ್ಪಾದನೆಯಾಗುತ್ತಿದೆ. ಆದರೆ, ಸರಿಯಾದ ಮಾರುಕಟ್ಟೆ, ಶೇಖರಣಾ ವ್ಯವಸ್ಥೆಯಿಲ್ಲದೆ ಶೇ 40ರಿಂದ ಶೇ 50ರಷ್ಟು ಹಣ್ಣುಗಳು ಪ್ರತಿವರ್ಷ ವ್ಯರ್ಥವಾಗುತ್ತಿವೆ. ಹಲಸನ್ನು ಮೌಲ್ಯವರ್ಧಿತ ಉತ್ಪನ್ನವಾಗಿ ಪರಿವರ್ತಿಸಿದರೆ ಗ್ರಾಮೀಣರ ಆದಾಯ ದ್ವಿಗುಣಗೊಳ್ಳಲಿದೆ.
– ವಿಜಯಕುಮಾರ ಎಚ್.ಕೆ., ರಾಯಚೂರು
_________
ಖಾದಿ ಬಟ್ಟೆ ಪೂರೈಕೆ: ಸಂಘಗಳಿಗೆ ಮನವಿ
‘ಖಾದಿ: ಅರಿವಿಲ್ಲದ ದಾರಿ, ದುಡುಕು ನಡೆ’ ಲೇಖನದಲ್ಲಿ (ಲೇ: ಸಂತೋಷ ಕೌಲಗಿ, ಪ್ರ.ವಾ., ಜ. 31) ರಾಜ್ಯ ಸರ್ಕಾರಿ ನೌಕರರು ಖಾದಿ ಬಟ್ಟೆ ಧರಿಸುವ ಕುರಿತಂತೆ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಪ್ರಶಂಸಿಸಲಾಗಿದೆ. ಮತ್ತೊಂದೆಡೆ ಖಾದಿ ಪರಿಸ್ಥಿತಿಯ ಅರಿವು ಇದ್ದಂತಿಲ್ಲವೆಂದು ಹೇಳಲಾಗಿದೆ. ಆದರೆ, ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳಿಗೆ ಅವರವರ ಜಿಲ್ಲೆಯಲ್ಲಿರುವ ಖಾದಿ ರೇಷ್ಮೆ, ಉಣ್ಣೆ, ಖಾದಿ ಸಂಘ–ಸಂಸ್ಥೆಗಳು ಉತ್ಪಾದಿಸುವ ಉತ್ಪನ್ನಗಳ ದಾಸ್ತಾನು ವಿವರ ಪಡೆದು ಸಲ್ಲಿಸಲು ಸೂಚಿಸಲಾಗಿದೆ. ಸಂಘ–ಸಂಸ್ಥೆಗಳಿಗೆ ಭೇಟಿ ನೀಡಿ ಆದೇಶದ ಬಗ್ಗೆ ಮನವರಿಕೆ ಮಾಡಿಕೊಡುವಂತೆಯೂ ನಿರ್ದೇಶಿಸಲಾಗಿದೆ. ಈ ಕುರಿತಂತೆ ಚರ್ಚಿಸಲು ಶೀಘ್ರವೇ ಖಾದಿ ಸಂಘ–ಸಂಸ್ಥೆಗಳ ಸಭೆ ಕರೆಯಲು ನಿರ್ಧರಿಸಲಾಗಿದೆ.
– ಉಪ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಅಭಿವೃದ್ಧಿ), ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಬೆಂಗಳೂರು