ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 16 ಫೆಬ್ರುವರಿ 2026, 23:30 IST
Last Updated 16 ಫೆಬ್ರುವರಿ 2026, 23:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ರೆವಿನ್ಯೂ ಸ್ಟಾಂಪ್ ಚಾಲ್ತಿಯಲ್ಲಿ ಇದೆಯೆ?

ರಾಜ್ಯದಲ್ಲಿ ಹಲವು ವರ್ಷಗಳಿಂದ ರೆವಿನ್ಯೂ ಸ್ಟಾಂಪ್‌ಗಳು ಚಾಲ್ತಿಯಲ್ಲಿಲ್ಲ. ಆದರೆ,
ಸಾಲ ಪಡೆಯಲು ಕೆಲವು ಬ್ಯಾಂಕ್‌ಗಳು, ಖಾಸಗಿ ಹಣಕಾಸು ಸಂಸ್ಥೆಗಳು ಇದನ್ನು ಕಡ್ಡಾಯಗೊಳಿಸಿವೆ. ಈ ಸ್ಟಾಂಪ್‌ಗಳು ಅಂಚೆ ಕಚೇರಿ ಅಥವಾ ಇನ್ನಾವುದೇ ಸಂಸ್ಥೆ
ಗಳಲ್ಲಿ ಸಿಗುತ್ತಿಲ್ಲ. ನೆರೆಯ ಕೆಲವು ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ರೆವಿನ್ಯೂ ಸ್ಟಾಂಪ್‌ನ ಮೂಲಬೆಲೆ ಒಂದು ರೂಪಾಯಿ ಇದೆ. ಅವುಗಳನ್ನು ಮೂರರಿಂದ ಐದು ರೂಪಾಯಿಗೆ ಕರ್ನಾಟಕದಲ್ಲಿ ಮಾರುತ್ತಿದ್ದಾರೆ. ಇದಕ್ಕೆ ಕಡಿವಾಣ ಇಲ್ಲ.ಸರ್ಕಾರ ಈ ಬಗ್ಗೆ ಸ್ಪಷ್ಟೀಕರಣ ನೀಡಲಿ. ಸ್ಟಾಂಪ್ ಇನ್ನೂ ಚಾಲ್ತಿಯಲ್ಲಿದ್ದರೆ ಅಂಚೆ ಇಲಾಖೆಯ ಮೂಲಕ ಪೂರೈಸಲಿ; ಚಾಲ್ತಿಯಲ್ಲಿ ಇಲ್ಲವಾದರೆ ಮಾಧ್ಯಮಗಳ ಮೂಲಕ ಸ್ಪಷ್ಟೀಕರಣ ನೀಡಲಿ.

ADVERTISEMENT

⇒ಎಸ್.ಎಂ. ಚಂದ್ರಮೌಳಿ ಸ್ವಾಮಿ, ಸಿಂಧನೂರು

ಋತುಚಕ್ರ ರಜೆ: ಅಧಿಕಾರಿಗಳಿಂದ ಕಿರಿಕಿರಿ

ರಾಜ್ಯ ಸರ್ಕಾರವು ಮಹಿಳಾ ಸರ್ಕಾರಿ ನೌಕರರಿಗೆ ತಿಂಗಳಿಗೆ ಒಂದು ದಿನ ಮುಟ್ಟಿನ
ರಜೆ ಕೊಡುವ ಕ್ರಾಂತಿಕಾರಿ ನಿರ್ಧಾರ ಮಾಡಿದ್ದು ಸರಿಯಷ್ಟೇ. ಆದರೆ, ಮೇಲಧಿ
ಕಾರಿಗಳು ಮಹಿಳೆಯರಿಗೆ ಮುಟ್ಟಿನ ರಜೆ ನೀಡುವಲ್ಲಿ ಹಿಂದುಮುಂದು ನೋಡು
ತ್ತಿದ್ದಾರೆ. ಕೆಲವು ಇಲಾಖೆಗಳಲ್ಲಂತೂ ಮೌಖಿಕ ಆದೇಶದ ಹೆಸರಲ್ಲಿ ಸರ್ಕಾರಿ‌ ಆದೇಶದ ವಿರುದ್ಧವೇ ನಡೆದುಕೊಳ್ಳುತ್ತಿದ್ದಾರೆ. ಈ ಕುರಿತು ಸರ್ಕಾರ ಗಮನ ಹರಿಸಿ
ಮಹಿಳೆಯರಿಗಿರುವ ಮುಟ್ಟಿನ ರಜೆಯ ಹಕ್ಕನ್ನು ರಕ್ಷಿಸಬೇಕು, ಗೊಂದಲಗಳಿಗೆ ತೆರೆ ಎಳೆದು ಕಿರಿಕಿರಿ ಮಾಡುವ ಅಧಿಕಾರಿಗಳ‌ ಮೇಲೆ ಕಠಿಣ ಕ್ರಮ ವಹಿಸಬೇಕು.

⇒ಹುಲಿಕುಂಟೆ ಮೂರ್ತಿ, ಬೆಂಗಳೂರು


ಕರ್ತವ್ಯ ಮರೆತ ನೌಕರರಿಗೆ ಲಗಾಮು ಹಾಕಿ

ಸರ್ಕಾರಿ ಕಚೇರಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾದರೆ ಆಡಳಿತ ವ್ಯವಸ್ಥೆಯ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ನೌಕರರ ಮೇಲೆ ಹಲ್ಲೆ, ಹಿಂಸಾಚಾರ ತಡೆಗಟ್ಟಲು ಸರ್ಕಾರ ಕಾಯ್ದೆ ರೂಪಿಸಲು ಮುಂದಾಗಿರುವುದು ಸಮಯೋಚಿತ ಕ್ರಮ. ಕಚೇರಿಗಳಲ್ಲಿ ಸಾರ್ವಜನಿಕರ ಅಸಮಾಧಾನಕ್ಕೆ ಮೂಲ ಕಾರಣ ಕೆಲಸದಲ್ಲಿ ವಿಳಂಬ, ನಿರ್ಲಕ್ಷ್ಯ ಮತ್ತು ಕೆಲವು ಅಧಿಕಾರಿಗಳ ಕಟುವಾದ ವರ್ತನೆ. ಇದನ್ನು ಪ್ರಶ್ನಿಸಿದರೆ ಅಸಹನೀಯ ಉತ್ತರ. ಇದು ಜನರ ಹಕ್ಕು ಮತ್ತು ವಿಶ್ವಾಸಕ್ಕೆ ಧಕ್ಕೆ
ಉಂಟುಮಾಡುತ್ತದೆಯಲ್ಲವೆ? ಕಾನೂನಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸ
ಬೇಕಿರುವುದು ಸರಿ. ಆದರೆ, ಅದರ ಜೊತೆಗೆ ಸಹಾನುಭೂತಿ, ಸೇವಾಭಾವ ಮತ್ತು
ಮನುಷ್ಯತ್ವವೂ ಆಡಳಿತದ ಅವಿಭಾಜ್ಯ ಅಂಗವಾಗಬೇಕಲ್ಲವೆ? ಕಾಯ್ದೆಯು ನೌಕರ
ರಿಗೆ ವರವಾಗಿ, ಸಾರ್ವಜನಿಕರಿಗೆ ಶಾಪವಾಗದಿರಲಿ.

⇒ಪ್ರವೀಣ್ ನಾಗಪ್ಪ ಯಲವಿಗಿ, ಮುಂಡಗೋಡು

ಪದೋನ್ನತಿಯ ಹಪಹಪಿ: ನಿಯಮಕ್ಕೆ ಧಕ್ಕೆ

ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಪದೋನ್ನತಿ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಕಳೆದ ದಶಕದಿಂದ ಲೆಕ್ಕ ಪರಿಶೋಧನಾಧಿಕಾರಿ ಮತ್ತು
ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಮತ್ತು ಪದೋನ್ನತಿಯ ಅನುಪಾತ
ವನ್ನು ತಲಾ ಶೇ 50ರಂತೆ ಪಾಲಿಸಿಕೊಂಡು ಬರಲಾಗಿದೆ. ಈಗ ಕೆಪಿಎಸ್‌ಸಿಯಿಂದ ನೇಮಕಗೊಳ್ಳುವ ಲೆಕ್ಕಾಧಿಕಾರಿ, ಲೆಕ್ಕ ಪರಿಶೋಧನಾಧಿಕಾರಿ ಹುದ್ದೆಗಳ ಅನುಪಾತ
ವನ್ನು ಶೇ 20ಕ್ಕೆ ಇಳಿಸಲು ಲೆಕ್ಕಪತ್ರ ಇಲಾಖೆಯ ಅಧಿಕಾರಿ ಮತ್ತು ನೌಕರರ ಸಂಘ ಹೋರಾಡುತ್ತಿದೆ. ಇದರಿಂದಾಗಿ ಬರೀ ಪಿಯುಸಿ, ಪದವಿ ಪಡೆದವರು ಪದೋನ್ನತಿ ಪಡೆದು ಉನ್ನತ ಸ್ಥಾನಗಳಿಗೆ ಏರುತ್ತಾರೆ. ಇದರಿಂದ ಎಂಬಿಎ, ಸಿಎ, ಎಂಕಾಂ ಪದವಿ ಪಡೆದವರು ನಿರುದ್ಯೋಗಿಗಳಾಗಿ ಬೀದಿಗೆ ಬೀಳಬೇಕಾಗುತ್ತದೆ. ಸರ್ಕಾರ
ಶೇ 50ರ ಅನುಪಾತ ಕಾಯ್ದುಕೊಳ್ಳಲು ಕ್ರಮವಹಿಸಬೇಕಿದೆ. 

⇒ಪ್ರೊ. ಎಂ. ಬಸವರಾಜ್‌, ದಾವಣಗೆರೆ

ಸಮೀಕ್ಷೆಯ ಸುತ್ತ, ಅನುಮಾನಗಳ ಹುತ್ತ

ರಾಜ್ಯದಲ್ಲಿ 2007-08ರಲ್ಲಿ 46,660 ಮಾಜಿ ದೇವದಾಸಿಯರಿದ್ದರು. 2025-26ರ
ಸಮೀಕ್ಷೆಯಲ್ಲಿ ಈ ಸಂಖ್ಯೆ 23,395ಕ್ಕೆ ಕುಸಿದಿದೆ. ಸರ್ಕಾರದ ಈ ಅಂಕಿಅಂಶ ಗಾಬರಿ ಹುಟ್ಟಿಸುತ್ತದೆ. ಸಮೀಕ್ಷೆ ನಡೆದ ಹದಿನೈದು ಜಿಲ್ಲೆಗಳಲ್ಲಿ ಸಮರ್ಪಕವಾಗಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿಲ್ಲ. ಸಿಡಿಪಿಒ ಕಚೇರಿಯಲ್ಲಿ ಕೂತು ಮಾಹಿತಿ ಸಂಗ್ರಹಿಸಲಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ. ಇಂದಿಗೂ ಸಾವಿರಾರು ಮಾಜಿ ದೇವದಾಸಿಯರು ಸೂರಿಲ್ಲದೆ ಪರದಾಡುತ್ತಿದ್ದಾರೆ. ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. 2007-08ರ ಸಮೀಕ್ಷೆಯಲ್ಲಿ ಹೊರಗೆ
ಉಳಿದ ದೇವದಾಸಿಯರು ಹಾಗೂ ಸಮೀಕ್ಷೆಗೆ ಒಳಪಟ್ಟ ತಾಯಂದಿರ ಮರು
ಸಮೀಕ್ಷೆ ನಡೆಸಬೇಕು. ಇಲ್ಲದಿದ್ದರೆ, ಸಮಾಜದ ಮುಖ್ಯವಾಹಿನಿಯಿಂದ ದೂರ
ಇರುವ ಈ ಮಹಿಳೆಯರು ಸೌಲಭ್ಯಗಳಿಂದ ವಂಚಿತರಾಗುತ್ತಾರೆ.

⇒ಜಿ.ಎಸ್. ಶರಣು, ಬೆಂಗಳೂರು 

ಕ್ರೀಡಾಧರ್ಮಕ್ಕೆ ಎಸಗಿದ ಅಪಚಾರ

ಕೊಲಂಬೊದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯದ ಆರಂಭದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್‌ ಮತ್ತು ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಪರಸ್ಪರ ಕೈಕುಲುಕದೆ ಆಟ ಆರಂಭಿಸಿದರು. ನಾಯಕರು ಹೀಗೆ ಹಸ್ತಲಾಘವ ನೀಡದೆ ಆಟ ಆರಂಭಿಸು
ವುದು ಕ್ರೀಡಾ ಮನೋಭಾವಕ್ಕೆ ಮಾಡುವ ಅಪಚಾರ. ಕ್ರೀಡೆ ಎಂದರೆ
ಪರಸ್ಪರರಲ್ಲಿ ಉಲ್ಲಾಸ, ಸ್ನೇಹ, ಪ್ರೇಮ ಸ್ಫುರಿಸುವ ಸನ್ನಿವೇಶ. ಅದಕ್ಕಾಗಿಯೇ
ಮಕ್ಕಳಿಗೆ ಪಾಠದಷ್ಟೇ ಆಟವೂ ಮುಖ್ಯ. ಒಂದರಿಂದ ದೇಹ ದೃಢಕಾಯ
ಆದರೆ, ಇನ್ನೊಂದರಿಂದ ಮನೋಸ್ಥೈರ್ಯ ಬೆಳೆಯುತ್ತದೆ. ಹಸ್ತಿನಾವತಿಯ ವ್ಯಾಯಾಮ ಶಾಲೆಯಲ್ಲಿ ಕುರುಪಾಂಡವರಲ್ಲಿ ಹುಟ್ಟಿದ ಮನಸ್ತಾಪವು ಮುಂದೆ ಪ್ರಳಯ ಸಿಡಿಲಾಗಿ ಬಡಿದು ಎರಡೂ ಕುಲನಾಶದಲ್ಲಿ ಪರ್ಯಾವಸಾನವಾಯಿತು. ಹಾಗಾಗಿ, ಉಭಯ ರಾಷ್ಟ್ರಗಳು ಈ ಬೆಳವಣಿಗೆಯನ್ನು ಆರಂಭದಲ್ಲಿಯೇ ಚಿವುಟಿ ಹಾಕುವುದು ಕ್ಷೇಮ.

 ಪ್ರೊ. ಶಿವರಾಮಯ್ಯ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.