ADVERTISEMENT

ಗುಣವಾಗದ ಕಾಯಿಲೆಗೆ ರಣವೈದ್ಯ

ಎಂ.ಸತ್ಯವತಿ.ಕೆಂಗೇರಿ
Published 4 ಡಿಸೆಂಬರ್ 2019, 20:08 IST
Last Updated 4 ಡಿಸೆಂಬರ್ 2019, 20:08 IST

ಅತ್ಯಾಚಾರ ಮಾಡಿ ಜೈಲು ಶಿಕ್ಷೆ ಅನುಭವಿಸುತ್ತಿರುವವರನ್ನು ನಾನೊಮ್ಮೆ ನೋಡಬೇಕಿದೆ. ಗಲ್ಲುಶಿಕ್ಷೆಯ ಭಯದಲ್ಲೇ ಜೈಲಿನಲ್ಲಿ ರಾಗಿ ಬೀಸುತ್ತಿರುವ ಅಪರಾಧಿಗಳ ವಿಡಿಯೊ ನನಗೆ ಬೇಕಾಗಿದೆ. ಅಸಾರಾಂ ಬಾಪೂ, ಡೇರಾ ಸಚ್ಚಾ ಸೌದಾದ ರಾಮ್ ರಹೀಮ್ ಮುಂತಾದ ಕುಖ್ಯಾತರು ಈಗ ಯಾವ ಡ್ರೆಸ್ ಧರಿಸಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದನ್ನು ನಾನು ಈಗಿನ ಪಡ್ಡೆ ಯುವಕರಿಗೆ ತೋರಿಸಬೇಕಾಗಿದೆ. ನಿರ್ಭಯಾಳ ಕಗ್ಗೊಲೆ ಮಾಡಿದವರ ಸ್ಥಿತಿಗತಿಯ ಸಾಕ್ಷ್ಯಚಿತ್ರದ ತುಣುಕು ನನಗೆ ಬೇಕಾಗಿದೆ. ಅದು ವೈರಲ್ ಆಗಬೇಕಿದೆ. ಯಾಕೆ ಈ ಯಾವುದನ್ನೂ ದೃಶ್ಯ ಮಾಧ್ಯಮಗಳು ವರ್ಷಕ್ಕೊಮ್ಮೆಯೂ ನಮಗೆ ತೋರಿಸುತ್ತಿಲ್ಲ? ಯಾಕೆ ಕಿರು ಚಡ್ಡಿ ತೊಟ್ಟು ಕುಣಿಯುವ ಹುಡುಗಿಯರನ್ನು, ಮದ್ಯದ ಗ್ಲಾಸಿನ ಮಧ್ಯೆ ಅವಳ ಕ್ಲೀವೇಜಿನ ಆಳಗಲವನ್ನು ದಿನವೂ ಎಂಬಂತೆ ಇವು ತೋರಿಸುತ್ತಿವೆ?

ಶಿಕ್ಷೆ ಅನುಭವಿಸುತ್ತಿರುವವರನ್ನು ತೋರಿಸಲೇಬಾರದು ಎಂಬ ಕಾನೂನು ಇದ್ದರೆ ಅದನ್ನು ಕಿತ್ತು ಹಾಕಿ. ಅತ್ಯಾಚಾರ ಮಾಡಿ ನೇಣುಗಂಬ ಏರುತ್ತಿರುವವರ ಮುಖಕ್ಕೆ ಮುಸುಕು ಹಾಕಿರಬೇಕು ಎಂಬ ನಿಯಮ ಇದ್ದರೆ ಅದನ್ನೂ ಕಿತ್ತು ಹಾಕಿ; ಅವರ ಕೊನೆಯ ಕ್ಷಣದ ಮುಖಭಾವವನ್ನು ಯುವಕರಿಗೆ ತೋರಿಸಬೇಕಿದೆ. ದಿನಕ್ಕೆ ಸರಾಸರಿ 38 ಅತ್ಯಾಚಾರಗಳು ಆಗುತ್ತಿರುವ ಈ ದೇಶದ ಗಂಡುಗಳಿಗೆ ಗಂಭೀರ ಕಾಮಕಾಯಿಲೆ ತಗುಲಿದೆ; ಅದಕ್ಕೆ ರಣವೈದ್ಯವೇ ಬೇಕು. ಯಾರು ಯಾವ ಅಪರಾಧ ಮಾಡಿದ್ದಕ್ಕೆ ಎಂಥ ಶಿಕ್ಷೆ ಆಯಿತು ಎಂಬುದನ್ನು ವಾರಕ್ಕೊಮ್ಮೆ ಎಲ್ಲ ಮಾಧ್ಯಮಗಳೂ ಕಡ್ಡಾಯವಾಗಿ ತೋರಿಸುವಂತಾಗಬೇಕು. ಅಂಥ ತಿದ್ದುಪಡಿ ಆಗುವವರೆಗೆ ಆಯಾ ಕೈದಿಗಳ ನೈಜ ಹೆಸರಿನಲ್ಲಿ ಜೈಲಿನ ಕಾಲ್ಪನಿಕ ಚಿತ್ರಗಳನ್ನಾದರೂ ದೃಶ್ಯ ಮಾಧ್ಯಮಗಳು ತೋರಿಸಬೇಕು. ನೇಣುಗಂಬ ಏರುವವರಿಗೆ ಮುಖವಾಡ ಹಾಕಲೇಬೇಕು ಎನ್ನುವುದಾದರೆ, ಐಟಂ ಸಾಂಗ್‌ಗಳಲ್ಲಿ ಕುಣಿಯುವವರಿಗೂ ಮೈತುಂಬ ಬಟ್ಟೆ ಹಾಕಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT