ADVERTISEMENT

‘ಮೃತಸಮುದ್ರ’ಕ್ಕೆ ಜೀವ ಬಂದೀತೇ?

ಡಾ.ನಿರಂಜನ ವಾನಳ್ಳಿ
Published 4 ಡಿಸೆಂಬರ್ 2018, 20:15 IST
Last Updated 4 ಡಿಸೆಂಬರ್ 2018, 20:15 IST

ರವೀಂದ್ರ ಭಟ್ಟರ ಲೇಖನ, ‘ವಿಧಾನ ಸೌಧವೆಂಬ ಮೃತಸಮುದ್ರ’ (ಪ್ರ.ವಾ., ಡಿ. 2) ವಾಸ್ತವ ಚಿತ್ರಣವನ್ನು ನೀಡುತ್ತದೆ. ಪ್ರಜಾಪ್ರಭುತ್ವದ ಮುಖ್ಯ ನೆಲೆಯಾದ ವಿಧಾನಸೌಧಕ್ಕೆ ಹೊಕ್ಕಿ ಹೊರಬರುವ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ಅನಾಥಪ್ರಜ್ಞೆ ಕಾಡದಿದ್ದರೆ ಅದು ವಿಶೇಷವೇ!

ನನ್ನ ವೃತ್ತಿಯ ಭಾಗವಾಗಿ ಎರಡು ವರ್ಷ ವಿಧಾನಸೌಧಕ್ಕೆ ಕಾಲು ಸವೆಸುವ ಅನಿವಾರ್ಯತೆ ಅನೇಕ ಸಂದರ್ಭಗಳಲ್ಲಿ ನನಗೆ ಬಂದಿತ್ತು. ವಿಧಾನಸೌಧದ ಸಚಿವರ ಕುರ್ಚಿಯಲ್ಲಿ ಕುಳಿತಾಕ್ಷಣ, ಸಚಿವರಾದವರಿಗೆ ಜಗತ್ತಿನಲ್ಲಿ ತಾನೇ ಬುದ್ಧಿವಂತ, ಉಳಿದವರೆಲ್ಲರೂ ದಡ್ಡರು ಎಂಬ ಅಹಂಕಾರ ಹೇಗೆ ಆವರಿಸಿಕೊಳ್ಳುವುದೋ ಆಶ್ಚರ್ಯವಾಗುತ್ತದೆ. ಸಚಿವರ ಧಿಮಾಕು, ವಿಧಾನಸೌಧದಲ್ಲಿ ಕೆಲಸ ಸಿಕ್ಕಿದ್ದು ಹಣಮಾಡಲಿಕ್ಕೇ ಎಂದು ತಿಳಿಯುವ ಹೆಚ್ಚಿನನೌಕರರು ಹಾಗೂ ಪ್ರಜಾಪ್ರಭುತ್ವದ ನಿಜ ಪ್ರಭುಗಳು ತಾವೇ ಎಂಬಂತೆ ಅಹಂಕಾರ ಪಡುವ ಅಧಿಕಾರಿ ಗರ್ವದ ಮಧ್ಯೆ ಜನಸಾಮಾನ್ಯರು ಅವಮಾನದಿಂದ ಕುಗ್ಗಿಹೋಗುವುದನ್ನು ಕಣ್ಣಾರೆ ಕಂಡೆ,ಅನುಭವಿಸಿದೆ ಕೂಡಾ.
ಅದಕ್ಕೇ ಪ್ರತಿಸಾರಿ ವಿಧಾನಸೌಧಕ್ಕೆ ಹೋದಾಗಲೂ ಎಷ್ಟು ಹೊತ್ತಿಗೆ ಹೊರಬರುತ್ತೇವೋ ಎನಿಸುತ್ತದೆ. ಈ ಮೃತ ಸಮುದ್ರ ಜೀವಂತಗೊಳ್ಳುವ ಯಾವ ಲಕ್ಷಣವೂ ಇಲ್ಲ ಎಂದು ವಿಷಾದದಿಂದ ಹೇಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT