ADVERTISEMENT

ವಾಚಕರ ವಾಣಿ: ಕಠಿಣ ಕ್ರಮಕ್ಕೆ ಎಲ್ಲಿದೆ ಆಸ್ಪದ?

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 17:31 IST
Last Updated 21 ಅಕ್ಟೋಬರ್ 2020, 17:31 IST

ರಾಜ್ಯದ 7 ಸಚಿವರು ಸೇರಿದಂತೆ 118 ಶಾಸಕರು ತಮ್ಮ ಆಸ್ತಿ ವಿವರದ ಪ್ರಮಾಣಪತ್ರಗಳನ್ನು ಗಡುವಿನ ಅವಧಿ ಮುಗಿದು ಮೂರೂವರೆ ತಿಂಗಳು ಕಳೆದಿದ್ದರೂ ಲೋಕಾಯುಕ್ತರಿಗೆ ಸಲ್ಲಿಸಿಲ್ಲ (ಪ್ರ.ವಾ., ಅ. 21). ಮಾಹಿತಿ ಹಕ್ಕು ಕಾಯ್ದೆಯಡಿ ಈ ಮಾಹಿತಿಯನ್ನು ಲೋಕಾಯುಕ್ತದಿಂದ ಪಡೆದುಕೊಂಡಿರುವ ಸಾಮಾಜಿಕ ಹೋರಾಟಗಾರರೊಬ್ಬರು, ಇವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ ಈ ‘ಕಠಿಣ ಕ್ರಮ’ಕ್ಕೆ ಕಾಯ್ದೆಯಲ್ಲಿ ಎಲ್ಲಿದೆ ಆಸ್ಪದ?

ಅಬ್ಬಬ್ಬಾ ಎಂದರೆ ಈ ಕರ್ತವ್ಯಚ್ಯುತರ ಹೆಸರನ್ನು ಪತ್ರಿಕೆಗಳಲ್ಲಿ ಲೋಕಾಯುಕ್ತರು ಪ್ರಕಟಿಸಬಹುದು. ಸಚಿವರು ಮತ್ತು ಶಾಸಕರು ಇದಕ್ಕೆಲ್ಲ ಅಧೀರರಾಗುವಷ್ಟುಮೃದು ಚರ್ಮದವರೇ? ಕಾಯ್ದೆ, ನಿಯಮಗಳನ್ನು ನಮ್ಮ ಜನ ಏಕೆ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎನ್ನುವುದಕ್ಕೆ ಇಂಥ ಪ್ರಸಂಗಗಳಲ್ಲಿ ಉತ್ತರ ಕಂಡುಕೊಳ್ಳುವುದು ಸಾಧ್ಯ. ದುರಂತವೆಂದರೆ, ಶಾಸನಕರ್ತರೇ ಶಾಸನ ಪಾಲಿಸದಿರುವುದು. ಹಾಗಾಗಿ, ಶಾಸನ ಅಥವಾ ಕಾಯ್ದೆಗಳಿಗೆ ಬೆಲೆ ಇಲ್ಲದಂತಾಗಿ, ಕಡ್ಡಾಯವಾಗಿ ಸಲ್ಲಿಸಬೇಕಾದ ವಿವರಗಳನ್ನು ಸಲ್ಲಿಸದಿರುವವರ ಬಗ್ಗೆ ನಾವು ಪತ್ರಿಕೆಗಳಲ್ಲಿ ಪ್ರತಿವರ್ಷವೂ ಓದುವಂತಾಗಿದೆ. ಈ ವರ್ಷ ಇವರು, ಬರುವ ವರ್ಷ ಇನ್ನಾರೋ? ಹೀಗೇ ಸಾಗುತ್ತದೆ ಇಂಥ ಕರ್ತವ್ಯಚ್ಯುತರ ವೀರಗಾಥೆ!

-ಸಾಮಗ ದತ್ತಾತ್ರಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.