ADVERTISEMENT

ವಾಚಕರ ವಾಣಿ: ಹಿಂದೂ ಮತ್ತು ಹಿಂದುತ್ವ- ಶಬ್ದಗಳ ಆಟ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 19:22 IST
Last Updated 15 ಡಿಸೆಂಬರ್ 2021, 19:22 IST

ಕಾಂಗ್ರೆಸ್‌ನ ಪ್ರಮುಖ ನಾಯಕ ರಾಹುಲ್ ಗಾಂಧಿ ಅವರು ಕೂದಲು ಸೀಳುವ ತರ್ಕ ಅಥವಾ ಅತಿಜಾಣತನದ ಮಾತುಗಳನ್ನು ಬಳಸಿ ಜೈಪುರದಲ್ಲಿ ‘ಭಾರತ ಹಿಂದೂಗಳ ದೇಶ, ... ಹಿಂದುತ್ವವಾದಿಗಳನ್ನು ಉಚ್ಚಾಟಿಸಿ ಹಿಂದೂಗಳ ಆಳ್ವಿಕೆ ನೆಲೆಗೊಳಿಸಬೇಕು’ ಎಂದೆಲ್ಲ ಹೇಳಿರುವುದನ್ನು ಕೇವಲ ಅವರ ಚಮತ್ಕಾರದ ಮಾತುಗಳಿಗಾಗಿ ಮೆಚ್ಚಬಹುದೇ ವಿನಾ ವಾಸ್ತವದ ನೆಲೆಯಲ್ಲಿ ಅಲ್ಲ.

ಕಾರಣ, ಈ ದೇಶದ ಸಂವಿಧಾನದ ಪ್ರಕಾರ ಭಾರತವು ಹಿಂದೂಗಳ ದೇಶ ಅಲ್ಲವೇ ಅಲ್ಲ. ಹಾಗೆಂದು ಹೇಳಿದರೆ ಅದು ತಪ್ಪಾಗುತ್ತದೆ ಮತ್ತು ಇಲ್ಲಿ ಹಿಂದೂಗಳ ಆಳ್ವಿಕೆ ನೆಲೆಗೊಳ್ಳಬೇಕು ಎನ್ನುವುದೂ ಅಷ್ಟೇ ತರ್ಕಹೀನ. ಭಾರತವು ಹಿಂದೂ, ಜೈನ, ಬೌದ್ಧ, ಸಿಖ್, ಕ್ರೈಸ್ತರು, ಮಹಮ್ಮದೀಯರು, ಪಾರ್ಸಿಗಳು ಹೀಗೆ ಸಕಲ ಜಾತಿ, ಧರ್ಮಗಳನ್ನೊಳಗೊಂಡ ಭಾರತೀಯರ ದೇಶ ಎಂಬುದು ಇಂದು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗೂ ಗೊತ್ತಿದೆ. ಆದ್ದರಿಂದ ಇದು ಹಿಂದೂಗಳ ದೇಶ ಎನ್ನುವುದು ಎಷ್ಟು ನಿಜವೋ ಮೇಲೆ ಹೆಸರಿಸಲಾದ ಉಳಿದೆಲ್ಲ ಜಾತಿ, ಧರ್ಮಗಳವರ ದೇಶವೂ ಹೌದೆಂಬುದು ಸೂರ್ಯ ಸತ್ಯ.

ಇಲ್ಲಿ ಹಿಂದೂಗಳ ಆಳ್ವಿಕೆ ನೆಲೆಗೊಳ್ಳಬೇಕು ಎಂದರೆ ಅದರ ಹಿಂದೆಯೇ ‘ಹಿಂದೂಯೇತರರು ಏನು ಹಿಂದೂಗಳ ಕೈಕೆಳಗೆ ಆಳಿಸಿಕೊಳ್ಳುವುದಕ್ಕೆ ಮಾತ್ರ ಹುಟ್ಟಿದವರೇ’ ಎಂಬ ಪ್ರಶ್ನೆ ಏಳುತ್ತದೆ. ಅವರು ಯಾರನ್ನು ಹಿಂದುತ್ವವಾದಿಗಳುಎಂದು ಕರೆಯುತ್ತಾರೋ ಅವರನ್ನು ಹಿಂದೂಗಳಲ್ಲ ಎಂದು ಯಾವ ತರ್ಕದ ಮೇಲೆ ಇವರು ಹೇಳುತ್ತಾರೆ? ಅವರೂ ಮೂಲತಃ ಹಿಂದೂಗಳೇ. ಹಿಂದೂಗಳ ಕಾರಣವನ್ನೇ ಎಲ್ಲಕ್ಕಿಂತ ಮೇಲೆ ಎತ್ತಿಹಿಡಿಯುವವರಾದ ಕಾರಣ ಭಾರತದಂಥ ಪ್ರಜಾಪ್ರಭುತ್ವವಾದಿ, ಬಹುತ್ವದ ನೆಲೆಯ ದೇಶಕ್ಕೆ ಅವರ ವಾದ ಒಪ್ಪಲಾಗದಂಥದ್ದು ಎಂದಷ್ಟೇ ಹೇಳಬಹುದು.

ADVERTISEMENT

ಹಿಂದೂ ಇಲ್ಲದೆ ಹಿಂದುತ್ವ ಇಲ್ಲ. ಆದರೆ ಹಿಂದುತ್ವ (ರಾಹುಲರು ಹೇಳುವ ಹಿಂದುತ್ವ) ಇಲ್ಲದೆಯೂ ಹಿಂದೂ ಇರಬಹುದು, ಇರಬಲ್ಲ. ಹಿಂದೂವಿಲ್ಲದ ಹಿಂದುತ್ವ ಎಂದರೆ ಷೇಕ್ಸ್‌ಪಿಯರ್‌ ಮಹಾಕವಿಯ ‘ಮರ್ಚೆಂಟ್ ಆಫ್‌ ವೆನಿಸ್’ ನಾಟಕದಲ್ಲಿ, ಒಂದು ಪೌಂಡ್ ಮಾಂಸವನ್ನು ಆಂಟೋನಿಯೊ ದೇಹದಿಂದ ಕೊಯ್ದುಕೊಳ್ಳುತ್ತೇನೆಂಬ ಶೈಲಾಕನಿಗೆ ಪೋರ್ಷಿಯಾ ಎಂಬ ಲಾಯರ್ ಪಾತ್ರಧಾರಿ ಹೇಳುವ ‘ಎ ಪೌಂಡ್‌ ಆಫ್‌ ಫ್ಲೆಷ್‌, ಬಟ್‌ ನಾಟ್‌ ಎ ಡ್ರಾಪ್‌ ಆಫ್‌ ಬ್ಲಡ್‌’ ಎಂದು ಹೇಳಿದಂಥದ್ದೇ ಚಮತ್ಕಾರಪೂರ್ಣ ವಾದವಾಗುತ್ತದೆ. ಅದು ಶಬ್ದಗಳ ಮೇಲಿನ ಆಟ.

ಹಿಂದೂಗಳನ್ನು ಒಲಿಸಿಕೊಳ್ಳುವ ಭರದಲ್ಲಿ, ಪಾರ್ಸಿ ತಂದೆ, ಹಿಂದೂ ತಾಯಿಯ ಮಗನಾಗಿ ಜನಿಸಿ, ಕ್ರಿಶ್ಚಿಯನ್ ಮಹಿಳೆಯ ಕೈಹಿಡಿದಮಾಜಿ ಪ್ರಧಾನಿಯವರ ನಿಜವಾದ ಅರ್ಥದ ಜಾತ್ಯತೀತ ಪುತ್ರನಿಗೆ ಹೀಗೆ ಇದ್ದಕ್ಕಿದ್ದಂತೆ ‘ನಾನು ಹಿಂದೂ’ ಎಂದು ಘೋಷಿಸಿಕೊಳ್ಳುವ ದರ್ದು ಏನಿದೆ? ತಾನೊಬ್ಬ ನಿಜವಾದ ಜಾತ್ಯತೀತ ದೇಶಭಕ್ತ ಭಾರತೀಯನೆಂಬ ಹೆಮ್ಮೆ ಸಾಲದೇ? ಆ ದರ್ದು ಏನೆಂಬುದು ಎಲ್ಲರಿಗೂ ಗೊತ್ತಿರುವ ಸತ್ಯ.
ಡಾ. ಆರ್.ಲಕ್ಷ್ಮೀನಾರಾಯಣ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.