‘ಸ್ವಾತಂತ್ರ್ಯ ಹೋರಾಟಗಾರ ಹೆಡಗೇವಾರ್ ಪಾಠವಿದ್ದರೆ ತಪ್ಪೇನು?’ ಎಂಬ ಲೇಖನದಲ್ಲಿ (ಪ್ರ.ವಾ., ಮೇ 21) ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಪಠ್ಯಪುಸ್ತಕದ ಈ ಹಿಂದಿನ ಪರಿಷ್ಕರಣೆಯನ್ನು ವಿರೋಧಿಸುವ ಭರದಲ್ಲಿ,‘ಕಾಂಗ್ರೆಸ್ ಮತ್ತು ಆ ಪಕ್ಷದ ಮುಖಂಡರ ಕೃಪಾಶೀರ್ವಾದಕ್ಕೆ ಒಳಗಾದವರು ಬರೆದಿದ್ದೇ ಇತಿಹಾಸ, ಅದೇ ಸರಿ ಎನ್ನುವಂತಾಗಿದೆ’ ಎಂದು ಹೇಳಿದ್ದಾರೆ. ಇಂತಹ ಹೇಳಿಕೆಯ ಮೂಲಕ ಅವರು ರಾಜಕೀಯ ಪರಿಭಾಷೆಯ ಮೊರೆ ಹೋಗಿದ್ದಾರೆ.
ಮೊದಲನೆಯದಾಗಿ, ಈ ರೀತಿಯ ಬೀಸು ಹೇಳಿಕೆಗಳು ಸಚಿವರಿಗೆ ಶೋಭೆ ತರುವುದಿಲ್ಲ. ಎರಡನೆಯದಾಗಿ, ಸಚಿವರು ‘ಇತಿಹಾಸದಲ್ಲಿ ಗತಿಸಿದ ಅನ್ಯಾಯ, ದಬ್ಬಾಳಿಕೆ, ಆಕ್ರಮಣಗಳಿಗೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಂತಿರಬೇಕು’ ಎಂದಿದ್ದಾರೆ. ಈ ಮಾತುಗಳನ್ನು ಭಾರತದ ಮೇಲೆ ನಡೆದ ಆಕ್ರಮಣಗಳನ್ನು ಮತ್ತು ಅದರ ವಿರುದ್ಧ ನಮ್ಮ ಅಂದಿನ ತಲೆಮಾರಿನವರು ನೀಡಿದ ಪ್ರತಿರೋಧಗಳನ್ನು ಅರ್ಥಮಾಡಿಕೊಳ್ಳಲು ಮಾತ್ರ ಸೀಮಿತಗೊಳಿಸಿಕೊಳ್ಳಬಾರದು. ಚರಿತ್ರೆ ಎಂದರೆ ಕೇವಲ ಹಿಂದಿನ ರಾಜಕೀಯ ಎನ್ನುವ ವ್ಯಾಖ್ಯೆ ಅಪ್ರಸ್ತುತವಾಗಿ ದಶಕಗಳೇ ಕಳೆದಿವೆ. ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸಗಳು ಅತ್ಯಂತ ಸಂಕೀರ್ಣವಾದವು. ಅಲ್ಲಿ ನಡೆದ ಅಂತರ್ ಸಂಘರ್ಷಗಳಿಗೂ ಅನ್ವಯಿಸಿ ನೋಡಬೇಕಾಗುತ್ತದೆ.
ಬಹುತ್ವವನ್ನು ಒಪ್ಪದ ಯಾವ ಮನಸ್ಸೂ ನಮ್ಮ ಚರಿತ್ರೆಯನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ‘ಯುದ್ಧಗಳು ಕೊಲ್ಲುವುದಕ್ಕಿಂತ ಹೆಚ್ಚಿನ ಜನರನ್ನು ಧರ್ಮಸಂಘರ್ಷಗಳು ಕೊಂದಿವೆ’ ಎನ್ನುವ ಸತ್ಯವು ಜಾಗತಿಕ ಇತಿಹಾಸ ಬಲ್ಲವರೆಲ್ಲರಿಗೂ ತಿಳಿದಿದೆ. ಆದ್ದರಿಂದ ಸಚಿವರು ತಮ್ಮ ನಂಬಿಕೆಯೇ ಅಂತಿಮ ಎಂದು ಭಾವಿಸಿದ್ದರೆ ಅದು ತಪ್ಪು. ಆದ್ದರಿಂದ ಹಿಂದೆ ಪರಿಷ್ಕರಣಾ ಕಾರ್ಯದಲ್ಲಿ ಕೆಲಸ ಮಾಡಿದವರನ್ನು ‘ಕಾಂಗ್ರೆಸ್ ನಾಯಕರ ಕೃಪಾಶೀರ್ವಾದಕ್ಕೆ ಒಳಗಾದವರು’ ಎಂದು ಅಂಟಿಸಿದ ಹಣೆಪಟ್ಟಿಯನ್ನು ಸಚಿವರು ವಾಪಸ್ ಪಡೆಯಬೇಕು.
-ಡಾ. ಅಶ್ವತ್ಥನಾರಾಯಣ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.