ADVERTISEMENT

ವಾಚಕರ ವಾಣಿ: ಮಾನವೀಯ ಸ್ಪಂದನ ಅಗತ್ಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 17:44 IST
Last Updated 21 ಅಕ್ಟೋಬರ್ 2020, 17:44 IST

ಕೋವಿಡ್‌ ಸಂದರ್ಭದಲ್ಲಿ ಕೆಲಸ ಮಾಡುತ್ತಿರುವ ಸಾರಿಗೆ ನಿಗಮದ ಮಹಿಳಾ ಸಿಬ್ಬಂದಿ ಕುರಿತ ‘ಏನೇ ಬರಲಿ ರೈಟ್‌ ರೈಟ್‌...’ ಲೇಖನ (ಪ್ರ.ವಾ., ಅ. 21) ಅತ್ಯಂತ ಸಕಾಲಿಕ. ಸಾರಿಗೆ ಎನ್ನುವುದು ಅತ್ಯಗತ್ಯ ಸೌಲಭ್ಯಗಳಲ್ಲಿ ಒಂದು. ಅಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಸಿಬ್ಬಂದಿಯ ಕುರಿತು ನಿಗಮ ಮತ್ತು ಸರ್ಕಾರಕ್ಕೆ ಹೆಚ್ಚು ಕಾಳಜಿಯ ಅಗತ್ಯವಿದೆ. ಅದರಲ್ಲೂ ಮಹಿಳಾ ಸಿಬ್ಬಂದಿ ಕುರಿತು ವಿಶೇಷ ಕಾಳಜಿ ವಹಿಸಬೇಕಾಗಿದೆ. ಕೇವಲ ಅವರ ದೃಷ್ಟಿಯಿಂದ ಮಾತ್ರವಲ್ಲ, ಕುಟುಂಬದ ಹಾಗೂ ಸಮಾಜದ ದೃಷ್ಟಿಯಿಂದಲೂ ಇದು ಅತ್ಯಗತ್ಯ.

ಪಾಳಿ ವ್ಯವಸ್ಥೆಯಿಂದ ವೆಚ್ಚ ಹೆಚ್ಚುತ್ತದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಮಹಿಳಾ ಸಿಬ್ಬಂದಿಯ ಸಮಸ್ಯೆಗಳನ್ನು, ಅದರಲ್ಲಿಯೂ ಕೋವಿಡ್ ಸಂದರ್ಭದಲ್ಲಿ ಸರಿಯಾದ ಶೌಚಾಲಯ, ವಿಶ್ರಾಂತಿ ಕೊಠಡಿಗಳ ಲಭ್ಯತೆಯೂ ಇಲ್ಲದೆ, ಎರಡು ಅವಧಿಯ ನಡುವಿನ ಕಾಲವನ್ನು ಅವರು ಹೇಗೆ ಕಳೆಯಬೇಕು ಎಂಬ ಬಗ್ಗೆ ಸಂವೇದನಾಶೀಲರಾಗಿ ಯೋಚಿಸಬೇಕಾಗಿದೆ. ಈಗ ಹೊರಗಿನ ದುಡಿಮೆ ಅನಿವಾರ್ಯ ಮತ್ತು ಗೃಹಕೃತ್ಯದ ಜವಾಬ್ದಾರಿಯೂ ನಿಭಾಯಿಸಲೇಬೇಕಾದ ಹೊಣೆಗಾರಿಕೆಯಾಗಿ ಮಹಿಳೆಯರ ಮೇಲಿರುತ್ತದೆ. ಹೀಗಿರುವಾಗ ಮಾನವೀಯ ಸ್ಪಂದನದ ಅಗತ್ಯವಿದೆ.

-ವಿಮಲಾ ಕೆ‌.ಎಸ್., ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.