ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ದೇವರಗಟ್ಟ ಗ್ರಾಮದಲ್ಲಿ, ದೇವರ ಉತ್ಸವದ ಅಂಗವಾಗಿ ನಡೆದ ದೊಣ್ಣೆಗಳಿಂದ ಹೊಡೆದಾಡುವ ಆಚರಣೆಯ ವೇಳೆ ಇಬ್ಬರು ಮೃತಪಟ್ಟಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾದಾಗಲೇ ಜೀವಹಾನಿಗೆ ಕಾರಣ ಆಗಬಹುದಾದ ಆಚರಣೆಗಳು ಇರುವುದು ತಿಳಿಯುತ್ತದೆ. ಯಾವುದೇ ಜೀವವಿರೋಧಿ ಪದ್ಧತಿ ನಿಷೇಧಗೊಳ್ಳುವುದು ಅಗತ್ಯ. ಧರ್ಮ–ದೇವರು ಇರುವುದು ಮಾನವ ಕಲ್ಯಾಣಕ್ಕೇ ಹೊರತು ‘ದೇಹ ದೇಗುಲ’ದ ನಾಶಕ್ಕಾಗಿ ಅಲ್ಲ!
-ಶಿವಕುಮಾರ ಬಂಡೋಳಿ, ಹುಣಸಗಿ
ಬಡಜನರ ನೋವು ನಲಿವುಗಳಿಗೆ ಅಕ್ಷರದ ಮೂಲಕ ಧ್ವನಿಯಾಗಿದ್ದ ಕಥೆಗಾರ ಮೊಗಳ್ಳಿ ಗಣೇಶ್ ಸಾವಿಗೀಡಾದುದನ್ನು ಕೇಳಿ ಎದೆ ಬಿರಿದಂತಾಯಿತು. ಬಡತನದ ನೋವುಂಡ ಕಾರಣಕ್ಕೋ ಏನೋ, ತಮ್ಮ ಅಕ್ಷರಗಳನ್ನು ಅದಕ್ಕಾಗಿಯೇ ಮೀಸಲಿಟ್ಟು ಬರೆದೇ ಬರೆದರು. ಮೊಗಳ್ಳಿ ದೂರವಾಗಿರಬಹುದು; ಅವರ ಜೀವನ್ಮುಖಿ ಬರವಣಿಗೆ ಕನ್ನಡ ಸಾಹಿತ್ಯದಲ್ಲಿ ಎಂದೆಂದೂ ನಿಲ್ಲುತ್ತದೆ.
- ಹೊರೆಯಾಲ ದೊರೆಸ್ವಾಮಿ, ಮೈಸೂರು
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯ ಪ್ರಶ್ನಾವಳಿಯನ್ನು ಅತಿಯಾಯಿತು ಎಂದಿದ್ದಾರೆ. ಹಾಗಾದರೆ, ಆಯೋಗ ಸಮೀಕ್ಷೆ ಕೈಗೊಳ್ಳುವ ಮೊದಲು ಈ ಪ್ರಶ್ನಾವಳಿಯನ್ನುಉಪ ಮುಖ್ಯಮಂತ್ರಿಗಳು ಗಮನಿಸಿಲ್ಲವೆ? ಸರ್ಕಾರದಲ್ಲಿ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಗಣತಿದಾರರಿಗೆ ನಿಖರವಾದ ಮಾಹಿತಿ ಒದಗಿಸಿ ರಾಜ್ಯಕ್ಕೆ ಮಾದರಿಯಾಗಬೇಕು. ಅವರೇ ಜವಾಬ್ದಾರಿಯಿಂದ ನುಣುಚಿಕೊಂಡರೆ ಹೇಗೆ?
- ವಿ.ಜಿ. ಇನಾಮದಾರ, ಸಾರವಾಡ
‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ನಡೆಸಲು ಮುಸ್ಲಿಂ ಸಮುದಾಯದ ಶಿಕ್ಷಕಿ ಬಂದುದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿರುವ ಸುದ್ದಿ (ಪ್ರ.ವಾ., ಅ. 4) ನಮ್ಮೊಳಗಿನ ಧಾರ್ಮಿಕ ಅಸಹನೆಯ ರೋಗ ಉಲ್ಬಣಗೊಂಡಿರುವುದನ್ನು ಎತ್ತಿ ತೋರಿಸುವಂತಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರೇ ಸಮೀಕ್ಷೆಗೆ ಕೋಮು ಬಣ್ಣ ನೀಡುತ್ತಿರುವುದು ದುರದೃಷ್ಟಕರ. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ನಡೆಯುತ್ತಿರುವ ದಾಳಿ ಕಳವಳ ಹುಟ್ಟಿಸು ವಂತಹದ್ದು. ಶಿಕ್ಷಕಿಯನ್ನೇ ಅವಮಾನಿಸುವ ಸ್ಥಿತಿ ಇದೆಯೆಂದರೆ, ಮುಂದಿನ ದಿನಗಳಲ್ಲಿ ಏನೆಲ್ಲಾ ಆಗಬಹುದು? ಜನಸಾಮಾನ್ಯರು ಯೋಚಿಸಬೇಕು.
-ತಿರುಪತಿ ನಾಯಕ್, ಕಲಬುರಗಿ
ಸರ್ಕಾರ ನಡೆಸುತ್ತಿರುವ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಲು ಊರಿಗೆ ಹೋಗಿದ್ದೆ. ಆಧಾರ್ ಲಿಂಕ್ ಆದ ಮೊಬೈಲ್ ಇಲ್ಲವೆಂಬ ಕಾರಣದಿಂದ ಒಬ್ಬ ವ್ಯಕ್ತಿಯನ್ನು ಸಮೀಕ್ಷೆಯಿಂದ ಹೊರಗುಳಿಸಿದ್ದರು. ಇದೇ ರೀತಿ, ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆಯಿಂದ ಹೊರಗೆ ಉಳಿದಿರುವ ಕುಟುಂಬಗಳು ಸಾಕಷ್ಟು ಇರಬಹುದು. ಇಂತಹ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ದೊರಕಿಸಿಕೊಡಬೇಕು.
-ಸೋಮಶೇಖರ್ ಕೆ.ಎನ್., ಕದಿರೇಹಳ್ಳಿ
ಮಕ್ಕಳ ಸಾವಿಗೆ ಕೆಮ್ಮಿನ ಸಿರಪ್ ನಂಟಿರುವ ಸುದ್ದಿ ಓದಿ ದಿಗ್ಭ್ರಮೆಯಾಯಿತು
(ಪ್ರ.ವಾ., ಅ. 5). ಸಮಾನತೆಯಿಲ್ಲದ ವೈದ್ಯಕೀಯ ವ್ಯವಸ್ಥೆ ದುರದೃಷ್ಟಕರ. ಆರೋಗ್ಯದ ವಿಷಯದಲ್ಲಿ ಮಕ್ಕಳು, ದೊಡ್ಡವರು ವ್ಯತ್ಯಾಸವಿಲ್ಲದೆ ಶೋಷಣೆಗೆ ಒಳಗಾಗಿದ್ದೇವೆ. ಹಾಸಿಗೆಯ ಮೇಲೆ ಮಲಗಿರುವ ರೋಗಿಗಳು ತಮಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲದೆ ವೈದ್ಯರ ಪ್ರಯೋಗಕ್ಕೆ ಬಲಿಯಾಗುತ್ತಿದ್ದಾರೆ. ಒಬ್ಬನೇ ರೋಗಿ, ಬೇರೆ ಬೇರೆ ಆಸ್ಪತ್ರೆಗಳ ವೈದ್ಯರ ಬಳಿ ಪರೀಕ್ಷೆಗೆ ಒಳಗಾದಾಗಲೂ, ಬೇರೆ ಬೇರೆ ಕಂಪನಿಯ ಔಷಧ ಚೀಟಿ ಬರೆಯುತ್ತಾರೆ. ಬೇರೆ ಬೇರೆ ಪರೀಕ್ಷೆಗೆ ಒಳಪಡಿಸಿ, ಪ್ರತ್ಯೇಕ ಶುಲ್ಕ ಪಡೆಯುತ್ತಾರೆ. ಸ್ಪಷ್ಟತೆ–ಪಾರದರ್ಶಕತೆ ಇಲ್ಲದೆ, ರೋಗಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಆರೋಗ್ಯ ವ್ಯವಸ್ಥೆಗೆ ಕಾಯಕಲ್ಪ ಆಗಬೇಕು.
-ತಾ.ಸಿ. ತಿಮ್ಮಯ್ಯ, ಬೆಂಗಳೂರು
ಮಧ್ಯಪ್ರದೇಶದಲ್ಲಿ ಕಳಪೆ ಗುಣಮಟ್ಟದ ಕೆಮ್ಮಿನ ಸಿರಪ್ ಸೇವನೆಯಿಂದ ಹತ್ತಾರು ಮಕ್ಕಳು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಗುಣಮಟ್ಟದ ಔಷಧಿಗಳನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದೆ. ಇಂತಹ ಘಟನೆಗಳು ಪುನರಾವರ್ತನೆ ಆಗಬಾರದು. ಮಕ್ಕಳ ಸಹಿತ ಯಾರದೇ ಪ್ರಾಣಹಾನಿ ಆಗಬಾರದು.
-ಲಕ್ಷ್ಮೀಕಾಂತ್ ಕೊಟ್ಟಾರ ಚೌಕಿ, ಮಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.