ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಬುಧವಾರ, 12 ನವೆಂಬರ್ 2025

ವಾಚಕರ ವಾಣಿ
Published 11 ನವೆಂಬರ್ 2025, 19:30 IST
Last Updated 11 ನವೆಂಬರ್ 2025, 19:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಮೂಲಭೂತವಾದಕ್ಕೆ ವಿದ್ಯಾವಂತರೇ ಬಲಿ

ಧಾರ್ಮಿಕ ಮೂಲಭೂತವಾದಕ್ಕೆ ಉನ್ನತ ವ್ಯಾಸಂಗ ಮಾಡಿದ ವೈದ್ಯರು, ಎಂಜಿನಿಯರ್‌ಗಳೇ ಹೆಚ್ಚಾಗಿ ಬಲಿಯಾಗುತ್ತಿರುವುದು ವಿಪರ್ಯಾಸ. ದೇವರಲ್ಲಿ ಅಚಲ ನಂಬಿಕೆ ಇಟ್ಟವರು, ಧರ್ಮ ರಕ್ಷಣೆಯನ್ನು ತಮ್ಮ ದೇವರಿಗೆ ಏಕೆ ಬಿಡುವುದಿಲ್ಲ? ಇದಕ್ಕೆ ಮಾನವರನ್ನು ಬಳಸಿಕೊಳುವುದು ಏಕೆ? ದೇವರ ಅಸ್ತಿತ್ವದಲ್ಲಿ ನಂಬಿಕೆ; ಆದರೆ, ದೇವರ ಸಾಮರ್ಥ್ಯದಲ್ಲಿ ಅಪನಂಬಿಕೆ ಸರಿಯೆ? ಮೂಲಭೂತವಾದಿಗಳ ಈ ವಿರೋಧಾಭಾಸವನ್ನು ಅರ್ಥ ಮಾಡಿಕೊಳ್ಳಲು ಆಗದವರು ಅದು ಹೇಗೆ ಉನ್ನತ ಶಿಕ್ಷಣ ಪೂರೈಸುತ್ತಾರೆ ಎಂಬುದು ಬಿಡಿಸಲಾಗದ ಕಗ್ಗಂಟು.

ADVERTISEMENT

– ರಾಜೇಂದ್ರ, ಬೆಂಗಳೂರು

_______________________________

ಪೋಕ್ಸೊ ದುರ್ಬಳಕೆ: ಜಾಗೃತಿಯೇ ಮದ್ದು

ಪೋಕ್ಸೊ ಕಾಯ್ದೆ ಜಾರಿಗೊಂಡಾಗ, ಮಕ್ಕಳ ನಗು ಉಳಿಸುವ ಭರವಸೆ ಆಗಿತ್ತು. ಇದೀಗ ಕೆಲವರ ಸ್ವಾರ್ಥದ ಕೈಯಲ್ಲಿ ಶಸ್ತ್ರವಾಗಿ ಮಾರ್ಪಟ್ಟಿದೆ. ಈ ಕುರಿತಂತೆ ಸುಪ್ರೀಂ ಕೋರ್ಟ್‌ನ ಕಳವಳವು ಕೇವಲ ಕಾನೂನಿನ ಮಾತಲ್ಲ; ಅದು ನ್ಯಾಯದ ಅಳಲು ಕೂಡ ಆಗಿದೆ. ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವವರು ನೆರಳಿನಲ್ಲಿ ನಿಂತು ನಗುವಾಗ ನಿರಪರಾಧಿ ಯುವಕರು ಕಾನೂನಿನ ಸಂಕೋಲೆಗೆ ಸಿಲುಕುತ್ತಾರೆ. ಮಕ್ಕಳ ಭದ್ರತೆ ಕಾಪಾಡುವುದು ನಮ್ಮ ಕರ್ತವ್ಯ. ಆದರೆ, ಮಾನವೀಯತೆಯ ಮಿತಿ ದಾಟಿ ಕಾನೂನು ದುರ್ಬಳಕೆ ಆಗಬಾರದು. ಇದು ಸುಪ್ರೀಂ ಕೋರ್ಟ್‌ನ ಆಶಯವೂ ಹೌದು. ಕಾಯ್ದೆ ಬಗ್ಗೆ ಮಕ್ಕಳು ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸಬೇಕಿದೆ.

– ಬಸವಚೇತನ ಹೂಗಾರ್, ಬೀದರ್

_______________________________

ಚುನಾವಣಾ ಆಯೋಗಕ್ಕೆ ಸತ್ವ ಪರೀಕ್ಷೆ

ಇತ್ತೀಚೆಗೆ ಚುನಾವಣಾ ಆಯೋಗದ ಮೇಲೆ ಜನರು ಅನುಮಾನಪಡುವಂತಹ ಬೆಳವಣಿಗೆಗಳು ನಡೆಯುತ್ತಿವೆ. ಆಡಳಿತ ಪಕ್ಷಕ್ಕೆ ಅನುಕೂಲ ಆಗುವಂತೆ ಆಯೋಗ ನಡೆದುಕೊಳ್ಳುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ದಾಖಲೆಗಳ ಸಮೇತ ಆರೋಪಿಸುತ್ತಿದ್ದಾರೆ. ಆದರೆ, ಈ ಆರೋಪಗಳನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

ದೇಶದ ಮತದಾರರ ಪಟ್ಟಿಯಲ್ಲಿ ಬ್ರೆಜಿಲ್‌ನ ಮಹಿಳಾ ರೂಪದರ್ಶಿಯ ಫೋಟೊ ಬಳಕೆ ಆಗಿರುವುದು ಅಕ್ಷಮ್ಯ. ಈ ರೀತಿಯ ಪ್ರಕರಣಗಳಿಂದ ಜನರಿಗೆ ಆಯೋಗದ ಮೇಲೆ ಅನುಮಾನ ಬಲಗೊಳ್ಳುತ್ತದೆ. ಹಾಗಾಗಿ, ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು, ತನ್ನ ನಿಷ್ಪಕ್ಷಪಾತ ಕೆಲಸದ ಬಗ್ಗೆ ಗಟ್ಟಿತನ ಪ್ರದರ್ಶಿಸುವ ಸವಾಲು ಎದುರಾಗಿದೆ.

– ಸುಜಾತಾ, ರಾಯಚೂರು

_______________________________

ಜೈಲು ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಲಿ

ಅಪರಾಧಿಗಳನ್ನು ನ್ಯಾಯಾಲಯವು ಜೈಲಿಗಟ್ಟುತ್ತದೆ. ಜೈಲಿನ ಅಧಿಕಾರಿಗಳು ಅಪರಾಧಿಗಳಿಂದ ಲಂಚ ಪಡೆದು ಅವರ ಕೈಗೆ ಮೊಬೈಲ್ ಫೋನ್, ಸಿಗರೇಟ್‌, ಮದ್ಯ ಹಾಗೂ ಮಾದಕ ಪದಾರ್ಥ ನೀಡುತ್ತಾರೆ. ಅಪರಾಧಿಗಳ ಕೊಠಡಿಗೆ ಟಿ.ವಿ ವ್ಯವಸ್ಥೆ ಕಲ್ಪಿಸುತ್ತಾರೆ. ತಪ್ಪು ಮಾಡಿದವರನ್ನು ಒದ್ದು ಒಳಗೆ ಹಾಕಬಹುದು. ಒಳಗಿರುವವರೇ ತಪ್ಪು ಮಾಡಿದರೆ ಒದ್ದು ಹೊರಹಾಕಲಾಗುವುದೇ?

– ಪಿ.ಜೆ. ರಾಘವೇಂದ್ರ, ಮೈಸೂರು

_______________________________

ಕೇರಿ ಪದ್ಧತಿ ಬಗ್ಗೆ ಮೌನ ಮುರಿಯಿರಿ

ಭಾರತದ ಬಗ್ಗೆ ಮಾತನಾಡುವಾಗ ನಾವು ಜಾತಿ ಪದ್ಧತಿಯ ಬಗ್ಗೆ ಮಾತನಾಡುತ್ತೇವೆ. ಆದರೆ, ದೇಶದಲ್ಲಿರುವ ಕೇರಿ ಪದ್ಧತಿಯ ಬಗ್ಗೆ ಮಾತನಾಡುವುದಿಲ್ಲ. ಬ್ರಾಹ್ಮಣ, ಒಕ್ಕಲಿಗ, ಲಿಂಗಾಯತ, ಮಾದಿಗ, ಲಂಬಾಣಿ, ಮುಸ್ಲಿಂಮರು ಸೇರಿದಂತೆ ಎಲ್ಲಾ ಜಾತಿಯ ಕೇರಿಗಳು ಇವೆ. ಒಂದು ಸಮುದಾಯದ ಜನರು ಮತ್ತೊಂದು ಸಮುದಾಯದ ಕೇರಿಗೆ ಹೋಗಲು ಅಷ್ಟೇಕೆ ಭಯ? ಇದರ ಬಗ್ಗೆಯೂ ಚರ್ಚೆ ಆಗಬೇಕಲ್ಲವೆ?

– ನಾಗಾರ್ಜುನ, ಬೆಂಗಳೂರು

_______________________________

ಹಂದಿ ಸ್ಥಳಾಂತರ: ಮಾರ್ಗಸೂಚಿ ರೂಪಿಸಿ

ಸುಪ್ರೀಂ ಕೋರ್ಟ್ ಇತ್ತೀಚೆಗೆ ಬೀದಿನಾಯಿ, ಬೀಡಾಡಿ ದನಗಳ ಸ್ಥಳಾಂತರಕ್ಕೆ ಸೂಚನೆ ನೀಡಿದೆ. ಈ ಆದೇಶ ಸಾಮಾನ್ಯ ಜನರಿಗೆ ನೆಮ್ಮದಿ ತಂದಿದೆ. ರಾಜ್ಯದ ಹಲವು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಂದಿಗಳ ಹಾವಳಿ ಮಿತಿಮೀರಿದೆ. ಇದು ಪೌರ ಸಿಬ್ಬಂದಿಗೆ ಸ್ವಚ್ಛತೆ ಕಾಪಾಡಲು ಮತ್ತು ನಿಯಂತ್ರಿಸಲು ಸವಾಲಾಗಿದೆ. ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಾ ವಾಹನ ಸವಾರರ ಜೀವಕ್ಕೆ ಸಂಚಕಾರ ತರುತ್ತವೆ. ಹಾಗಾಗಿ, ರಾಜ್ಯ ಸರ್ಕಾರವು ನಗರ ಪ್ರದೇಶದೊಳಗಿರುವ ಹಂದಿಗಳ ಸ್ಥಳಾಂತರಕ್ಕೂ ಮಾರ್ಗಸೂಚಿ ರೂಪಿಸಬೇಕಿದೆ.

– ಸುರೇಶ ಅರಳಿಮರ, ಬಾದಾಮಿ 

_______________________________

ಎಲ್ಲರಿಗೂ ಮಾದರಿ ಈ ‘ಶಾಂತಿಯಮ್ಮ’

ಕಲಬುರಗಿ ಜಿಲ್ಲೆಯ ಶಾಂತಿಯಮ್ಮ ಎಂಬ ಲಿಂಗತ್ವ ಅಲ್ಪಸಂಖ್ಯಾತೆಯು ತನ್ನ ಉಳಿತಾಯದ ಹಣದಲ್ಲಿ ಮುಸ್ಲಿಮರಿಗೆ ದರ್ಗಾ ಮತ್ತು ಹಿಂದೂಗಳಿಗೆ ದೇಗುಲ ನಿರ್ಮಿಸಿರುವುದು ಶ್ಲಾಘನೀಯ. ಅವರು ಬಹುತ್ವದ ರಾಯಭಾರಿಯಾಗಿ ಕಂಗೊಳಿಸಿದ್ದಾರೆ. ಇಡೀ ದೇಶವೇ ಕೋಮುದಳ್ಳುರಿಯಲ್ಲಿ ಬೇಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಚನ್ನಪಟ್ಟಣದ ಮುಸ್ಲಿಂ ಸಮುದಾಯದ ಶ್ರೀಮಂತರೊಬ್ಬರು ದೇವಾಲಯ ನಿರ್ಮಿಸಲು ನೆರವು ನೀಡಿದ್ದಾರೆ.

ಹಾಗೆಯೇ, ಮೈಸೂರು ಜಿಲ್ಲೆಯ ಜಯಪುರ ಗ್ರಾಮದಲ್ಲಿ ಜಾಮಿಯಾ ಮಸೀದಿ ನಿರ್ಮಾಣ ಕಾರ್ಯಕ್ಕೆ ಗ್ರಾಮದ ಹಿಂದೂ ಮುಖಂಡರು ದೇಣಿಗೆ ನೀಡಿದ್ದು ವರದಿಯಾಗಿದೆ. ಈ ಮಾನವತೆ ಮತ್ತು ಜಾತ್ಯತೀತತೆಯ ತಂಗಾಳಿ ಇಡೀ ದೇಶದಾದ್ಯಂತ ಜೋರಾಗಿ ಬೀಸಬೇಕಿದೆ.

– ಮೋದೂರು ಮಹೇಶಾರಾಧ್ಯ, ಹುಣಸೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.