ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 23:30 IST
Last Updated 26 ಅಕ್ಟೋಬರ್ 2025, 23:30 IST
   

‘ಎ’ ಖಾತಾ: ಎಚ್‌ಡಿಕೆ ಹೋರಾಡಲಿ

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು, ‘ಎ’ ಖಾತೆ ಮಾಡಿಸಿಕೊಳ್ಳಲು ಎರಡು ವರ್ಷ ಕಾಯುವಂತೆ ಬೆಂಗಳೂರಿನ ನಾಗರಿಕರಿಗೆ ಮನವಿ ಮಾಡಿದ್ದಾರೆ. ಈ ಸುದ್ದಿ ಓದಿ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಎರಡು ವರ್ಷದ ನಂತರ ತಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುವುದು ಅವರ ಮಾತಿನ ತರ್ಕ. ಹಾಗೆಂದು ಕಡಿಮೆ ದರದಲ್ಲಿ ‘ಎ’ ಖಾತೆ ಮಾಡಿಕೊಡುವುದಾಗಿ ಹೇಳುವುದು ಜನರ ಕಿವಿಯ ಮೇಲೆ ಹೂ ಇಡುವುದಷ್ಟೆ ಹೊರತು ಬೇರೇನೂ ಅಲ್ಲ. ಸರ್ಕಾರ ಪ್ರಕಟಿಸಿರುವ ಯೋಜನೆ ಉತ್ತಮವಾಗಿದ್ದರೂ ದುಬಾರಿ ಶುಲ್ಕ ಇತ್ಯಾದಿ ಕೆಲವು ನ್ಯೂನತೆ ಹೊಂದಿದೆ. ಕೇಂದ್ರ ಸಚಿವರಿಗೆ, ಜನಪರ ಕಾಳಜಿ ಇದ್ದರೆ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಈ ನ್ಯೂನತೆ ಸರಿಪಡಿಸಬೇಕೇ ವಿನಾ ಈ ತರಹದ ಅತಾರ್ಕಿಕ ವಿಚಾರ ಹೇಳಿ ನಗೆಪಾಟಲಿಗೀಡಾಗುವುದು ಅವರಿಗೆ ಶೋಭೆ ತರುವುದಿಲ್ಲ.

–ಪ್ರಮೋದ ನಾಯ್ಕ, ಬೆಂಗಳೂರು

ADVERTISEMENT

**

ನ್ಯಾಯಾಂಗದ ಘನತೆಗೆ ಧಕ್ಕೆ ಆಗದಿರಲಿ

ನ್ಯಾಯಾಲಯ ಮತ್ತು ನ್ಯಾಯಾಧೀಶರ ಘನತೆಗೆ ಧಕ್ಕೆ ತರುವಂತೆ ರಾಜಾರೋಷವಾಗಿ ಹೇಳಿಕೆ ನೀಡುವವರ ವಿರುದ್ಧ ನ್ಯಾಯಾಲಯವು ಕಠಿಣ ಕ್ರಮ ಜರುಗಿಸಿ ತನ್ನ ಘನತೆಯನ್ನು ತಾನೇ ಕಾಪಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ನ್ಯಾಯಾಲಯ, ನ್ಯಾಯಾಂಗ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ಉಳಿಗಾಲವಿಲ್ಲ.

–ಪಿ.ಜೆ. ರಾಘವೇಂದ್ರ, ಮೈಸೂರು

**

ಮತದಾರ ಮಹಾಪ್ರಭು ಮೂಕಪ್ರೇಕ್ಷಕ 

ಪ್ರಸ್ತುತ ಮುಖ್ಯಮಂತ್ರಿ ಗದ್ದುಗೆಯು ಚರ್ಚೆಯ ಕೇಂದ್ರವಾಗಿದೆ. ಸಿದ್ದರಾಮಯ್ಯ ಅವರೇ ಮುಂದಿನ ಎರಡೂವರೆ ವರ್ಷ ಸಿ.ಎಂ ಆಗಿ ಮುಂದುವರಿಯುತ್ತಾರೆ ಎನ್ನುವುದು ಅವರ ಬೆಂಬಲಿಗರ ಹೇಳಿಕೆ. ಅಧಿಕಾರ ಹಂಚಿಕೆ ಸೂತ್ರ ಒಪ್ಪಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರೇ ಮುಂದಿನ ಸಿ.ಎಂ ಆಗುತ್ತಾರೆ ಎಂದು ಅವರ ಹಿಂಬಾಲಕರು ಹೇಳುತ್ತಿದ್ದಾರೆ. ಇವರಿಬ್ಬರನ್ನೂ ಬಿಟ್ಟು ನಮಗೇನಾದರೂ ಸಿಹಿ ಸುದ್ದಿ ಸಿಗಲಿದೆಯೇ ಎನ್ನುವುದು ಸಚಿವ ಸಂಪುಟದಲ್ಲಿರುವ ಕೆಲವರ ನಿರೀಕ್ಷೆ- ನಂಬಿಕೆ! ಆದರೆ, ನಿತ್ಯವೂ ಈ ಸುದ್ದಿ ನೋಡುವ ರಾಜ್ಯದ ಮತದಾರರು ಮೂಕಪ್ರೇಕ್ಷಕರಾಗಿದ್ದಾರೆ.

–ಶ್ರೀಧರ್ ಡಿ. ರಾಮಚಂದ್ರಪ್ಪ, ತುರುವನೂರು 

**

ಗದ್ದಲದ ಗೂಡಾಗಿರುವ ‘ಐಕ್ಯ ಮಂಟಪ’

ಭಕ್ತಿ ಭಂಡಾರಿ ಬಸವಣ್ಣನವರು ಐಕ್ಯರಾದ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿರುವ ಐಕ್ಯ ಮಂಟಪ ಗದ್ದಲದ ಗೂಡಾಗಿದೆ. ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದವರು ಮಂಟಪದ ಸುತ್ತ ‘ಗದ್ದಲ ಮಾಡಬೇಡಿ; ಮೌನವಾಗಿರಿ’ ಎಂಬ ಸಂದೇಶದ ನಾಮಫಲಕ ಅಳವಡಿಸಿದ್ದರೂ, ಕೆಲವು ಜನರು  ಜೋರಾಗಿ ಕಿರುಚುವುದು, ಕೇಕೆ ಹಾಕುವುದನ್ನು ಮಾಡುತ್ತಾರೆ. ಇದರಿಂದ ಮೌನವಾಗಿ ಪ್ರಾರ್ಥನೆ, ಧ್ಯಾನ ಮಾಡುವ ಭಕ್ತರಿಗೆ ಕಿರಿಕಿರಿ ಉಂಟಾಗುತ್ತಿದೆ. ಮಂಟಪದ ಪಕ್ಕದಲ್ಲಿರುವ ನದಿಯಲ್ಲಿ ಬೋಟಿಂಗ್ ವ್ಯವಸ್ಥೆ ಇದೆ. ಇದರಲ್ಲಿ ಸಂಚರಿಸುವ ಪ್ರವಾಸಿಗರು ಕೇಕೆ ಹಾಕುವುದು ನಡೆಯುತ್ತಿದೆ. ಮಂಟಪದ ಪರಿಸರದಲ್ಲಿ ಸಾಕಷ್ಟು ಸಂಖ್ಯೆಯ ಭದ್ರತಾ ಸಿಬ್ಬಂದಿ ನೇಮಿಸಿ, ಕಿರಿಕಿರಿ ಉಂಟು ಮಾಡುವವರಿಗೆ ಎಚ್ಚರಿಕೆ ನೀಡಿ, ಶಾಂತ ಪರಿಸರವನ್ನು ಕಾಪಾಡಬೇಕಿದೆ.  

–ಸುರೇಶ ಅರಳಿಮರ, ಬಾದಾಮಿ 

**

ಕಾಳಿಂಗ ಸರ್ಪದ ರಕ್ಷಣೆ ನಮ್ಮೆಲ್ಲರ ಹೊಣೆ

ಇತ್ತೀಚೆಗೆ ಸಂಶೋಧನೆಯ ಹೆಸರಿನಲ್ಲಿ ಕಾಳಿಂಗ ಸರ್ಪದ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಕೆಲವರು ಈ ವಿಷಯದಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಹಿಂದೂ– ಮುಸ್ಲಿಂ, ಕ್ರೈಸ್ತ ಧರ್ಮದ ವಿಚಾರ ಬಳಸುತ್ತಿರುವುದು ದುರದೃಷ್ಟಕರ.

ಮಲೆನಾಡಿನಲ್ಲಿ ಎಲ್ಲ ಧರ್ಮದವರೂ ಒಗ್ಗಟ್ಟಿನಿಂದ ಬದುಕುತ್ತಾರೆ. ಅನೇಕರು ಹಾವು ಪ್ರೇಮಿಗಳು, ಹಾವು ಸಂರಕ್ಷಕರಿದ್ದಾರೆ. ಅವರಲ್ಲಿ ಮುಸ್ಲಿಂ, ಕ್ರೈಸ್ತರೂ ಇದ್ದಾರೆ. ಎಲ್ಲರೂ ಎಲ್ಲರ ನಂಬಿಕೆ, ಆಚರಣೆಯನ್ನು ಗೌರವಿಸುತ್ತಾರೆ. ಕಾಳಿಂಗವು ಧರ್ಮ, ಮತ, ಜಾತಿ ಮೀರಿ ಪ್ರಕೃತಿಯ ಅಮೂಲ್ಯ ರತ್ನ. ಅದನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.

–ನಂದನ ಕೆ.ಎನ್. ಕಡಾವಡಿ, ಶೃಂಗೇರಿ 

**

ರಾಜಕೀಯ ಅಪಸವ್ಯ: ಪುಕ್ಕಟೆ ರಂಜನೆ

ಸಂಸದ ತೇಜಸ್ವಿ ಸೂರ್ಯ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವಿನ ವಾಕ್ಸಮರ ತಮಾಷೆಯಾಗಿದ್ದು, ಜನರಿಗೆ ಪುಕ್ಕಟೆ ಮನರಂಜನೆ ನೀಡಿದೆ. ಜನರ ಬೇಸರದ ಜೀವನದಲ್ಲಿ ಕೊಂಚ ಕಚಗುಳಿ ಇಟ್ಟಂತಾಗಿದೆ. ‘ತೇಜಸ್ವಿ ಸೂರ್ಯ ಅಲ್ಲ; ಅಮಾವಾಸ್ಯೆ ಸೂರ್ಯ’ ಎಂದು ಸಿದ್ದರಾಮಯ್ಯ ಹೇಳಿದರೆ; ‘ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನವೂ ಸೂರ್ಯ ಇರುತ್ತಾನೆ’ ಎಂದು ಸಂಸದರು ಪ್ರತಿಕ್ರಿಯಿಸಿ ದ್ದಾರೆ. ಇಂತಹ ರಾಜಕೀಯ ಅಪಸವ್ಯಗಳನ್ನು ಕೇಳಿಸಿಕೊಂಡು ಕುಳಿತುಕೊಳ್ಳಲು ಮತದಾರರು ಮಾಡಿರುವ ಪಾಪವಾದರೂ ಏನು? ಇವರು ಮಾತಾಡುವ ಸೂರ್ಯ, ಚಂದ್ರ, ಹುಣ್ಣಿಮೆ, ಅಮಾವಾಸ್ಯೆ ಇವೆಲ್ಲಾ ಸೌರಮಂಡಲದ ವಿಷಯವಾಯಿತು. ರಾಜ್ಯದ ವಿಧಾನಸಭಾ ಕ್ಷೇತ್ರಗಳು ಮತ್ತು  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಬಗ್ಗೆ ಇವರು ಮಾತನಾಡಬೇಕಲ್ಲವೆ?

–ರವಿಕಿರಣ್ ಶೇಖರ್, ಬೆಂಗಳೂರು 

**

ಮಾತೆ...

ದಿನವೂ ಹಾಡುತ್ತೇವೆ

ಕೇಳುತ್ತೇವೆ ಜಯ ಹೇ

ಕರ್ನಾಟಕ 

ಮಾತೆ...

ಆಮೇಲೆ ಅವಶ್ಯಕತೆ 

ಇಲ್ಲದಿದ್ದರೂ ಕೊಡುತ್ತೇವೆ 

ಬೇರೆ ಭಾಷೆಗೆ 

ಆದ್ಯತೆ

–ವಿಜಯ ಮಹಾಂತೇಶ್, ಬಾಗಲಕೋಟೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.