ADVERTISEMENT

ವಾಚಕರ ವಾಣಿ: ಯುವ ದಸರಾ; ದುಂದುವೆಚ್ಚ ಬೇಕೆ?

ವಾಚಕರ ವಾಣಿ
Published 7 ಆಗಸ್ಟ್ 2025, 21:38 IST
Last Updated 7 ಆಗಸ್ಟ್ 2025, 21:38 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಯುವ ದಸರಾ: ದುಂದುವೆಚ್ಚ ಬೇಕೆ?

‘ಯುವ ದಸರಾ’ ಹೆಸರಿನಲ್ಲಿ ಸರ್ಕಾರವು ಕೋಟ್ಯಂತರ ರೂಪಾಯಿ ವ್ಯಯಿಸುತ್ತದೆ. ಆದರೆ, ಕಾರ್ಯಕ್ರಮದಲ್ಲಿ ಕನ್ನಡದ ಪ್ರತಿಭೆಗಳು ನಗಣ್ಯ. ಅದ್ದೂರಿ ಮನರಂಜನೆ ನೆಪದಲ್ಲಿ ಹೊರಗಿನ ಕಲಾವಿದರಿಗೆ ಮಣೆ ಹಾಕಲಾಗುತ್ತದೆ. ಒಂದೆರಡು ಗಂಟೆ ಕಾರ್ಯಕ್ರಮ ನೀಡುವ ಅವರಿಗೆ ದುಬಾರಿ ಸಂಭಾವನೆ ನೀಡಲಾಗುತ್ತದೆ. ಜೊತೆಗೆ, ಐಷಾರಾಮಿ ವಸತಿ ಸೌಕರ್ಯ ಕಲ್ಪಿಸಲಾಗುತ್ತದೆ. ಕಾರ್ಯಕ್ರಮದ ದಿನದಂದು ಸಂಚಾರ ದಟ್ಟಣೆ, ಕಳ್ಳಕಾಕರು, ಪುಂಡರ ದಾಂದಲೆಗೆ ಕೊನೆ ಎಂಬುದಿಲ್ಲ. ನಾಗರಿಕರ ತೆರಿಗೆ ಹಣವನ್ನು ದುಂದುವೆಚ್ಚ ಮಾಡುವ ಇಂತಹ ಕಾರ್ಯಕ್ರಮದ ಔಚಿತ್ಯವಾದರೂ ಏನು?

–ಎನ್‌.ಕೆ. ಸ್ವಾಮಿ, ಬೆಂಗಳೂರು

ADVERTISEMENT

ಬೋರ್ಡೊ ದ್ರಾವಣವೇ ಪರಿಹಾರ  

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳಿಗೆ ಕೊಳೆರೋಗ, ಕೀಟ ಬಾಧೆ ಕಾಣಿಸಿಕೊಂಡಿದೆ
(ಪ್ರ.ವಾ., ಆಗಸ್ಟ್‌ 7). ಕೃಷಿ ಇಲಾಖೆಯ ಪ್ರಥಮ ನಿರ್ದೇಶಕರಾಗಿದ್ದ ಡಾ. ಲೆಸ್ಲಿ ಕೋಲ್ಮನ್ ಅವರು, 100 ವರ್ಷಗಳ ಹಿಂದೆಯೇ ರೈತರ ಹೊಲಗಳಿಗೆ ತೆರಳಿ ಕೊಳೆ‌ರೋಗಕ್ಕೆ ರಾಮಬಾಣವಾದ ಬೋರ್ಡೊ ದ್ರಾವಣ ತಯಾರಿಕೆಯ ಬಗ್ಗೆ ತರಬೇತಿ ನೀಡಿದ್ದರು. ರೈತರೇ ಸುಲಭವಾಗಿ ಈ ದ್ರಾವಣವನ್ನು ತಯಾರಿಸಬಹುದು. ಮೊದಲಿಗೆ ಒಂದು ಕೆ.ಜಿ ಮೈಲುತುತ್ತವನ್ನು 10 ಲೀಟರ್ ನೀರಿನಲ್ಲಿ ಕರಗಿಸಬೇಕು. ಮತ್ತೊಂದು ಪಾತ್ರೆಯಲ್ಲಿ ಒಂದು ಕೆ.ಜಿ ಸುಣ್ಣವನ್ನು ಕರಗಿಸಿ ಮೈಲುತುತ್ತ ದ್ರಾವಣವನ್ನು
ಆ ಸುಣ್ಣದ ನೀರಿಗೆ ಸೇರಿಸಬೇಕು. ನಂತರ ಅದಕ್ಕೆ 80 ಲೀಟರ್ ನೀರು ಸೇರಿಸಿದರೆ, ಶೇ 1ರಷ್ಟು ಬೋರ್ಡೊ ದ್ರಾವಣ ಸಿದ್ಧವಾಗುತ್ತದೆ.

–ಎಚ್.ಆರ್‌. ಪ್ರಕಾಶ್, ಮಂಡ್ಯ

ಹಬ್ಬ ಆರ್ಥಿಕ ಹೊರೆಯಾಗದಿರಲಿ

‘ಹೊಸ ಹಬ್ಬ–ವ್ರತಗಳು ಬೇಕೆ?’ ಲೇಖನವು (ಲೇ: ಹೆಚ್‌.ಆರ್‌. ಸುಜಾತಾ)
ಚಿಂತನಾರ್ಹವಾಗಿದೆ. ಕುಟುಂಬದೊಂದಿಗೆ ಆಚರಿಸುವ ಹಬ್ಬಗಳು ನಮ್ಮ ಸಂಸ್ಕೃತಿಯ ಭಾಗ. ಅವು ಜೀವನದಲ್ಲಿ ಸಂಭ್ರಮ ತರುತ್ತವೆ. ಜನರು ಒಟ್ಟಾಗಿ ಸೇರಿ ಹಬ್ಬ ಆಚರಿಸುವುದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ. ಇತ್ತೀಚೆಗೆ ಕೆಲ ಹಬ್ಬಗಳು ಪ್ರತಿಷ್ಠೆಯ ಲೇಪನ ಅಂಟಿಸಿಕೊಂಡಿವೆ. ಮಹಿಳೆಯರ
ವ್ರತಗಳಿಗಾಗಿಯೇ ಸೀಮಿತವಾಗಿರುವ ಕೆಲ ಹಬ್ಬಗಳು ಕೌಟುಂಬಿಕ ಹಬ್ಬಗಳಾಗಿ ಮಾರ್ಪಟ್ಟಿವೆ. ಆರ್ಥಿಕವಾಗಿಯೂ ಹೊರೆಯಾಗಿವೆ.

–ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

‘ಕೋಮುದ್ವೇಷ’ ಅಧಿಕಾರದ ಕಾಮಧೇನು!

2026ರಲ್ಲಿ ನಡೆಯುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುನ್ನುಡಿಯಾಗಿ ಅಲ್ಪಸಂಖ್ಯಾತರ ಕೃಷಿ ಭೂಮಿಯನ್ನು ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕಿತ್ತುಕೊಳ್ಳಲು ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರ ಮುಂದಾಗಿರುವುದು ಅಮಾನವೀಯ. ಈ ಕುರಿತ ಸಂಪಾದಕೀಯ ಸಕಾಲಿಕವಾಗಿದೆ (ಪ್ರ.ವಾ., ಆಗಸ್ಟ್‌ 7).  ಇತ್ತೀಚೆಗೆ ಅಲ್ಪಸಂಖ್ಯಾತರ ಮೇಲೆ ಐತಿಹಾಸಿಕ ಕಾರಣ ಹೊರಿಸಿ, ಬಹುಸಂಖ್ಯಾತರಲ್ಲಿ ಅವರ ಮೇಲೆ ದ್ವೇಷ ಮೂಡಿಸುವಂತಹ ವಾತಾವರಣ ಸೃಷ್ಟಿಸುವುದು ಸರಳ ಮತ್ತು ಯಶಸ್ವಿ ಪ್ರಯೋಗ ಆಗಿದೆ. ಆಯಾ ಜಾತಿಯ ಮತಗಳನ್ನು ದ್ರುವೀಕರಿಸಲು ‘ಕೋಮುದ್ವೇಷ’ವು ಅಧಿಕಾರ ಕೊಡಿಸುವ ಕಾಮಧೇನುವಾಗಿರುವುದು ದುರದೃಷ್ಟಕರ. ⇒

–ತಿರುಪತಿ ನಾಯಕ್, ಕಲಬುರಗಿ 

ಸಿ.ಎಂ ಸರ್ಕಾರಿ ಚಿಕಿತ್ಸೆ ಪಡೆಯಲಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ, ರೋಗಿಗಳ ಕಷ್ಟವನ್ನು ಆಲಿಸಿದ್ದಾರೆ. ಜೊತೆಗೆ, ಅವರಿಗೆ ನೀಡುವ ಊಟವನ್ನೂ ಸೇವಿಸಿ ಅದರ ಗುಣಮಟ್ಟ ಪರೀಕ್ಷಿಸಿರುವುದು ಒಳ್ಳೆಯ ಬೆಳವಣಿಗೆ. ಇದೇ ರೀತಿ ಮುಖ್ಯಮಂತ್ರಿ ಅವರು ನಿಯಮಿತ ಆರೋಗ್ಯ ತಪಾಸಣೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೇ ಮಾಡಿಸಿಕೊಂಡರೆ ಸರ್ಕಾರಿ ಆಸ್ಪತ್ರೆಗಳು ಜಾಗೃತವಾಗುತ್ತವೆ. ಜನರಲ್ಲಿ ಆಸ್ಪತ್ರೆಗಳ ಮೇಲೆ ನಂಬಿಕೆ ಬಲಗೊಳ್ಳು ತ್ತದೆ. ನಿಮ್ಮಿಂದ ಪ್ರೇರಣೆ ಪಡೆದ ಸಚಿವರು, ಶಾಸಕರು, ಸಂಸದರು ತಾಲ್ಲೂಕು‌ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಲು ಆರಂಭಿಸಿದರೆ ಸರ್ಕಾರಿ ಆಸ್ಪತ್ರೆಗಳಿಗೆ ಕಾಯಕಲ್ಪ ನೀಡಿದಂತಾಗುತ್ತದೆ. ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರು ತಮ್ಮ ಕೊನೆಯ ದಿನಗಳಲ್ಲಿ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅಂದಿನ ಸರ್ಕಾರ ಅವರನ್ನು ಸುಸಜ್ಜಿತ ಖಾಸಗಿ ಆಸ್ಪತ್ರೆಗೆ ಸೇರಿಸಲು ಮುಂದಾದರೂ, ಅದನ್ನು ನಯವಾಗಿ ತಿರಸ್ಕರಿಸಿದ್ದರು. 

–ಕೃ.ಪ. ಗಣೇಶ, ಹೆಗ್ಗಡದೇವನಕೋಟೆ

ನಾಲ್ವಡಿ ಆಡಳಿತ ಇಂದಿಗೂ ಮಾದರಿ

‘ನಾಲ್ವಡಿ: ಕನ್ನಡಿಗರ ವೈರಮುಡಿ’ ಲೇಖನವು (ಲೇ: ವೈ.ಎಸ್‌.ವಿ. ದತ್ತ, ಪ್ರ.ವಾ., ಆಗಸ್ಟ್‌ 7) ಮನನೀಯವಾಗಿದೆ. ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ನೀತಿಯು ಇಂದಿನ ಆಳುವ ವರ್ಗಕ್ಕೆ ಮಾದರಿಯಾಗಿದೆ. ಅವರ ಆಡಳಿತದ ಅವಧಿಯು ಬಲು ಕ್ಲಿಷ್ಟಕರ ಹಾಗೂ ಸಂದಿಗ್ಧತೆಯಿಂದ ಕೂಡಿತ್ತು. ಕಾಲದ ಪರಿಸ್ಥಿತಿಯ ಪರಿವೆಯೇ ಇಲ್ಲದೆ ಕೆಲವರು ನಾಲ್ವಡಿ ಅವರನ್ನು ಪದೇ ಪದೇ ದೂಷಿಸುವುದು ಮತ್ತು ಅವರಿಗಿಂತ ಈಗಿನ ಆಡಳಿತ ಸೂತ್ರ ಹಿಡಿದಿರುವವರೇ ಉತ್ತಮ ಎಂದು ಹೇಳುವುದು ಸರಿಯಲ್ಲ. 

–ರಮೇಶ್, ಬೆಂಗಳೂರು 

ಮೊರೆ 

ಅಂಕೆಯಿರದ ಅಮೆರಿಕದ

ಸುಂಕದೇಟು ತಡೆದುಕೊಂಡು

ಅಂಕುಶವನ್ನಿಡಲು ಅದಕೆ 

ಕೊಂಕದಂಥ ಶಕ್ತಿ ನಮಗೆ

ಶಂಕೆಯಿರದೆ ನೀಡಿ ನೀನು 

ಪೊರೆ ನಮ್ಮನು ಮಾತೆಯೇ,

ವರಮಹಾಲಕ್ಷ್ಮಿಯೇ. 

 –ಎಚ್. ಆನಂದರಾಮ ಶಾಸ್ತ್ರೀ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.