ADVERTISEMENT

ವಾಚಕರ ವಾಣಿ | ಸೌಲಭ್ಯ ಕಸಿಯುವ ಹೊಸ ಯೋಜನೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಜೂನ್ 2022, 20:00 IST
Last Updated 16 ಜೂನ್ 2022, 20:00 IST

ಕೆಲಸಕ್ಕೆ ನೇಮಕಗೊಂಡು ನಿವೃತ್ತಿಯವರೆಗೂ ಉದ್ಯೋಗದಲ್ಲಿ ಮುಂದುವರಿಯುವ ಯೋಜನೆಗೆ ಈಗ ತಿಲಾಂಜಲಿ ನೀಡಲಾಗುತ್ತಿದೆ. ಕಾರ್ಖಾನೆಗಳಲ್ಲಿ ‘ಫಿಕ್ಸೆಡ್ ಟರ್ಮ್ ಎಂಪ್ಲಾಯ್‌ಮೆಂಟ್’ ಯೋಜನೆಯನ್ನು ನಾಲ್ಕೈದು ವರ್ಷಗಳ ಹಿಂದೆ ಜಾರಿಗೆ ತರಲಾಗಿದೆ. ಹಾಗೆ ಕೆಲಸಕ್ಕೆ ಸೇರಿದವರು ಮುಂಬಡ್ತಿ, ಭವಿಷ್ಯನಿಧಿ, ಗ್ರ್ಯಾಚುಯಿಟಿ, ರಜಾ ಸೌಲಭ್ಯಗಳಿಂದ ವಂಚಿತರಾಗುತ್ತಾರೆ‌. ಉದ್ಯೋಗದ ನಿರಂತರತೆಯಿಂದಾಗಿ ಸಿಗುತ್ತಿದ್ದ ಮಾನಸಿಕ ನೆಮ್ಮದಿಗೆ ತಿಲಾಂಜಲಿ. ಸದಾ ಮುಂದೇನೋ ಎಂಬ ಅಸ್ಥಿರತೆ ಕಾಡುತ್ತದೆ.

ಈಗ ಅಂತಹದೇ ಯೋಜನೆಯನ್ನು ‘ಅಗ್ನಿಪಥ’ ಎಂಬ ಆಕರ್ಷಣೀಯ ಹೆಸರಿನೊಂದಿಗೆ ರಕ್ಷಣಾ ವಲಯದಲ್ಲಿಯೂ ಜಾರಿಗೆ ತರಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರ್ಧರಿಸಿದಂತಿದೆ. ನಾಲ್ಕು ವರ್ಷ ಪೂರೈಸಿದ ನಂತರ ಈ ‘ಅಗ್ನಿವೀರ’ರು ಮನೆಗೆ ಹೋಗಬೇಕು. ಹೀಗೆ ‘ಮಾಜಿ ಅಗ್ನಿವೀರರು’ ಎಂದು ಕರೆಸಿಕೊಳ್ಳುವವರು ಆದ್ಯತೆಯ ಆಧಾರದಲ್ಲಿ (ಮೀಸಲಾತಿ ಅಡಿಯಲ್ಲಿ) ಇತರ ವಲಯಗಳ ಉದ್ಯೋಗಗಳಿಗೆ ಸೇರಿಕೊಳ್ಳಬಹುದು.

ಈಗ ಸೇನೆಯಲ್ಲಿ ಸೇವೆ ಸಲ್ಲಿಸುವವರು ಭವಿಷ್ಯನಿಧಿ, ಗ್ರ್ಯಾಚುಯಿಟಿ, ಮುಂಬಡ್ತಿ, ರಜಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. 15– 20 ವರ್ಷಗಳ ನಂತರ ರಾಜೀನಾಮೆ ನೀಡಿ ಹೊರಬರುವ ಮತ್ತು ‘ಮಾಜಿ ಯೋಧರಿಗೆ ಮೀಸಲಾತಿ’ ಅಡಿಯಲ್ಲಿ ಸರ್ಕಾರಿ, ಸಾರ್ವಜನಿಕ ವಲಯಗಳಲ್ಲಿ ಉದ್ಯೋಗ ಪಡೆಯುವ ಸೌಲಭ್ಯವನ್ನು ಅವರು ಹೊಂದಿದ್ದಾರೆ. ನಿವೃತ್ತಿಯವರೆಗೂ ಸೇವೆ ಸಲ್ಲಿಸುವ ಅವಕಾಶ ಸಹ ಇದೆ. ಯೋಧರಿಗೆ ದೊರೆಯುತ್ತಿದ್ದ ಇಂತಹ ಸೌಲಭ್ಯಗಳನ್ನು ಕಸಿದುಕೊಳ್ಳುವ ಈ ಹೊಸ ಯೋಜನೆಯು ಸರ್ಕಾರದ ದಿವಾಳಿಕೋರ ಮನಃಸ್ಥಿತಿಯನ್ನು ಬಯಲು ಮಾಡಿದೆ.

ADVERTISEMENT

-ಸುರೇಂದ್ರ ರಾವ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.