ADVERTISEMENT

ವಾಚಕರ ವಾಣಿ | ನಿವೃತ್ತಿ ವಯಸ್ಸು: ತಪ್ಪು ನಿರ್ಧಾರ ಸಲ್ಲ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 20:00 IST
Last Updated 12 ಜೂನ್ 2022, 20:00 IST

ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 65ಕ್ಕೆ ನಿಗದಿಪಡಿಸುವುದರಿಂದ ಖಜಾನೆ ಮತ್ತು ಇತರ ಉದ್ಯೋಗಾವಕಾಶಗಳ ಮೇಲೆ ನೇರ ಪರಿಣಾಮ ಉಂಟಾಗುತ್ತದೆ ಎಂಬ ಹೈಕೋರ್ಟ್ ಅಭಿಪ್ರಾಯ (ಪ್ರ.ವಾ., ಜೂನ್‌ 11) ಸಮಾಜದ ಹಿತದೃಷ್ಟಿಯಿಂದ ತುಂಬಾ ಸಂತೋಷದಾಯಕ ಮತ್ತು ಅಭಿನಂದನೀಯ. ಹಿಂದೆ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 55ರಿಂದ 58 ನಂತರ 60 ಆಗಿದೆ. ವಿಶ್ವವಿದ್ಯಾಲಯ ಕಾಯ್ದೆಯ ಅನುಸಾರ ನಿವೃತ್ತಿ ವಯಸ್ಸನ್ನು 62ಕ್ಕೆ ನಿಗದಿಪಡಿಸಿರುವುದೇ ಸರಿಯಾದ ನಿಲುವಲ್ಲ. ಅಂತಹುದರಲ್ಲಿ 65 ವರ್ಷಕ್ಕೆ ಏರಿಸುವಂತೆ ಕೋರಿ ವ್ಯಕ್ತಿಯೊಬ್ಬರು ಮೇಲ್ಮನವಿ ಸಲ್ಲಿಸಿರುವುದು ಇನ್ನೂ ವಿಚಿತ್ರ.

ಇಂತಹ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಲಕ್ಷಾಂತರ ಯುವಕ- ಯುವತಿಯರು, ನಿರುದ್ಯೋಗಿಗಳಾಗಿ ಅಲೆಯುತ್ತಿರುವುದನ್ನು ಗಮನಿಸಬೇಕಾಗುತ್ತದೆ. ಯಾವುದೋ ವಿದೇಶಗಳ ಕಥೆ ಹೇಳಿ, ಅಪಾರ ಜನಸಂಖ್ಯೆಯ ನಮ್ಮ ದೇಶದಲ್ಲಿಯೂ ಅದನ್ನು ಅನುಸರಿಸುವುದು ನಮ್ಮ ನಾಡಿಗೆ ಮಾತ್ರವಲ್ಲ ಸಮಾಜಕ್ಕೆ ಮಾಡುವ ಅನ್ಯಾಯ ಸಹ.

ಸುಮಾರು 30 ವರ್ಷಗಳ ಕಾಲ ಸರ್ಕಾರದ ಸಂಬಳ, ಸವಲತ್ತನ್ನು ಅನುಭವಿಸಿದವರೂ ಇಂತಹ ಬೇಡಿಕೆಯ ಪರವಾಗಿ ಇರುವುದನ್ನು ನೋಡಿದರೆ ಇವರಿಗೆ ಇದು ಆಸೆಯೋ, ದುರಾಸೆಯೋ ಎಂಬುದು ತಿಳಿಯುವುದಿಲ್ಲ. ನಿವೃತ್ತರನ್ನು ಸರ್ಕಾರದ ಯಾವುದೇ ಹುದ್ದೆಗೆ ನೇಮಿಸುವುದು ಕೂಡ ಸಮಾಜಕ್ಕೆ ಮಾಡುವ ದ್ರೋಹ. ಸರ್ಕಾರ ಇಂತಹ ತಪ್ಪು ನಿರ್ಧಾರ ಮಾಡಬಾರದು.

ADVERTISEMENT

-ಅತ್ತಿಹಳ್ಳಿ ದೇವರಾಜ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.