ವಾಚಕರ ವಾಣಿ
ವಿ.ವಿ. ಗುಣಮಟ್ಟ: ಹೆಸರು ಮಾನದಂಡವೆ?
ರಾಜ್ಯದ ವಿಶ್ವವಿದ್ಯಾಲಯಗಳಿಗೆ ಸಾಂಸ್ಕೃತಿಕ ನಾಯಕರ ಹೆಸರಿಡಲು ಸರ್ಕಾರ ಮುಂದಾಗಿದೆ. ಆದರೆ, ರಾಜ್ಯದ ಮೊಟ್ಟಮೊದಲ ವಿಶ್ವವಿದ್ಯಾಲಯವಾದ ಮೈಸೂರು ವಿ.ವಿ. ಸೇರಿದಂತೆ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಹಾಗೂ ಸಂಶೋಧನಾ ಗುಣಮಟ್ಟ ಕುಸಿದಿದೆ. ಪ್ರಾಧ್ಯಾಪಕರು ಮತ್ತು ಸಂಶೋಧನಾ ಮಾರ್ಗದರ್ಶಕರ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ವಿದ್ಯಾರ್ಥಿಗಳ ಪ್ರವೇಶವೂ ಕುಸಿದಿದೆ. ಸಕಾಲದಲ್ಲಿ ಅನುದಾನ ಲಭಿಸದೆ ಅಭಿವೃದ್ಧಿ ಕುಂಠಿತಗೊಂಡಿದೆ. ವಿಶ್ವವಿದ್ಯಾಲಯಗಳ ಗುಣಮಟ್ಟ ಹೆಚ್ಚಿಸುವುದು ಮತ್ತು ಹೊಸ ನೇಮಕಾತಿ ಕಡೆಗೆ ಸರ್ಕಾರ ಗಮನಹರಿಸಬೇಕಾಗಿದೆ. ವಿಶ್ವವಿದ್ಯಾಲಯಗಳ ಹೆಸರು ಬದಲಾಯಿಸಿದ ತಕ್ಷಣ ಅವುಗಳ ಗುಣಮಟ್ಟ ಬದಲಾಗುವುದಿಲ್ಲ.
- ಲಕ್ಷ್ಮಿ ಕಿಶೋರ್ ಅರಸ್, ಮೈಸೂರು
ತುಮಕೂರಿಗೆ ಮೆಟ್ರೊ ರೈಲು ಅರ್ಥಹೀನ
‘ತುಮಕೂರಿಗೆ ಮೆಟ್ರೊ ವಿಸ್ತರಣೆ; ಆಡಂಬರದ ಅತಾರ್ಕಿಕ ಯೋಜನೆ’ ಕುರಿತ ಸಂಪಾದಕೀಯವು (ಪ್ರ.ವಾ., ನ. 21) ಜನರೆದುರಿಗೆ ಕಟು ವಾಸ್ತವವನ್ನು ತೆರೆದಿಟ್ಟಿದೆ. ಬೆಂಗಳೂರಿನಿಂದ ತುಮಕೂರಿಗೆ ‘ಮೆಟ್ರೊ’ ವಿಸ್ತರಿಸುವ ವಿಚಾರ ಪ್ರಾಯೋಗಿಕವಲ್ಲ. ಮೆಟ್ರೊ ಸಂಪರ್ಕ ಜಾಲ ಬೆಂಗಳೂರಿನೊಳಗೇ ವಿಸ್ತರಣೆ ಆಗಬೇಕಾದ ಅಗತ್ಯ ಇರುವಾಗ, ತುಮಕೂರಿಗೆ ವಿಸ್ತರಿಸುತ್ತೇವೆಂಬುದು
ಅರ್ಥಹೀನ. ಬೆಂಗಳೂರು–ತುಮಕೂರು ನಡುವಿನ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ನಡೆಯುತ್ತಿದೆ. ಮತ್ತೊಂದೆಡೆ, ನಾಲ್ಕು ಪಥದ ಹಳಿ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಹೀಗಿರುವಾಗ, ಮೆಟ್ರೊ ವಿಸ್ತರಣೆಗೆ ಅತ್ಯುತ್ಸಾಹ ತೋರುತ್ತಿರುವುದು ಜನರನ್ನು ದಿಕ್ಕುತಪ್ಪಿಸುವ ರಾಜಕೀಯ ಹುನ್ನಾರವಷ್ಟೇ.
- ಆರ್.ಎಸ್. ಅಯ್ಯರ್, ತುಮಕೂರು
ಆಘಾತ ತಂದ ಸವಿಜೇನಿನ ಕಹಿಕಥನ
ಚಿಕ್ಕಮಗಳೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡದಲ್ಲಿದ್ದ ಜೇನುಗೂಡುಗಳ ತೆರವಿನೊಂದಿಗೆ ಲಕ್ಷಾಂತರ ಜೇನುನೊಣಗಳ ಮಾರಣಹೋಮ ನಡೆದಿರುವ ಸುದ್ದಿ ಓದಿ ಬೇಸರವಾಯಿತು. ಬೆಳೆ ಉತ್ಪಾದನೆಯು ಜೇನುಹುಳುಗಳ ಪರಾಗ ಸ್ಪರ್ಶದ ಮೇಲೆ ಅವಲಂಬಿತವಾಗಿದೆ. ರಾಸಾಯನಿಕ ಸಿಂಪಡಿಸಿ ಅವುಗಳನ್ನು ಕೊಂದಿರುವುದು ಅಕ್ಷಮ್ಯ. ನೈಸರ್ಗಿಕ ವಿಧಾನ ಅನುಸರಿಸಿ ಜೇನುಗೂಡು ತೆರವಿಗೆ ಅವಕಾಶವಿತ್ತು. ಕಾಲೇಜಿನ ಆಡಳಿತ ಮಂಡಳಿಯ ಅವೈಜ್ಞಾನಿಕ ನಡೆ ಸರಿಯಲ್ಲ.
⇒ನಗರ ಗುರುದೇವ್ ಭಂಡಾರ್ಕರ್, ಹೊಸನಗರ
ಲಿಂಗತ್ವ ಅಲ್ಪಸಂಖ್ಯಾತರ ತಾತ್ಸಾರ ಬೇಡ
ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ವಿಶೇಷ ಮೀಸಲಾತಿ, ಉದ್ಯೋಗ ಮತ್ತು ಕೌಶಲ ತರಬೇತಿ ನೀಡುವ ಅಗತ್ಯವಿದೆ. ಈ ಸಮುದಾಯವು ಸಮಾನ ಹಕ್ಕುಗಳನ್ನು ಹೊಂದಿ, ಬದುಕಲು ಅಗತ್ಯವಿರುವ ಬೆಂಬಲ ನೀಡಬೇಕಾಗಿದೆ. ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಕಾನೂನಿನ ರಕ್ಷಣೆ ಒದಗಿಸಬೇಕಿದೆ.
- ವಾಸುಕಿ ನಾಗರಾಜ್, ಸತ್ಯನಾರಾಯಣ ಕ್ಯಾಂಪ್
ಯುವಜನರ ಭವಿಷ್ಯ ಡೋಲಾಯಮಾನ
ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದ ಕಾಯ್ದೆಯ ಅನುಷ್ಠಾನವು ಹೈಕೋರ್ಟ್ ಮೆಟ್ಟಿಲೇರಿದೆ. ಹಾಗಾಗಿ, ಹೊಸ ನೇಮಕಾತಿಯ ಪುನರಾರಂಭಕ್ಕೆ ಅಗತ್ಯವಾದ ಕಾನೂನುಬದ್ಧ ರಕ್ಷಣೆ ಇನ್ನೂ
ಸ್ಪಷ್ಟವಾಗಿಲ್ಲ. ಮತ್ತೊಂದೆಡೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತ ಗೊಂದಲವೂ ಬಗೆಹರಿದಿಲ್ಲ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೀಸಲಾತಿ ಪ್ರಮಾಣವನ್ನು ಶೇ 75ಕ್ಕೆ ಹೆಚ್ಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಮರ್ಪಕ ಕಾನೂನು ರಕ್ಷಣೆ ಒದಗಿಸದಿದ್ದರೆ, ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಯುವಜನರ ಭವಿಷ್ಯ ಡೋಲಾಯಮಾನವಾಗಲಿದೆ.
- ಕಾರ್ತಿಕ್ ಚಿ.ಸ., ಬೆಂಗಳೂರು
ತಂದೆ–ತಾಯಿ ಅನಾರೋಗ್ಯ: ನೆರವು ನೀಡಿ
ಬೆಂಗಳೂರಿನ ಕೋರಮಂಗಲದಲ್ಲಿ ವಾಸಿಸುತ್ತಿರುವ ನಾನು ಅಂತಿಮ ವರ್ಷದ ಬಿ.ಇ ವಿದ್ಯಾರ್ಥಿನಿ. 54 ವರ್ಷದ ನನ್ನ ತಂದೆ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿ ದ್ದಾರೆ. 47 ವರ್ಷದ ನನ್ನ ತಾಯಿಗೂ ನಾಸೊಫಾರಿಂಕ್ಸ್ ಕ್ಯಾನ್ಸರ್ ಚಿಕಿತ್ಸೆಯ ನಂತರ, ಬ್ರೈನ್ ಟ್ಯೂಮರ್ ಕಾಣಿಸಿಕೊಂಡಿದೆ. ಜೀವನ ನಿರ್ವಹಣೆಯೇ ಕಷ್ಟಕರ ಆಗಿರುವ ಸಂದರ್ಭದಲ್ಲಿ, ಚಿಕಿತ್ಸೆ ಮತ್ತು ಔಷಧಗಳಿಗೆ ಲಕ್ಷಾಂತರ ರೂಪಾಯಿ ಹೊಂದಿಸಬೇಕಾಗಿದೆ. ದಾನಿಗಳು ಆರ್ಥಿಕ ನೆರವು ನೀಡಬೇಕೆಂದು ಕೋರುವೆ. ಬ್ಯಾಂಕ್ ಖಾತೆ ವಿವರ: ಲಿಖಿತಾ ಸಿ.ಎನ್., ಕರ್ಣಾಟಕ ಬ್ಯಾಂಕ್, ಖಾತೆ ಸಂಖ್ಯೆ: 0942500104680901. ಐಎಫ್‌ಎಸ್‌ಸಿ ಸಂಖ್ಯೆ: ಕೆಎಆರ್‌ಬಿ0000094.
- ಲಿಖಿತಾ ಸಿ.ಎನ್., ಬೆಂಗಳೂರು
ಬಾಡಿಗೆ: ನಿಯಮಾವಳಿ ಪರಿಷ್ಕರಿಸಿ
ಬೆಂಗಳೂರಿನಲ್ಲಿ ಮಧ್ಯಮವರ್ಗದ ಜನರು ಜೀವನ ನಡೆಸುವುದು ದುಸ್ತರವಾಗಿದೆ. ಬಾಡಿಗೆ ಮನೆಯಲ್ಲಿ ವಾಸಿಸುವವರ ಪಾಡು ಹೇಳತೀರದು. ಪ್ರತಿ ಬಡಾವಣೆಯಲ್ಲೂ ಕೊಠಡಿ, ಮನೆಗಳ ಬಾಡಿಗೆ ದುಬಾರಿಯಾಗಿದೆ. ಪ್ರತಿವರ್ಷ ಬಾಡಿಗೆ ದರ ಏರಿಕೆಗೆ ಯಾವ ಮಾನದಂಡ ಅನುಸರಿಸಲಾಗುತ್ತದೆ ಎನ್ನುವುದೇ ತಿಳಿಯುವುದಿಲ್ಲ. ಕೆಲವು ಮನೆ ಮಾಲೀಕರು ಸೌಹಾರ್ದದಿಂದ ವರ್ತಿಸುತ್ತಿದ್ದಾರೆ. ಅಂತಹವರ ಸಂಖ್ಯೆ ವಿರಳ. ಕೆಲವು ಮನೆ ಮಾಲೀಕರ ಶೋಷಣೆಗೆ ಮಿತಿ ಎಂಬುದಿಲ್ಲ. ಈಗಾಗಲೇ, ಇರುವ ಬಾಡಿಗೆ ನಿಯಂತ್ರಣ ಕಾಯ್ದೆಯು ಹಲ್ಲುಕಿತ್ತ ಹಾವಿನಂತಿದ್ದು, ಹೆಚ್ಚಿನ ಉಪಯೋಗವೇನೂ ಆಗುತ್ತಿಲ್ಲ. ಈ ಕಾಯ್ದೆಯನ್ನು ತಿದ್ದುಪಡಿ ಮಾಡಿ, ಬಾಡಿಗೆ ನಿಯಂತ್ರಣಕ್ಕೆ ಸರ್ಕಾರವು ಹೊಸ ನಿಯಮಾವಳಿ ರೂಪಿಸಬೇಕಿದೆ.
- ಚಂದ್ರಕುಮಾರ್ ಡಿ., ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.