
ಲೆಕ್ಕಾಚಾರ?!
ಅಂತೂಇಂತೂ ಮುಗಿಯಿತು
ಮತದಾನದ ಸಡಗರ
ಆಗಿಬಿಟ್ಟನಾ ಈಗ
ಮತದಾರ ‘ಹಗುರ’?!
ಆರಂಭವಾಯಿತಲ್ಲ
ನಿಂತಲ್ಲಿ ಕುಂತಲ್ಲಿ
ಸೋಲು, ಗೆಲುವಿನದೇ
ಲೆಕ್ಕಾಚಾರ...
-ಮ.ಗು.ಬಸವಣ್ಣ, ನಂಜನಗೂಡು
‘ಆಟ’ ಮುಗಿಯಿತೇ ಇಷ್ಟು ಬೇಗ?!
ಕರ್ನಾಟಕ ವಿಧಾನಸಭೆಗೆ ಸುಮಾರು ಒಂದು ತಿಂಗಳಿನಿಂದ ಬಿರುಸಿನ ಚುನಾವಣಾ ಪ್ರಚಾರ ನಡೆದು, ಬುಧವಾರ ಮತದಾನವೂ ಆಗಿದೆ. ರಾಜ್ಯದ ಮತದಾರರು ಈವರೆಗೆ ನಾನಾ ಪಕ್ಷಗಳ ಮುಖಂಡರ ಭಾಷಣಗಳನ್ನು ಆಲಿಸಿದ್ದರು. ವಿರೋಧಿಗಳ ಬಗ್ಗೆ ನಾಯಕರು ಆಡಿದ ಬೈಗುಳದ ಮಾತುಗಳು ಬೇಸರ ಮೂಡಿಸುವಂತಿದ್ದರೂ ಒಂದು ರೀತಿಯ ಮಜಾ ಕೊಡುತ್ತಿದ್ದವು. ಪರಸ್ಪರರ ಬೈಗುಳಗಳಲ್ಲಿ ವಿಷಸರ್ಪ, ವಿಷಕನ್ಯೆ ಹಾಗೂ ಕತ್ತೆ, ನಾಯಿ, ನರಿಯಂತಹ ಪ್ರಾಣಿಗಳ ಹೆಸರುಗಳೂ ಉಲ್ಲೇಖ ಆಗುತ್ತಿದ್ದವು. ಮಾಧ್ಯಮಗಳಲ್ಲಂತೂ ಅವರು ಹೀಗೆ, ಇವರು ಹಾಗೆ ಎಂಬಂತಹ ವರದಿಗಳು. ಅಲ್ಲಲ್ಲಿ ಗಲಾಟೆಗಳು. ಸ್ಟೌ, ಕುಕ್ಕರ್, ಸೀರೆ, ಮದ್ಯ, ಅಪಾರ ಹಣ ಜಪ್ತಿಯಂತಹ ಸುದ್ದಿಗಳನ್ನು ಕೇಳಿ ಮೈ ಝುಂ ಎನ್ನುತ್ತಿತ್ತು.
ಛೆ, ಇವೆಲ್ಲವೂ ಇಲ್ಲಿಗೇ ಮುಗಿದುಹೋದವೇ?! ಇನ್ನು ಕೆಲ ದಿನಗಳ ನಂತರವಂತೂ ಮಾಧ್ಯಮಗಳಲ್ಲಿನ ಸುದ್ದಿಗಳೆಲ್ಲಾ ಸಪ್ಪೆ ಎನಿಸತೊಡಗುತ್ತವೆ. ಇಂತಹ ‘ಸಡಗರ’ಕ್ಕೆ ಮುಂದಿನ ಚುನಾವಣೆಯವರೆಗೂ ಕಾಯಬೇಕಲ್ಲ!
-ಪತ್ತಂಗಿ ಎಸ್. ಮುರಳಿ, ಬೆಂಗಳೂರು
ನೌಕರಿ ಆಮಿಷ: ಹೆಚ್ಚುತ್ತಿದೆ ವಂಚಕರ ಜಾಲ
ವಿದೇಶದಲ್ಲಿ ನೌಕರಿಗೆ ಸೇರುವ ಕನಸು ಕಾಣುವವರ ಸಂಖ್ಯೆಯೇನೂ ನಮ್ಮಲ್ಲಿ ಕಡಿಮೆ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು, ವಿದೇಶದಲ್ಲಿ ಉದ್ಯೋಗದ ವೀಸಾ ಮತ್ತು ಪೌರತ್ವ ಕೊಡಿಸುವುದಾಗಿ ನಂಬಿಸಿ, ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುವ ಜಾಲಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮುಖ್ಯವಾಗಿ ಆಸ್ಟ್ರೇಲಿಯ, ಸಿಂಗಪುರ, ಮಲೇಷ್ಯಾ, ಆಫ್ರಿಕಾ ಮತ್ತು ಕೆನಡಾ ದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ಅಮಾಯಕರನ್ನು ನಂಬಿಸಿ, ಪ್ರವಾಸಿ ವೀಸಾದ ಮೇಲೆ ಅವರನ್ನು ವಿದೇಶಕ್ಕೂ ಕಳುಹಿಸಿ ವಂಚಿಸುವ ಪ್ರಕರಣಗಳು ಹೆಚ್ಚುತ್ತಿವೆ.
ಮತ್ತೊಂದೆಡೆ, ವಿದೇಶದಲ್ಲಿ ಉದ್ಯೋಗ ಮತ್ತು ವೀಸಾ ಕೊಡಿಸುವುದಾಗಿ ಸಾಮಾಜಿಕ ಜಾಲತಾಣ ಹಾಗೂ ಅಂತರ್ಜಾಲದಲ್ಲಿ ಪ್ರಕಟಣೆ ಕೊಟ್ಟು, ಅದನ್ನು ನಂಬಿ ಬಂದವರಿಗೆ ಆನ್‌ಲೈನ್ ಮೂಲಕ ಸಂದರ್ಶನ ನಡೆಸಿ, ವೀಸಾ ಮಾಡಿಸಲು ಶುಲ್ಕ ಹಾಗೂ ಇನ್ನಿತರ ಖರ್ಚುಗಳ ನೆಪ ಹೇಳಿ ಲಕ್ಷಾಂತರ ರೂಪಾಯಿಯನ್ನು ಆನ್‌ಲೈನ್ ಮೂಲಕವೇ ವರ್ಗಾಯಿಸಿಕೊಳ್ಳುವ ಜಾಲಗಳೂ ಸಾಮಾನ್ಯವಾಗಿವೆ. ಇಂತಹ ವಂಚನೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಬೇಕಾಗಿದೆ.
-ಡಾ. ವಿಜಯಕುಮಾರ್ ಎಚ್.ಕೆ., ರಾಯಚೂರು
ಕಲ್ಯಾಣ ಕರ್ನಾಟಕ: ಸುಧಾರಿಸಲಿ ಶೈಕ್ಷಣಿಕ ಗುಣಮಟ್ಟ
ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದೆ ಎಂಬ ಮಾತು ಆಗಾಗ ಕೇಳಿಬರುತ್ತಲೇ ಇರುತ್ತದೆ. ಆದರೆ ಈಗ ಪ್ರಕಟವಾಗಿರುವ ಎಸ್ಎಸ್ಎಲ್‌ಸಿ ಫಲಿತಾಂಶ ಮತ್ತು ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯು ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಪಡೆದಿರುವ ಸ್ಥಾನಗಳನ್ನು ನೋಡಿದರೆ ಈ ಮಾತು ಅಪವಾದ ಎನಿಸುತ್ತದೆ.
ಪ್ರತಿ ವರ್ಷವೂ ಈ ಜಿಲ್ಲೆಗಳು ಕಡಿಮೆ ಮಟ್ಟದ ಫಲಿತಾಂಶವನ್ನೇ ದಾಖಲಿಸುತ್ತಿವೆ. ಆದರೂ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೇಕೆ? ಇನ್ನು ಯಾದಗಿರಿ ಜಿಲ್ಲೆಯಂತೂ ಶೈಕ್ಷಣಿಕ ಫಲಿತಾಂಶದಲ್ಲಿ ಸಾಮಾನ್ಯವಾಗಿ ಯಾವಾಗಲೂ ಕೊನೆಯ ಸ್ಥಾನದಲ್ಲಿಯೇ ಇರುತ್ತದೆ. ಇಲ್ಲಿನ ಶಿಕ್ಷಣ ಮಟ್ಟವನ್ನು ಸುಧಾರಿಸುವ ಬಗ್ಗೆ ಸರ್ಕಾರ, ಈ ಭಾಗದ ಜನಪ್ರತಿನಿಧಿಗಳು ಹಾಗೂ ಶಿಕ್ಷಣಾಧಿಕಾರಿಗಳು ಗಂಭೀರವಾಗಿ ಚಿಂತಿಸಬೇಕು.
-ಡಾ. ನಂದೀಶ್ವರ ದಂಡೆ, ಕೊಂಡನಾಯಕನಹಳ್ಳಿ, ಹೊಸಪೇಟೆ
ಯುದ್ಧ ವಿಮಾನ: ಸುರಕ್ಷತೆಗೆ ಸಿಗಲಿ ಆದ್ಯತೆ
ಭಾರತೀಯ ವಾಯುಪಡೆಯ ಮಿಗ್– 21 ಯುದ್ಧ ವಿಮಾನವು ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ಮನೆಯೊಂದರ ಮೇಲೆ ಪತನವಾಗಿ, ಮನೆಯೊಳಗಿದ್ದ ಮೂವರು ಮಹಿಳೆಯರು ಸಾವಿಗೀಡಾಗಿರುವ ಸುದ್ದಿ ಓದಿ (ಪ್ರ.ವಾ., ಮೇ 9) ಮನ ಕಲಕಿತು. ಈ ಮಹಿಳೆಯರು ತಮ್ಮದಲ್ಲದ ತಪ್ಪಿಗಾಗಿ ಅಮೂಲ್ಯವಾದ ಜೀವವನ್ನು ತೆತ್ತಿದ್ದಾರೆ.
ಕೇಂದ್ರ ಬಜೆಟ್‌ನಲ್ಲಿ ಪ್ರತಿ ವರ್ಷ ರಕ್ಷಣಾ ವಲಯಕ್ಕೆ ಅತಿಹೆಚ್ಚು ಅನುದಾನ ಮೀಸಲಿಡಲಾಗುತ್ತದೆ. ರಕ್ಷಣಾ ಸಚಿವಾಲಯ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ಸರ್ಕಾರ ಅತಿಹೆಚ್ಚು ಒತ್ತು ನೀಡುತ್ತದೆಯಾದರೂ ಯುದ್ಧ ವಿಮಾನಗಳ ಗುಣಮಟ್ಟದ ನಿರ್ವಹಣೆಯಲ್ಲಿ ಹಿಂದುಳಿದಿರುವಂತಿದೆ. ಕಾಲಕಾಲಕ್ಕೆ ಯುದ್ಧ ವಿಮಾನಗಳ ತಪಾಸಣೆ ಹಾಗೂ ಸುರಕ್ಷತೆಗೆ ಆದ್ಯತೆ ಕೊಡುವುದು ಅತ್ಯಗತ್ಯ. ಹನುಮಾನ್‌ಗಢದ ಜಿಲ್ಲಾಡಳಿತವೇನೋ ಮೃತ ಮಹಿಳೆಯರ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ ನೀಡುವುದಾಗಿ ಹೇಳಿದೆ. ಆದರೆ ಬಲಿಯಾದ ಜೀವಗಳನ್ನು ಮತ್ತೆ ತಂದುಕೊಡಲು ಕೇಂದ್ರ ಸರ್ಕಾರಕ್ಕಾಗಲಿ, ಕೇಂದ್ರ ರಕ್ಷಣಾ ಸಚಿವಾಲಯಕ್ಕಾಗಲಿ ಸಾಧ್ಯವಿದೆಯೇ? ಅಮಾಯಕ ಜೀವಗಳಿಗೇಕೆ ತಮ್ಮದಲ್ಲದ ತಪ್ಪಿಗೆ ಈ ಶಿಕ್ಷೆ? ಇನ್ನಾದರೂ ಇಂತಹ ದುರ್ಘಟನೆಗಳು ಸಂಭವಿಸದಂತೆ ರಕ್ಷಣಾ ಸಚಿವಾಲಯವು ಯುದ್ಧ ವಿಮಾನಗಳ ಸುರಕ್ಷತೆಗೆ ಅತಿ ಹೆಚ್ಚು ಆದ್ಯತೆ ನೀಡಲಿ.
-ಲಿಖಿತಶ್ರೀ ಡಿ., ಮಧುಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.