ADVERTISEMENT

ವಾಚಕರ ವಾಣಿ: ಶನಿವಾರ, ಮೇ 13, 2023

​ಪ್ರಜಾವಾಣಿ ವಾರ್ತೆ
Published 12 ಮೇ 2023, 19:33 IST
Last Updated 12 ಮೇ 2023, 19:33 IST
   

ಪುಸ್ತಕ ಖರೀದಿಗೆ ಸಿಗಲಿ ಚಾಲನೆ

ಗ್ರಂಥಾಲಯ ಇಲಾಖೆಗೆ 2020ನೇ ಸಾಲಿನ ಪುಸ್ತಕ ಆಯ್ಕೆ ಪ್ರಕ್ರಿಯೆಯು 2022ರ ನವೆಂಬರ್‌ನಲ್ಲಿ ಪೂರ್ಣಗೊಂಡಿದ್ದರೂ ಪುಸ್ತಕಗಳನ್ನು ಖರೀದಿಸಿ ಅಗತ್ಯ ಅನುದಾನ ಬಿಡುಗಡೆ ಮಾಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ. ಇಂತಹ ಕಾರ್ಯವೈಖರಿಯಿಂದಾಗಿ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಹೊಸ ಪುಸ್ತಕಗಳಿಲ್ಲದೆ ಅಸಂಖ್ಯ ಓದುಗರು ಬೇಸರಗೊಂಡಿದ್ದಾರೆ.

ಲಕ್ಷಾಂತರ ರೂಪಾಯಿ ಹೂಡಿ ಪುಸ್ತಕ ಪ್ರಕಟಿಸಿದ ಪ್ರಕಾಶಕರು ನಷ್ಟ ಅನುಭವಿಸಿದರೆ, ಉತ್ಸಾಹಿ ಬರಹಗಾರರು ಹೊಸ ಕೃತಿ ರಚಿಸಿ ಪ್ರಕಟಿಸುವ ಉತ್ಸಾಹ ಕಳೆದುಕೊಳ್ಳುವಂತೆ ಆಗಿರುವುದು ವಿಷಾದಕರ. ಗ್ರಂಥಾಲಯಕ್ಕೆ ₹ 15 ಕೋಟಿ ಬಿಡುಗಡೆ ಮಾಡಲು ಸರ್ಕಾರ ಮೀನಮೇಷ ಎಣಿಸುವುದು ಸರಿಯಲ್ಲ. ನಮ್ಮ ಸಾಹಿತಿಗಳು ಸಹ ಈ ವಿಷಯದಲ್ಲಿ ಸರ್ಕಾರದ ಮೇಲೆ ಒತ್ತಡ ತರುತ್ತಿಲ್ಲ. ಸರ್ಕಾರದ ಈ ವಿಳಂಬ ಧೋರಣೆ, ಸುಸಂಸ್ಕೃತ ಸಮಾಜವನ್ನು ನಿರ್ಮಿಸುವಲ್ಲಿ ಅದು ತೋರುತ್ತಿರುವ ಅಸಡ್ಡೆ ಎಂದೇ ಟೀಕಿಸುವಂತಾಗಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಪುಸ್ತಕ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು.

ADVERTISEMENT

-ಸತ್ಯಬೋಧ, ಬೆಂಗಳೂರು

ಉದಾಸೀನ ಮನೋಭಾವದ ಸಂಕೇತ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಕಡಿಮೆ ಪ್ರಮಾಣದ ಮತದಾನ ಆಗಿರುವುದು, ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರಿಗಿರುವ ಉದಾಸೀನ ಮನೋಭಾವ ಹಾಗೂ ಅವರ ಮಾನಸಿಕ ದಾರಿದ್ರ್ಯದ ಸಂಕೇತವಾಗಿದೆ. ಹೀಗೆ ಯಾರು ಮತ ಚಲಾಯಿಸುವುದಿಲ್ಲವೋ ಅಂತಹವರ ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿಯನ್ನು ರದ್ದುಪಡಿಸುವಂತೆ ಆಗಬೇಕು. ಈ ಕುರಿತು ಚುನಾವಣೆಗೆ ಮುನ್ನ ಸರ್ಕಾರವು ಅಧಿಸೂಚನೆ ಹೊರಡಿಸಬೇಕು. ಆಗಲಾದರೂ ಮತದಾನದ ಪ್ರಮಾಣಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿ ಸುಧಾರಿಸಬಹುದೇನೊ?

-ಮುರುಗೇಶ್ ಹನಗೋಡಿಮಠ, ಹುಬ್ಬಳ್ಳಿ 

ಬೇಟೆಯಾಡಲು ಮತವೇನು ಪ್ರಾಣಿಯೇ?

ಮತದಾನ ಹಾಗೂ ಮತಬೇಟೆ ಎಂಬ ಪದಗಳ ಬಳಕೆ ಸರಿಯಲ್ಲ ಎಂಬ ಶಿವನಕೆರೆ ಬಸವಲಿಂಗಪ್ಪ ಅವರ ಅನಿಸಿಕೆ (ವಾ.ವಾ, ಮೇ 12) ಸೂಕ್ತವಾಗಿದೆ. ಭಾರತದ ಸಂವಿಧಾನವು ನಾಗರಿಕರಿಗೆ ನೀಡಿರುವ ಮತ ಚಲಾವಣೆಯ ಅವಕಾಶವು ನಮ್ಮ ಕರ್ತವ್ಯ ಮತ್ತು ಹಕ್ಕಾಗಿದೆ. ಬೇಟೆಯಾಡಲು ಮತ ಎಂಬುದೇನು ಪ್ರಾಣಿಯೇ?

-ಗಣೇಶ ಜೋಶಿ, ಧಾರವಾಡ

ಸಮಾಜಕ್ಕಂಟಿದ ಕಳೆ ಕಿತ್ತೊಗೆಯಲಿ ಸಮಾನಮನಸ್ಕರು

‘ಸದ್ಯದ ರಾಜಕೀಯ ವ್ಯವಸ್ಥೆಯನ್ನು ನೋಡಿದರೆ, ಮರ್ಯಾದೆ ಇದ್ದವರು ರಾಜಕಾರಣದಲ್ಲಿ ಇರಬಾರದ ಪರಿಸ್ಥಿತಿ ಎದುರಾಗಿದೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಷಾದದಿಂದ ಹೇಳಿದ ಮಾತು (ಪ್ರ.ವಾ., ಮೇ 11) ‘ಕಿಡಿನುಡಿ’ಯಲ್ಲಿ ವ್ಯಕ್ತವಾಗಿದೆ. ಬಹಳಷ್ಟು ವರ್ಷಗಳ ಕಾಲ ರಾಜಕೀಯದಲ್ಲಿ ಇದ್ದು, ಅನುಭವ ಪಡೆದಿರುವ ಹೊರಟ್ಟಿ ಅವರು ತಡವಾಗಿಯಾದರೂ ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದ್ದಾರೆ. ಹೇಸಿಗೆ ಬರುವಷ್ಟು ಹೊಲಸಾಗಿರುವ ವ್ಯವಸ್ಥೆಯನ್ನು ರಾಜಕೀಯದಲ್ಲಿರುವ ನಿಮ್ಮಂಥವರೇ ಸರಿಪಡಿಸಬೇಕು. ಮುಂದಿನ ದಿನಗಳಲ್ಲಿ ಇಂಥ ಅಪಾಯಕಾರಿ ಸನ್ನಿವೇಶ ಬಾರದ ಹಾಗೆ, ಪಕ್ಷ ಯಾವುದೇ ಇರಲಿ, ಸಮಾನಮನಸ್ಕರು ಸೇರಿ ಸಮಾಜಕ್ಕಂಟಿದ ಈ ಕಳೆಯನ್ನು ಒಂದಾಗಿ ಕಿತ್ತೊಗೆಯಬೇಕು.

ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಸುಭಿಕ್ಷ ಸರ್ಕಾರಗಳು ಬರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮಂಥವರು ಹಾಗೂ ಸಾರ್ವಜನಿಕರ ಮೇಲೆ ಇದೆ. ಈ ಬಾರಿಯ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಪ್ರಲೋಭನೆ ಮತ್ತು ಅದಕ್ಕೆ ಒಳಗಾದವರ ಬಗ್ಗೆ ವ್ಯಕ್ತವಾಗುತ್ತಿರುವ ಮಾತುಗಳನ್ನು ಕೇಳಿದಾಗ ಬೇಸರವಾಗುತ್ತದೆ. ಹೊರಟ್ಟಿ ಅಂಥವರು ಈ ಬಗ್ಗೆ ಮಾತನಾಡಿ ಸುಮ್ಮನಾಗದೆ, ಇಂತಹ ವ್ಯವಸ್ಥೆಯ ವಿರುದ್ಧ ಚಳವಳಿ ಆರಂಭಿಸಲಿ. 

-ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

ಹೊರೆ ಇಳಿಸಿಕೊಳ್ಳುವ ಪರಿ...

ಹೊಸಪೇಟೆ ತಾಲ್ಲೂಕಿನ ಇಂಗಳಗಿ ಸಮೀಪದ ‘ಅನ್ನಪೂರ್ಣೇಶ್ವರಿ ವಿದ್ಯಾಪೀಠ ಉಚಿತ ವಸತಿಯುತ ಪ್ರೌಢಶಾಲೆ’ಯನ್ನು ಚಲನಚಿತ್ರ ನಿರ್ಮಾಪಕಿ ಗೀತಾ ಶಿವರಾಜ್‍ಕುಮಾರ್ ಅವರು ದತ್ತು ಪಡೆದ ಬಗ್ಗೆ ವರದಿಯಾಗಿದೆ (ಪ್ರ.ವಾ., ಮೇ 12). ಇದು ಅನುಕರಣೀಯವೂ ಮಾದರಿಯೂ ಆದ ಕಾರ್ಯ. ಸೊರಗಿ ಸುಣ್ಣವಾಗಿರುವ ಕನ್ನಡ ಶಾಲೆಗಳಿಗೆ ಕಾಯಕಲ್ಪ ಕಲ್ಪಿಸುವ ಹೊಣೆ ಸರ್ಕಾರದ್ದು ಮಾತ್ರವಲ್ಲ, ಸಮಾಜದ ಋಣದಲ್ಲಿರುವ ಪ್ರತಿಯೊಬ್ಬರದೂ ಹೌದು. ನಮ್ಮ ಬೆನ್ನ ಮೇಲಿನ ಋಣದ ಹೊರೆಯನ್ನು ಇಳಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ.

ತಾನು ಹುಟ್ಟಿ ಬೆಳೆದ ಹಳ್ಳಿಗೆ, ಓದಿದ ಶಾಲೆಗೆ ಒಂದಲ್ಲ ಒಂದು ರೀತಿಯಿಂದ, ಎಲೆಮರೆಯ ಕಾಯಿಯಂತೆ ಸಹಾಯ ಮಾಡುತ್ತಿರುವವರು ನಮ್ಮ ಮಧ್ಯೆ ಇದ್ದಾರೆ. ಆದರೆ ಅಂಥವರ ಸಂಖ್ಯೆ ತೀರಾ ಕಡಿಮೆ. ಸಾಹಿತಿ ಶಿವರಾಮ ಕಾರಂತರು ಒಂದು ಕಡೆ ‘ನಾವು ಸಮಾಜದಿಂದ ಬಹಳಷ್ಟು ಪಡೆಯುತ್ತೇವೆ. ಸಮಾಜಕ್ಕೆ ಬಹಳಷ್ಟು ಕೊಡುತ್ತೇವೆ. ಆದರೆ ಪಡೆದದ್ದಕ್ಕಿಂತ ಕೊಟ್ಟದ್ದು ಸ್ವಲ್ಪವಾದರೂ ಜಾಸ್ತಿ ಇರಬೇಕು’ ಎಂದು ಹೇಳಿರುವ ಮಾತು ನಮ್ಮ ಮನಸ್ಸಿನಲ್ಲಿ ಅನುರಣಿಸುತ್ತಿರಬೇಕು.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಅವರು ಇವರಾಗಿ...!

ಮುಗಿಯಿತು ಚುನಾವಣೆ ಕಾವು,

ಕಿತ್ತಾಟ, ಸುತ್ತಾಟ, ಗುದ್ದಾಟ

ಗೆದ್ದ ಮೇಲೆ ಅವರು ಇವರಾಗಿ,

ಇವರು ಅವರಾಗಿ

ಅವರಿವರೇ ಒಂದಾಗಿ

ಮಾಡುವರು ಮತದಾರರನ್ನು

ಮೂರ್ಖರನ್ನಾಗಿ!

-ರಾಜೇಶ್ವರಿ ಹುಲ್ಲೇನಹಳ್ಳಿ,  ಹಾಸನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.