ADVERTISEMENT

ಐತಿಹಾಸಿಕ ಸ್ಥಳಗಳಿಗೆ ಬೇಕಾಗಿದೆ ಪ್ರಚಾರ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಜನವರಿ 2022, 19:30 IST
Last Updated 24 ಜನವರಿ 2022, 19:30 IST

ಧಾರ್ಮಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಬೇಕೆಂಬ ಎ.ರವೀಂದ್ರ ಅವರ ಲೇಖನವನ್ನು (ಪ್ರ.ವಾ., ಜ. 21)ಪ್ರಸ್ತಾಪಿಸುತ್ತಾ ಬಿ.ಎಸ್.ಜಯಪ್ರಕಾಶ ನಾರಾಯಣ ಅವರು (ವಾ.ವಾ., ಜ. 22) ಯಾತ್ರಾಸ್ಥಳಗಳ ಅಭಿವೃದ್ಧಿಯಿಂದ ಆಗುವ ಆರ್ಥಿಕ ಲಾಭದ ವಿಚಾರ ಪ್ರಶ್ನಾರ್ಹ ಎಂದಿದ್ದಾರೆ. ಆರ್ಥಿಕ ಲಾಭಕ್ಕಾಗಿ ಸೌಕರ್ಯಗಳು ಎಂದಕೂಡಲೆ ಅವರು ಪಟ್ಟಿ ಮಾಡಿರುವ ಎಲ್ಲ ಸೌಕರ್ಯಗಳೇ ಆಗಬೇಕಾಗಿಲ್ಲ. ಈ ಸೌಕರ್ಯಗಳನ್ನು ಎಲ್ಲ ಯಾತ್ರಾಸ್ಥಳಗಳಿಗೂ ಒದಗಿಸುವ ಅಗತ್ಯವೂ ಇಲ್ಲ. ಆದರೆ ಅಷ್ಟಾಗಿ ಪ್ರಚಲಿತವಿಲ್ಲದ, ಬೆಳಕಿಗೆ ಬಾರದ ಹಲವಾರು ಐತಿಹಾಸಿಕ ಸ್ಥಳಗಳು (ಹೊಸಹೊಳಲು, ಕಿಕ್ಕೇರಿ, ಗೋವಿಂದನಹಳ್ಳಿ, ತೊಣ್ಣೂರು, ನುಗ್ಗೇಹಳ್ಳಿ, ಬೆಳವಾಡಿ, ಹೆಡತಲೆ, ದೊಡ್ಡಗದ್ದವಳ್ಳಿ, ಅರಳಗುಪ್ಪೆ ಮುಂತಾದವು) ಪ್ರವಾಸಿಗರು ಇಲ್ಲದೆ ಬಿಕೋ ಎನ್ನುತ್ತಿವೆ. ಅದಕ್ಕೆ ಕಾರಣ ಈ ಸ್ಥಳಗಳಿಗೆ ಸಿಗಬೇಕಾದ ಪ್ರಚಾರ ಸಿಗದಿರುವುದು ಒಂದೆಡೆಯಾದರೆ, ಕನಿಷ್ಠ ಮೂಲ ಸೌಕರ್ಯಗಳಾದ ಉತ್ತಮ ರಸ್ತೆ, ಸಾರ್ವಜನಿಕ ಸಾರಿಗೆ, ಕುಡಿಯುವ ನೀರು, ಶೌಚಾಲಯದಂತಹ ವ್ಯವಸ್ಥೆಗಳು ಇಲ್ಲದಿರುವುದು.

ಕನಿಷ್ಠ ಮೂಲ ಸೌಕರ್ಯದೊಂದಿಗೆ ಪ್ರವಾಸೋದ್ಯಮ ಇಲಾಖೆ ಸಹ ವಾರಾಂತ್ಯದ ಪ್ರವಾಸಗಳನ್ನು ಆಯೋಜಿಸು ವುದರಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಇದರಿಂದ ಆ ಪ್ರದೇಶದ ಅಭಿವೃದ್ಧಿಯನ್ನು ಕಾಣಬಹುದು. ಇವು ಗಳಿಂದಾಗಿ ಆ ಸ್ಥಳಗಳೇನು ಮಾರುಕಟ್ಟೆಗಳಾಗಿ ಪರಿವರ್ತನೆಯಾಗುವುದಿಲ್ಲ. ಅಷ್ಟೇ ಅಲ್ಲದೆ ಈ ಸ್ಥಳಗಳ ಇತಿಹಾಸ, ಶಿಲ್ಪಕಲಾ ಸಂಸ್ಕೃತಿಯ ವೈಭವವನ್ನು ಎಲ್ಲರಿಗೂ ಪರಿಚಯಿಸುವ ಮಹಾಕಾರ್ಯ ಮಾಡಿದಂತಾಗುತ್ತದೆ. ಇಲ್ಲದಿದ್ದಲ್ಲಿ ಮುಂದಿನ ಪೀಳಿಗೆಯವರಿಗೆ ಇವುಗಳನ್ನೆಲ್ಲಾ ಪರಿಚಯಿಸುವ ಭಾಗ್ಯವನ್ನು ನಾವೇ ನಾಶ ಮಾಡಿದಂತಾಗುತ್ತದೆ.

- ಕೆ.ಪ್ರಭಾಕರ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.