ವಾಚಕರ ವಾಣಿ
ಹಸುರಲ್ಲಿ ಉಸಿರಾದ ಮಹಾತಾಯಿ ತಿಮ್ಮಕ್ಕ
ಮನುಷ್ಯನ ಬಾಳುವೆಯು ತನ್ನನ್ನು ಮೀರಿ ಲೋಕದ ಜನರನ್ನು ತಲುಪಿದಾಗಲೇ ಸಾರ್ಥಕವಾಗುತ್ತದೆ. ಇದೇ ಸಮಷ್ಟಿ ಚಿಂತನೆ. ತಮ್ಮ ಜೀವನಯಾನದಲ್ಲಿ ಸಮಷ್ಟಿ ಬದುಕನ್ನು ಬದುಕಿದವರು ಸಾಲುಮರದ ತಿಮ್ಮಕ್ಕ. ಮಮತೆ ತೋರಿಸಲು ಮಕ್ಕಳೇ ಬೇಕೆಂದಿಲ್ಲ. ಪ್ರಕೃತಿಯಲ್ಲಿ ಸರ್ವಪ್ರಯೋಜನಕಾರಿಯಾಗಿ ಬದುಕಬಲ್ಲ ಮರಗಳೂ ಮಕ್ಕಳಾಗಬಹುದು ಎಂದುಕೊಂಡು, ಮಕ್ಕಳಿಲ್ಲದ ಕೊರತೆಯನ್ನು ಪತಿಯೊಂದಿಗೆ ರಸ್ತೆಬದಿಯಲ್ಲಿ ಸಸಿ ನೆಡುವ ಮೂಲಕ ನೀಗಿಕೊಂಡರು. ಸಮಾಜಮುಖಿ ಕೆಲಸಗಳನ್ನು ಇರುವ ಸಾಮಾನ್ಯ ಅವಕಾಶದಲ್ಲಿಯೇ ನಿಭಾಯಿಸಬಹುದು ಎಂದು ತೋರಿಸಿಕೊಟ್ಟರು. ನಾವು ಬದುಕುತ್ತಿರುವ ವಾತಾವರಣಕ್ಕೆ ಪೂರಕವಾಗಿರುವುದನ್ನು ಮಾಡುವುದರಲ್ಲಿ ಎಂಥ ಹಿತವಿದೆಯಲ್ಲವೇ?
– ಸುಮಾ ವೀಣಾ, ಹಾಸನ
______________
ಹೆಣ್ಣುಮಕ್ಕಳಿಗೆ ಶೌಚಾಲಯ ಉಚಿತವಿರಲಿ
ಸಾರ್ವಜನಿಕ ಶೌಚಾಲಯಗಳಲ್ಲಿ ಹೆಣ್ಣುಮಕ್ಕಳಿಗೆ ₹5, ಗಂಡಸರಿಗೆ ₹3 ಸಂಗ್ರಹಿಸುವ; ಗಂಡಸರಿಗೆ ಮೂತ್ರ ವಿಸರ್ಜನೆಗೆ ಉಚಿತ ಎನ್ನುವ ಫಲಕ ನೋಡಿದಾಗ ಅಚ್ಚರಿಯಾಗುತ್ತದೆ. ಕೆಲವರು ಒಂದು ರೂಪಾಯಿಗೂ ಜಗಳ ತೆಗೆಯುತ್ತಾರೆ. ಹೆಣ್ಣುಮಕ್ಕಳಿಗೆ ಶೌಚಾಲಯಗಳಲ್ಲಿ ಉಚಿತ ಸೌಲಭ್ಯ ಕಲ್ಪಿಸುವ ಮೂಲಕ ಸರ್ಕಾರ ಮತ್ತೊಂದು ಗ್ಯಾರಂಟಿ ಘೋಷಿಸಲಿ. ಗಂಡಸರಿಗೆ ಶುಲ್ಕ ಹೆಚ್ಚು ಮಾಡಿದರೂ ಚಿಂತೆ ಇಲ್ಲ. ಆ ಹಣವನ್ನು ಶೌಚಾಲಯಗಳಲ್ಲಿ ಕೆಲಸ ನಿರ್ವಹಿಸುವ ವ್ಯಕ್ತಿಗೆ ನೀಡಿದರೆ ಸಮಾಜದಲ್ಲಿ ಆತನೂ ಮುಖ್ಯವಾಹಿನಿಗೆ ಬರಲು ಅನುಕೂಲವಾಗುತ್ತದೆ. ಅಲ್ಲಿ ಕೆಲಸ ನಿರ್ವಹಿಸುವ ಆಕೆ/ ಆತ ಆ ವಾಸನೆಯ ವಾತಾವರಣದಲ್ಲಿ ದೀರ್ಘ ಕಾಲ ಇರುವುದಿದೆಯಲ್ಲ, ಅದು ನಿಜಕ್ಕೂ ಔದಾರ್ಯವಂತ ಹೃದಯಗಳಿಗೆ ಮಾತ್ರ ಸಾಧ್ಯ. ಅಂಥವರನ್ನು ಗೌರವಿಸುವಂತಾಗಲಿ ಮತ್ತು ಹೆಣ್ಣುಮಕ್ಕಳಿಗೆ ಸ್ವಚ್ಛ ಪರಿಸರದ ಶೌಚಾಲಯ ಉಚಿತವಾಗಿ ಸಿಗುವಂತಾಗಲಿ.
– ನ. ರವಿಕುಮಾರ, ಬೆಂಗಳೂರು
______________
ರೈತನ ಕಣ್ಣೀರು ಹಾಕಿಸುವುದು ನ್ಯಾಯವಲ್ಲ
ಮುಧೋಳ ತಾಲ್ಲೂಕಿನಲ್ಲಿ ಕಬ್ಬು ಸಾಗಿಸುತ್ತಿದ್ದ 30ಕ್ಕೂ ಹೆಚ್ಚು ಟ್ರ‍್ಯಾಕ್ಟರ್‌ಗಳಿಗೆ ಹೋರಾಟಗಾರರು ಪೆಟ್ರೋಲ್ ಸುರಿದು ಬೆಂಕಿಹಚ್ಚಿರುವುದು ವಿಷಾದನೀಯ. ದೇಶದ ಬೆನ್ನೆಲುಬು ಎಂದು ಕರೆಯಿಸಿಕೊಳ್ಳುವ ರೈತ, ಎಂದಿಗೂ ಮತ್ತೊಬ್ಬ ರೈತನ ಬೆನ್ನೆಲುಬು ಮುರಿಯಬಾರದು. ಮತ್ತೊಬ್ಬ ರೈತನು ಬೆವರು ಸುರಿಸಿ ಕಷ್ಟಪಟ್ಟು ಬೆಳೆದ ಫಸಲನ್ನು ನಾಶ ಮಾಡುವ ಮೂಲಕ ಮಾಡುವ ಹೋರಾಟ ನೈಜವಾದುದಲ್ಲ. ಸರ್ಕಾರಕ್ಕೆ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಹೋರಾಟದಿಂದ ಬಿಸಿ ಮುಟ್ಟಿಸಬೇಕೇ ಹೊರತು, ನಮ್ಮಲ್ಲೇ ಇರುವ ಮತ್ತೊಬ್ಬ ರೈತನನ್ನು ಕಣ್ಣೀರು ಹಾಕಿಸುವುದು ಹೋರಾಟದ ನೀತಿಯಲ್ಲ.
– ಅಂಬಿಕಾ ಬಿ.ಟಿ., ಹಾಸನ
______________
ರಕ್ತದಲ್ಲಿ ಚಿತ್ರ: ಹುಚ್ಚಾಟ ಕೊನೆಯಾಗಲಿ
ಪ್ರೀತಿ ಪಾತ್ರರ ಚಿತ್ರಗಳನ್ನು ನಿಮ್ಮ ರಕ್ತದಿಂದಲೇ ಬಿಡಿಸಿಕೊಡುತ್ತೇವೆ; ನಮ್ಮ ವಿಳಾಸಕ್ಕೆ ಬನ್ನಿ ಎನ್ನುವ ಪ್ರಚಾರದ ಜಾಹೀರಾತನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನೋಡಿದೆ. ಕೆಲವರು ತಮ್ಮವರಿಗೆ ಉಡುಗೊರೆ ನೀಡಲು ತಮ್ಮ ರಕ್ತ ನೀಡಿ ಚಿತ್ರರಚನೆ ಮಾಡಿಸಿಕೊಂಡು ಹೋಗುವ ಪರಿಪಾಠ ಬೆಳೆಯುತ್ತಿದೆ. ಪ್ರಪಂಚದಲ್ಲಿ ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ವಸ್ತುವೆಂದರೆ ರಕ್ತ. ಮನುಷ್ಯನಿಗೆ ಆಪತ್ತಿನ ಸಮಯದಲ್ಲಿ ಅತೀ ಅವಶ್ಯಕವಾಗಿ ಬೇಕಾದ ರಕ್ತವನ್ನು ಹೀಗೆ ವ್ಯರ್ಥ ಮಾಡುವುದು ಖೇದಕರ. ಜನರಿಗೆ ರಕ್ತದಾನದ ಮಹತ್ವ ಕುರಿತು ಇನ್ನೂ ತಿಳಿವಳಿಕೆ ಮೂಡಿಲ್ಲ. ತಮ್ಮವರಿಗೆ ಚಿತ್ರ ನೀಡಬೇಕೆಂದುಕೊಂಡರೆ, ಅವರ ಹೆಸರಿನಲ್ಲಿ ರಕ್ತದಾನ ಮಾಡಲಿ. ಆ ರಕ್ತ ಇನ್ನೊಬ್ಬರ ಜೀವ ಉಳಿಸಲಿದೆ.
– ರಾಜು ಬಿ. ಲಕ್ಕಂಪುರ, ಜಗಳೂರು
______________
‘ಉದ್ಯೋಗ ಕ್ರಾಂತಿ’ ಆರಂಭ ಯಾವಾಗ?
ಕಳೆದ ಕೆಲವು ದಿನಗಳಿಂದ ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ‘ನವೆಂಬರ್ ಕ್ರಾಂತಿ’ಯು ಸಾಕಷ್ಟು ಸದ್ದು ಮಾಡಿತ್ತು. ಈಗ ಇದು ಸ್ವಲ್ಪಮಟ್ಟಿಗೆ ತಣ್ಣಗಾಗಿದೆ. ಜನಪ್ರತಿನಿಧಿಗಳು ಕೇವಲ ಅಧಿಕಾರಕ್ಕಾಗಿ ಕ್ರಾಂತಿ ನಡೆಸುವುದರಲ್ಲೇ ಮಗ್ನರಾಗಬಾರದು. ಯುವಜನರು ಉದ್ಯೋಗ ಇಲ್ಲದೆ ಕಂಗಾಲಾಗಿದ್ದಾರೆ. ಅಭಿವೃದ್ಧಿ ಕ್ರಾಂತಿಯ ಜೊತೆಗೆ, ಯುವಕರಿಗಾಗಿ ಉದ್ಯೋಗದ ಕ್ರಾಂತಿಗೂ ಸರ್ಕಾರ ಮುಂದಾಗಲಿ.
– ಪೃಥ್ವಿ ಹೋಳ್ಕರ್, ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.