ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 21 ಡಿಸೆಂಬರ್ 2025, 22:30 IST
Last Updated 21 ಡಿಸೆಂಬರ್ 2025, 22:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಅನ್ನ–ಅಕ್ಷರಗಳೊಂದಿಗೆ ಕಣ್ಣಾಮುಚ್ಚಾಲೆ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಬೆಳವಣಿಗೆಗಳು ಆತಂಕಕಾರಿಯಾಗಿವೆ. ಬಿಸಿಯೂಟಕ್ಕೆ ಪೂರೈಕೆ ಆಗುತ್ತಿರುವ ಧಾನ್ಯಗಳಲ್ಲಿ ಹುಳುಗಳು ಪತ್ತೆಯಾಗುತ್ತಿರುವುದು ಮಕ್ಕಳ ಆರೋಗ್ಯದ ಜೊತೆಗಿನ ಚೆಲ್ಲಾಟ
ಆಗಿದೆ. ಕಳಪೆ ಗುಣಮಟ್ಟದ ಆಹಾರವು ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೆಚ್ಚಿಸಲಿದೆ. ಸರ್ಕಾರವು ಕೇವಲ ಯೋಜನೆಗಳನ್ನು ಘೋಷಿಸಿದರೆ ಸಾಲದು; ಗುಣಮಟ್ಟದ ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯ. ಇನ್ನೊಂದೆಡೆ, ಮೂಲ ಸೌಕರ್ಯದ ಕೊರತೆಯ ನೆಪವೊಡ್ಡಿ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದು ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತ
ರನ್ನಾಗಿಸುವ ಹುನ್ನಾರವಾಗಿದೆ. ಸರ್ಕಾರವು ಕೂಡಲೇ ಎಚ್ಚತ್ತುಕೊಂಡು ಧಾನ್ಯಗಳ ಶುಚಿತ್ವವನ್ನು ಖಾತರಿಪಡಿಸಬೇಕು ಮತ್ತು ಶಾಲೆಗಳನ್ನು ಮುಚ್ಚುವ ಬದಲು ಅವುಗಳನ್ನು ಸಬಲೀಕರಣಗೊಳಿಸಬೇಕು. ಇಲ್ಲದಿದ್ದರೆ ಸರ್ಕಾರಿ ಶಾಲೆಗಳು ಇತಿಹಾಸದ ಪುಟ ಸೇರುವುದರಲ್ಲಿ ಸಂಶಯವಿಲ್ಲ. 

ADVERTISEMENT

⇒ಭೂಮಿಕಾ, ಬೆಂಗಳೂರು

ಇಲಾಖಾ ಪರೀಕ್ಷೆ: ಫಲಿತಾಂಶ ತಡವೇಕೆ?

ಕರ್ನಾಟಕ ಲೋಕಸೇವಾ ಆಯೋಗ ಪ್ರತಿವರ್ಷ ಇಲಾಖಾ ಪರೀಕ್ಷೆಗಳನ್ನು ನಡೆಸುತ್ತದೆ. ಇತ್ತೀಚೆಗೆ ಈ ಪರೀಕ್ಷೆಗಳ ಫಲಿತಾಂಶ ಪ್ರಕಟಣೆಯಲ್ಲಿ ವಿಪರೀತ ವಿಳಂಬ ಉಂಟಾಗುತ್ತಿದೆ. ನೇರ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶ ಪ್ರಕಟಣೆಗೆ ಸಮಯಾವಕಾಶ ಅಗತ್ಯ ಎಂಬುದನ್ನು ಒಪ್ಪಿಕೊಳ್ಳಬಹುದು. ಆದರೆ, ಇಲಾಖಾ ಪರೀಕ್ಷೆಗಳಿಗೆ ನಿಗದಿಪಡಿಸಲಾಗಿರುವ ಸಾಮಾನ್ಯ ಕಾನೂನು ಮತ್ತು ಅಕೌಂಟ್ಸ್‌ ವಿಷಯಗಳು ಎಷ್ಟೋ ಕಾಲದಿಂದ ಚಾಲ್ತಿಯಲ್ಲಿವೆ. ಮೇಲಾಗಿ, ಇಲಾಖಾ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಕಡಿಮೆ ಸಂಖ್ಯೆಯಲ್ಲಿರುತ್ತಾರೆ. ಆದಾಗ್ಯೂ ವಿಳಂಬ ಯಾಕೆ ಎನ್ನುವುದು ಅರ್ಥವಾಗುತ್ತಿಲ್ಲ. ಇದರಿಂದ ನಿವೃತ್ತಿ ಅಂಚಿನಲ್ಲಿರುವ ಸರ್ಕಾರಿ ನೌಕರರು ಮುಂಬಡ್ತಿಯಿಂದ ವಂಚಿತರಾಗುತ್ತಾರೆ. ಹಲವು ತಿಂಗಳ ಹಿಂದೆ ನಡೆಸಲಾಗಿರುವ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ಶೀಘ್ರವೇ ಪ್ರಕಟಿಸಬೇಕಿದೆ.

-ಹರೀಶ್‌ ಕುಮಾರ್‌ ಕುಡ್ತಡ್ಕ, ಮಂಗಳೂರು

ಯೋಜನೆ ದುರ್ಬಳಕೆ: ಸೌಲಭ್ಯ ಮರೀಚಿಕೆ

ಪ್ರಸ್ತುತ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ
ಖಾತರಿ ಯೋಜನೆಯ ಹೆಸರನ್ನು ‘ವಿಬಿ–ಜಿ ರಾಮ್‌ ಜಿ’ ಎಂದು ಬದಲಾಯಿಸಿದೆ. ಆದರೆ, ಮನರೇಗಾ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಸರಿಯಾಗಿ ಅನುಷ್ಠಾನ
ಆಗಿದೆಯೇ ಎನ್ನುವ ಬಗ್ಗೆ ಚರ್ಚೆ ನಡೆಯದಿರುವುದು ವಿಪರ್ಯಾಸ. ಬಹುತೇಕ ಹಳ್ಳಿಗಳಲ್ಲಿ ಈ ಯೋಜನೆಯ ಸೌಲಭ್ಯ ಅರ್ಹರಿಗೆ ತಲುಪಿಲ್ಲ. ಯೋಜನೆಯ ನಿಯಮಾವಳಿಗಳನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ. ಇದರ ದುರುಪಯೋಗವೇ ಹೆಚ್ಚಿದೆ. ಯೋಜನೆಗಳಿಗೆ ಹೊಸ ಹೆಸರಿಡುವುದಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳು ಕಿತ್ತಾಟ ನಡೆಸುವ ಬದಲು ಅರ್ಹರಿಗೆ ಸೌಲಭ್ಯ ತಲುಪಿಸಲು ಮುಂದಾಗುವುದು ಒಳಿತು.

-ಅಜಯ್ ಕುಮಾರ್, ಹೂವಿನ ಹಡಗಲಿ

ದುಶ್ಚಟಗಳನ್ನು ಬಿಡಿಸುವ ದಾರಿ ಹುಡುಕಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬೊಕ್ಕಸ ತುಂಬಿಸಿಕೊಳ್ಳುವುದಷ್ಟೆ ಚಿಂತೆ. ಇದಕ್ಕಾಗಿ ಮದ್ಯ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚಿನ ಜಿಎಸ್‌ಟಿ ವಿಧಿಸಲು ತುದಿಗಾಲ ಮೇಲೆ ನಿಂತಿವೆ. ಸರ್ಕಾರಗಳಿಗೆ ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಬೀಡಿ, ಸಿಗರೇಟ್‌, ತಂಬಾಕು, ಮದ್ಯ ಬಳಕೆಯಿಂದ ಸಮಾಜ ಸುಧಾರಣೆ ಕಾಣದೆ ಮತ್ತಷ್ಟು ಹದಗೆಡುತ್ತದೆ.

ದುಡಿಯುವ ವರ್ಗವು ಅನಾರೋಗ್ಯಕ್ಕೆ ತುತ್ತಾದರೆ ದೇಶದ ಆರ್ಥಿಕತೆ ಬೆಳವಣಿಗೆಗೂ ಪೆಟ್ಟು ಬೀಳುತ್ತದೆಯಲ್ಲವೆ? ದುಶ್ಚಟ ತ್ಯಜಿಸುವವರಿಗೆ ಉಚಿತವಾಗಿ ಆರೋಗ್ಯ ವಿಮೆ ಸೌಲಭ್ಯ ನೀಡುವಂತಹ ಜನಪರ ಯೋಜನೆ ಘೋಷಿಸುವ ಮೂಲಕ ವ್ಯಸನಿಗಳ ಮನಃಪರಿವರ್ತನೆಗೆ ಸರ್ಕಾರಗಳು ಮುಂದಾಗಲಿ. 

-ಪ್ರಶಾಂತ್ ಕುಮಾರ್ ಎಚ್.ಸಿ., ಬೆಂಗಳೂರು 

ಲಿಂಗತ್ವ ಅಲ್ಪಸಂಖ್ಯಾತರಿಗೆ ನೌಕರಿ ಕೊಡಿ

ಮೊನ್ನೆ ಯಾವುದೋ ಕಾರಣಕ್ಕೆ ಬೆಂಗಳೂರಿಗೆ ಹೋಗಿದ್ದೆ. ಕೆಂಪೇಗೌಡ ರಸ್ತೆಯಲ್ಲಿ ಸಂಚರಿಸುತ್ತಿರಬೇಕಾದರೆ ದಾರಿಯಲ್ಲಿ ಒಬ್ಬಿಬ್ಬರಲ್ಲ; ಏಳೆಂಟು ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಎದುರಾದರು. ಎಲ್ಲರೂ ತಲೆಮುಟ್ಟಿ, ಮುಖಮುಟ್ಟಿ ದುಡ್ಡು ಕೇಳಿದರು. ಮಧ್ಯ ವಯಸ್ಸಿಗಿಂತಲೂ ಸಣ್ಣವರಾದ ಅವರು, ದುಡಿಯಲು ಸಶಕ್ತವಾದ ದೇಹ ಹೊಂದಿದ್ದರು. ಅವರು ನಮ್ಮಂತೆ ಇರುವವರು. ಅವರು ಹೀಗೆ ಬೇಡಿ ಜೀವನ ನಡೆಸುವುದೇಕೆ? ಅವರಿಗೆ ಸರ್ಕಾರ ಅರ್ಹ ಉದ್ಯೋಗ ನೀಡಿ, ಸಮಾಜದ ಮುಖ್ಯವಾಹಿನಿಯಲ್ಲಿ ಅವರನ್ನು ಸೇರಿಸಿಕೊಳ್ಳಬಾರದೇಕೆ?

-ಸಹನಾ ಕಾಂತಬೈಲು, ಮಡಿಕೇರಿ 

ಸ್ವಚ್ಛ ಮನಸ್ಸೇ ಸಮಾಜಕ್ಕೆ ಶಕ್ತಿಶಾಲಿ

ಇಂದಿನ ಯುವಜನತೆಯ ಜೀವನದಲ್ಲಿ ಸ್ಪರ್ಧೆ, ನಿರೀಕ್ಷೆ ಮತ್ತು ಸಾಮಾಜಿಕ
ಮಾಧ್ಯಮಗಳ ಒತ್ತಡ ಹೆಚ್ಚಾಗಿದೆ. ಯಶಸ್ಸಿನ ಹಿಂದೆ ಓಡುವ ಪ್ರಯತ್ನದಲ್ಲಿ ಅನೇಕ ಮಂದಿ ಮಾನಸಿಕ ಆರೋಗ್ಯವನ್ನು ಸಂಪೂರ್ಣವಾಗಿ ಕಡೆಗಣಿಸು
ತ್ತಿದ್ದಾರೆ. ನಿರಂತರ ಒತ್ತಡ, ಆತಂಕ ಮತ್ತು ಒಂಟಿತನವು ನಿದ್ರಾಹೀನತೆ ಹಾಗೂ ಆತ್ಮವಿಶ್ವಾಸದ ಕುಸಿತಕ್ಕೆ ಕಾರಣವಾಗುತ್ತಿದೆ. ಮಾನಸಿಕ ಆರೋಗ್ಯ
ವನ್ನು ದೌರ್ಬಲ್ಯವೆಂದು ಕಾಣದೆ, ಅದನ್ನು ಜೀವನದ ಅವಿಭಾಜ್ಯ ಭಾಗವಾಗಿ ಒಪ್ಪಿಕೊಳ್ಳಬೇಕು. ಕುಟುಂಬದ ಬೆಂಬಲ, ಸ್ನೇಹಿತರ ಜೊತೆ ಸಂವಹನ ಮತ್ತು
ವೃತ್ತಿಪರ ಸಲಹೆಯು ಯುವಜನತೆಗೆ ಶಕ್ತಿಯನ್ನೂ ಸ್ಫೂರ್ತಿಯನ್ನೂ ನೀಡುತ್ತದೆ. ಆರೋಗ್ಯಕರ ಮನಸ್ಸೇ ಆರೋಗ್ಯಕರ ಸಮಾಜದ ಆಧಾರ ಎಂಬುದನ್ನು ಮರೆಯಬಾರದು.

 -ಜಹೀರ್ ಪಿ., ಕರೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.