ವಾಚಕರ ವಾಣಿ
ಯುದ್ಧದ ನಂತರ ಉಳಿದವರಾರು?
ದೇಶವೊಂದು ಅಳಿದ ಮೇಲೆ ಗೆದ್ದ ರಾಷ್ಟ್ರದ ಸೈನಿಕರು ಸೋತವರ ನೆಲದಲ್ಲಿ ಏನೇನು ಮಾಡುತ್ತಾರೆ? ಅಮಲು ತೀರುವ ತನಕ ಕೊಳ್ಳೆ–ಕೊಲೆ–ಅತ್ಯಾಚಾರ ಎಸಗುತ್ತಾರೆ. ಸವಾಲೆನಿಸುವ ಗಂಡಸರ ಕಗ್ಗೊಲೆಯ ನಂತರ ಅಗತ್ಯಕ್ಕೆ ತಕ್ಕಂತೆ ಜೀತದಾಳುಗಳನ್ನು ಸೃಷ್ಟಿಸಿ, ಮಹಿಳೆ–ಮಕ್ಕಳನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಾರೆ. ಯುದ್ಧ ಅಂತ್ಯವಾಗುವುದು ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ನಂತರವೇ. ಜಗತ್ತಿನ ಯಾವ ದೇಶದ ಇತಿಹಾಸವೂ ಇದಕ್ಕೆ ಹೊರತಲ್ಲ. ಹೀಗಿದ್ದೂ ನಾವು ಆ ಕುಲದವರು– ಈ ಕುಲದವರು, ಇದೇ ನಮ್ಮ ಧರ್ಮ ಎನ್ನುವುದು ಮೂರ್ಖತನವೆನಿಸುತ್ತದೆ. ನಾಗರಿಕತೆಯ ಹಾದಿಯಲ್ಲಿ ಮನುಷ್ಯರಾಗುವುದಕ್ಕೆ ಒಲವು ತೋರುತ್ತಾ ಪ್ರಾಣಿಜನ್ಯ ಹಿಂಸಾಬುದ್ಧಿಯನ್ನು ಉದ್ದೇಶಪೂರ್ವಕವಾಗಿ ತ್ಯಜಿಸಲೆತ್ನಿಸುತ್ತಿದ್ದೇವೆ. ಹಾಗಿದ್ದೂ ಇದು ನನ್ನ ದೇವರು–ಅದು ನಿನ್ನ ದೇವರು ಎನ್ನುವುದು ಭಂಡಾಟವಲ್ಲದೆ ಮತ್ತೇನು? ಮನುಷ್ಯರನ್ನು ಧರ್ಮ–ದೇವರ ನೆಲೆಯಲ್ಲಿ ವಿಭಜಿಸುವ ಮನಃಸ್ಥಿತಿಯು, ಇದುವರೆಗೂ ನಾವು ಪಡೆದ ಶಿಕ್ಷಣದ ಸೋಲಲ್ಲವೆ?
-ಸಿದ್ದೇಗೌಡ ಶಾಂತರಾಜು, ಬೆಂಗಳೂರು
**
ಉಡಾಫೆ ಮಾತಿಗೆ ಲಗಾಮು ಬೇಕು
ಇತ್ತೀಚೆಗೆ ಜನಪ್ರತಿನಿಧಿಗಳು ಆಡುವ ಮಾತುಗಳು ಸಮಾಜದ ಸ್ವಾಸ್ಥ್ಯಕ್ಕೆ ಪೂರಕವಾಗಿಲ್ಲ. ಪ್ರಚಾರಪ್ರಿಯತೆಗಾಗಿ ಕೆಲವು ರಾಜಕಾರಣಿಗಳು, ವಿಚಾರದ ಕೊರತೆಯಿಂದಾಗಿ ಕೆಲವರು ವಿಕೃತವಾಗಿ ಮಾತನಾಡುತ್ತಿದ್ದಾರೆ. ಜನಪ್ರತಿನಿಧಿಗಳ ಪ್ರತಿಯೊಂದು ನಡೆಯನ್ನೂ ಸಮಾಜವು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಸಾರ್ವಜನಿಕ ಬದುಕನ್ನು ಸಹ್ಯವಾಗಿಸುವ ಬಗ್ಗೆ ರಾಜಕಾರಣಿಗಳು ಯೋಚಿಸಬೇಕಿದೆ. ಜನತೆಯ ನಂಬಿಕೆ ಉಳಿಸಿಕೊಂಡು ಸಾಮಾಜಿಕ ಸ್ವಾಸ್ಥ್ಯ ಹಾಳಾಗದಂತೆ ಪ್ರಬುದ್ಧತೆಯಿಂದ ವರ್ತಿಸಬೇಕಿದೆ.
-ಉದಯ ಮ. ಯಂಡಿಗೇರಿ, ಧಾರವಾಡ
**
ಡಿಜೆ ಬಳಕೆಗೆ ಕಡಿವಾಣ ಬೇಕು
ವಿಜಯಪುರದಲ್ಲಿ ಗಣೇಶನ ಮೂರ್ತಿ ಮೆರವಣಿಗೆ ವೇಳೆ ಡಿಜೆ ಅಬ್ಬರಕ್ಕೆ 17 ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದು ಜನರಲ್ಲಿ ಆತಂಕ ಸೃಷ್ಟಿಸಿರುವುದು ಸುಳ್ಳಲ್ಲ. ಯುವಕರು ಗಣಪತಿ ಹಬ್ಬದಂದು ಡಿಜೆ ಅಳವಡಿಸಿಕೊಂಡು ಭಾರೀ ಗದ್ದಲ ಸೃಷ್ಟಿಸುವ ವಿದ್ಯಮಾನಗಳು ಈಚೆಗೆ ಹೆಚ್ಚಿವೆ. ಇದರಿಂದ ಹೃದ್ರೋಗಿಗಳು, ಚಿಣ್ಣರು, ವಯೋವೃದ್ಧರು ತೊಂದರೆಗೆ ಸಿಲುಕುತ್ತಾರೆ. ಜನರ ಪ್ರಾಣಕ್ಕೆ ಕುತ್ತು ತರುವ ಡಿಜೆ ಬಳಕೆಗೆ ನಿಷೇಧ ಹೇರಬೇಕಿದೆ.
-ಜಯವೀರ ಎ.ಕೆ., ಖೇಮಲಾಪುರ
**
ಬ್ಯಾಲಟ್ ಪೇಪರ್ ಬಳಕೆ ಸ್ವಾಗತಾರ್ಹ
ಜಿಬಿಎ, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಯಂತ್ರದ (ಇವಿಎಂ) ಬದಲು ಮತ ಪತ್ರಗಳ (ಬ್ಯಾಲಟ್ ಪೇಪರ್) ಬಳಕೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಇವಿಎಂ ಬಳಕೆಯಿಂದ ಮತ ಕಳ್ಳತನವಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಇವಿಎಂ ಬಗ್ಗೆ ರಾಜಕೀಯ ಪಕ್ಷಗಳಲ್ಲೇ ವಿಶ್ವಾಸವಿಲ್ಲ. ಇದರ ಬಗ್ಗೆ ದೇಶದಾದ್ಯಂತ ಹೋರಾಟ ನಡೆಯುತ್ತಿದೆ. ಮತ ಕಳ್ಳತನ ತಡೆಯಲು ಇವಿಎಂ ಬದಲಿಗೆ ಮತಪತ್ರ ಬಳಸಿ ಮತ ಚಲಾಯಿಸುವ ವ್ಯವಸ್ಥೆಯನ್ನು ಜಾರಿಗೆ ತರುವುದು ಉತ್ತಮ ತೀರ್ಮಾನ.
-ಮಹೇಶ್ ಕೂದುವಳ್ಳಿ, ಚಿಕ್ಕಮಗಳೂರು
**
ಪೊಲೀಸರ ಮಾದರಿ ಸೇವೆ
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಆಡೂರ ಠಾಣೆ ಪೊಲೀಸ್ ಸಿಬ್ಬಂದಿ ಆರು ವರ್ಷಗಳಿಂದ ರಕ್ತದಾನ ಮಾಡುತ್ತಿರುವ ಸುದ್ದಿ (ಪ್ರ.ವಾ., ಸೆಪ್ಟೆಂಬರ್ 3) ಓದಿ ಸಂತಸವಾಯಿತು. ಥಲಸ್ಸೇಮಿಯಾ ಬಾಧಿತರಿಗೆ ನೆರವಾಗಲು ಸಿಬ್ಬಂದಿ ಮಾಡುತ್ತಿರುವ ಈ ಜನಮುಖಿ ಸೇವೆಗೆ ಸಲಾಂ ಹೇಳಲೇಬೇಕು.
ಇತ್ತೀಚೆಗೆ ಪೊಲೀಸ್ ಠಾಣೆಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬದಲಿಗೆ ಕಾನೂನುಬಾಹಿರ ವಿಷಯಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿವೆ. ಇಂತಹ ಬೆಳವಣಿಗೆಯ ನಡುವೆ ಭಿನ್ನವಾಗಿರುವ ಈ ಪೊಲೀಸ್ ಸಿಬ್ಬಂದಿಯ ಸೇವಾ ಮನೋಭಾವವು ಇತರೆ ಠಾಣೆಗಳ ಸಿಬ್ಬಂದಿಗೂ ಪ್ರೇರಣೆಯಾಗಲಿ.
-ಬಸಪ್ಪ ಎಸ್. ಮುಳ್ಳೂರ, ಹಲಗತ್ತಿ
**
ದಲಿತರ ಮೇಲೆ ಅನಾದರ ಏಕೆ?
ಒಡಿಶಾದಲ್ಲಿ ದನ ಕೊಂದ ಶಂಕೆಯ ಮೇರೆಗೆ ಸ್ಥಳೀಯ ಗುಂಪೊಂದು ನಡೆಸಿದ ಹಲ್ಲೆಗೆ 35 ವರ್ಷದ ದಲಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ (ಪ್ರ.ವಾ., ಸೆ. 5). ದೇಶದ ಎಲ್ಲಾ ರಾಜ್ಯಗಳಲ್ಲೂ ದಲಿತರು ಇಂತಹ ಭಯದಲ್ಲೇ ಬದುಕುತ್ತಿದ್ದಾರೆ. ಇನ್ನೊಂದೆಡೆ ಗೋಮಾಂಸ ರಫ್ತು ಮಾಡುತ್ತಿರುವ ದೇಶಗಳ ಪೈಕಿ ಭಾರತವು ಇಡೀ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಅಮಾನವೀಯ ಘಟನೆಗಳು ನಡೆಯುತ್ತಿರುವ ನಡುವೆಯೇ ಗೋಮಾಂಸ ವಹಿವಾಟು ಸಲೀಸಾಗಿ ನಡೆಯುತ್ತಿರುವುದು ಹೇಗೆ? ಆಡಳಿತ ವ್ಯವಸ್ಥೆಯಲ್ಲಿ ಇಂತಹ ದ್ವಂದ್ವ ನಿಲುವು ಸರಿಯಲ್ಲ. ದಲಿತರು ಇನ್ನೆಷ್ಟು ಕಾಲ ಇಂತಹ ದೌರ್ಜನ್ಯಕ್ಕೆ ಒಳಗಾಗಬೇಕು?
-ತಾ.ಸಿ. ತಿಮ್ಮಯ್ಯ, ಬೆಂಗಳೂರು
**
ಜಿಎಸ್ಟಿ ಕಡಿತ ಶ್ಲಾಘನೀಯ
ಅನಾರೋಗ್ಯಕ್ಕೆ ತುತ್ತಾದ ರೋಗಿಗಳಿಗೆ ಔಷಧವೇ ಜೀವರಕ್ಷಕ. ಅಂತಹ ರೋಗಿಗಳಿಗೆ ಪರಿಹಾರ ಒದಗಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು, ಔಷಧ ಮತ್ತು ವೈದ್ಯಕೀಯ ಸಾಧನಗಳ ಮೇಲಿನ ಜಿಎಸ್‌ಟಿಯನ್ನು ಶೇ 12ರಿಂದ ಶೇ 5ಕ್ಕೆ ತಗ್ಗಿಸಿರುವುದು ಒಳ್ಳೆಯ ನಿರ್ಧಾರ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಅನುಕೂಲ ಆಗಲಿದೆ.
-ಪಿ.ಸಿ. ಕಂಗಾಣಿಸೋಮು, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.