ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು –11 ಜುಲೈ 2025

ವಾಚಕರ ವಾಣಿ
Published 11 ಜುಲೈ 2025, 0:02 IST
Last Updated 11 ಜುಲೈ 2025, 0:02 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಬ್ಯಾಂಕ್‌ಗಳ ಮಾದರಿ ನಡೆ

ಗ್ರಾಹಕರು ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದಿದ್ದರೆ ವಿಧಿಸುತ್ತಿದ್ದ ಹೆಚ್ಚುವರಿ ಶುಲ್ಕವನ್ನು ಕೆನರಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಕೈಬಿಟ್ಟಿವೆ. ಈ ಗ್ರಾಹಕ ಸ್ನೇಹಿ ಕ್ರಮ ಸ್ವಾಗತಾರ್ಹ. ಉಳಿದ ಬ್ಯಾಂಕ್‌ಗಳು ಇದೇ ಮಾದರಿ ಅನುಸರಿಸಬೇಕಿದೆ. ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಂಡಿಲ್ಲ ಎಂಬ ಕಾರಣಕ್ಕಾಗಿ ಹಲವು ಬ್ಯಾಂಕ್‌ಗಳು ಹೆಚ್ಚಿನ ದಂಡ ವಿಧಿಸುತ್ತವೆ. ಇದು ಗ್ರಾಹಕರಿಗೆ ಹೊರೆಯಾಗಲಿದೆ. ದಂಡ ವಿಧಿಸಬಾರದು ಎಂಬ ಬಗ್ಗೆ ಇತರ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ದೇಶನ ನೀಡಬೇಕಿದೆ.

–ಜಿ. ಚಂದ್ರಶೇಖರ್, ಅರಕಲಗೂಡು

ADVERTISEMENT

ನುಡಿಜಾತ್ರೆ ಖರ್ಚಿನ ತನಿಖೆಯಾಗಲಿ

ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ಕುರಿತ ಮಾಹಿತಿಯು ಸಾರ್ವಜನಿಕರನ್ನು ಬೆಚ್ಚಿಬೀಳಿಸುತ್ತದೆ (ಪ್ರ.ವಾ., ಜುಲೈ 10). ಶಾಮಿಯಾನ ಸೇರಿ ವಿವಿಧ ಸಾಮಗ್ರಿಗಳ ಖರೀದಿಗೆ ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ಖರ್ಚು ಮಾಡಿರುವುದು ಹಲವು ಅನುಮಾನಗಳಿಗೆ
ಎಡೆ ಮಾಡಿಕೊಡಲಿದೆ.

ಮಾತೃಭಾಷೆಯ ಬೆಳವಣಿಗೆಗೆ ನಡೆಯುವ ಸಭೆ, ಸಮಾರಂಭ, ಸಮ್ಮೇಳನಗಳಿಗೆ ನೀಡುವ ಹಣ ದುರುಪಯೋಗವಾದರೆ ಜನರಲ್ಲಿ ಮಾತೃಭಾಷೆ ಬಗ್ಗೆ ಪ್ರೀತಿ ಉಳಿಯಲು ಸಾಧ್ಯವೇ? ಸರ್ಕಾರವು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು.

–ವಿ.ಜಿ. ಇನಾಮದಾರ, ಸಾರವಾಡ

ನೀರು–ವಿದ್ಯುತ್‌ ಕೊಡದಿರುವುದು ಸರಿಯೇ?

‘ಬಿ’ ಖಾತಾ ನಿವೇಶನಗಳಲ್ಲಿ ಮನೆ ಕಟ್ಟುತ್ತಿರುವವರಿಗೆ ತಾತ್ಕಾಲಿಕ ವಿದ್ಯುತ್‌ ಮತ್ತು ನೀರಿನ ಸಂಪರ್ಕ ನೀಡಲಾಗುತ್ತಿಲ್ಲ. ಸುಪ್ರೀಂ ಕೋರ್ಟ್‌ ಆದೇಶದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಅಧಿಕಾರಿಗಳು ಈ ಕುರಿತು ಹೆಚ್ಚು ಪ್ರಚಾರ ಮಾಡಿಲ್ಲ. ಇದರಿಂದ ಮಧ್ಯಮ ವರ್ಗದವರು ಆತಂಕದಲ್ಲಿ ಇದ್ದಾರೆ.‘ಬಿ’ ಖಾತಾ ನಿವೇಶನದಲ್ಲಿ ಕಟ್ಟಡದ ಸ್ವಾಧೀನಾನುಭವ ಪತ್ರ (ಒಸಿ) ಇಲ್ಲದೆ ಮನೆ ನಿರ್ಮಿಸಿದ್ದರೆ ಅದು ಕ್ರಿಮಿನಲ್‌ ಅಪರಾಧ ಎಂದು ಕಂದಾಯ ಸಚಿವರೂ ಹೇಳಿದ್ದಾರೆ. ಹಾಗಿದ್ದರೆ ‘ಬಿ’ ಖಾತಾ ನಿವೇಶನಗಳ ನೋಂದಣಿಗೆ ಸರ್ಕಾರ ಅವಕಾಶ ಕಲ್ಪಿಸಿದ್ದು ಏಕೆ? ನಿಗದಿತ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಿ ನೋಂದಣಿ ಮಾಡಿಸಿಕೊಂಡವರು ಮನೆ ನಿರ್ಮಾಣ ಮಾಡದೇ ಇರಲು ಸಾಧ್ಯವೇ? ಜನಸಾಮಾನ್ಯರಿಗೆ ವಿದ್ಯುತ್‌ ಮತ್ತು ಕುಡಿಯುವ ನೀರಿನ ಸೌಲಭ್ಯ ಕೊಡದಿರುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಲ್ಲವೇ?

–ಗೀತಾ ಕೆಂಗೇರಿ, ಬೆಂಗಳೂರು

ತಾಯ್ನುಡಿ ಮಗುವಿನ ಕಲಿಕೆಗೆ ಬುನಾದಿ

‘ತಾಯ್ನುಡಿ ಮಾಧ್ಯಮವೇ ಗತಿ–ಮತಿ’ ಲೇಖನವು (ನಿರಂಜನಾರಾಧ್ಯ ವಿ.ಪಿ.,ಪ್ರ.ವಾ., ಜುಲೈ 9) ವಾಸ್ತವದ ಮೇಲೆ ಬೆಳಕು ಚೆಲ್ಲಿದೆ. ತಾಯ್ನುಡಿಯಲ್ಲಿನ ಪ್ರಾಥಮಿಕ ಶಿಕ್ಷಣವು ಮಗುವಿನ ಕಲಿಕೆಗೆ ಭದ್ರ ಅಡಿಪಾಯ ಹಾಕಲಿದೆ. ಜೊತೆಗೆ, ಮಕ್ಕಳ ಕಲಿಕೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ‘ತಾಯ್ನುಡಿಯನ್ನು ಸ್ಪಷ್ಟವಾಗಿ ಕಲಿತ ವಿದ್ಯಾರ್ಥಿಗಳು ಉಳಿದ ಭಾಷೆಗಳನ್ನು ಚೆನ್ನಾಗಿ ಕಲಿಯಬಲ್ಲರು’ ಎಂದು ಮಹಾತ್ಮ ಗಾಂಧೀಜಿ ಅವರೇ ಹೇಳಿದ್ದಾರೆ. ತಾಯ್ನುಡಿ ಮಾಧ್ಯಮದಲ್ಲಿ ಓದಿ ಯಶಸ್ಸು ಸಾಧಿಸಿದ ನೂರಾರು ಸಾಧಕರು ನಮ್ಮೊಡನಿದ್ದಾರೆ. ಇದಕ್ಕೆ ವಿಜ್ಞಾನಿ ಸಿ.ಎನ್.ಆರ್. ರಾವ್ ಅವರು ಉದಾಹರಣೆ.  

–ಜಯವಂತ ಕಾಡದೇವರ, ಬನಹಟ್ಟಿ

ಸರ್ಕಾರಿ ಶಾಲೆ ಉಳಿಸಿ

ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳ ದುರಸ್ತಿಗೆ ಮುಂದಾಗುತ್ತಿಲ್ಲ. ಅಗತ್ಯ ಶಿಕ್ಷಕರ ನೇಮಕಕ್ಕೂ ನಿರಾಸಕ್ತಿ ತಳೆದಿದೆ. ಮತ್ತೊಂದೆಡೆ ವಿದ್ಯಾರ್ಥಿಗಳ ಕೊರತೆ ನೆಪದಲ್ಲಿ 6,500 ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಇದು ಅತ್ಯಂತ ಶೋಚನೀಯ ಸ್ಥಿತಿಯಾಗಿದೆ. ಈ ನಡುವೆಯೇ ಚನ್ನಪಟ್ಟಣ ತಾಲ್ಲೂಕು ಹೊಂಗನೂರಿನ ಶಾಲೆಗೆ ಕಣ್ವ ಫೌಂಡೇಷನ್ ಸ್ಥಾಪಕ ಡಾ. ಎಚ್.ಎಂ. ವೆಂಕಟಪ್ಪ ಅವರು, ಹೈಟೆಕ್‌ ಸ್ಪರ್ಶ ನೀಡಿರುವುದು ಹೆಮ್ಮೆಯ ಸಂಗತಿ. ಇತರರಿಗೆ ಮಾದರಿಯೂ ಆಗಿದೆ. ಸರ್ಕಾರಿ ಶಾಲೆಗಳು ಆಯಾ ಊರಿನ ಜ್ಞಾನದ ಸಂಪತ್ತು ಇದ್ದಂತೆ. ಈ ದಿಸೆಯಲ್ಲಿ ಶಾಲೆಗಳನ್ನು ಉಳಿಸಿ ಬೆಳೆಸಲು ಸರ್ಕಾರ ಮುಂದಾಗಬೇಕು. ಇದರಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಅಡಗಿದೆ. 

–ಲಲಿತಾ ರೆಡ್ಡಿ, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.