ಮಲ್ಟಿಪ್ಲೆಕ್ಸ್
ಕೃಷಿ ಭೂಮಿ: ಶಾಶ್ವತ ಕ್ರಮ ಬೇಕು
ದೇವನಹಳ್ಳಿ ರೈತರ ಪ್ರತಿಭಟನೆಗೆ ಓಗೊಟ್ಟು 1,777 ಎಕರೆ ಕೃಷಿ ಭೂಮಿಯ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರ, ತಡವಾಗಿಯಾದರೂ ಸರಿಯಾದ ನಿರ್ಣಯಕ್ಕೆ ಬಂದಿದೆ. ಹಿಂಸೆಯಿಲ್ಲದ ಸತ್ಯಾಗ್ರಹ ನಡೆಸಿದ ರೈತರ ಸಂಯಮ ಸ್ತುತ್ಯರ್ಹ. ಅಧಿಸೂಚನೆ ಕೈಬಿಟ್ಟ ತಕ್ಷಣ ಸರ್ಕಾರದ ಕೆಲಸ ಮುಗಿದಿಲ್ಲ. ದೇವನಹಳ್ಳಿ ಸುತ್ತಮುತ್ತಲಿನ ಫಲವತ್ತಾದ ಪ್ರದೇಶಗಳನ್ನು ಶಾಶ್ವತವಾಗಿ ಕೃಷಿ ವಲಯವೆಂದು ಘೋಷಿಸಬೇಕು. ರಿಯಲ್ ಎಸ್ಟೇಟ್ ಲಾಬಿಯ ಏಜೆಂಟರಂತೆ ಸರ್ಕಾರಕ್ಕೆ ಭೂಮಿ ಒಪ್ಪಿಸಲು ಹೊರಟಿರುವವರಿಗೆ ಪ್ರೋತ್ಸಾಹ ನೀಡಬಾರದು. ದೊಡ್ಡ ಮೊತ್ತದ ಆಸೆಗೆ ಭೂಮಿ ಮಾರಿಕೊಂಡ ಯಾರೂ ಬಹುಕಾಲ ನೆಮ್ಮದಿಯಿಂದ ಇದ್ದ ನಿದರ್ಶನ ನಮ್ಮ ಮುಂದಿಲ್ಲ.
-ಶ್ರೀಕಂಠ, ಬೆಂಗಳೂರು
****
ದರ ನಿಗದಿ: ಸಿನಿಪ್ರಿಯರಿಗೆ ಸಂತಸ
ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿನ ಪ್ರವೇಶ ದರವನ್ನು ಗರಿಷ್ಠ ₹200ಕ್ಕೆ ನಿಗದಿಪಡಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ (ಪ್ರ.ವಾ., ಜುಲೈ 16). ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರವೇಶ ದರವನ್ನು ಮನಸ್ಸಿಗೆ ಬಂದಂತೆ ನಿಗದಿಪಡಿಸಿರುವ ಮಾಲೀಕರು ಪ್ರೇಕ್ಷಕರ ಮೇಲೆ ದುಬಾರಿ ಹೊರೆ ಹೊರಿಸಿದ್ದಾರೆ. ಆ ದರಕ್ಕೆ ಕಡಿವಾಣ ಹಾಕುವುದು ಸಿನಿಮಾ ಪ್ರೇಮಿಗಳ ಪಾಲಿಗೆ ಒಳ್ಳೆಯ ಬೆಳವಣಿಗೆ.
-ಕೆ.ವಿ. ವಾಸು, ಮೈಸೂರು
****
ಚಾರಿತ್ರ್ಯಹೀನ ಬೋಧಕರಿಗೆ ಶಿಕ್ಷೆಯಾಗಲಿ
ಮೂಡುಬಿದಿರೆಯ ಇಬ್ಬರು ಉಪನ್ಯಾಸಕರು ಹಾಗೂ ಅವರ ಸ್ನೇಹಿತ, ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಭುವನೇಶ್ವರದ ಒಬ್ಬ ಉಪನ್ಯಾಸಕನೂ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೆ ಗುರಿಯಾಗಿದ್ದಾನೆ. ಜೀವನ ಪಾಠ ಕಲಿಸಬೇಕಾದವರೇ ವಿದ್ಯಾರ್ಥಿನಿಯರ ಜೀವನ ಹಾಳು ಮಾಡುತ್ತಿದ್ದಾರೆ ಎಂಬ ಸುದ್ದಿ ಓದಿ ಆಘಾತಗೊಂಡೆ. ಬೇಲಿಯೇ ಎದ್ದು ಹೊಲ ಮೇದಂತಾಯಿತು. ಈ ಚಾರಿತ್ರ್ಯಹೀನರಿಗೆ ಕಠಿಣ ಶಿಕ್ಷೆಯಾಗಬೇಕು.
-ಮಾಲತಿ ಪಟ್ಟಣಶೆಟ್ಟಿ, ಧಾರವಾಡ
****
ಘನತೆಯ ಬದುಕು ಬೇಕಲ್ಲವೇ?
ಸರ್ಕಾರವು ಕನಿಷ್ಠ ವೇತನ ನಿಗದಿಪಡಿಸಿದೆ. ಇದಕ್ಕಿಂತಲೂ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಘನತೆಯ ಬದುಕು ಬೇಕಿದೆ. ಯುಜಿಸಿ ಮತ್ತು ಯುಜಿಸಿಯೇತರ ತಾರತಮ್ಯದಿಂದಾಗಿ ಐದು ಸಾವಿರಕ್ಕೂ ಹೆಚ್ಚು ಉಪನ್ಯಾಸಕರ ಬದುಕು ಕತ್ತಲೆಯತ್ತ ಸಾಗಿದೆ. ದೇವನಹಳ್ಳಿ ರೈತರ ಪರವಾಗಿ ಮುಖ್ಯಮಂತ್ರಿ ಅವರು ಜೀವಪರವಾದ ನಿಲುವು ತಳೆದಿದ್ದಾರೆ. ಸೇವೆ ಕಾಯಂಗೊಳಿಸುವ ಮೂಲಕ ಅತಿಥಿ ಉಪನ್ಯಾಸಕರು ಮತ್ತು ಅವರ ಕುಟುಂಬದವರು ಘನತೆಯಿಂದ ಬದುಕಲು ಅವಕಾಶ ನೀಡುವರೇ?
-ಗುರುಪ್ರಸಾದ ಎಚ್.ಎಸ್., ಮರಿಯಮ್ಮನಹಳ್ಳಿ
****
ಎಗ್ಗಿಲ್ಲದೆ ಸಾಗಿದೆ ವನ್ಯಜೀವಿ ಬೇಟೆ
ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಹೋಬಳಿಯ ಚೆನ್ನಮ್ಮ ನಾಗತಿಹಳ್ಳಿ ಕಾವಲ್ ವ್ಯಾಪ್ತಿಗೆ ಬರುವ ಪರ‍್ಲೆಹಳ್ಳಿ, ದ್ಯಾವರನಹಳ್ಳಿ, ದೇವರ ಮರಿಕುಂಟೆ, ಬೊಂಬೆರಹಳ್ಳಿ, ವಡೆರಹಳ್ಳಿ, ಸೂರನಹಳ್ಳಿ ಮತ್ತಿತರ ಗ್ರಾಮಗಳ ಸುತ್ತಮುತ್ತ ವಾಸಿಸುತ್ತಿರುವ ಜಿಂಕೆ, ಸಾರಂಗ ಮೊದಲಾದ ಕಾಡು ಪ್ರಾಣಿಗಳನ್ನು ಬೇಟೆಗಾರರು ಹಗಲು ಹೊತ್ತಿನಲ್ಲೇ ರಾಜಾರೋಷವಾಗಿ ಬೇಟೆಯಾಡುತ್ತಿದ್ದಾರೆ.
ಕಾಡು ಮತ್ತು ಕಾಡು ಪ್ರಾಣಿಗಳ ಸಂರಕ್ಷಣೆಗೆ ಇರುವ ಅರಣ್ಯ ಇಲಾಖೆಯು ಜಾಣಕುರುಡು ಪ್ರದರ್ಶಿಸುತ್ತಿದೆ. ಪ್ರಾಣಿ ಪ್ರಿಯರು ಧೈರ್ಯ ಮಾಡಿ ಇಲಾಖೆಗೆ ದೂರು ನೀಡಿದರೂ ಹಿರಿಯ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಜನರಲ್ಲಿ ಇಲಾಖೆ ಬಗ್ಗೆ ಅಪನಂಬಿಕೆ ಬೆಳೆಯುವಂತಾಗಿದೆ. ತಪ್ಪಿತಸ್ಥರನ್ನು ಬಂಧಿಸಿದ ಉದಾಹರಣೆಗಳೇ ಇಲ್ಲ. ಪ್ರಾಣಿ ಪೀಡಕರು ನಿರಾತಂಕವಾಗಿ ಅನಾಚಾರದಲ್ಲಿ ತೊಡಗಿದ್ದಾರೆ. ಅರಣ್ಯ ಸಚಿವರು ಇತ್ತ ಗಮನ ಹರಿಸುವರೇ?
-ಚೆನ್ನಮ್ಮ ನಾಗತಿಹಳ್ಳಿ ಕಾವಲ್ ವ್ಯಾಪ್ತಿಯ ಗ್ರಾಮಸ್ಥರು,ಚಳ್ಳಕೆರೆ ತಾಲ್ಲೂಕು
****
ಜಾತಿಯ ವಿಷ ಬೀಜ ಬಿತ್ತದಿರಿ
ಮಂಡ್ಯಕ್ಕೆ ವರ್ಗಾವಣೆಯಾಗಿ ಬಂದ ಸಹೋದ್ಯೋಗಿಗೆ ಬಾಡಿಗೆಗಾಗಿ ಮನೆ ಹುಡುಕುತ್ತಿದ್ದೆವು. ಒಪ್ಪಿಗೆಯಾದ ಮನೆಯೊಂದಕ್ಕೆ ಮುಂಗಡ ನೀಡಿ, ಕೀ ಪಡೆದು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಮಾಲೀಕ, ಏನನ್ನೋ ಮರೆತಿದ್ದವರಂತೆ ‘ಇವ್ರು ಯಾವ ಕಮ್ಯುನಿಟಿ?’ ಎಂದು ಮಧ್ಯವರ್ತಿಯನ್ನು ಪ್ರಶ್ನಿಸಿದರು. ಸಹೋದ್ಯೋಗಿ ಮಿತ್ರರು ಮುಜುಗರವಿಲ್ಲದೆ ‘ನಾವು ಎಸ್.ಸಿ’ ಎಂದರು. ತಕ್ಷಣ ಆತ ‘ಮೊದ್ಲೆ ಯೇಳ್ಬಾರ‍್ದ? ನಾವು ಎಸ್.ಸಿಯವರಿಗೆ ಮನೆ ಕೊಡಲ್ಲ’ ಎಂದು ಹಣ ವಾಪಸ್ ನೀಡಿ ಕೀ ಪಡೆದುಕೊಂಡರು. ಮನಸ್ಸಿಗೆ ಕಸಿವಿಸಿಯಾಯಿತು.
ಬಳಿಕ ನಾವು ಅದೇ ಬಡಾವಣೆಯ ಪಕ್ಕದ ಬೀದಿಗೆ ಹೋಗಿ ಮನೆ ಹುಡುಕಿ ಮುಂಗಡ ಕೊಡುವುದಕ್ಕೆ ಮುಂಚಿತವಾಗಿ ‘ನಾವು ಎಸ್.ಸಿ ಸರ್, ಏನೂ ಅಭ್ಯಂತರ ಇಲ್ಲವೇ’ ಎಂದು ಕೇಳಿದೆವು. ಆಗ ಮನೆ ಮಾಲೀಕ ‘ನಾನೇನಾದ್ರು ಕೇಳಿದ್ನ? ನೀವ್ಯಾಕೆ ಯೇಳ್ತಿದೀರಿ? ಅಂದರು. ಹಿಂದಿನ ಮನೆಯಲ್ಲಿ ನಡೆದುದನ್ನು ಹೇಳಿದೆವು. ‘ಈ ಭೂಮಿ ಮೇಲೆ ಎಲ್ಲ ಜನಾಂಗದೋರು ಉಸಿರಾಡ್ತಿದ್ದಾರೆ ಅಲ್ವ? ಭೂಮಿ ಬಿಟ್ಟು ಬೇರೆ ಗ್ರಹಕ್ಕೆ ಹೋಗಾಕ್ಕೇಳಿ’ ಎಂದು ನಗುತ್ತಾ ಮುಂಗಡ ಪಡೆದು ಕೀ ಕೊಟ್ಟರು. ಅಕ್ಕಪಕ್ಕದ ಬೀದಿಯಲ್ಲೇ ವಾಸಿಸುತ್ತಿರುವ ಒಂದೇ ಸಮುದಾಯಕ್ಕೆ ಸೇರಿದ ವಿರುದ್ಧ ಮನಃಸ್ಥಿತಿಯುಳ್ಳ ವ್ಯಕ್ತಿಗಳನ್ನು ನೋಡಿ ಅಚ್ಚರಿಯಾಯಿತು.
-ಪುಟ್ಟದಾಸು, ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.