ADVERTISEMENT

ವಾಚಕರ ವಾಣಿ: ಕೃಷಿಕರ ಇಳಿಕೆ: ಭೂಸ್ವಾಧೀನವೇ ಕಾರಣ

ವಾಚಕರ ವಾಣಿ
Published 9 ಫೆಬ್ರುವರಿ 2026, 22:30 IST
Last Updated 9 ಫೆಬ್ರುವರಿ 2026, 22:30 IST
   

ಭಾವೈಕ್ಯದ ಮದುವೆ: ಸಮಾಜಕ್ಕೆ ಮಾದರಿ

ಹುಕ್ಕೇರಿ ತಾಲ್ಲೂಕಿನ ಬಸ್ತವಾಡ ಗ್ರಾಮದ ಮುಸ್ಲಿಂ ದಂಪತಿಯು ಹಿಂದೂ ಧರ್ಮದ ಇಬ್ಬರು ಅನಾಥ ಮಕ್ಕಳನ್ನು ಸಾಕಿ, ಒಬ್ಬರ ಮದುವೆ ಮಾಡಿರುವುದು ವರದಿಯಾಗಿದೆ. ಪ್ರಸ್ತುತ ಸ್ವಂತ ಮಕ್ಕಳ ಮದುವೆ ಮಾಡುವುದೇ ಕಷ್ಟಕರವಾಗಿದೆ. ಇಂತಹ ಸ್ಥಿತಿಯಲ್ಲಿ ಅನ್ಯಧರ್ಮದ ಮಕ್ಕಳನ್ನು ಸಾಕಿ ಸಲಹುವುದು ಸಾಮಾನ್ಯ ಸಂಗತಿಯಲ್ಲ. ಭಾವೈಕ್ಯದ ದ್ಯೋತಕವಾದ ಇಂತಹ ಬೆಳವಣಿಗೆಯು ಕನ್ನಡದ
ನೆಲದಲ್ಲಿನ ಬಹುತ್ವ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುತ್ತದೆ. ಪ್ರಚೋದನಕಾರಿ
ಮಾತುಗಳ ಮೂಲಕ ಧಾರ್ಮಿಕ ಭಾವನೆ ಕೆರಳಿಸುವುದೇ ಕೆಲವರಿಗೆ ಚಟವಾಗಿದೆ.
ಅಂತಹವರಿಗೆ ಮೆಹಬೂಬ್‌ ಹಸನ್‌ ನಾಯಿಕವಾಡಿ (ಮುಲ್ಲಾ) ಹಾಗೂ
ನೂರಜಾನ್‌ ದಂಪತಿಯ ಬದುಕು ಪಾಠವಾಗಬೇಕಿದೆ. ಕರ್ನಾಟಕವು ಎಲ್ಲ ಧರ್ಮ ಗಳನ್ನು ಪ್ರೀತಿಸುವ ನಾಡೆಂದು ಯುವಜನತೆಗೆ ಮನವರಿಕೆ ಮಾಡಿಕೊಡಬೇಕಿದೆ.

-ಮಾದಪ್ಪ ಎಸ್. ಕಠಾರಿ, ವಿಜಯಪುರ

ADVERTISEMENT

****

ಕೃಷಿಕರ ಇಳಿಕೆ: ಭೂಸ್ವಾಧೀನವೇ ಕಾರಣ

ದೇಶದಲ್ಲಿ ಕೃಷಿಕರ ಸಂಖ್ಯೆ ಶೇ 82ರಿಂದ ಶೇ 62‌ಕ್ಕೆ ಇಳಿದಿದೆ. 140 ಕೋಟಿಯಷ್ಟಿ ರುವ ಜನರಿಗೆ ಅಗತ್ಯ ಇರುವಷ್ಟು ಆಹಾರಧಾನ್ಯ ಉತ್ಪಾದಿಸಲಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. ಆದರೂ, ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಜಮೀನುಗಳನ್ನು ಭೂಸ್ವಾಧೀನ ಮಾಡುತ್ತಿರುವುದು ಏಕೆ? ಕೈಗಾರಿಕೆಗಳು ಸ್ಥಾಪನೆಯಾಗಬೇಕು ನಿಜ. ಆದರೆ, ರೈತರ ಹಿತಾಸಕ್ತಿ ಕಡೆಗಣಿಸುವು ದರಿಂದ ಅವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಅರಿವು ಆಡಳಿತ ನಡೆಸುವವರಿಗೆ ಇರಬೇಕಲ್ಲವೆ? ಇತ್ತೀಚೆಗೆ ವಿದ್ಯಾವಂತರು ಕೃಷಿಯತ್ತ ಒಲವು ತೋರುತ್ತಿದ್ದಾರೆ ಎಂಬುದು ಗಮನಾರ್ಹ. ಮುಖ್ಯಮಂತ್ರಿಯವರ ಸಲಹೆಯಂತೆ ಕೃಷಿಕರು ಉದ್ಯಮಿಗಳಾಗಬೇಕು. ವಿದ್ಯಾವಂತರು ಕೈಗಾರಿಕೆಗಳಿಗಿಂತ ಕೃಷಿಯಲ್ಲಿ ತೊಡಗಿಸಿಕೊಳ್ಳು ವುದನ್ನು ಪ್ರೋತ್ಸಾಹಿಸಬೇಕಲ್ಲವೆ? ಸರ್ಕಾರ ಕೃಷಿ ಜಮೀನುಗಳನ್ನು ಸ್ವಾಧೀನ ಮಾಡಿಕೊಳ್ಳದೆ ಬರಡು ಭೂಮಿಯ ಬಳಕೆಗೆ ಮುಂದಾಗಲಿ.

-ಜಿ. ಬೈರೇಗೌಡ ಕೊಡಿಗೇಹಳ್ಳಿ, ನೆಲಮಂಗಲ

****

ಅಭಿವೃದ್ಧಿ ನೆಪ; ಕೆಸರೆರಚಾಟದ್ದೇ ಜಪ

‘ನಮ್ಮ ಮೆಟ್ರೊ’ ಪ್ರಯಾಣ ದರ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೆಸರೆರ
ಚಾಟದಲ್ಲಿ ತೊಡಗಿವೆ. ಜನಸಾಮಾನ್ಯರ‌ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿವೆ. ಸರ್ಕಾರಗಳು ನಡೆಸುವ ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಸೇವಾ ಮನೋಭಾವ ವಿರಬೇಕೇ ಹೊರತು ವ್ಯಾಪಾರಿ ಮನೋಭಾವವಿರಬಾರದು. ಆದರೆ, ಜನಪ್ರತಿನಿಧಿ ಗಳು ಸಾರ್ವಜನಿಕ ಹಿತಾಸಕ್ತಿ ಮರೆತು ಒಬ್ಬರ ಮೇಲೊಬ್ಬರು ಆರೋಪ ಮಾಡುವು ದನ್ನು ಬಿಟ್ಟು ಸರ್ಕಾರಗಳ ಕಿವಿ ಹಿಂಡುವ ಕೆಲಸ ಮಾಡಲಿ. ಈಗಾಗಲೇ, ರೈಲ್ವೆ ಇಲಾಖೆಯಲ್ಲಿ ಕನ್ನಡಿಗರ ಕಡೆಗಣನೆ ನಡೆಯುತ್ತಿದೆ. ಈಗ ಮೆಟ್ರೊ ಟಿಕೆಟ್‌ ದರ
ಹೆಚ್ಚಿಸಿದರೆ ಬಡವರ ಜೀವನ ದುಸ್ತರವಾಗಲಿದೆ. ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ವೃಥಾ ಆರೋಪ ಮಾಡುವುದನ್ನು ಬಿಡಬೇಕು. ಕೇಂದ್ರದ ಮೇಲೆ ಒತ್ತಡ ಹೇರಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು.

⇒ಚಿ. ಉಮಾ ಶಂಕರ್ ಲಕ್ಷ್ಮೀಪುರ,ಬೆಂಗಳೂರು

****

ಶಾಸಕರ ಸ್ವಹಿತಾಸಕ್ತಿ ಪರಾಕಾಷ್ಠೆ ಸರಿಯೆ?

‘ಡಿಕೆಶಿ ಕೇಳಿದರೆ ಪ್ರಾಣವನ್ನೇ ಕೊಡುತ್ತೇನೆ’ ಎಂದು ಚನ್ನಗಿರಿಯ ಕಾಂಗ್ರೆಸ್ ಶಾಸಕ
ಶಿವಗಂಗಾ ಬಸವರಾಜು ಹೇಳಿದ್ದಾರೆ. ಪ್ರಾಣ ಕೇಳುವುದಾಗಲೀ, ಪ್ರಾಣ ಕೊಡುವು
ದಾಗಲೀ ವಾಸ್ತವದಲ್ಲಿ ಸಾಧ್ಯವಿಲ್ಲದಿದ್ದರೂ, ಆ ಶಾಸಕರು ಈ ರೀತಿ ಹೇಳಿರುವು ದನ್ನು ಕೇಳಿದರೆ, ಇದೊಂದು ಅಂಧಭಕ್ತಿಯ ಅಥವಾ ಸ್ವಹಿತಾಸಕ್ತಿಯ ಪರಾಕಾಷ್ಠೆ ಎನಿಸುತ್ತದೆ. ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆ ಕಳೆದುಕೊಳ್ಳುತ್ತಿರುವ ಇಂದಿನ ಪ್ರಜಾಪ್ರಭುತ್ವ ದಿನೇ ದಿನೇ ರಾಜಪ್ರಭುತ್ವದ ಕಡೆಗೆ ಸಾಗುತ್ತಿದೆಯೇನೋ ಅನ್ನಿಸು ತ್ತಿದೆ. ವಾಸ್ತವಿಕ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳಲು ಸಾಮರ್ಥ್ಯವಿಲ್ಲದ ಇಂತಹ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿರುವ ಮತದಾರರು ಎಚ್ಚರಿಕೆವಹಿಸಬೇಕು.

-ತಾ.ಸಿ. ತಿಮ್ಮಯ್ಯ, ಬೆಂಗಳೂರು

****

ಖಾದಿ ಬಟ್ಟೆಯತ್ತ ಹೆಚ್ಚಲಿ ಜನರ ಒಲವು

ಸರ್ಕಾರಿ ನೌಕರರು ತಿಂಗಳಲ್ಲಿ ಒಂದು ದಿನ ಸ್ವಯಂಪ್ರೇರಣೆಯಿಂದ ಖಾದಿ ಬಟ್ಟೆ ಧರಿಸುವಂತೆ ಸುತ್ತೋಲೆ ಹೊರಡಿಸಿರುವುದು ಪ್ರಶಂಸನೀಯ. ಜನಸಾಮಾನ್ಯರು ಕೂಡ ಖಾದಿ ಬಟ್ಟೆ ತೊಡಲು ಮುಂದಾಗ ಬೇಕಿದೆ. ಉತ್ತರ ಕರ್ನಾಟಕದ ಕಪ್ಪು ನೆಲ ಹತ್ತಿ ಬೆಳೆಯಲು ಉಪಯುಕ್ತವಾಗಿದೆ. ದಶಕಗಳ ಹಿಂದೆ ದಾವಣಗೆರೆ ಹಾಗೂ ಕೊಟ್ಟೂರು ಭಾಗದಲ್ಲಿ ಕಾಟನ್ ಮಿಲ್‌ಗಳ ಸಂಖ್ಯೆ ಹೆಚ್ಚಿದ್ದವು. ಹತ್ತಿ ಬೆಳೆಯುವ ಪ್ರದೇಶದ ಕಡಿಮೆಯಾಗಿರುವುದು ಹಾಗೂ ವಾಣಿಜ್ಯ ಬೆಳೆಗಳತ್ತ ರೈತರು ಚಿತ್ತ ಹರಿಸಿದ್ದು ಮಿಲ್‌ಗಳು ಮುಚ್ಚಲು ಕಾರಣವಾಗಿದೆ. ಸರ್ಕಾರ ರೈತರ ಸಮಾಲೋಚಕ ಸಭೆ ನಡೆಸಿ ಹತ್ತಿ ಬೆಳೆಯಲು ಪ್ರೋತ್ಸಾಹಿಸಬೇಕು. ಜನರು ಖಾದಿ ಬಟ್ಟೆ ಧರಿಸುವು ದನ್ನು ರೂಢಿಸಿಕೊಂಡರೆ ಗ್ರಾಮೋದ್ಯೋಗಕ್ಕೆ ನೆರವಾಗಲಿದೆ.

-ರೇಶ್ಮಾ ಗುಳೇದಗುಡ್ಡಾಕರ್, ಕೊಟ್ಟೂರು

****

ಸರ್ಕಾರಿ ಶಿಕ್ಷಕರ ಮೇಲಿನ ಹೊರೆ ತಗ್ಗಿಸಿ

ರಾಜ್ಯದಲ್ಲಿ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಬಡ ಹಾಗೂ ಕೆಳವರ್ಗದ ಮಕ್ಕಳ ಶೈಕ್ಷಣಿಕ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ಸರ್ಕಾರ ಶಾಲೆಗಳ ಉಳಿವಿಗೆ ಗಮನಹರಿಸಬೇಕು. ಈ ಶಾಲೆಗಳನ್ನು ಕೆಪಿಎಸ್‌ ಶಾಲೆಗಳಿಗೆ ವರ್ಗಾಯಿಸಲು ಮುಂದಾಗಿರುವುದು ಗಂಭೀರ ಸಮಸ್ಯೆ. ಶಿಕ್ಷಕರ ಕೊರತೆ ನೀಗಿಸಬೇಕು. ಜೊತೆಗೆ, ಶಿಕ್ಷಕರನ್ನು ಸರ್ಕಾರದ ಯಾವುದೇ ಕೆಲಸಗಳಿಗೆ ನಿಯೋಜಿಸಬಾರದು. ಸಮೀಕ್ಷೆಗಳ ಹೊರೆ ತಪ್ಪಿದರೆ ಬೋಧನೆಗೆ ನೆರವಾಗಲಿದೆ. ಇದು ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ. ಬೇರೆ ಕ್ಷೇತ್ರಗಳಲ್ಲಿರುವ ಉದ್ಯೋಗಿಗಳನ್ನು ಸಮೀಕ್ಷೆಗೆ ಬಳಸಿಕೊಳ್ಳಬಹುದು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ಬಗ್ಗೆ ಗಮನಹರಿಸಬೇಕಿದೆ.

 -ಶ್ರೀಧರ ವಂದಾಲ, ಅಥಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.