ADVERTISEMENT

ವಾಚಕರ ವಾಣಿ: ಸಮೀಕ್ಷೆಯ ಹಣ ಪಾವತಿಗೆ ಮೀನಮೇಷ

ವಾಚಕರ ವಾಣಿ
Published 10 ಫೆಬ್ರುವರಿ 2026, 23:30 IST
Last Updated 10 ಫೆಬ್ರುವರಿ 2026, 23:30 IST
<div class="paragraphs"><p>ಹಣ </p></div>

ಹಣ

   

ಸಾಂದರ್ಭಿಕ ಚಿತ್ರ

ಸಮೀಕ್ಷೆಯ ಹಣ ಪಾವತಿಗೆ ಮೀನಮೇಷ

ADVERTISEMENT

ಸರ್ಕಾರದಿಂದ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ವಿವಿಧ ಇಲಾಖೆ
ನೌಕರರು, ಶಿಕ್ಷಕರು, ಮಂಡಳಿ ಮತ್ತು ನಿಗಮದ ಸಿಬ್ಬಂದಿ ಪಾಲ್ಗೊಂಡಿದ್ದರು. ಸಮೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ ಸಮೀಕ್ಷೆದಾರರ ಬ್ಯಾಂಕ್‌ ಖಾತೆಗೆ ಗೌರವಧನ ಸಂದಾಯ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆಯಿತ್ತಿದ್ದರು. ಸಮೀಕ್ಷೆ ಮುಗಿದು ಮೂರೂವರೆ ತಿಂಗಳಾಗುತ್ತಾ ಬಂದರೂ ಈವರೆಗೂ ಹಣ ಸಂದಾಯವಾಗಿಲ್ಲ. ಸಮೀಕ್ಷಕರು ಹಗಲುರಾತ್ರಿಯೆನ್ನದೆ, ಸರಿಯಾದ ಸಮಯಕ್ಕೆ ಊಟ, ನೀರಿಲ್ಲದೆ ಕೆಲಸ ನಿರ್ವಹಿಸಿದ್ದಾರೆ. ಸರ್ಕಾರದ ತಾತ್ಸಾರ ಸರಿಯಲ್ಲ. ವಿಪರೀತ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳುವ ಸರ್ಕಾರ, ಗೌರವಧನ ಕೊಡುವ ವಿಷಯದಲ್ಲಿ ವಿಳಂಬನೀತಿ ಅನುಸಬಾರದು.

-ವಿ.ಎಸ್. ಕುಮಾರ್, ಬೆಂಗಳೂರು

****

ಕಾವೇರಿ ನದಿ ಮಲಿನ; ತಡೆಗಿಲ್ಲ ಗಮನ

ಇತ್ತೀಚೆಗೆ ನಾನು, ನನ್ನ ಪತ್ನಿ ಮತ್ತು ಅವರ ಅಣ್ಣ ಮೇಕೆದಾಟು ಸಮೀಪದ ಸಂಗಮದಲ್ಲಿ ಸ್ನಾನ ಮಾಡಲು ಹೋಗಿದ್ದೆವು. ಅರ್ಕಾವತಿ ರಾಜ್ಯದ ಅತ್ಯಂತ ಕಲುಷಿತ ನದಿಯಾಗಿದೆಯೆಂದು ಅರಣ್ಯ ಸಚಿವರೇ ಹೇಳಿರುವುದರಿಂದ ಸಂಗಮಕ್ಕೆ ಮೇಲಿರುವ ಕಾವೇರಿ ನದಿಯಲ್ಲಿ ಸ್ನಾನಕ್ಕೆ ಹೋದೆವು. ನದಿ ಹರಿಯುವ ದಾರಿ
ಯುದ್ದಕ್ಕೂ ಪ್ಲಾಸ್ಟಿಕ್ ಬಾಟಲ್ ಮತ್ತಿತರ ತ್ಯಾಜ್ಯದ ಜೊತೆಗೆ ಮದ್ಯದ ಬಾಟಲ್‌ ಗಳನ್ನು ದಾಟಿಕೊಂಡು ನದಿಯ ಹತ್ತಿರ ಹೋದೆವು. ಅಲ್ಲಿ ಭಕ್ತರು ಬಿಟ್ಟುಹೋಗಿದ್ದ ಕೊಳೆತ ಬಟ್ಟೆಗಳು, ಪೂಜಾವಸ್ತುಗಳು ಬಿದ್ದಿದ್ದವು. ನದಿ ನೀರಿನ ಬಣ್ಣ, ಮಾಲಿನ್ಯ ನೋಡಿ ದಿಗಿಲಾಯಿತು. ಕೊನೆಗೆ ಸ್ನಾನ ಮಾಡದೆ ವಾಪಸ್‌ ಬಂದೆವು. ನದಿಯಲ್ಲಿ ಮಿಂದು ನಾವು ಶುಚಿಯಾಗಿ ಬರುವುದೆಂದರೆ, ನಮ್ಮ ಹೊಲಸನ್ನೆಲ್ಲ ಅಲ್ಲಿ ಬಿಟ್ಟು ಬರುವುದಲ್ಲ. ಜನರು ಈ ಸತ್ಯ ಅರಿಯಬೇಕಿದೆ.

-ರಾ.ನಂ. ಚಂದ್ರಶೇಖರ, ಬೆಂಗಳೂರು

****

ರಣಜಿ ಪ್ರಶಸ್ತಿ: ರಾಜ್ಯದ ನಿರೀಕ್ಷೆಗೆ ಚೈತನ್ಯ

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕ 325 ರನ್‌ಗಳನ್ನು ಬೆನ್ನಟ್ಟಿ ಗುರಿ ಮುಟ್ಟಿದ್ದು ಕ್ರಿಕೆಟ್ ಪ್ರಿಯರಿಗೆ ರಸದೌತಣ ಉಣಬಡಿಸಿತು. ನಾಲ್ಕನೇ ಇನ್ನಿಂಗ್ಸ್ ಆಟದ ಒತ್ತಡದಲ್ಲಿ ಕೆ.ಎಲ್. ರಾಹುಲ್ ಅವರ ಆತ್ಮವಿಶ್ವಾಸ ಭರಿತ ಇನ್ನಿಂಗ್ಸ್ ಈ ಗೆಲುವಿಗೆ ಆಧಾರ. ರವಿಚಂದ್ರನ್ ಸ್ಮರಣ್ ಕೂಡ ಅತ್ಯುತ್ತಮ ಆಟದೊಂದಿಗೆ ಸಂಯಮವನ್ನು ಪ್ರದರ್ಶಿಸಿ ಕೈಜಾರುತ್ತಿದ್ದ ಗೆಲುವನ್ನು ದೊರಕಿಸಿಕೊಟ್ಟರು. ಈ ಗೆಲುವು 2010ರ ರಣಜಿ ಟ್ರೋಫಿ ಫೈನಲ್‌ನಲ್ಲಿ ಮುಂಬೈ ವಿರುದ್ಧ ಕೇವಲ ಆರು ರನ್‌ಗಳಿಂದ ಕರ್ನಾಟಕ ಪ್ರಶಸ್ತಿ ಕಳೆದುಕೊಂಡ ನೆನಪುಗಳನ್ನು ಮತ್ತೆ ಜೀವಂತಗೊಳಿಸಿತು! ಬಲಿಷ್ಠ ಎದುರಾಳಿಯ ವಿರುದ್ಧ ಸಾಧಿಸಿದ ಈ ಮಹತ್ವದ ಜಯ ರಣಜಿ ಟ್ರೋಫಿ ಪ್ರಶಸ್ತಿಯನ್ನು ಮತ್ತೆ ಗೆಲ್ಲುವತ್ತ ಕರ್ನಾಟಕದ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ.

-ಕಲ್ಯಾಣ ರಾಮನ್ ಚಂದ್ರಶೇಖರನ್, ಬೆಂಗಳೂರು 

****

ವೀಸಾ ನೀಡಿಕೆ: ಕಾರ್ಯವಿಧಾನ ಬದಲಾಗಲಿ

ಈ ಮೊದಲೆಲ್ಲಾ ಅರ್ಜಿ ಅಂಗೀಕೃತವಾಗಿ ವೀಸಾ ನೀಡಲು ಅನುಮತಿ ಸಿಕ್ಕ ನಂತರವಷ್ಟೆ ಬೆರಳಚ್ಚು, ಮುಖ, ಕಣ್ಣಿನ ಐರೀಸ್ ಬಳಸಿಕೊಂಡು ಬಯೊಮೆಟ್ರಿಕ್‌ ದಾಖಲಿಸಲಾಗುತ್ತಿತ್ತು. ಈಗ ಮೊದಲೇ ಬಯೊಮೆಟ್ರಿಕ್‌ ದಾಖಲಿಸಿ, ನಂತರ ಅರ್ಜಿ ಪರಿಶೀಲಿಸಿ, ವೀಸಾ ನೀಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ವೀಸಾ ಸಿಕ್ಕರೆ ಸಾಕೆಂದು ಇದನ್ನು ಯಾರೂ ಪ್ರಶ್ನಿಸಲು ಹೋಗುವುದಿಲ್ಲ. ಆದರೆ, ವೀಸಾ ಕೊಡುವ ಮೊದಲೇ ಬಯೊಮೆಟ್ರಿಕ್‌ನ ಅಗತ್ಯ ಏನಿದೆ? ವೀಸಾ ತಿರಸ್ಕೃತವಾದರೆ ತೀರಾ ಖಾಸಗಿ ದಾಖಲೆಗಳಾದ ಬಯೊಮೆಟ್ರಿಕ್ ದತ್ತಾಂಶಗಳಿಂದ ಯಾರಿಗೆ ಪ್ರಯೋಜನ? ಆ ದಾಖಲೆಗಳು ಸೈಬರ್ ಅಪರಾಧಗಳಿಗೆ ಬಳಕೆಯಾಗುವುದಿಲ್ಲ ಎಂಬ ಖಾತರಿ ಇದೆಯೆ? ಈಗಿನ ಕಾರ್ಯವಿಧಾನದಲ್ಲಿ ಬದಲಾವಣೆ ತರಬೇಕಿದೆ. 

-ಟಿ.ವಿ.ಬಿ. ರಾಜನ್, ಬೆಂಗಳೂರು 

****

‘ಕಲ್ಯಾಣ’ದಲ್ಲಿ ‘ಪ್ರತಿಭಾ ಕಾರಂಜಿ’ ಯಶಸ್ವಿ

ರಾಜ್ಯಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಯು ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಯಶಸ್ವಿಯಾಗಿ ನಡೆಯಿತು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಈವರೆಗೂ ರಾಜ್ಯಮಟ್ಟದ ಈ ಸ್ಪರ್ಧೆ ನಡೆದಿರಲಿಲ್ಲ. ವಿದ್ಯಾರ್ಥಿಗಳಿಗೆ ಊಟದ ದಾರಿ ಹುಡುಕಲು ಕ್ಯುಆರ್ ಕೋಡ್ ವ್ಯವಸ್ಥೆ, ಆಕರ್ಷಕ ಗುರುತಿನ ಚೀಟಿ, ಉತ್ತಮ ಸಾರಿಗೆ ವ್ಯವಸ್ಥೆ, ‘ಸಂಪ್ರೀತಿ’ ಶಿಕ್ಷಕರ ತಂಡದ ನಾಡಗೀತೆ, ರೈತಗೀತೆ, ಪಿಎಂಶ್ರೀ ಶಾಲೆಗಳ ಕಲಿಕಾ ವಸ್ತುಪ್ರದರ್ಶನ, ಜೊತೆಗೆ ವಸತಿ ವ್ಯವಸ್ಥೆಯು ಅಚ್ಚುಕಟ್ಟಾಗಿತ್ತು. ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಆತಿಥ್ಯಕ್ಕೆ ಹೆಸರಾಗಿವೆ. ರಾಜ್ಯಮಟ್ಟದ ಸ್ಪರ್ಧೆಗಳು ಈ ಜಿಲ್ಲೆಗಳಲ್ಲಿ ಹೆಚ್ಚು ನಡೆಯುವಂತಾಗಲಿ.

-ಮಲ್ಲಪ್ಪ ಫ. ಕರೇಣ್ಣನವರ, ಹಾವೇರಿ

****

ಪ್ರೀತಿ ಪ್ರದರ್ಶನವಲ್ಲ, ಜೀವನದ ಬದ್ಧತೆ

​ಫೆ. 14 ಬಂತೆಂದರೆ ಮೊಬೈಲ್ ಸ್ಟೇಟಸ್‌ನಲ್ಲಿ ಪ್ರೀತಿಯ ಸುರಿಮಳೆಯಾಗುತ್ತದೆ. ಆದರೆ, ವರ್ಷಕ್ಕೆ ಒಂದು ದಿನ ಕೆಂಪು ಗುಲಾಬಿ ನೀಡುವುದರಿಂದ ಅಥವಾ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಳ್ಳುವುದ
ರಿಂದ ನಿಜವಾದ ಪ್ರೀತಿ ವ್ಯಕ್ತವಾಗುತ್ತದೆಯೆ? ಇಂದಿನ ಫಾಸ್ಟ್‌ಫುಡ್ ಸಂಸ್ಕೃತಿಯಲ್ಲಿ ಪ್ರೀತಿ ಪ್ರದರ್ಶನದ ವಸ್ತುವಾಗುತ್ತಿದೆ. ಆದರೆ, ನಿಜವಾದ ಪ್ರೀತಿ ಇರುವುದು ಒಬ್ಬರು ಇನ್ನೊಬ್ಬರ ವ್ಯಕ್ತಿತ್ವಕ್ಕೆ ನೀಡುವ ಗೌರವದಲ್ಲಿ. ಒಬ್ಬರ ಕನಸುಗಳಿಗೆ ಮತ್ತೊಬ್ಬರು ನೀಡುವ ಬೆಂಬಲದಲ್ಲಿ ಮತ್ತು ಹೆತ್ತವರ ನಂಬಿಕೆ ಉಳಿಸಿಕೊಳ್ಳುವ ಜವಾಬ್ದಾರಿಯಲ್ಲಿ. ಕ್ಷಣಿಕ ಆಕರ್ಷಣೆಗೆ ಬಲಿಯಾಗಿ ಭವಿಷ್ಯವನ್ನು ಬಲಿಗೊಡುವುದು ಸರಿಯಲ್ಲ. ​ಪ್ರೀತಿ ಒಬ್ಬ ವ್ಯಕ್ತಿಗೆ ಸೀಮಿತವಾದುದಲ್ಲ. ಬದುಕನ್ನು ರೂಪಿಸಿದ ಪೋಷಕರು ಮತ್ತು ಹಿತೈಷಿಗಳ ಮೇಲೂ ನಮಗೆ ಪ್ರೀತಿ, ಗೌರವವಿರಲಿ.  

-ಸುಜಾತ ನಾಯಕ, ಶಕ್ತಿನಗರ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.