ADVERTISEMENT

ವಾಚಕರ ವಾಣಿ | ‘ಭೂಸ್ವಾಧೀನ’ ಘೋಷಣೆ ಕೈಬಿಡಿ

ವಾಚಕರ ವಾಣಿ
Published 18 ಜುಲೈ 2025, 23:30 IST
Last Updated 18 ಜುಲೈ 2025, 23:30 IST
<div class="paragraphs"><p>ರೈತರ ಹೋರಾಟ</p></div>

ರೈತರ ಹೋರಾಟ

   

(ಪ್ರಾತಿನಿಧಿಕ ಚಿತ್ರ)

‘ಭೂಸ್ವಾಧೀನ’ ಘೋಷಣೆ ಕೈಬಿಡಿ

ADVERTISEMENT

ದೇವನಹಳ್ಳಿ ಪ್ರದೇಶದ ಭೂಸ್ವಾಧೀನವು ‘ಕೈಗಾರಿಕೆಗಳ ಅಭಿವೃದ್ಧಿ’ ಎಂಬ ಘೋಷವಾಕ್ಯವನ್ನು ಮುಂದಿಟ್ಟಿತ್ತು. ಕೈಗಾರಿಕೆಗಳು ಅಭಿವೃದ್ಧಿಯಾಗಬೇಕು ನಿಜ. ಆದರೆ, ಯಾವ ಮಟ್ಟದಲ್ಲಿ ಹಾಗೂ ಎಲ್ಲೆಲ್ಲಿ ಎಂಬ ಸ್ಪಷ್ಟ ಚಿತ್ರಣವೂ ಮುಖ್ಯ. ಪರಿಸರದ ದೃಷ್ಟಿಯಿಂದ ಬೆಂಗಳೂರು ಈಗಾಗಲೇ ನಾಶವಾಗಿದೆ. ಜನತೆ ಉಸಿರುಗಟ್ಟಿ ಬದುಕುತ್ತಿದ್ದಾರೆ. ದಶಕಗಳಿಂದ ಇಲ್ಲಿ ಬಾಳಿ ಬದುಕಿದ ಬಹುಪಾಲು ಮಂದಿ ಯಾವುದಕ್ಕೂ ಪ್ರತಿಕ್ರಿಯಿಸಲಾಗದೆ ಮೂಕರಾಗಿದ್ದಾರೆ. ರಿಯಲ್ ಎಸ್ಟೇಟ್‌ನವರ ಕ್ರೂರ ವ್ಯವಹಾರದಿಂದ ಬಹುಪಾಲು ಭೂಮಾಲೀಕರು ಅನಾಥರಾಗಿ ಮೂರನೇ ದರ್ಜೆಯ ಕಾರ್ಮಿಕರಾಗಿದ್ದಾರೆ. 

ಒಂದು ಕಾಲದಲ್ಲಿ ಕೃಷಿಯನ್ನೂ ಕೈಗಾರಿಕೆಗಳ ರೀತಿಯಲ್ಲಿಯೇ ಬೆಳೆಸಬೇಕು ಎಂದು ಡಾ. ಸ್ವಾಮಿನಾಥನ್ ಅವರು, ಹೋರಾಟ ಸ್ವರೂಪದ ಚಿಂತನೆ ಮುಂದಿಟ್ಟರು. ಇನ್ನೊಬ್ಬ ಮಹನೀಯ ಡಾ. ಕುರಿಯನ್ ಅವರು ಹೈನುಗಾರಿಕೆಗೆ ಉತ್ತೇಜಿಸಿದರು. ಇದರಿಂದ ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಈ  ಉದ್ದೇಶವನ್ನಿಟ್ಟುಕೊಂಡೇ ಎಂ.ವಿ. ಕೃಷ್ಣಪ್ಪನವರು ಕೇಂದ್ರ ಸಚಿವರಾಗಿದ್ದಾಗ ಬೆಂಗಳೂರು ಡೇರಿಯನ್ನು ಪ್ರಾರಂಭಿಸಿದ್ದು. ಆ ಡೇರಿಯ ಮೂಲಕ ಈಗ ದೊಡ್ಡ ಪ್ರಮಾಣದಲ್ಲಿ ಜನತೆ ಬದುಕು ಕಂಡುಕೊಂಡಿದ್ದಾರೆ. ಎಲ್ಲವನ್ನೂ ರಾಜಕಾರಣಿಗಳು ಮಾಡಲು ಹೋಗಬಾರದು. ನಮ್ಮ ನಡುವೆ ಬಹಳಷ್ಟು ವಿಷಯ ತಜ್ಞರಿದ್ದಾರೆ. ಅವರನ್ನು ಮುಂದಿಟ್ಟುಕೊಂಡು ಆಡಳಿತ ನಡೆಸಬೇಕು. ದಯವಿಟ್ಟು ‘ಭೂಸ್ವಾಧೀನ’ ಎಂಬ ಘೋಷಣೆಯನ್ನು ಕೈಬಿಡಬೇಕು.

-ಶೂದ್ರ ಶ್ರೀನಿವಾಸ್, ಬೆಂಗಳೂರು

****

ಖಾಸಗಿ ಶಾಲಾಸಂಸ್ಥೆಗಳಿಗೆ ಮಣಿಯದಿರಿ

ಖಾಸಗಿ ಶಾಲಾ ಅನುಮತಿ ನವೀಕರಣ ಪ್ರಕ್ರಿಯೆಯು ಸರಳವಾಗಿರಬೇಕು. ಆರ್‌ಟಿಇ ಮರು ಜಾರಿಗೊಳಿಸಬೇಕು– ಹೀಗೆ ಹಲವು ಬೇಡಿಕೆ ಮುಂದಿಟ್ಟುಕೊಂಡು ಖಾಸಗಿ ಶಾಲಾ ಸಂಸ್ಥೆಗಳು ಪ್ರತಿಭಟನೆ ಮಾಡಿವೆ (ಪ್ರ.ವಾ., ಜುಲೈ 18). ಸರ್ಕಾರ ಇಂತಹ ಪ್ರತಿಭಟನೆಗೆ ಕಿವಿಗೊಟ್ಟರೆ, ಖಾಸಗಿ ಶಾಲೆಗಳು ಬಲಗೊಂಡು ಸರ್ಕಾರಿ ಶಾಲೆಗಳು ದುರ್ಬಲವಾಗುವ ಅಪಾಯವಿದೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರು ಬಡವರ ಮಕ್ಕಳು ಮಾತ್ರ. ಖಾಸಗಿ ಶಾಲೆಗಳ ಬೇಡಿಕೆಯಿಂದ ಬಡ ಮಕ್ಕಳಿಗೆ ಅನ್ಯಾಯವಾಗುತ್ತದಲ್ಲವೇ?

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

****

‘ಸ್ವಚ್ಛ ಭಾರತ’ದ ಅರ್ಥವೇನು?

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶಾಲಾ ಕೊಠಡಿಗಳ ಸ್ವಚ್ಛತೆ ಮತ್ತು ಶೌಚಾಲಯ ಶುಚಿಗೊಳಿಸಿದ್ದಾರೆಂಬ ಕಾರಣಕ್ಕೆ ಹಲವು ಶಿಕ್ಷಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಸ್ತಿನ ಕ್ರಮಕ್ಕೆ ಗುರಿಯಾಗುತ್ತಿದ್ದಾರೆ. ಶಾಲೆಗಳಲ್ಲಿ ಸ್ವಚ್ಛತಾ ಸಿಬ್ಬಂದಿ ಇಲ್ಲ. ವಿದ್ಯಾರ್ಥಿಗಳು ತರಗತಿಯ ಕೋಣೆಗಳನ್ನು ಸ್ವಚ್ಛಗೊಳಿಸಿದರೆ ತಪ್ಪಾಗುತ್ತದೆಯೇ? ನಮ್ಮ ಮನೆಯನ್ನು ನಾವೇ ಶುಚಿಗೊಳಿಸುವುದಿಲ್ಲವೇ? ವಿದ್ಯಾರ್ಥಿಗಳಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸುವುದು ಬೇಡವೇ? ಮಹಾತ್ಮ ಗಾಂಧಿ ಅವರು ಸಾರ್ವಜನಿಕ ಶೌಚಾಲಯಗಳನ್ನು ಶುಚಿಗೊಳಿಸಿದ್ದನ್ನು ವಿದ್ಯಾರ್ಥಿ ಗಳಿಗೆ ಪಾಠ ಹೇಳಿ ಪರೀಕ್ಷೆ ಬರೆಸುವುದಷ್ಟೇ ಶಿಕ್ಷಕರ ಕೆಲಸವೇ? ಹಾಗಾಗಿ, ಸ್ವಚ್ಛ ಭಾರತ ಅಭಿಯಾನದ ಅರ್ಥ – ವ್ಯಾಪ್ತಿ ಕುರಿತು ಇಲಾಖೆಯು ನಿಖರ ಮಾಹಿತಿ ನೀಡಬೇಕು. ಶಾಲೆಗಳಿಗೆ ಸ್ವಚ್ಛತಾ ಸಿಬ್ಬಂದಿ ನೇಮಕಕ್ಕೂ ಕ್ರಮವಹಿಸಬೇಕಿದೆ.

-ಶಿವಕುಮಾರ ಬಂಡೋಳಿ, ಯಾದಗಿರಿ 

****

ಹಗುರ ಮಾತು ಶೋಭೆ ತರುವುದಿಲ್ಲ

ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವಂತೆ ಕಾಂಗ್ರೆಸ್‌ ಪಕ್ಷಕ್ಕೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸವಾಲು ಹಾಕಿದ್ದಾರೆ. ಖರ್ಗೆ ಅವರು 1972ರಲ್ಲೇ ಗುರುಮಿಟಕಲ್ ಕ್ಷೇತ್ರದಿಂದ ಶಾಸಕರಾಗಿ ರಾಜಕೀಯ ಪ್ರವೇಶಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಂತ್ರಗಾರಿಕೆ ಮಾಡಿದ್ದರಿಂದ ಸೋಲುಂಡರು. ಆದರೂ, ಎದೆಗುಂದದೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಮಾತನಾಡುವ ಭರದಲ್ಲಿ ಹಿರಿಯ ಮುತ್ಸದ್ದಿ ಬಗ್ಗೆ ಹಗುರವಾಗಿ ಮಾತನಾಡುವುದು ವಿಜಯೇಂದ್ರ ಅವರಿಗೆ ಶೋಭೆ ತರುವುದಿಲ್ಲ. 

-ಸುರೇಶ್, ವಡಗಲಪುರ 

****

ಪಿಂಚಣಿದಾರರ ಬಗ್ಗೆ ಅವಜ್ಞೆ ಏಕೆ?  

ರಾಜ್ಯ ಸರ್ಕಾರಿ ನೌಕರರ ವೇತನ ಹಾಗೂ ಪಿಂಚಣಿಯನ್ನು 7ನೇ ವೇತನ ಆಯೋಗದ ಶಿಫಾರಸು ಅನ್ವಯ 2024ರ ಆಗಸ್ಟ್‌ನಿಂದ ಪರಿಷ್ಕರಿಸಲಾಗಿದೆ. ಆದರೆ, 70 ವರ್ಷ ದಾಟಿದ ಪಿಂಚಣಿ‌ದಾರರಿಗೆ ಶೇ 10ರಷ್ಟು ಹೆಚ್ಚುವರಿ ವೇತನ ಪಾವತಿಸುವಂತೆ ಮಾಡಿರುವ ಶಿಫಾರಸು ಒಂದು ವರ್ಷವಾಗುತ್ತಾ ಬಂದರೂ ಅನುಷ್ಠಾನಗೊಂಡಿಲ್ಲ. ಹಣದುಬ್ಬರ, ವಯೋಸಹಜ ಅನಾರೋಗ್ಯ ಮತ್ತಿತರ ಕಾರಣಗಳಿಂದ ಈ ವಯೋಮಾನದ ಪಿಂಚಣಿದಾರರು ಎದುರಿಸುತ್ತಿರುವ ಸಂಕ‌ಟಗಳು ಹೇಳತೀರದು. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಶಿಫಾರಸು ಜಾರಿಯು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಮುಖ್ಯಮಂತ್ರಿ ಅವರು ಸದನಕ್ಕೆ ಉತ್ತರಿಸಿದ್ದರು. ಆದರೆ, 70 ವರ್ಷ ದಾಟಿದ ಪಿಂಚಣಿದಾರರು ಇನ್ನೆಷ್ಟು ದಿನ ಕಾಯಬೇಕು?

-ಆರ್‌.ಜಿ. ಬ್ಯಾಕೋಡ, ವಿಜಯಪುರ

****

ತಿಂಡಿ ತಿನಿಸಿಗೂ ದರ ನಿಗದಿಪಡಿಸಿ

ರಾಜ್ಯ ಸರ್ಕಾರವು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು ಗರಿಷ್ಠ ₹200 ನಿಗದಿಪಡಿಸುವುದು ಸ್ವಾಗತಾರ್ಹ. ಖ್ಯಾತ ನಟರ ಚಿತ್ರಗಳು ಬಿಡುಗಡೆಯಾದಾಗ ಟಿಕೆಟ್ ದರ ₹1 ಸಾವಿರ ದಾಟುವುದೂ ಇದೆ. ಮಲ್ಟಿಪ್ಲೆಕ್ಸ್‌ ಗಳಲ್ಲಿ ಮಾರಾಟ ಮಾಡುವ ತಿಂಡಿ, ತಿನಿಸು ದುಬಾರಿಯಾಗಿವೆ. ಹೊರಗಿನ ಅಂಗಡಿಗಳಲ್ಲಿ ₹30ಕ್ಕೆ ಸಿಗುವ ಪಾಪ್‌ಕಾರ್ನ್‌ಗೆ ಅಲ್ಲಿ ನೂರಾರು ರೂಪಾಯಿ ದರವಿದೆ. ತಿಂಡಿ, ತಿನಿಸಿಗೂ ದರ ನಿಗದಿಪಡಿಸಬೇಕಿದೆ.

-ಎಸ್.ವಿ. ಗೋಪಾಲ್ ರಾವ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.