ADVERTISEMENT

ವಾಚಕರ ವಾಣಿ | ಸಿರಿವಂತರಿಗೆ ಸೀಮಿತವಾದ ದಸರಾ

ವಾಚಕರ ವಾಣಿ
Published 22 ಸೆಪ್ಟೆಂಬರ್ 2025, 0:30 IST
Last Updated 22 ಸೆಪ್ಟೆಂಬರ್ 2025, 0:30 IST
ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ದಸರಾ ದೀಪಾಲಂಕಾರದಲ್ಲಿ ಕಂಡ ಮೈಸೂರಿನ ಕೆ ಆರ್ ವೃತ್ತ
ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ದಸರಾ ದೀಪಾಲಂಕಾರದಲ್ಲಿ ಕಂಡ ಮೈಸೂರಿನ ಕೆ ಆರ್ ವೃತ್ತ   

ದಲಿತ ಮಹಿಳೆ ಹಿಂದೂ ಅಲ್ಲವೆ?

‘ಚಾಮುಂಡೇಶ್ವರಿಗೆ ಸನಾತನ ಧರ್ಮದವರಷ್ಟೇ ಹೂ ಮುಡಿಸಬೇಕು, ದಲಿತ ಮಹಿಳೆಗೂ ಇದಕ್ಕೆ ಅವಕಾಶವಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಹಾಗಿದ್ದರೆ, ದಲಿತ ಮಹಿಳೆ ಹಿಂದೂ ಅಲ್ಲವೆ?

ಶಾಸಕರ ಹೇಳಿಕೆಯು ದಲಿತರ ಮೇಲೆ ಸನಾತನವಾದಿಗಳು ಹೊಂದಿರುವ ಮನಃಸ್ಥಿತಿಗೆ ಕನ್ನಡಿ ಹಿಡಿದಿದೆ. ಒಂದು ಧರ್ಮವನ್ನು ವಿರೋಧಿಸಿ ಅದರಿಂದ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು, ಜಾತಿವ್ಯವಸ್ಥೆಯನ್ನು ಗಟ್ಟಿಗೊಳಿಸುವ ಹುನ್ನಾರ ಈ ಹೇಳಿಕೆಯ ಹಿಂದಿದೆ. ಮೈಸೂರು ಇಡೀ ರಾಜ್ಯದಲ್ಲಿ ಸ್ವಚ್ಛನಗರವೆಂಬ ಕೀರ್ತಿ ಪಡೆಯುವಲ್ಲಿ ಅಲ್ಲಿನ ಪೌರಕಾರ್ಮಿಕರ ಪಾಲು ಹಿರಿದು. ಮುಂದಿನ ವರ್ಷದ ದಸರಾ ಮಹೋತ್ಸವವನ್ನು ಪೌರಕಾರ್ಮಿಕ ಮಹಿಳೆಯೊಬ್ಬರಿಂದ ಉದ್ಘಾಟಿಸಿ, ಸನಾತನವಾದಿಗಳಿಗೆ ರಾಜ್ಯ ಸರ್ಕಾರವು ದಿಟ್ಟ ಉತ್ತರ ನೀಡಬೇಕಿದೆ.‌

ADVERTISEMENT

-ಗಗನ, ಸರಗೂರು

****

ಸಿರಿವಂತರಿಗೆ ಸೀಮಿತವಾದ ದಸರಾ

ನಾಡಹಬ್ಬ ದಸರಾ ಶತಮಾನಗಳಿಂದ ರಾಜ್ಯದ ಸಂಸ್ಕೃತಿ ಮತ್ತು ಆಡಳಿತದ ಪರಂಪರೆಯನ್ನು ಪ್ರತಿಬಿಂಬಿಸುತ್ತಿದೆ. ಜನಸಾಮಾನ್ಯರಿಗೆ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸುವುದು ದಸರಾ ಸಂಪ್ರದಾಯದ ಪ್ರಮುಖ ಅಂಶವಾಗಿತ್ತು. ಈಗ ಪ್ರತಿ ಕಾರ್ಯಕ್ರಮಕ್ಕೂ ಟಿಕೆಟ್ ನಿಗದಿ ಮಾಡಲಾಗಿದೆ. ಬಡವ, ರೈತ, ಕಾರ್ಮಿಕರನ್ನು ಹೊರಗಿಟ್ಟು ದಸರಾವನ್ನು ಹಣ ಪಾವತಿಸಿದವರ ಹಬ್ಬವಾಗಿ ಮಾಡಲಾಗುತ್ತಿದೆ. ಎಲ್ಲರಿಗೂ ಸೇರಬೇಕಾದ ದಸರಾ ಉಳ್ಳವರಿಗೆ ಸೀಮಿತ ವಾಗಿರುವುದು ವಿಪರ್ಯಾಸ. ದೂರದ ಊರಿಂದ ಆಸೆಗಣ್ಣಿನಿಂದ ಬಂದ ಬಡವ ನಿರಾಶೆಯಿಂದ ಹಿಂತಿರುಗುವಂತಾಗಿದೆ. ಒಟ್ಟಾರೆ, ಮೈಸೂರು ದಸರಾ ಜನಸಾಮಾನ್ಯರ ಹಬ್ಬವಾಗದೆ, ಪಾವತಿಸಿದವರ ಟಿಕೆಟ್ ಆಧಾರಿತ ಹಬ್ಬವಾಗಿದೆ.

-ದರ್ಶನ್ ಎಂ.ಜಿ., ಕಡೂರು

****

ವಿದ್ಯಾರ್ಥಿಯ ಕಾಳಜಿ ಎಲ್ಲರಿಗೂ ಮಾದರಿ

ಹರಪನಹಳ್ಳಿಯಲ್ಲಿ ರಸ್ತೆ ವಿಸ್ತರಣೆಗಾಗಿ ಮರಗಳ ಕಡಿತದ ಬಗ್ಗೆ ನಾಲ್ಕನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಅಯಾನ್ ‘ವಾಚಕರ ವಾಣಿ’ಯಲ್ಲಿ ವ್ಯಕ್ತಪಡಿಸಿರುವ ಪರಿಸರ ಸಂರಕ್ಷಣೆ ಬಗೆಗಿನ ಕಾಳಜಿಯು ಎಲ್ಲರಿಗೂ ಸ್ಫೂರ್ತಿ. ತರಗತಿಯಲ್ಲಿ ಪರಿಸರ ವಿಜ್ಞಾನ ವಿಷಯ ಓದಿ ಮನನ ಮಾಡಿಕೊಂಡಿರುವ ಈ ವಿದ್ಯಾರ್ಥಿಗೆ, ಅಭಿವೃದ್ಧಿ ಹೆಸರಲ್ಲಿ ನಿತ್ಯ ಸಾವಿರಾರು ಮರಗಳ ಮಾರಣಹೋಮ ನಡೆಯುತ್ತಿರುವ ಬಗ್ಗೆ ಆತಂಕ ಮೂಡುವುದು ಸಹಜವಾದುದು. ಪರಿಸರ ಮತ್ತು ಜೀವಸಂಕುಲದ ಹೊಂದಾಣಿಕೆಯಲ್ಲಿ ವೈವಿಧ್ಯವಿದೆ. ವಿದ್ಯಾರ್ಥಿಗಿರುವ ಪರಿಸರ ಪ್ರಜ್ಞೆಯು ಅಧಿಕಾರಿಗಳು ಮತ್ತು ಆಳುವ ವರ್ಗಕ್ಕೆ ಇಲ್ಲದಿರುವುದು ಸೋಜಿಗ. 

-ಗುರುಪ್ರಸಾದ ಎಚ್.ಎಸ್., ಮರಿಯಮ್ಮನಹಳ್ಳಿ

****

ಗುಂಡಿಗಳ ಲೆಕ್ಕ ಕೊಟ್ಟವರು ಯಾರು?

ಬೆಂಗಳೂರಿನಲ್ಲಿ ಏಳು ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನೂ ಐದು ಸಾವಿರ ಗುಂಡಿಗಳನ್ನು ಮುಚ್ಚಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಇದು ರಾಜಧಾನಿಯ ಲೆಕ್ಕವಾದರೆ, ರಾಜ್ಯದಲ್ಲಿ ಎಷ್ಟು ಗುಂಡಿಗಳಿರಬಹುದು? ಮುಖ್ಯಮಂತ್ರಿ ಅವರಿಗೆ ಈ ಗುಂಡಿಗಳ ನಿಖರ ಲೆಕ್ಕ ಕೊಟ್ಟವರು ಯಾರು? ಈ ಗುಂಡಿಗಳು ಯಾಕಾದವು ಎನ್ನುವುದಕ್ಕೆ ಸ್ಪಷ್ಟ ಕಾರಣ ಕಳಪೆ ಕಾಮಗಾರಿ ಎಂದು ಗೊತ್ತಿದ್ದರೂ ಅಂತಹ ಕೆಲಸ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವುದಂತೂ ಕನಸಿನ ಮಾತು. ಮಳೆಗಾಲದಲ್ಲಿ ಅವೈಜ್ಞಾನಿಕವಾಗಿ ಗುಂಡಿಗಳನ್ನು ಮುಚ್ಚಿದರೆ ಅದರ ಆಯುಸ್ಸು ಕೇವಲ ಒಂದು ವಾರವಿರಬಹುದು ಅಷ್ಟೇ. ರಸ್ತೆಯಿಂದ ನೀರು ಸರಾಗವಾಗಿ ಹರಿಯುವಂತೆ ಒಳಚರಂಡಿ ವ್ಯವಸ್ಥೆ ಮಾಡದಿದ್ದರೆ, ಗುಂಡಿಗಳನ್ನು ದುರಸ್ತಿ ಮಾಡುವುದು ಹೊಳೆಯಲ್ಲಿ ಹುಣಸೆಹಣ್ಣನ್ನು ತೊಳೆದಂತಾಗುತ್ತದೆ.  

-ಕಡೂರು ಫಣಿಶಂಕರ್, ಬೆಂಗಳೂರು

****

ಪುರುಷರಿಗೂ ಬೇಕು ಉಚಿತ ಪ್ರಯಾಣ!

ರಾಜ್ಯ ಸರ್ಕಾರ ಮಹಿಳೆಯರಿಗೆ ಅನುಕೂಲ ಕಲ್ಪಿಸಲು ‘ಶಕ್ತಿ’ ಯೋಜನೆ ಜಾರಿಗೊಳಿಸಿದೆ. ಉಚಿತ ಬಸ್‌ ಪ್ರಯಾಣ ಸೌಲಭ್ಯ ಪುರುಷರಿಗೆ ಏಕಿಲ್ಲ ಎಂಬ ಪ್ರಶ್ನೆ ಸಹಜ. ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ಬಸ್‌ ಪ್ರಯಾಣ ದರದಲ್ಲಿ ಶೇ 50ರಷ್ಟು ರಿಯಾಯಿತಿ ಸೌಲಭ್ಯವಿದೆ. ಕರ್ನಾಟಕ ರಾಜ್ಯ ಸರ್ಕಾರವು, ಮಹಿಳೆಯರು ಮತ್ತು ಪುರುಷರಿಗೆ ತಲಾ ಶೇ 50ರಷ್ಟು ರಿಯಾಯಿತಿ ದರದಲ್ಲಿ ಬಸ್‌ ಪ್ರಯಾಣ ಸೌಲಭ್ಯ ಒದಗಿಸಿದರೆ, ಇಬ್ಬರನ್ನೂ ಸಮಾನವಾಗಿ ನೋಡಿದಂತಾಗುತ್ತದೆ. ಜೊತೆಗೆ, ಸಾರಿಗೆ ನಿಗಮಗಳ ವೆಚ್ಚ ಸರಿದೂಗಿಸಲು ಸಹಕಾರಿಯಾಗಲಿದೆ.  

-ಎಸ್.ಎಂ. ಚಂದ್ರಮೌಳಿ, ಕೆಂಚಮಲ್ಲನಹಳ್ಳಿ

****

ಮೀಸಲಾತಿ: ಕನ್ನಡಿಯೊಳಗಿನ ಬ್ರಹ್ಮಗಂಟು 

ಸಂವಿಧಾನದತ್ತವಾದ ಮೀಸಲಾತಿ ಸೌಲಭ್ಯ ಪಡೆಯಲು ಹಿಂದುಳಿದ ವರ್ಗಗಳಿಗೆ ನೂರೆಂಟು ತೊಡಕು. ಈ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಕುರಿತ ಸಮರ್ಪಕ ಅಂಕಿಅಂಶಗಳು ಸರ್ಕಾರದ ಬಳಿ ಇಲ್ಲ. ಹಳೆಯ ಅಂಕಿಅಂಶ ಆಧರಿಸಿ ಮೀಸಲಾತಿ ನೀಡಲು ಅವಕಾಶ ಇಲ್ಲ.

ಆಡಳಿತ ಪಕ್ಷದೊಳಗಿರುವ ಮುಂದುವರಿದ ಸಮುದಾಯಗಳ ನಾಯಕರ ಹುನ್ನಾರದಿಂದ ಕಾಂತರಾಜು ವರದಿ ಮೂಲೆಗೆ ಸರಿಯಿತು. ಈಗ ಹೊಸ ಸಮೀಕ್ಷೆಯನ್ನೂ ಮುಂದೂಡುವಂತೆ ಪ್ರಬಲ ಜಾತಿಗಳು ಶತ ಪ್ರಯತ್ನ ನಡೆಸುತ್ತಿವೆ. ಆಡಳಿತದಲ್ಲಿ ಇರುವವರೇ ಅವರ ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ತಮ್ಮ ಜಾತಿ ಸಭೆಯಲ್ಲಿ ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೆ. ಈ ರೀತಿ ಅಡ್ಡಗಾಲು ಹಾಕುವುದರಿಂದ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಮೀಸಲಾತಿಯು ಕನ್ನಡಿಯೊಳಗಿನ ಗಂಟಾಗಿ ಗೋಚರಿಸುತ್ತಿದೆ.

- ಗಣಪತಿ ನಾಯ್ಕ್, ಕಾನಗೋಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.