ADVERTISEMENT

ವಾಚಕರ ವಾಣಿ | ಎಲ್ಲಿ ಹೋಯಿತು ‘ಭಾರತ್‌ ರೈಸ್‌’?

ವಾಚಕರ ವಾಣಿ
Published 13 ಮೇ 2025, 0:30 IST
Last Updated 13 ಮೇ 2025, 0:30 IST
ಅಕ್ಕಿ
ಅಕ್ಕಿ   

ದಿಟ್ಟ ಮಹಿಳೆಯರ ಹಿಂದಿನ ಧ್ವನಿ

ವಾಯುಪಡೆ ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಮತ್ತು ಭಾರತೀಯ ಸೇನೆಯ ಕರ್ನಲ್‌ ಸೋಫಿಯಾ ಖುರೇಷಿ ಇಬ್ಬರೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಸ್ಥಿತಿಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ
ಇತ್ತೀಚೆಗೆ ಮಾತನಾಡಿದರು. ಇಂತಹದ್ದೊಂದು ಕ್ಷಣ ಸಾಧ್ಯವಾದದ್ದು ಇನ್ನಿಬ್ಬರು ಧೈರ್ಯವಂತ ಮಹಿಳೆಯರ ಕಾರಣದಿಂದ ಎಂಬುದು ಗಮನಾರ್ಹ. ಅವರನ್ನು ನಾವು ಆದರದಿಂದ ನೆನೆಯಬೇಕು.

ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಬಹುಕಾಲದ ಹಿಂದೆ ಸಮಾಜದ ಕಟ್ಟುಪಾಡುಗಳನ್ನು ಎದುರಿಸಿ ನಿಂತವರು. ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಮ್ಮ ದೇಶದಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡಲು ಹೋರಾಡಿದರು. ಅವರ ಹೋರಾಟ, ಧೈರ್ಯ ಇಂದು ಪ್ರತಿ ಮಹಿಳೆಯಲ್ಲಿ ಪ್ರತಿಧ್ವನಿಸುತ್ತಿದೆ. ಅದರಂತೆ, ವ್ಯೋಮಿಕಾ ಮತ್ತು ಸೋಫಿಯಾ ಇಂದು ತಂಡ ನಾಯಕರಾಗಿ, ಭಾರತ ಸೇನೆಯಲ್ಲಿ ದೇಶಕ್ಕೆ ಸೇವೆ ಸಲ್ಲಿಸುವವರಾಗಿ ನಿಂತಿದ್ದಾರೆ.

ADVERTISEMENT

-ಪ್ರಕಾಶ ಅರಸ್, ಬೆಂಗಳೂರು

****

ಇ– ಆಸ್ತಿ: ಆನ್‌ಲೈನ್‌ ಪಾವತಿಗೆ ಅವಕಾಶವಿರಲಿ

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಖಾಸಗಿ ಆಸ್ತಿಗಳನ್ನು ಇ– ಆಸ್ತಿ ತಂತ್ರಾಂಶದಲ್ಲಿ ದಾಖಲಿಸುತ್ತಿರುವುದು ಉತ್ತಮವಾದ ಕೆಲಸ. ಆದರೆ ಆಸ್ತಿ ಮಾಲೀಕರು ಅವರ ಆಸ್ತಿಗಳ ತೆರಿಗೆ ಪಾವತಿಸಲು ಪ್ರತಿವರ್ಷ ಚಲನ್ ಪಡೆದು, ಅದನ್ನು ಪಾವತಿಸಲು ಸಂಬಂಧಿಸಿದ ಬ್ಯಾಂಕ್‌ಗೆ ತೆರಳಿ ಸರದಿಯಲ್ಲಿ ನಿಲ್ಲಬೇಕಿದೆ. ನಂತರ ಇ– ಆಸ್ತಿ ನಮೂನೆ– 2/3 ಪಡೆಯಲು ಮತ್ತೆ ಕಚೇರಿಗೆ ತೆರಳಿ ತೆರಿಗೆ ಅಪ್‌ಡೇಟ್ ಮಾಡಿಸಬೇಕಿದೆ. ಇದಕ್ಕೆ ಬಹಳಷ್ಟು ಸಮಯ ತಗಲುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಆಗಿ, ತೆರಿಗೆ ಸಂಗ್ರಹ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಆದ್ದರಿಂದ ಸಾರ್ವಜನಿಕರು ಸುಲಭವಾಗಿ ಇ– ಆಸ್ತಿ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ತೆರಿಗೆ ಪಾವತಿಸಿ ನಮೂನೆ– 2/3 ಪಡೆಯಲು ಅವಕಾಶ ಕಲ್ಪಿಸಬೇಕು. ಇದರಿಂದ ಸಾರ್ವಜನಿಕರಿಗೆ ಸಮಯ ಉಳಿತಾಯವಾಗುತ್ತದೆ ಮತ್ತು ಅನುಕೂಲವಾಗುತ್ತದೆ. ನಗರ ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹದ ಗುರಿ ತಲುಪಲು ಸಹ ಸಾಧ್ಯವಾಗುತ್ತದೆ.

-ನಯನ ಮಧು, ದೊಡ್ಡಬಳ್ಳಾಪುರ

****

ಎಲ್ಲಿ ಹೋಯಿತು ‘ಭಾರತ್‌ ರೈಸ್‌’?

ಕೇಂದ್ರ ಸರ್ಕಾರ 2023ರಲ್ಲಿ ‘ಭಾರತ್ ರೈಸ್‌’ ಎಂಬ ಹೆಸರಿನಲ್ಲಿ 10 ಕೆ.ಜಿ. ಮೂಟೆಗೆ ₹290ರಂತೆ ದಪ್ಪಕ್ಕಿಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ರಿಲಯನ್ಸ್ ಮಳಿಗೆಗಳಲ್ಲಿ ಇದು ಗ್ರಾಹಕರಿಗೆ
ಲಭ್ಯವಾಗುತ್ತಿತ್ತು. ಗುಣಮಟ್ಟವೂ ಚೆನ್ನಾಗಿತ್ತು. ಇದೇ ರೀತಿಯ ಅಕ್ಕಿಗೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹45 ಮೇಲ್ಪಟ್ಟು ತೆರಬೇಕಾಗು ತ್ತಿತ್ತು. ಅನ್ನಭಾಗ್ಯದ ಯೋಗವಿಲ್ಲದಂತಹ ನಮ್ಮಂತಹ ಮಧ್ಯಮ ವರ್ಗದ ಜನರಿಗೆ ಇದು ಬಹಳಷ್ಟು ಅನುಕೂಲಕರವಾಗಿತ್ತು. ಕೆಲವೇ ತಿಂಗಳಲ್ಲಿ ಈ ಅಕ್ಕಿಯ ಲಭ್ಯತೆ ಇಲ್ಲವಾಯಿತು. ಆಮೇಲೆ ಹಲವು ದಿನಗಳ ನಂತರ ಪುನಃ ಲಭ್ಯವಾಗಲು ಪ್ರಾರಂಭವಾಯಿತು. ಆದರೆ ಬೆಲೆ ₹340 ಆಗಿತ್ತು. ಈಗ ಮೂರು ತಿಂಗಳಿನಿಂದ ಅದೂ ಇಲ್ಲವಾಗಿದೆ. ಯಾಕೆ ಹೀಗೆ? ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರು ಈ ಬಗ್ಗೆ ಗಮನಹರಿಸಬೇಕು.

-ಗೋಸಾಡ ಕೃಷ್ಣ ಭಟ್, ಬೆಂಗಳೂರು

****

ಮರೆಯಾಗುತ್ತಿದೆ ನಾಗರಿಕ ಪ್ರಜ್ಞೆ

ನಾಗರಿಕ ಪ್ರಜ್ಞೆ ನೇಪಥ್ಯಕ್ಕೆ ಸರಿಯುತ್ತಿರುವುದನ್ನು ಸಿಬಂತಿ ಪದ್ಮನಾಭ ಕೆ.ವಿ. ಅವರ ಲೇಖನ (ಸಂಗತ,
ಮೇ 10) ಚೆನ್ನಾಗಿ ತೆರೆದಿಟ್ಟಿದೆ. ಅವರು ಹೇಳಿದಂತೆ ಇಂದಿನ ಪೀಳಿಗೆ ನಾಗರಿಕ ಪ್ರಜ್ಞೆಯನ್ನು ಮರೆತು ಬದುಕುತ್ತಿದೆ. ಯಾವ ಅಪರಾಧ ಭಾವವೂ ಇಲ್ಲದೆ ಸಾರ್ವಜನಿಕ ಸೇವೆಗಳನ್ನು ಬಳಸಿಕೊಳ್ಳುತ್ತಿರುವ ಜವಾಬ್ದಾರಿ ಮರೆತ ಯುವಪೀಳಿಗೆಯನ್ನು ಕಂಡಾಗ ವಿಷಾದವಾಗುತ್ತದೆ. ತಿಂದ ಪ್ಲಾಸ್ಟಿಕ್ ತಟ್ಟೆ ಲೋಟ, ಕುಡಿದ ನೀರಿನ ಬಾಟಲಿ ಬಿಸಾಡುವುದು, ಎಲ್ಲೆಂದರಲ್ಲಿ ಉಗಿಯುವುದು, ಶೌಚಾಲಯದ ಬಳಕೆಯನ್ನಂತೂ ಕೇಳುವುದೇ ಬೇಡ. ಅದನ್ನು ಬಳಸಿದ ಮೇಲೆ ನೀರನ್ನು ಹಾಕಬೇಕೆಂಬ ಕನಿಷ್ಠ ಸಾಮಾನ್ಯ ಪ್ರಜ್ಞೆಯೂ ಎಷ್ಟೋ ಜನರಿಗೆ ಇರುವುದಿಲ್ಲ. ಅಷ್ಟೇ ಅಲ್ಲದೆ, ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ನಾಗರಿಕ ಪ್ರಜ್ಞೆಯ ಬಗ್ಗೆ ಪದೇ ಪದೇ ಅರಿವಿನ ಪಾಠಗಳನ್ನು ಮಾಡಲಾಗುತ್ತಿದೆ. ಜೊತೆಗೆ ವಿಶೇಷ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ. ಎನ್ಎಸ್ಎಸ್ ಮತ್ತು ಎನ್‌ಸಿಸಿಯಂತಹ ಕಾರ್ಯಕ್ರಮಗಳ ಅಡಿಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುತ್ತಿದ್ದರೂ ಕೆಲವು ಮಕ್ಕಳು ಇಂತಹ ಸಂದರ್ಭದಲ್ಲೂ ಕೆಲವೊಮ್ಮೆ ನಾಗರಿಕ ಪ್ರಜ್ಞೆ ಮರೆತಂತೆ ವರ್ತಿಸುತ್ತಾರೆ. ವಯಸ್ಸಿನ ಅಂತರ ಇಲ್ಲದೆ ವರ್ತಿಸುವ, ಕನಿಷ್ಠ ಗೌರವವನ್ನೂ ನೀಡದೆ, ತಪ್ಪನ್ನು ತಿಳಿಸಿದಾಗ ಅವರ ಮೇಲೆಯೇ ಜಗಳಕ್ಕೆ ಇಳಿಯುವ, ತಂಪುಪಾನೀಯಗಳ ಜೊತೆ ಮತ್ತೇರಿಸುವ ಮದ್ಯವನ್ನು ಮಿಶ್ರಣ ಮಾಡಿ ಕುಡಿದು ತರಗತಿಗಳಿಗೆ ಹಾಜರಾಗುವ ಯುವಪೀಳಿಗೆಯನ್ನು ಕಂಡಾಗ, ನಾವು ಏನನ್ನು ಕಲಿಸುತ್ತಿದ್ದೇವೆ ಎಂಬ ಸಂಶಯ ಮೂಡುತ್ತದೆ.

ಯಾವುದೋ ಲೋಕದಲ್ಲಿ ತೇಲುತ್ತಾ ಮತ್ತಿನಲ್ಲಿ ವಾಹನ ಚಲಾಯಿಸುವುದು ಇಂದು ಸರ್ವೇಸಾಮಾನ್ಯವಾಗಿದೆ. ಇದನ್ನು ಮಾಡುತ್ತಿರುವವರು ಏನೂ ಗೊತ್ತಿಲ್ಲದ ಮುಗ್ಧರಲ್ಲ. ಬದಲಿಗೆ ಪದವಿಗಳನ್ನು ಪಡೆದುಕೊಂಡು ಒಳ್ಳೆಯ ಉದ್ಯೋಗದಲ್ಲಿ ಇರುವ ನವ ನಾಗರಿಕರೇ ಆಗಿರುತ್ತಾರೆ. ಅಂತಹವರೇ ಇಂದು ಪರಿಸರಕ್ಕೆ ಮಾರಕವಾಗಿ ವರ್ತಿಸು ತ್ತಿರುವುದು ವಿಷಾದದ ಸಂಗತಿ. ಬಾಳೆಹಣ್ಣು ತಿಂದು ಸಿಪ್ಪೆಯನ್ನು ರಸ್ತೆಯಲ್ಲಿ ಬಿಸಾಡುವ, ಸಿಗರೇಟ್ ಸೇದಿ ಇತರರ ಮುಖಕ್ಕೆ ಹೊಗೆ ಬಿಡುವ, ಶಾಲಾ–ಕಾಲೇಜುಗಳ ಬೀದಿ ಬದಿಗಳಲ್ಲಿ ವಾಹನಗಳ ಮೇಲೆ ಕೇಕ್ ಕಟ್ ಮಾಡಿ ಮುಖಗಳಿಗೆ ಬಳಿದುಕೊಂಡು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಯುವಜನರನ್ನು ಕಂಡಾಗ, ಇವರಿಗೆ ಯಾವ ಲಂಗು ಲಗಾಮೂ ಇಲ್ಲವೆಂದು ಅನ್ನಿಸುತ್ತದೆ. ಬಸ್ ನಿಲ್ದಾಣಗಳಲ್ಲಿ, ರಸ್ತೆಯ ಅಕ್ಕಪಕ್ಕ ಇದನ್ನೆಲ್ಲ ನೋಡುತ್ತಾ ಹಿರಿಯ ನಾಗರಿಕರು ಮುಜುಗರದಿಂದ ಓಡಾಡುವ ಪರಿಸ್ಥಿತಿ ಬಂದಿದೆ. ಇಂತಹ ಯುವಜನ ದೇಶವನ್ನು ಕಾಪಿಡುವ ಬಗೆ ಹೇಗೆ? ಅವರ ಮುಂದಿನ ಭವಿಷ್ಯವನ್ನು ನೆನೆಸಿಕೊಂಡರೆ ಆತಂಕವಾಗುತ್ತದೆ. ಇದನ್ನೆಲ್ಲ ಹೇಗೆ ತಡೆಯುವುದು ಎಂಬುದೇ ನಮ್ಮ ಮುಂದಿರುವ ಸವಾಲು.

-ಎಚ್.ಎಸ್.ಸನತ್ ಕುಮಾರ್, ಚಂದಾಪುರ

****

ಸಲೀಸ್‌– ಮಟಾಷ್‌!

‘ಕೆಮ್ಮಿದ್ರೆ ಖಲಾಸ್’
‘ಉಗ್ರರು ಉಡೀಸ್’
ಕನ್ನಡ ಸುದ್ದಿವಾಹಿನಿಗಳಿಗೆ
ಸಕಲವೂ ಸಲೀಸ್!
(ಜೊತೆಗೆ, ಕನ್ನಡ
‘ಮಟಾಷ್’!)

 ಎಚ್.ಆನಂದರಾಮ ಶಾಸ್ತ್ರೀ

 ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.