ಗೂಗಲ್ ಡೂಡಲ್
ಚಿತ್ರ ಕೃಪೆ –ಗೂಗಲ್
ಕನ್ನಡಕ್ಕೆ ಈಗ ಗೂಗಲ್ ಸಂಕಷ್ಟ
ಬೆಂಗಳೂರು ನಗರ ಸಾರಿಗೆ ಬಸ್‌ನ ಎಲೆಕ್ಟ್ರಾನಿಕ್ ಡಿಸ್‌ಪ್ಲೇ ಬೋರ್ಡ್‌ನಲ್ಲಿ, ನಿಲ್ದಾಣದ ಹೆಸರನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಗೂಗಲ್ ಮೂಲಕ ಅನುವಾದ ಮಾಡಿದ್ದರಿಂದ ಉಂಟಾದ ಅವಾಂತರದ ಬಗ್ಗೆ ಮಂಜುನಾಥ ಎಸ್.ಎಸ್. ಗಮನ ಸೆಳೆದಿದ್ದಾರೆ (ವಾ.ವಾ., ಮೇ 14). ಇದು, ಕನ್ನಡಿಗರ ಮತ್ತು ಆಡಳಿತದಲ್ಲಿ ಕನ್ನಡವನ್ನು ಜಾರಿಗೊಳಿಸಲು ಕಟಿಬದ್ಧವಾಗಿರುವ ಕರ್ನಾಟಕ ಸರ್ಕಾರದ ಕಣ್ಣು ತೆರೆಸಬೇಕು. ಏಳು ಕೋಟಿ ಕನ್ನಡಿಗರು ಇರುವ ಕರ್ನಾಟಕದಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಲು ಗೂಗಲ್ ಸಹಾಯ ಯಾಚಿಸುವುದು ಕನ್ನಡಿಗರ ದೌರ್ಭಾಗ್ಯ.
ವರ್ಷಗಳ ಹಿಂದೆ ಒಂದು ಶಾಲೆಯ ಎದುರಿಗೆ ನಗರಸಭೆಯವರು ‘ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು’ ಎಂದು ಫಲಕ ಹಾಕುವ ಬದಲು, ಅದನ್ನು ಗೂಗಲ್ ಮೂಲಕ ಅನುವಾದಿಸಿ ‘ಇಲ್ಲಿ ಮೂತ್ರ ತೇರ್ಗಡೆ ಹೊಂದಿಲ್ಲ’ ಎಂದು ಹಾಕಿ ಜಾಲತಾಣದಲ್ಲಿ ಯದ್ವಾತದ್ವಾ ಛೇಡಿಸಿಕೊಂಡಿದ್ದರು. ಇದು ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿರುವುದನ್ನು ಸೂಚಿಸುತ್ತದೆಯೋ ನಮ್ಮ ಅಧಿಕಾರಿಶಾಹಿಯ ಕನ್ನಡದ ಜ್ಞಾನದ ಮಟ್ಟವನ್ನು ತಿಳಿಸುತ್ತದೆಯೋ ತಿಳಿಯದು. ತಪ್ಪು ಮಾಡುವುದು ಸಹಜ. ಆದರೆ ಇದು ಸಂಬಂಧಪಟ್ಟವರ ಅರಿವಿಗೆ ಬಾರದಿರುವುದು ಮಾತ್ರ ತೀರಾ ಆಶ್ಚರ್ಯಕರ.
-ರಮಾನಂದ ಶರ್ಮಾ, ಬೆಂಗಳೂರು
****
ಜಾತಿ ಜನಗಣತಿ: ಸಾರ್ವಜನಿಕರೇ ಮಾಹಿತಿ ನಮೂದಿಸಲಿ
ರಾಜ್ಯದಲ್ಲಿ ಈಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭವಾಗಿದೆ. ಯಥಾಪ್ರಕಾರ ಈ ಜವಾಬ್ದಾರಿ
ಯನ್ನು ಸರ್ಕಾರವು ಶಿಕ್ಷಕರಿಗೇ ವಹಿಸಿದೆ. ಆದರೆ ಈ ಕಾರ್ಯನಿರ್ವಹಣೆಗೆ ಮನೆ ಮನೆಗೆ ಅಲೆದಾಡುತ್ತಿರುವ ಶಿಕ್ಷಕರು
ಸಾರ್ವಜನಿಕರಿಂದ ನಿಂದನೆಗೆ ಗುರಿಯಾಗುತ್ತಿದ್ದಾರೆ. ಸರ್ಕಾರ ವಹಿಸಿದ ಕೆಲಸವನ್ನು ಅವರು ಮಾಡುತ್ತಿದ್ದಾರೆ ಅಷ್ಟೇ. ಇದು ಸಾರ್ವಜನಿಕರಿಗೆ ತಿಳಿದಿಲ್ಲದ ವಿಚಾರವೇನಲ್ಲ. ಅವರ ರಾಜಕೀಯ ಒಲವು ನಿಲುವುಗಳನ್ನು ಅಸಹಾಯಕ ಶಿಕ್ಷಕರ ಮೇಲೆ ತೋರಿಸುವುದು ಸರಿಯಲ್ಲ.
ಜಾತಿ ಜನಗಣತಿ ಕಾರ್ಯ ಮಾಡುವವರು ನೇರವಾಗಿ ಆನ್‌ಲೈನ್‌ನಲ್ಲಿಯೇ ಮಾಹಿತಿಯನ್ನು ನಮೂದಿಸುವಂತೆ ಆಗಬೇಕು. ಕಾಗದದ ಮೇಲೆ ಬರೆದುಕೊಂಡು ಮತ್ತೆ ಅದನ್ನು ಆನ್‌ಲೈನ್‌ನಲ್ಲಿ ನಮೂದಿಸುವಾಗ ಮಾಹಿತಿಯನ್ನು ನಿಖರವಾಗಿ ದಾಖಲಿಸುತ್ತಾರೆ ಎಂಬುದನ್ನು ಖಚಿತವಾಗಿ ಹೇಳಲಾಗದು. ಈ ಜವಾಬ್ದಾರಿಯನ್ನು ನಾಗರಿಕರಿಗೆ ವಹಿಸುವುದು ಇನ್ನೂ ಒಳ್ಳೆಯದು. ಜಾತಿ, ಉಪಜಾತಿ, ಶೈಕ್ಷಣಿಕ ಮಾಹಿತಿಯ ಜೊತೆಗೆ ಬೇರೆ ಮಾಹಿತಿಯ ಅಗತ್ಯ ಇದ್ದರೆ ಅದನ್ನೂ ಸಾರ್ವಜನಿಕರೇ ಆಧಾರ್ ಕೇಂದ್ರಗಳಿಗೆ ತೆರಳಿ ನಮೂದಿಸುವಂತೆ ಮಾಡಿದರೆ ಸರ್ಕಾರಕ್ಕೆ ಹಣದ ಉಳಿತಾಯವಾಗುತ್ತದೆ. ಶಿಕ್ಷಕರ ಅಲೆದಾಟ, ಸಾರ್ವಜನಿಕರಿಂದ ಅವರು ನಿಂದನೆಗೆ ಒಳಗಾಗುವುದು ತಪ್ಪುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಸಾರ್ವಜನಿಕರೇ ಖುದ್ದಾಗಿ ತೆರಳಿ ಮಾಹಿತಿ ದಾಖಲಿಸುವುದರಿಂದ ಶೇಕಡ 100ರಷ್ಟು ಖಚಿತತೆ ಸಿಗುತ್ತದೆ.
-ಆಶ್ರಯ್ ಬಿ.ಎಸ್., ಬೆಂಗಳೂರು
****
ಆನೆಪಥ ಪುನರುಜ್ಜೀವನಕ್ಕೆ ಸಿಗಲಿ ಆದ್ಯತೆ
ಭದ್ರಾ ಅಭಯಾರಣ್ಯ ವ್ಯಾಪ್ತಿಯ ಎರಡು ಸಾವಿರ ಹೆಕ್ಟೇರ್ ಕಾಡಿನಲ್ಲಿ ‘ಆನೆ ವಿಹಾರಧಾಮ’ ಸ್ಥಾಪಿಸಲು ಅರಣ್ಯ ಇಲಾಖೆ ಮುಂದಾಗಿರುವುದು ವರದಿಯಾಗಿದೆ. ಉತ್ತರ ಕನ್ನಡದ ದಾಂಡೇಲಿ–ಕಿರವತ್ತಿ–ಹಾನಗಲ್ ಆನೆ ಕಾರಿಡಾರ್ ಪ್ರದೇಶದ ಸಣ್ಣರೈತನಾಗಿ ಹಾಗೂ ಇಲ್ಲಿನ ಮಾನವ-ಆನೆ ಸಂಘರ್ಷವನ್ನು ಕಳೆದೊಂದು ದಶಕದಿಂದ ಅಭ್ಯಸಿಸುತ್ತಿರುವವನಾಗಿ, ನನ್ನ ಅನುಭವ ಹಾಗೂ ಅಭಿಪ್ರಾಯದಲ್ಲಿ ಈ ಯೋಜನೆ ಸೂಕ್ತವೆಂದು ತೋರುವುದಿಲ್ಲ. ಆನೆಗೆ ವಿಶಾಲ ಕಾಡಿನ ಆವಾಸಸ್ಥಾನ ಬೇಕು. ಅಲ್ಲಿ ನಿಯಮಿತವಾಗಿ ಸಂಚರಿಸುವುದು ಅದರ ಜೀವನಚಕ್ರದ ಭಾಗ.
ಅಂಥ ಆನೆಪಥ ಪ್ರದೇಶಗಳ ನೈಸರ್ಗಿಕ ಅರಣ್ಯ ಹಾಗೂ ಜಲಮೂಲವನ್ನು ಸಂರಕ್ಷಿಸಿ, ಆನೆಗೆ ಆಹಾರ ಒದಗಿಸುವ ಬಿದಿರು, ಫಲವೃಕ್ಷಗಳನ್ನು ಬೆಳೆಸಿದರೆ ಸಂಘರ್ಷವನ್ನು ತಗ್ಗಿಸಲು ಸಾಧ್ಯ. ಜೊತೆಗೆ, ಆ ಪ್ರದೇಶದ ಕೃಷಿಕರಿಗೆ ಬಲಿಷ್ಠ ತಡೆಬೇಲಿ ರಚಿಸಲು ಸಹಾಯ, ಸೂಕ್ತಬೆಳೆ ಬೆಳೆಸಲು ಪ್ರೋತ್ಸಾಹ ಹಾಗೂ ಬೆಳೆನಾಶವಾದಲ್ಲಿ ಸೂಕ್ತ ಪರಿಹಾರ ನೀಡಿದರೆ, ರೈತರೂ ಆನೆ ಸಂರಕ್ಷಣೆ ಕಾರ್ಯದಲ್ಲಿ ಕೈಜೋಡಿಸುತ್ತಾರೆ. ಸಹಾಯಧನ, ಪರಿಹಾರ ನೀಡುವಲ್ಲಿ ಅನಾದರ ಹಾಗೂ ಅಸಡ್ಡೆ ತೋರದೆ ರೈತಸ್ನೇಹಿಯಾದರೆ, ಸರ್ಕಾರದೊಂದಿಗೆ ಕೈಜೋಡಿಸಲು ಸದಾ ಸಿದ್ಧವೆಂಬುದನ್ನು ಉತ್ತರ ಕನ್ನಡದ ರೈತರು–ವನವಾಸಿಗಳು ತೋರಿಸಿದ್ದಾರೆ.
ಆದರೆ, ಇಂಥ ನಿಸರ್ಗಸ್ನೇಹಿ ಸುಸ್ಥಿರ ನೀತಿ ಅನುಸರಿಸುವ ಬದಲು, ₹ 53 ಕೋಟಿ ವೆಚ್ಚದಲ್ಲಿ ‘ಕೃತಕ ಆನೆಧಾಮ’ ರಚಿಸಲು ಅರಣ್ಯ ಇಲಾಖೆ ಮುಂದಾಗಿರುವುದು ಅವೈಜ್ಞಾನಿಕ. ನೂರಾರು ಆನೆಗಳಿಗೆ ಅದು ಸಣ್ಣ ಬಂದಿಖಾನೆಯಾಗಿ, ಹಸಿವು, ಕಾದಾಟ ಹಾಗೂ ರೋಗದಿಂದ ಅವು ಸಾಯುವುದು ನಿಶ್ಚಿತ. ಇತ್ತ, ರೈತರ ಹೊಲದಲ್ಲಿ ಹಂದಿ, ಕಾಡೆಮ್ಮೆ, ಮಂಗದಂತಹ ವನ್ಯಜೀವಿ ಸಂಘರ್ಷವೇನೂ ತಗ್ಗುವುದಿಲ್ಲ! ಹೀಗಾಗಿ, ಅರಣ್ಯ ಸಚಿವರು ಈ ಯೋಜನೆಯನ್ನು ತಕ್ಷಣ ತಡೆಹಿಡಿದು, ಪುನಃ ಸಮಾಲೋಚನೆ ಮಾಡಿ, ಮಲೆನಾಡಿನ ಎಲ್ಲ ಆನೆಪಥಗಳನ್ನು ಜನಸಹಭಾಗಿತ್ವದಲ್ಲಿ ಪುನರುಜ್ಜೀವನಗೊಳಿಸುವ ನಿಸರ್ಗಸ್ನೇಹಿ ಯೋಜನೆ ರೂಪಿಸಬೇಕು.
-ಕೇಶವ ಎಚ್. ಕೊರ್ಸೆ, ಶಿರಸಿ
****
ವಕ್ಫ್ ಮಂಡಳಿಗೆ ಬೇಕು ಆನ್‌ಲೈನ್ ವ್ಯವಸ್ಥೆ
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಸಂಪೂರ್ಣವಾಗಿ ಆನ್‌ಲೈನ್ ವ್ಯವಸ್ಥೆಗೆ ಒಳಪಡಬೇಕು ಎಂಬುದು ಹಲವು ವರ್ಷಗಳಿಂದ ಮುಸ್ಲಿಂ ಸಮುದಾಯದ ಬೇಡಿಕೆಯಾಗಿದೆ. ಈ ಹಿಂದೆ ಸ್ವಲ್ಪಮಟ್ಟಿಗೆ ಈ ವ್ಯವಸ್ಥೆ ಇತ್ತಾದರೂ ನಂತರ ಅದು ಸ್ಥಗಿತಗೊಂಡಿದೆ. ಮಂಡಳಿಯ ಈಗಿನ ಜಾಲತಾಣವು ಬರೀ ಅಧ್ಯಕ್ಷರು, ಸದಸ್ಯರು, ಕಾರ್ಯನಿರತ ಅಧಿಕಾರಿಗಳು, ಸಂಪರ್ಕ ಸಂಖ್ಯೆಗಳಿಗೆ ಮೀಸಲಾಗಿದೆಯೇ ವಿನಾ ಮಂಡಳಿಯ ಯಾವುದೇ ಸುತ್ತೋಲೆ, ಆದೇಶ, ನೂತನ ಕಾರ್ಯಚಟುವಟಿಕೆಗಳ ಮಾಹಿತಿಯನ್ನು ನೀಡುವುದಿಲ್ಲ ಹಾಗೂ ಸಾರ್ವಜನಿಕ ಕುಂದುಕೊರತೆಯನ್ನು ಪರಿಹರಿಸುವಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ಮಂಡಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಪಡೆಯಬೇಕಾದರೂ ಬೆಂಗಳೂರಿಗೇ ಹೋಗಬೇಕಾಗುತ್ತದೆ. ಅನುದಾನ ಯಾರಿಗೆಲ್ಲ ಬಿಡುಗಡೆಯಾಗಿದೆ ಎಂಬ ಮಾಹಿತಿ ಪಡೆಯಲು ಸ್ಥಳೀಯ ಸಮಿತಿಗಳು ಸಹ ಬೆಂಗಳೂರಿನತ್ತ ಮುಖ ಮಾಡಬೇಕು. ಈ ಪರಿಸ್ಥಿತಿ ಬದಲಾಗಬೇಕೆಂದರೆ, ಮಂಡಳಿಯನ್ನು ಸಂಪೂರ್ಣವಾಗಿ ಆನ್‌ಲೈನ್ ವ್ಯವಸ್ಥೆಗೆ ಒಳಪಡಿಸಬೇಕು.
-ಅಬ್ದುಲ ರಝಾಕ ಡಿ. ಟಪಾಲ, ಕೆರೂರು, ಬಾದಾಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.