ADVERTISEMENT

ವಾಚಕರ ವಾಣಿ | ಹೃದಯದ ಸಮಸ್ಯೆ: ಸಂಶೋಧನೆ ಅಗತ್ಯ

ವಾಚಕರ ವಾಣಿ
Published 16 ಮೇ 2025, 0:30 IST
Last Updated 16 ಮೇ 2025, 0:30 IST
ಹೃದಯದ ಬಗ್ಗೆ...
ಹೃದಯದ ಬಗ್ಗೆ...   

ಇಂಥ ಮಕ್ಕಳ ಸಂತತಿ ಹೆಚ್ಚಲಿ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಈಚಘಟ್ಟ ಗ್ರಾಮದಲ್ಲಿ ಇತ್ತೀಚೆಗೆ ಬಸವಣ್ಣನವರ ಜಯಂತ್ಯುತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ, ಪ್ರಸಕ್ತ ಸಾಲಿನ ಪಿಯುಸಿ ಹಾಗೂ ಎಸ್ಎಸ್ಎಲ್‌ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಇತ್ತು. ಅದು ಮುಗಿಯುತ್ತಿದ್ದಂತೆಯೇ, ಎಸ್ಎಲ್ಎಲ್‌ಸಿಯಲ್ಲಿ ಶೇ 92 ಅಂಕ ಗಳಿಸಿ ಅಭಿನಂದನೆ ಸ್ವೀಕರಿಸಿದ್ದ ವಿದ್ಯಾರ್ಥಿನಿಯೊಬ್ಬಳು ತನ್ನನ್ನು ಬೇಗ ಬಸ್ಸಿಗೆ ಹತ್ತಿಸುವಂತೆ ಅಪ್ಪನನ್ನು ಒಂದೇ ಸಮನೆ ಒತ್ತಾಯಿಸುತ್ತಿದ್ದಳು. ಕಾರಣ ಕೇಳಿದಾಗ, ಆಕೆಯೊಂದಿಗೆ ಓದುತ್ತಿದ್ದ ಸ್ನೇಹಿತೆಯೊಬ್ಬಳು ನಪಾಸಾಗಿದ್ದಳು. ಆಕೆಯನ್ನು ಚೆನ್ನಾಗಿ ಓದಿಸಿ, ಬರುವ ಮರುಪರೀಕ್ಷೆಯಲ್ಲಿ ಉತ್ತೀರ್ಣಳಾಗುವಂತೆ ಮಾಡಿ, ಮುಂದಿನ ತರಗತಿಗೆ ತನ್ನೊಂದಿಗೆ ಪ್ರವೇಶ ಪಡೆದುಕೊಳ್ಳಬೇಕೆಂಬ ಮಹದಾಸೆ ಆಕೆಗಿತ್ತು. ಅದಕ್ಕಾಗಿ ತರಬೇತಿ, ಓದಿನ ಬಗ್ಗೆ ಮಾರ್ಗದರ್ಶನ, ಧೈರ್ಯ ತುಂಬಲು ತಾನು ಅವಳೊಂದಿಗಿರಬೇಕು ಎಂಬ ಕಾರಣಕ್ಕೆ ತುರ್ತಾಗಿ ಹೋಗಬೇಕೆಂದು ಬಯಸುತ್ತಿರುವುದಾಗಿ ಆಕೆಯ ತಂದೆ ಹೇಳಿದರು.

ಇದನ್ನು ಕೇಳಿದಾಗ, ಇಂತಹ ವಿದ್ಯಾರ್ಥಿಗಳು ಈಗಲೂ ಇದ್ದಾರೆಯೇ ಎನಿಸಿ ಅಚ್ಚರಿಯಾಯಿತು. ಚೆನ್ನಾಗಿ ಓದುವವರನ್ನು ಕಂಡರೆ ಜೊತೆಗಾರರು ಅಸೂಯೆ, ದ್ವೇಷ, ಮತ್ಸರ ಪಡುವುದೇ ಹೆಚ್ಚು ಮತ್ತು ಪ್ರತಿಭಾವಂತ
ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಗೆ ಅಹಂಭಾವ ಇರುವುದುಂಟು. ಆದರೆ ಈ ಹೆಣ್ಣುಮಗಳು ಅದಕ್ಕಿಂತ ಭಿನ್ನವಾಗಿ ಕಂಡಳು. ಸ್ನೇಹಕ್ಕೆ ಆಕೆ ಕೊಟ್ಟಿರುವ ಮಹತ್ವ ಕಂಡು ಹೆಮ್ಮೆ ಎನಿಸಿತು. ಇಂತಹ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು. ಮನೆ ಹಾಗೂ ಶಾಲೆಯ ವಾತಾವರಣವೂ ಇಂತಹುದಕ್ಕೆ ಪೂರಕವಾಗಿ ಇರಬೇಕು.

ADVERTISEMENT

-ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

****

ಹೃದಯದ ಸಮಸ್ಯೆ: ಸಂಶೋಧನೆ ಅಗತ್ಯ

ಯುವಕರು, ನಡುವಯಸ್ಸಿನವರು, ಮಕ್ಕಳು ಹೃದಯಾಘಾತಕ್ಕೆ ಒಳಗಾಗುವ ಪ್ರಕರಣಗಳು ಇತ್ತೀಚೆಗೆ ತುಸು ಹೆಚ್ಚಿಗೆ ಕಂಡುಬರುತ್ತಿವೆ. ಚಿಕಿತ್ಸೆ ದೊರೆಯುವುದಕ್ಕೆ ಮೊದಲೇ ಕೆಲವರು ನಿಧನರಾಗುತ್ತಿರುವುದು ಆತಂಕ ಉಂಟುಮಾಡಿದೆ. ಇದರಿಂದ ಅನೇಕ ಕುಟುಂಬಗಳು ಅನಾಥವಾಗುತ್ತಿವೆ. ಕೆಲವರು ಇದಕ್ಕೆ ಕೊರೊನಾ ಲಸಿಕೆ ಕಾರಣ ಎಂದರೆ, ಕೆಲವರು ನಾವು ತಿನ್ನುವ ಆಹಾರವೇ ಕಾರಣ ಎನ್ನುತ್ತಾರೆ. ಯಾವುದಕ್ಕೂ ಖಚಿತವಾದ ಆಧಾರಗಳಿಲ್ಲ. ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಶೋಧನಾ ಸಂಸ್ಥೆಗಳು ಇದಕ್ಕೆ ಕಾರಣವನ್ನು ಕಂಡುಹಿಡಿದು, ಜನಸಾಮಾನ್ಯರಿಗೆ ಸೂಕ್ತವಾದ ಆರೋಗ್ಯ ಮಾಹಿತಿಯನ್ನು ನೀಡಬೇಕು. ಈ ಮೂಲಕ ಜೀವ ರಕ್ಷಣೆಗೆ ಮುಂದಾಗಬೇಕು.

-ಈ.ಬಸವರಾಜು, ಬೆಂಗಳೂರು

****

ಸಮ್ಮೇಳನ ವಿವಾದ: ಮುಕ್ತ ಚರ್ಚೆ ನಡೆಯಲಿ

ಮಂಡ್ಯದಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರವಾಗಿ ಅನೇಕ ಸಾಹಿತಿಗಳು, ವಿಚಾರವಂತರು ಹಾಗೂ ಪ್ರಗತಿಪರ ಸಂಘಟನೆಗಳ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಅದು ಈಗ ಬಹಿರಂಗಗೊಂಡು ಬೀದಿರಂಪವಾಗಿರುವುದು ಖೇದಕರ. ಏಕೆಂದರೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಘನತೆ, ಗೌರವವಿದೆ. ಹಾಗಾಗಿ ಅದರ ಘನತೆಯನ್ನು ಕಾಪಾಡಬೇಕಾದ ಹೊಣೆ ನಮ್ಮೆಲ್ಲರ ಮೇಲೆ, ಹೆಚ್ಚಾಗಿ ಕನ್ನಡ ಲೇಖಕರು, ವಿದ್ವಾಂಸರ ಮೇಲಿದೆ. ಅತ್ಯಂತ ಅದ್ದೂರಿ ಪ್ರಚಾರದೊಂದಿಗೆ ಈ ಬಾರಿ ಮಂಡ್ಯದಲ್ಲಿ ನಡೆದ ಸಮ್ಮೇಳನ ಬಹುತೇಕ ಯಶಸ್ವಿಯಾದರೂ ಎಲ್ಲವೂ ಸರಿಯಾಗಿ ನಡೆದಿಲ್ಲವೆಂಬುದು ಮೇಲ್ನೋಟಕ್ಕೆ ಗೋಚರವಾಗುತ್ತದೆ.

ಸಾಹಿತ್ಯ ಸಮ್ಮೇಳನದ ಖರ್ಚುವೆಚ್ಚ ಹಾಗೂ ಸಮ್ಮೇಳನದ ಸ್ಮರಣಸಂಚಿಕೆ ಬಿಡುಗಡೆ ವಿಳಂಬವು ಸಮಸ್ಯೆಯ ಕೇಂದ್ರಬಿಂದು. ಕಸಾಪ ಅಧ್ಯಕ್ಷರ ಬಗ್ಗೆಯೂ ಆರೋಪಗಳು ಕೇಳಿಬಂದಿವೆ. ಯಾವುದೇ ಸಮಸ್ಯೆ ಬಂದಾಗ ಚರ್ಚೆ ಮಾಡಿ ಪರಿಹರಿಸಿಕೊಳ್ಳುವುದು ಉತ್ತಮ. ಜಿಲ್ಲೆಯ ಎಲ್ಲ ಪ್ರಗತಿಪರ ಸಂಘಟನೆಗಳ ಮುಖಂಡರು, ಬುದ್ಧಿಜೀವಿಗಳು ಹಾಗೂ ಲೇಖಕರು ಕಸಾಪ ಅಧ್ಯಕ್ಷರನ್ನು ಮಂಡ್ಯಕ್ಕೆ ಬರಮಾಡಿಕೊಂಡು, ಒಂದೆಡೆ ಕುಳಿತು ಚರ್ಚಿಸಲಿ. ಅವರಿಂದ ಏನು ಉತ್ತರ ಬರುತ್ತದೆ ಎಂಬುದನ್ನು ಮನಗಂಡು ತದನಂತರ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಿ. ಮುಕ್ತ ಚರ್ಚೆಗೆ ಅನುವು ಮಾಡಿಕೊಟ್ಟರೆ ಸಮಸ್ಯೆ ಬಗೆಹರಿಯುವುದರ ಜೊತೆಗೆ ಜಿಲ್ಲೆಯ ಕನ್ನಡಿಗರ ಸ್ವಾಭಿಮಾನವನ್ನು
ಎತ್ತಿ ಹಿಡಿದಂತೆಯೂ ಆಗುತ್ತದೆ.

-ಕೆ.ಎಂ.ಕೃಷ್ಣ, ಕೀಳಘಟ್ಟ, ಮದ್ದೂರು

****

ಅಗ್ಗದ ಹೇಳಿಕೆಗಳಿಂದ ಇತಿಹಾಸ ಬದಲಾಗದು

ಮಹಾತ್ಮ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಯತ್ನಾಳ ಅವರಿಗೆ ಸದಾ ಯಾರನ್ನಾದರೂ ಉದ್ದೇಶಿಸಿ ಕೆಟ್ಟ ಭಾಷೆ ಬಳಸಿ ಮಾತನಾಡದಿದ್ದರೆ ಸಮಾಧಾನವಾಗುವಂತೆ ಕಾಣದು. ತಮ್ಮ ರಾಜಕೀಯ ಸಹೋದ್ಯೋಗಿಗಳು, ಎದುರಾಳಿಗಳ ಕುರಿತು ಅವಹೇಳನಕಾರಿ ಮಾತುಗಳನ್ನು ಆಡುವ ಮೂಲಕ ಪಕ್ಷದಿಂದ ಉಚ್ಚಾಟನೆಗೊಂಡಿದ್ದರೂ ಅವರು ಬದಲಾದಂತೆ ಕಾಣುವುದಿಲ್ಲ. ರಾಜಕೀಯ ಜೀವನದಲ್ಲಿ ಪಕ್ಷಾತೀತವಾಗಿ ಸಭ್ಯತೆ, ಸದಾಚಾರ, ಸನ್ನಡತೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಮಾಯವಾಗುತ್ತಿದೆ. ಈಗ ಯತ್ನಾಳ ಅವರ ಅವಹೇಳನಕಾರಿ ಮಾತುಗಳು ಗಾಂಧೀಜಿಯ ಕಡೆಗೆ ತಿರುಗಿವೆ.

ದೇಶ ವಿಭಜನೆ ವಿರುದ್ಧ ಗಾಂಧೀಜಿಯ ನಿಲುವು ಮತ್ತು ದೇಶದ ವಿಭಜನೆ ತಡೆಯಲು ಅವರು ಕೊನೇ ಗಳಿಗೆಯವರೆಗೆ ನಡೆಸಿದ ಪ್ರಯತ್ನಗಳು, ಹಿಂದೂ– ಮುಸ್ಲಿಂ ಏಕತೆಗಾಗಿ ಅವರ ಸತತ ಪ್ರಯತ್ನ, ದೇಶ ವಿಭಜನೆ ಅನಿವಾರ್ಯವಾಗುವಂತಹ ಬೆಳವಣಿಗೆಗಳು, ಅದಕ್ಕಾಗಿ ದೇಶ ತೆತ್ತ ಬೆಲೆ ಏನೆಂಬುದು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಓದಿದರೆ ತಿಳಿಯುತ್ತದೆ. ಆದರೆ ಇಂದಿನ ಬಹುತೇಕ ರಾಜಕಾರಣಿಗಳು ಓದುವುದನ್ನೇ ಮರೆತಿದ್ದಾರೆ ಮತ್ತು ಅವರಿಗೆ ಸತ್ಯ ಬೇಕಾಗಿಲ್ಲ. ಬರೀ ವಾಟ್ಸ್‌ಆ್ಯಪ್‌ ವಿಶ್ವವಿದ್ಯಾಲಯದಲ್ಲಿನ ತಿರುಚಿದ ಇತಿಹಾಸವನ್ನು ಓದುತ್ತಾ, ಗಾಂಧೀಜಿ ಅಂಥವರನ್ನು ಹೀಯಾಳಿಸಿ ಮಾತನಾಡುವುದೇ ಇಂಥವರ ರಾಜಕೀಯ ಧರ್ಮವಾಗಿದೆ. ಅಂತಹ ಮಾತುಗಳು, ಹೇಳಿಕೆಗಳು ಯಾರನ್ನೋ ತೃಪ್ತಿಪಡಿಸಲು ಇರಬಹುದು. ಆದರೆ ಅಗ್ಗದ ಹೇಳಿಕೆಗಳ ಮೂಲಕ ದೇಶದ ಇತಿಹಾಸವನ್ನು ಬದಲಿಸುವುದಕ್ಕೆ ಆಗದು. ಗಾಂಧೀಜಿಯ ವ್ಯಕ್ತಿತ್ವಕ್ಕೂ ಕಳಂಕ ತಗುಲದು.

-ವೆಂಕಟೇಶ ಮಾಚಕನೂರ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.