ಸಮೀಕ್ಷೆಯಲ್ಲಿ ಮಾನವೀಯತೆ ಇರಲಿ
ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷಕರಲ್ಲಿ ಬಹುತೇಕ ಶಿಕ್ಷಕರನ್ನು ಬಳಸಿಕೊಂಡಿದೆ. ಪರೀಕ್ಷೆಯಲ್ಲಿ ಫಲಿತಾಂಶ ಕಡಿಮೆಯಾದರೆ ಶಿಕ್ಷಕರು ಶಿಕ್ಷೆ ಅನುಭವಿಸಬೇಕಾದ ಪರಿಸ್ಥಿತಿ ಇದೆ. ಶಿಕ್ಷಕರ ಪ್ರಥಮ ಕಾಯಕವೆಂದರೆ, ವಿದ್ಯಾರ್ಥಿಗಳಿಗೆ ಪಾಠ ಮಾಡುವುದು. ಈ ರೀತಿ ಶಿಕ್ಷಕರನ್ನು ಬಳಸಿಕೊಳ್ಳುವುದು ನೈತಿಕವಾಗಿ ಸರಿಕಾಣದು.
‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಧ್ಯೇಯ ವಾಕ್ಯದ ಅಡಿ ಶಿಕ್ಷಕರನ್ನು ಬಳಸಿಕೊಂಡರೂ ಮಾನವೀಯತೆ ನೆಲೆಗಟ್ಟಿನಲ್ಲಿ ಬಳಸಿಕೊಳ್ಳುವಂತಾಗಲಿ. ಬಾಣಂತಿಯರು, ಅಂಗವಿಕಲರು, ಶಸ್ತ್ರಚಿಕಿತ್ಸೆಗೆ ಒಳಗಾದವರು, ಗರ್ಭಿಣಿಯರು ಮತ್ತು ನಿವೃತ್ತಿಗೆ ಒಂದು ತಿಂಗಳು ಇರುವವರನ್ನು ಸಮೀಕ್ಷೆಗೆ ಬಳಸಿಕೊಂಡಿರುವುದನ್ನು ಮಾನವೀಯತೆ ನೆಲೆಯಲ್ಲಿ ನೋಡಿದಾಗ ಸಮಂಜಸವಾಗಿ ಕಾಣದು.
-ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ
****
ಗುಂಡಿ ಮುಚ್ಚುವ ವಾರ್ಷಿಕ ಪ್ರಹಸನ
ಪ್ರತಿ ವರ್ಷ ಮಳೆಗಾಲದಲ್ಲಿ ನಾಗರಿಕರು, ಉದ್ಯಮಿಗಳು ಹಾಗೂ ಮಾಧ್ಯಮಗಳು ಸೇರಿ ‘ರಸ್ತೆ ಗುಂಡಿಗಳನ್ನು ಮುಚ್ಚಿ’ ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸುವ ಅಲಿಖಿತ ನಿಯಮ ಜಾರಿಯಲ್ಲಿದೆ. ರಸ್ತೆ ಬೇಕೆಂದರೆ ಮಳೆ ಬೇಡ; ಮಳೆ ಬೇಕೆಂದರೆ ರಸ್ತೆ ಬೇಡ ಎನ್ನುವಂತಾಗಿದೆ. ರಸ್ತೆ ಗುಂಡಿ ಸಮಸ್ಯೆ ನಿಯಂತ್ರಣ ಮೀರಿ ಮಾಧ್ಯಮಗಳಲ್ಲಿ ಸುದ್ದಿಯಾಗುವವರೆಗೂ ಸಂಬಂಧಪಟ್ಟ ಮಂತ್ರಿಗಳಾಗಲಿ, ಆಯಾ ಕ್ಷೇತ್ರದ ಜನಪ್ರತಿನಿಧಿಗಳಾಗಲಿ ಹಾಗೂ ಅಧಿಕಾರಿಗಳಾಗಲಿ ಸ್ಪಂದಿಸುವುದಿಲ್ಲ. ಒಂದು ಸಮರ್ಥ ಸರ್ಕಾರಕ್ಕೆ ಗುಂಡಿ ಮುಚ್ಚಿ ಎಂದು ಪದೇ ಪದೇ ಎಚ್ಚರಿಸುವ ಅನಿವಾರ್ಯ ಏಕೆ?
-ಜಿ. ಬೈರೇಗೌಡ, ಕೊಡಿಗೇಹಳ್ಳಿ
****
ಅಂಪೈರಿಂಗ್ ಲೋಕದ ದಂತಕಥೆ
ಕ್ರಿಕೆಟ್ ಲೋಕ ಕಂಡ ಸಜ್ಜನ ಅಂಪೈರ್ ಡಿಕೀ ಬರ್ಡ್ ಅವರ ನಿಧನದ ಸುದ್ದಿ ಓದಿ ಕಣ್ಣಾಲಿಗಳು ಮಂಜಾದವು. ಭಾರತ ತಂಡ ಆಡುವ ಪಂದ್ಯಗಳಲ್ಲಿ ಅವರು ತೀರ್ಪುಗಾರರಾಗಿ ಇದ್ದರೆಂದರೆ ಪಂದ್ಯ ನೋಡಲು ನಮಗೆಲ್ಲಾ ಧೈರ್ಯ ಇರುತ್ತಿತ್ತು.
ಭಾರತ ಬ್ಯಾಟಿಂಗ್ ಮಾಡುವಾಗ ಎದುರಾಳಿ ಬೌಲರ್‌ಗಳು ಎಲ್‌ಬಿಡಬ್ಲ್ಯುಗೆ ಮನವಿ ಮಾಡಿದಾಗ ಎಷ್ಟೋ ಬಾರಿ ಡಿಕೀ ಬರ್ಡ್ ಇರುವ ಕಾರಣ ಔಟ್ ನೀಡುವುದಿಲ್ಲ ಎಂದು ಟಿ.ವಿ. ನೋಡುವಾಗ ನಾವು ಮಾತಾಡಿಕೊಳ್ಳುತ್ತಿದ್ದ ನೆನಪು ಸ್ಮೃತಿಪಟಲದಲ್ಲಿ ಹಾದುಹೋಯಿತು.
-ಯಲುವಹಳ್ಳಿ ಸೊಣ್ಣೇಗೌಡ, ಚಿಕ್ಕಬಳ್ಳಾಪುರ
****
ಸಮೀಕ್ಷೆ ವಿವರ ಕುಟುಂಬಕ್ಕೂ ನೀಡಿ
ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಈ ವಿಷಯ
ದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ವಿನಂತಿ: ಮೊದಲನೆಯದು, ಸಮೀಕ್ಷೆದಾರರು ಮನೆಗೆ ಬಂದು ಸಮೀಕ್ಷೆ ನಡೆಸಿ, ಮಾಹಿತಿ ಸಂಗ್ರಹಿಸುವರಷ್ಟೆ. ಅವರು ತಮ್ಮ ದಾಖಲೆಯಲ್ಲಿ ಏನನ್ನು ನಮೂದಿಸಿಕೊಂಡರು ಎಂಬುದನ್ನು ಮನೆಯವರಿಗೆ ತೋರಿಸಿ, ಮನೆಯಾತನಿಂದ ಒಪ್ಪಿಗೆ–ರುಜು ಪಡೆಯತಕ್ಕದ್ದು.
ಎರಡನೆಯದಾಗಿ, ಸಮೀಕ್ಷಕರು ದಾಖಲಿಸಿಕೊಳ್ಳುವ ಮಾಹಿತಿಯ ಒಂದು ‘ಪ್ರತಿ’ಯನ್ನು ಮನೆಯವರಿಗೆ ನೀಡಬೇಕು. ಆಯೋಗವು ಈ ಬಗ್ಗೆ ಸಮೀಕ್ಷೆದಾರರಿಗೆ ಸೂಕ್ತ ಏರ್ಪಾಡು ಮತ್ತು ತರಬೇತಿ ನೀಡಬೇಕಿದೆ.
-ಡಿ.ವಿ. ಮೋಹನ ಪ್ರಕಾಶ್, ಮೈಸೂರು
****
ನೇಪಥ್ಯಕ್ಕೆ ಸರಿಯಿತೆ ಕ್ರೀಡಾಸ್ಫೂರ್ತಿ?
‘ಸಜ್ಜನಿಕೆ ನೇಪಥ್ಯಕ್ಕೆ, ತುಡುಗುತನ ಮುನ್ನಲೆಗೆ!’ ಲೇಖನ ಓದಿದಾಗ
(ಲೇ: ವಿಶಾಖ ಎನ್., ಪ್ರ.ವಾ., ಸೆ. 25) ಕ್ರೀಡಾಪಟುಗಳಲ್ಲಿ ಕ್ರೀಡಾಸ್ಫೂರ್ತಿಯ ಮೌಲ್ಯಗಳು ಇಲ್ಲವೇ ಎನ್ನುವುದು ನನ್ನ ಆಂತರ್ಯದ ಪ್ರಶ್ನೆ. ಯುವಪೀಳಿಗೆಯನ್ನು ಹಾಳು ಮಾಡುವ ಇಲ್ಲವೇ ಉದ್ಧರಿಸುವ ಮೂರು ಕ್ಷೇತ್ರಗಳೆಂದರೆ: ಕ್ರೀಡೆ, ರಾಜಕೀಯ ಮತ್ತು ಸಿನಿಮಾ. ಇಲ್ಲಿರುವ ಪ್ರಭಾವಿಗಳ ಅನುಕರಣೆಯೇ
ಯುವಜನರ ನಿತ್ಯದ ಗೀಳಾಗಿದೆ.
ಒಬ್ಬ ಕ್ರೀಡಾಪಟು ಇನ್ನೊಬ್ಬ ಕ್ರೀಡಾಪಟುವಿಗೆ ಹಸ್ತಲಾಘವ ಮಾಡಲು ಹಿಂಜರಿಯುವುದು ಅಥವಾ ಯಾವುದೇ ಕ್ರೀಡಾಪಟು ಎದುರಾಳಿಯ ವ್ಯಕ್ತಿತ್ವದ ಅಥವಾ ಪ್ರಾದೇಶಿಕತೆ ಮೇಲೆ ಪ್ರಭಾವ ಬೀರುವ ಕಳಪೆಯ ನಡವಳಿಕೆಯನ್ನು ನೋಡಿದಾಗ, ಅಂತಹ ಕ್ರೀಡಾಪಟುಗಳಿಗೆ ನಿಜವಾಗಿ ಮನೋವೈದ್ಯರ ಅವಶ್ಯಕತೆ ಇದೆ ಅನಿಸುತ್ತದೆ.
-ಗುಂಡಪ್ಪ ರಾಠೋಡ್, ರಾಯಚೂರು
****
ಭೈರಪ್ಪರ ದೈತ್ಯ ಪ್ರತಿಭೆಗೆ ಶರಣು
ಎಸ್.ಎಲ್. ಭೈರಪ್ಪನವರ ಕುರಿತು ಎರಡು ಮಾತು ಹೇಳಲೂ ಅರ್ಹತೆ ಇರಬೇಕು ಮತ್ತು ಆ ಅರ್ಹತೆ ಅವರ ಕೃತಿಗಳನ್ನು ಓದಿ ಸಂಪಾದಿಸಬೇಕು ಎನ್ನುವುದಾದರೆ ನನ್ನದು ಸೊನ್ನೆ ಅರ್ಹತೆ. ಆದರೆ, ಕನ್ನಡವನ್ನು ಅವರು ದೇಶದ ಇತರ ಪ್ರಮುಖ ಭಾಷೆಗಳ ಹೊಸ್ತಿಲನ್ನು ದಾಟಿಸಿದ್ದನ್ನು ಬಲ್ಲೆ. ದೇಶದ ಸಾರಸ್ವತ ಲೋಕ ನಮ್ಮ ರಾಜ್ಯಭಾಷೆಯ ಕಡೆ ಕಿವಿ ನಿಮಿರಿ ನಿಲ್ಲುವಂತೆ ಮಾಡಿದ್ದನ್ನೂ ಬಲ್ಲೆ.
ಒಂದು ಸಾಧಾರಣ ಹಳ್ಳಿ ಕುಟುಂಬದಿಂದ ಧಿಗ್ಗನೆ ಮೇಲ್ತೂರಿ ಬಯಲಾಕಾಶಕ್ಕೆ ಲಗ್ಗೆ ಹಾಕಿದ್ದು ಕನ್ನಡದ ಮಟ್ಟಿಗಂತೂ ಸುವರ್ಣಾಕ್ಷರದ ದಾಖಲೆಯೇ! ನಮ್ಮಂಥವರು ಹೀಗೆಯೂ ಅಭಿಮಾನ ಹೊಂದಲು,
ಧನ್ಯತೆ ಅನುಭವಿಸಲು, ‘ನಮ್ಮ ಭೈರಪ್ಪ’ ಎಂದು ಎದೆಯುಬ್ಬಿಸಿ ಹೇಳಲು
ಯಾವ ಅಡ್ಡಿಯೂ ಇರಲು ಸಾಧ್ಯವಿಲ್ಲ. ಶರಣು ಭೈರಪ್ಪನವರ ದೈತ್ಯ ಪ್ರತಿಭೆಗೆ!
-ರವೀಂದ್ರ ವೀ. ಮುನ್ನೋಳಿಮಠ, ನವಲೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.