ADVERTISEMENT

ವಾಚಕರ ವಾಣಿ | ಚುನಾವಣೆ ನಡೆಸದೆ ವಿಕೇಂದ್ರೀಕರಣದ ಮಾತೇಕೆ?

ವಾಚಕರ ವಾಣಿ
Published 16 ಮೇ 2025, 23:30 IST
Last Updated 16 ಮೇ 2025, 23:30 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಚುನಾವಣೆ ನಡೆಸದೆ ವಿಕೇಂದ್ರೀಕರಣದ ಮಾತೇಕೆ?

ಗ್ರಾಮ ಮಟ್ಟಕ್ಕೆ ಅಧಿಕಾರ ವಿಕೇಂದ್ರೀಕರಣ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗೆ ಹೇಳಿರುವುದು ವರದಿಯಾಗಿದೆ. ಆದರೆ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಅಧಿಕಾರಾವಧಿ ಮುಗಿದು ಬಹಳ ಕಾಲವಾಯಿತು. ಆದರೂ ಚುನಾವಣೆ ನಡೆಸಲು ಸರ್ಕಾರ ಮುಂದಾಗಿಲ್ಲ. ಹೀಗೆ ಮಾಡಿದರೆ ಅಧಿಕಾರ ವಿಕೇಂದ್ರೀಕರಣ ಹೇಗೆ ಸಾಧ್ಯ ಎಂಬುದು ಮುಖ್ಯಮಂತ್ರಿಗೆ ನಮ್ಮ ಪ್ರಶ್ನೆ. 

ADVERTISEMENT

-ಗುರು ಜಗಳೂರು, ಹರಿಹರ

****

ದ್ವಿಭಾಷಾ ನೀತಿಯಿಂದ ಮಕ್ಕಳಿಗೆ ವಂಚನೆ

ಸಂಸ್ಕೃತದ ಹೊಡೆತ ತಪ್ಪಿಸಿ ಮಾತೃಭಾಷೆಯನ್ನು ಬೆಳೆಸಬೇಕು ಎಂಬ ಅಭಿಪ್ರಾಯ ಹಂಪ ನಾಗರಾಜಯ್ಯ ಅವರ ಲೇಖನದಲ್ಲಿ (ಪ್ರ.ವಾ., ಮೇ 15) ವ್ಯಕ್ತವಾಗಿದೆ. ಮಾತೃಭಾಷೆ ಗಟ್ಟಿಯಾಗಿ ನಿಲ್ಲಬೇಕಾದರೆ ಸಂಸ್ಕೃತ ಜ್ಞಾನ ಅಗತ್ಯ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕುವೆಂಪು, ದ.ರಾ.ಬೇಂದ್ರೆ, ಡಿ.ವಿ.ಜಿ ಅಂತಹವರ ಸಂಸ್ಕೃತ ಜ್ಞಾನ ಆಳವಾಗಿತ್ತು.

ಇಂದಿನ ವಿಜ್ಞಾನ ಯುಗದಲ್ಲಿ ಭಾಷೆ ಹಾಗೂ ಮಾನವಿಕ ವಿಚಾರಗಳನ್ನು ಕಡೆಗಣಿಸುತ್ತಿರುವ ಕಾರಣದಿಂದ ಅನೇಕ ದುಷ್ಪರಿಣಾಮಗಳು ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಯುವಜನರಲ್ಲಿ ಭಾರತೀಯತೆಯ ಕುರಿತಾದ ಜ್ಞಾನ ಹಂತ ಹಂತವಾಗಿ ಕಡಿಮೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಭಾಷೆಯ ಕಡೆಗಣನೆ. ಇಂತಹ ಕಾಲದಲ್ಲಿ ದ್ವಿಭಾಷಾ ನೀತಿಯ ಜಾರಿ ಎಂಬುದು ತೂಕಡಿಸುತ್ತಿದ್ದವನನ್ನು ಹಾಸಿಗೆಗೆ ದೂಡಿದಂತೆ ಆಗುತ್ತದೆ. ಜ್ಞಾನದ ದೃಷ್ಟಿಯಿಂದ ನೋಡಿದರೆ, ನಾನಾ ಭಾಷೆಗಳು ಅನ್ಯೋನ್ಯ ಸಹಾಯಕಗಳಾಗಿರುತ್ತವೆ. ಪ್ರತಿಯೊಬ್ಬರೂ ಆದಷ್ಟೂ ಹೆಚ್ಚು ಭಾಷೆಗಳನ್ನು ಕಲಿಯುವುದು ಶ್ರೇಯಸ್ಕರ ಎಂಬ ಮಾತಿದೆ. ಬೆರಳೆಣಿಕೆಯ ಕೆಲವರು ಭಾಷೆಯನ್ನು ಸ್ವಸಾಮರ್ಥ್ಯದಿಂದ ಕಲಿಯಬಹುದು. ಆದರೆ ಅನೇಕರಿಗೆ ಶಾಲೆಯ ಕಲಿಕೆ ಅನಿವಾರ್ಯ. ಯಾವುದೇ ಭಾಷೆಯ ಕಲಿಕೆಯಲ್ಲಿ ಆರಂಭಿಕ ಆಸಕ್ತಿಯನ್ನು ಹುಟ್ಟಿಸಲು ಶಾಲಾ ಶಿಕ್ಷಣ ಸಹಕಾರಿಯಾಗುತ್ತದೆ. ಹೀಗಿರುವಾಗ ದ್ವಿಭಾಷಾ ನೀತಿಯನ್ನು ಜಾರಿಗೆ ತರುವುದು ನಮ್ಮ ಮಕ್ಕಳಿಗೆ ಮಾಡುವ ವಂಚನೆ. 

-ಸೂರ್ಯ ಹೆಬ್ಬಾರ, ಅಂಡಿಂಜೆ, ಬೆಳ್ತಂಗಡಿ

****

ಬೈ–ಲಾ ತಿದ್ದುಪಡಿ ಪ್ರಶ್ನಾತೀತವೇ?

‘ಕನ್ನಡ ಸಾಹಿತ್ಯ ಪರಿಷತ್ತಿನ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ’ ಎಂಬ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಹೇಳಿಕೆ (ಪ್ರ.ವಾ., ಮೇ 16) ಸ್ವಾಗತಾರ್ಹ. ಆದರೆ, ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆಯಲ್ಲಿ ಸ್ವತಃ ಜೋಶಿಯವರೇ ರಾಜಕೀಯ ಪಕ್ಷದ ಕಚೇರಿಗೆ ತೆರಳಿ ಪ್ರಚಾರ ಮಾಡಿದ್ದಕ್ಕೆ ಮತ್ತು ಮೊದಲ ಬಾರಿಗೆ ರಾಜಕೀಯ ಪಕ್ಷವೊಂದರ ಕಾರ್ಯಕರ್ತರೇ ಬಹಿರಂಗವಾಗಿ ಜೋಶಿ ಅವರ ಪರ ಪ್ರಚಾರ ನಡೆಸಿದ್ದಕ್ಕೆ ಏನನ್ನಬೇಕು? ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಪರಿಷತ್ತಿನ ವಿಶೇಷ ಆಹ್ವಾನಿತರಿಗೆ ಇಲ್ಲದ ಸವಲತ್ತನ್ನು ರಾಜಕೀಯ ಪಕ್ಷವೊಂದರ ಜತೆ ನಂಟು ಹೊಂದಿರುವ ಸಂಘದ ಕಾರ್ಯಕರ್ತರಿಗೆ ಕಲ್ಪಿಸಿಕೊಟ್ಟಿದ್ದರೆಂಬ ಆರೋಪಕ್ಕೆ ಅವರು ಏನು ಹೇಳುತ್ತಾರೆ? ರಾಜಕೀಯ ಹಸ್ತಕ್ಷೇಪ ಬೇಡ ಎನ್ನುವ ಅವರು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸಚಿವ ದರ್ಜೆಯ ಸ್ಥಾನಮಾನ ಪಡೆಯಲು ಪ್ರಯತ್ನಿಸಿದ್ದೇಕೆ?

ಭಿನ್ನಾಭಿಪ್ರಾಯಗಳಿದ್ದರೆ ಚರ್ಚೆಗೆ ಅವಕಾಶ ನೀಡುವುದಾಗಿ ಈಗ ಹೇಳುವ ಅವರು, ಎಂದಾದರೂ ಕಾರ್ಯಕಾರಿ ಸಮಿತಿಯಲ್ಲಾಗಲಿ, ಸರ್ವ ಸದಸ್ಯರ ಸಭೆಯಲ್ಲಾಗಲಿ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಕಲ್ಪಿಸಿದ್ದಾರೆಯೇ? ತಮ್ಮಿಚ್ಛೆಯ ಅನುಸಾರ ಅವರು ಬೈ–ಲಾಗೆ ತಿದ್ದುಪಡಿ ತಂದಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಆದರೆ ನಿವೃತ್ತ ನ್ಯಾಯಮೂರ್ತಿಯವರ ಅಧ್ಯಕ್ಷತೆಯ ತಿದ್ದುಪಡಿ ಸಲಹಾ ಉಪಸಮಿತಿಯ ಶಿಫಾರಸಿನ ಅನುಸಾರ ಬೈ–ಲಾಗೆ ತಿದ್ದುಪಡಿ ತಂದಿದ್ದಾಗಿ ಜೋಶಿ ಹೇಳುತ್ತಾರೆ. ಒಂದುವೇಳೆ ನಿವೃತ್ತ ನ್ಯಾಯಮೂರ್ತಿಯವರ ಸಲಹೆಯ ಅನುಸಾರವೇ ತಿದ್ದುಪಡಿ ತಂದಿದ್ದರೂ ಅಂತಹ ಬೈ–ಲಾ ಪ್ರಶ್ನಾತೀತವೇ?

-ಹಂ.ಗು.ರಾಜೇಶ್, ಬೆಂಗಳೂರು

****

ಸ್ವದೇಶಿ ಚಳವಳಿ ಪುನರುಜ್ಜೀವನಕ್ಕೆ ಸಕಾಲ

ಆ್ಯಪಲ್ ಐಫೋನ್‌ ಭಾರತದಲ್ಲಿ ತಯಾರಾಗಿ ಅಮೆರಿಕಕ್ಕೆ ದಾಖಲೆ ಮಟ್ಟದಲ್ಲಿ ರಫ್ತಾಗಿದ್ದ ವಿಷಯ ಭಾರತೀಯರಿಗೆ ಅತ್ಯಂತ ಅಭಿಮಾನದ ಸುದ್ದಿ. ಆದರೆ ಭಾರತದಲ್ಲಿ ಐಫೋನ್‌ ತಯಾರಿಸದೆ ಅಮೆರಿಕದಲ್ಲಿ ತಯಾರಿಸಲು ಆ್ಯಪಲ್ ಸಂಸ್ಥೆಯ ಮುಖ್ಯಸ್ಥರಿಗೆ ಮನವಿ ಮಾಡಿರುವುದಾಗಿ ಹೇಳಿರುವ ಟ್ರಂಪ್ ಅವರ ಹೇಳಿಕೆ ನಿಜಕ್ಕೂ ಕಳವಳಕಾರಿ. ಪ್ರತಿಷ್ಠಿತ ಕಂಪನಿಗಳು ಭಾರತದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿರುವಾಗ, ಇವುಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೆಲಸ ಮಾಡುತ್ತಿರುವ ಲಕ್ಷಾಂತರ ಉದ್ಯೋಗಿಗಳಿಗೆ ಈ ಸುದ್ದಿ ದುಃಸ್ವಪ್ನವಾಗುವುದು ಸಹಜ. ನಮ್ಮ ದೇಶದಲ್ಲಿ ತಯಾರಾದ ಉತ್ಪನ್ನಗಳನ್ನು ಮಾತ್ರವೇ ಉಪಯೋಗಿಸುವ ಪಣವನ್ನು ಭಾರತೀಯರು ತೊಡಬೇಕು. ಆಗ ಮಾತ್ರ ಈ ವಿಧದ ಆಕ್ರಮಣಕಾರಿ ತಂತ್ರಗಳನ್ನು ನಿಯಂತ್ರಣದಲ್ಲಿಟ್ಟು ಮೇಕ್ ಇನ್‌ ಇಂಡಿಯಾ ಕನಸನ್ನು ನನಸಾಗಿಸಲು ಸಾಧ್ಯ.

ಮಾಹಿತಿ ತಂತ್ರಜ್ಞಾನ, ಅಂತರಿಕ್ಷ ಸಂಶೋಧನೆ, ಆಹಾರ ಉತ್ಪಾದನೆ, ಔಷಧ ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬನೆ ಸಾಧಿಸುತ್ತಿದೆ. ಐಫೋನಿಗೂ ಮೀರಿದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಹುಮ್ಮಸ್ಸು ದೇಶಕ್ಕಿದೆ. ಸ್ವದೇಶಿ ಉತ್ಪನ್ನಗಳು, ಸ್ವದೇಶಿ ಪ್ರವಾಸಿ ತಾಣಗಳು, ದೇಶದ ನಾಗರಿಕ ಸುರಕ್ಷಾ ತರಬೇತಿಯ ವಿಷಯದಲ್ಲಿ ಹೆಚ್ಚೆಚ್ಚು ಜನರಲ್ಲಿ ಆಸಕ್ತಿ ಮೂಡಿಸಿ ಸ್ವದೇಶಿ ಚಳವಳಿಯನ್ನು ಇನ್ನೊಮ್ಮೆ ಪುನುರುಜ್ಜೀವನಗೊಳಿಸುವುದಕ್ಕೆ ಇದೊಂದು ಸುಸಂದರ್ಭ. 

-ಮಂಜುನಾಥ ಶೇಟ, ಶಿರಸಿ 

****

ವಿಕೃತಿ ಮೆರೆದವರಿಗೆ ಕಠಿಣ ಶಿಕ್ಷೆಯಾಗಲಿ

ರಾಮನಗರ ಜಿಲ್ಲೆಯ ಭದ್ರಾಪುರದಲ್ಲಿ ಮಾತು ಬಾರದ, ಕಿವಿ ಕೇಳದ ಹದಿನಾಲ್ಕು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿಕ ಚಿತ್ರಹಿಂಸೆ ನೀಡಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಇದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಷಯ. ಇಂತಹ ಅಮಾನವೀಯ ಕೃತ್ಯಗಳು ಒಂದರ‌ ಮೇಲೊಂದು ನಡೆಯುತ್ತಲೇ ಇರುವುದು ಕಳವಳದ ಸಂಗತಿ. ಆ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದಿರುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ನಮ್ಮ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಆ ಮಗುವಿನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. 

-ದರ್ಶನ್ ಚಂದ್ರ ಎಂ.ಪಿ.,ಮುಕ್ಕಡಹಳ್ಳಿ, ಚಾಮರಾಜನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.