
ನರೇಗಾ vs ವಿಬಿ–ಜಿ ರಾಮ್
ನಗರದ ಚಕ್ರವ್ಯೂಹ: ಮಾನವೀಯತೆ ಬಲಿ
ಬೆಂಗಳೂರಿನ ಬನಶಂಕರಿಯ ಇಟ್ಟಮಡು ಬಳಿ ಪತ್ನಿಯೊಂದಿಗೆ ಬೈಕ್‌ನಲ್ಲಿ ಆಸ್ಪತ್ರೆಗೆ
ಹೋಗುತ್ತಿದ್ದ ವೆಂಕಟರಾಮನ್ ಎನ್ನುವ 34 ವರ್ಷದ ವ್ಯಕ್ತಿ, ಹೃದಯಾಘಾತದಿಂದ ರಸ್ತೆಯಲ್ಲೇ ಸಾವನ್ನಪ್ಪಿರುವುದು ದುರದೃಷ್ಟಕರ ಘಟನೆ. ಗಂಡನನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿ ಎಂದು ಆ ನತದೃಷ್ಟ ಮಹಿಳೆ ಅಂಗಲಾಚುತ್ತಿದ್ದ ಸಿ.ಸಿ. ಟಿ.ವಿ. ದೃಶ್ಯ ಹೃದಯಕಲಕುವಂತಿತ್ತು. ಆ ಕ್ಷಣಕ್ಕೆ ಯಾರಾದರೂ ಸಹಾಯಹಸ್ತ ಚಾಚಿದ್ದರೆ ಅಮೂಲ್ಯವಾದ ಜೀವ ಉಳಿಯುತಿತ್ತೇನೋ? ಸಮಾಜ ಮಾನವೀಯತೆ
ಯಿಂದ ದೂರವಾಗುತ್ತಿದೆ ಎನ್ನುವುದಂತೂ ಸತ್ಯ.
-ಎಚ್. ತುಕಾರಾಂ, ಬೆಂಗಳೂರು
****
‘ಗ್ರೀನ್ ಕಾರಿಡಾರ್’ ಮಗ್ಗುಲಿನಲ್ಲೇ ಕತ್ತಲು!
ಹೈಟೆಕ್ ಆಸ್ಪತ್ರೆಗಳಿಗೆ ಅಂಗಾಂಗ ಸಾಗಿಸಲು ನೆರವಾಗುವಂತೆ ಮೆಟ್ರೋ ರೈಲಿನ ಒಂದಿಡೀ ಬೋಗಿಯನ್ನು ಮೀಸಲಾಗಿ ಇರಿಸುವ ‘ಗ್ರೀನ್ ಕಾರಿಡಾರ್’ ಹೆಸರಿನ ವ್ಯವಸ್ಥೆಯಿದೆ. ಮತ್ತೊಂದೆಡೆ, ಆ್ಯಂಬುಲೆನ್ಸ್ ಸಿಗದೆ, ಕಠಿಣಹೃದಯದ ವಾಹನ ಚಾಲಕರೂ ನೆರವಾಗದೆ, ರಸ್ತೆಯಲ್ಲೇ ಪ್ರಾಣಬಿಡುವ ನತದೃಷ್ಟರು! ಹೀಗಿದೆ ಮಹಾನಗರದಲ್ಲಿನ ವಿರೋಧಾಭಾಸಗಳ ಜೀವನ.
-ಮಧುಸೂದನ್ ಬಿ.ಎಸ್., ಬೆಂಗಳೂರು
****
ಕೇಂದ್ರ ಸರ್ಕಾರದ ನಡೆ ನಂಬಲರ್ಹವೆ?
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬಂದಾಗಿನಿಂದಲೂ ಸೋನಿಯಾ
ಗಾಂಧಿ ಮತ್ತವರ ಕುಟುಂಬದ ಸದಸ್ಯರ ಮೇಲೆ ಭ್ರಷ್ಟಾಚಾರ ಆರೋಪದ ಖಾಸಗಿ ದೂರುಗಳ ಆಧಾರದಲ್ಲಿ
ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಹಾಗೂ ಅವು ನ್ಯಾಯಾಲಯಗಳಿಂದ ತಿರಸ್ಕೃತಗೊಳ್ಳುತ್ತಿವೆ. ಸೋನಿಯಾ ಕುಟುಂಬವನ್ನು ಪ್ರಕರಣಗಳಲ್ಲಿ ಅಲೆಯುವಂತೆ ಮಾಡಿ, ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರ ನ್ಯಾಯಾಲಯಗಳಿಂದ ಮುಖಭಂಗ ಅನುಭವಿಸುತ್ತಿದೆ. ಕನಿಷ್ಠ ಒಂದಾದರೂ ಪ್ರಕರಣದಲ್ಲಿ ಆ ಕುಟುಂಬದ ವಿರುದ್ಧ ತೀರ್ಪು ಬಂದಿದೆಯೇ?
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ‘ಜಾರಿ ನಿರ್ದೇಶನಾಲಯ’ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ದೆಹಲಿ ಕೋರ್ಟ್ ತಿರಸ್ಕರಿಸಿದೆ (ಪ್ರ.ವಾ., ಡಿ. 17). ಇಂತಹ ಸಂಸ್ಥೆಗಳನ್ನು ಪೋಷಿಸುತ್ತಿರುವ ಕೇಂದ್ರ ಸರ್ಕಾರದ ನಡೆ ನಂಬಲರ್ಹವೆ?
-ರಮೇಶ್, ಬೆಂಗಳೂರು
****
ಮಕ್ಕಳ ಬೆನ್ನೆಲುಬೇ ದೇಶದ ಬೆನ್ನೆಲುಬು
ಮಕ್ಕಳ ಆರೋಗ್ಯದ ಕುರಿತು ಸ್ಪಷ್ಟ ಮಾರ್ಗಸೂಚಿ ಇದ್ದರೂ, ಬಹುತೇಕ ಶಾಲೆಗಳು ಪಾಲಿಸುತ್ತಿಲ್ಲ. ವಿದ್ಯಾರ್ಥಿಗಳ ಬ್ಯಾಗ್ ತೂಕವು ದೇಹದ ತೂಕದ ಶೇ 10 ಮೀರಬಾರದು ಎನ್ನುವ ನಿಯಮ ಕಾಗದದ ಮೇಲೆ ಉಳಿದಿದೆ. ಸುಮಾರು ಶೇ 50ರಷ್ಟು ಶಾಲಾಮಕ್ಕಳು ಬೆನ್ನು ಮತ್ತು ಕುತ್ತಿಗೆ ನೋವಿನಿಂದ ಬಳಲುತ್ತಿದ್ದಾರೆ. ಶಿಕ್ಷಣ ಇಲಾಖೆ ಈ ವಿಷಯದಲ್ಲಿ ಗಂಭೀರ ಕ್ರಮ ಕೈಗೊಳ್ಳದೆ ಮೌನವಾಗಿದೆ. ಶಾಲೆಗಳ ಮೇಲೆ ನಿಯಮಿತ ಪರಿಶೀಲನೆ ಮತ್ತು ದಂಡ ಕ್ರಮಗಳಿಲ್ಲ. ತರಗತಿ ಮಟ್ಟದಲ್ಲಿ ಬ್ಯಾಗ್ ತೂಕ ಪರಿಶೀಲನೆ ಮಾಡಬಹುದು; ಹಗುರವಾದ ಪುಸ್ತಕಗಳು ಮತ್ತು ಡಿಜಿಟಲ್ ನೋಟ್ಸ್ ಬಳಸಬಹುದಾಗಿದೆ. ಮಗುವಿನ ಬೆನ್ನೆಲುಬು ಸುರಕ್ಷಿತವಾಗಿದ್ದರೆ ಮಾತ್ರ ಅದರ ಭವಿಷ್ಯ ಸುರಕ್ಷಿತ ಹಾಗೂ ದೇಶದ ಬೆನ್ನೆಲುಬೂ ಭದ್ರವಾಗಿರುತ್ತದೆ.
-ವಿಜಯಕುಮಾರ್ ಎಚ್.ಕೆ., ರಾಯಚೂರು
****
ದೇಶದ ಆತ್ಮವನ್ನು ಬದಿಗೆ ಸರಿಸುವ ಯತ್ನ
ಭಾರತದ ಗ್ರಾಮೀಣರಿಗೆ ಆಶಾಕಿರಣವಾಗಿರುವ ‘ಮನರೇಗಾ’ ಬರೀ ಉದ್ಯೋಗ ಯೋಜನೆಯಲ್ಲ; ಅದು ಸಂವಿಧಾನಾತ್ಮಕ ಹಕ್ಕಿನ ರೂಪ ಪಡೆದ ಸಾಮಾಜಿಕ ನ್ಯಾಯದ ಸಾಧನ. ಈ ಯೋಜನೆಗೆ ಮಹಾತ್ಮ ಗಾಂಧಿ ಹೆಸರು ಜೋಡಿಸಿರುವುದು ಆಕಸ್ಮಿಕವಲ್ಲ. ಗ್ರಾಮಸ್ವರಾಜ್ಯ, ಸ್ವಾವಲಂಬನೆ ಮತ್ತು ದುಡಿಮೆಗೆ ಗೌರವ ನೀಡಿದ ಗಾಂಧೀಜಿಯ ತತ್ವಗಳೇ ಇದರ ಆತ್ಮ. ಈಗ ‘ಮನರೇಗಾ’ ಹೆಸರನ್ನು ಬದಲಾಯಿ
ಸುವ ಪ್ರಯತ್ನದ ಮೂಲಕ ಮಹಾತ್ಮನ ಹೆಸರನ್ನು ಮರೆಮಾಡುವ ಯತ್ನ ನಡೆಯುತ್ತಿದೆ. ಸರ್ಕಾರದ ನಡೆಯನ್ನು, ಗಾಂಧೀಜಿ ತತ್ತ್ವಗಳನ್ನು ಸಾರ್ವಜನಿಕ ಸ್ಮೃತಿಯಿಂದ ನಿಧಾನವಾಗಿ ದೂರ ಸರಿಸುವ ಪ್ರಯತ್ನವೆಂದು ಹಲವರು ಭಾವಿಸುವುದು ಸಹಜ. ಗಾಂಧೀಜಿ ರಾಷ್ಟ್ರದ ಆತ್ಮ. ಅವರ ಹೆಸರನ್ನು ಯೋಜನೆಗಳಿಂದ ಅಳಿಸುವ ಯತ್ನಗಳು ನಡೆಯುತ್ತಿದ್ದರೆ, ಪ್ರಶ್ನಿಸುವುದು ಜನರ ಪ್ರಜಾಸತ್ತಾತ್ಮಕ ಹಕ್ಕು.
-ಹನುಮಂತ ಆರ್.ಸಿ., ಹುನಗುಂದ
****
ಕೇಂದ್ರದ ಮಲತಾಯಿ ಧೋರಣೆ ನಿಲ್ಲಲಿ
ನಲವತ್ತು ವರ್ಷಗಳ ಹಿಂದೆ, ಕೇಂದ್ರ ಲೋಕಸೇವಾ ಆಯೋಗ ಕರೆದಿದ್ದ ಹುದ್ದೆಯ ಆಕಾಂಕ್ಷಿಯಾಗಿ ದೆಹಲಿಗೆ ಹೋಗಿದ್ದೆ. ಬಿಹಾರದಿಂದ ಬಂದಿದ್ದ ಅಭ್ಯರ್ಥಿಯೊಬ್ಬಾಕೆ, ‘ಯೂ ಆರ್ ಫ್ರಮ್...? ಎಂದಿದ್ದಕ್ಕೆ, ‘ಕರ್ನಾಟಕ’ ಎಂದೆನಷ್ಟೆ. ಆಕೆ, ಕಣ್ಣರಳಿಸಿ ‘ಐ ನೊ ಯುವರ್ ಸ್ಟೇಟ್, ಮೋಸ್ಟ್ ಕಲ್ಚರ್ಡ್ ಪೀಪಲ್ ಆರ್ ದೇರ್’ ಎಂದು ಉದ್ಗಾರ ತೆಗೆದಿದ್ದಳು. ಇತ್ತೀಚಿನ ವರ್ಷಗಳಲ್ಲಿ ಉತ್ತರದ ರಾಜ್ಯಗಳಿಂದ ವಲಸೆ ಬರುತ್ತಿರುವವರ ಸಂಖ್ಯೆ ಏರುತ್ತಲೇ ಇರುವುದನ್ನು ನೋಡಿದರೆ, ನಮ್ಮ ರಾಜ್ಯ ಈಗಲೂ ತನ್ನ ಅನನ್ಯತೆ ಕಾಪಾಡಿಕೊಂಡಿರುವುದು ಹೆಮ್ಮೆಯ ಸಂಗತಿ. ಅಧಿಕಾರದಲ್ಲಿರುವ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಮಾತ್ರ ಅಸಹನೀಯ.
-ಈರಪ್ಪ ಎಂ. ಕಂಬಳಿ, ಬೆಂಗಳೂರು
****
ಓ ಮಹಾತ್ಮ
ಎಂದೋ ನಿನ್ನ
ಖಾದಿ ಬಿಚ್ಚಿಸಿಕೊಂಡರು!
ಚರಕ ಕಿತ್ತು ಪಕ್ಕಕ್ಕಿಟ್ಟು
ಕನ್ನಡಕ ಬಿಚ್ಚಿಸಿಕೊಂಡರು!
ಕಡೆಗೀಗ ನಿನ್ನನ್ನೇ ಪಕ್ಕಕ್ಕಿಟ್ಟು
ನಿನ್ನೊಂದಿಗಿದ್ದ ರಾಮನನ್ನು
ಮೆರೆಸಲು ಮುಂದಾಗಿದ್ದಾರೆ!
ನಿನ್ನೊಂದಿಗೆ ಇನ್ನೇನಾದರೂ
ಇದ್ದರೆ ಈಗಲೇ ಹೇಳಿಬಿಡು,
ಇಲ್ಲವೆ ನೀನೇ ಕೊಟ್ಟುಬಿಡು,
ಸತ್ಯ ಅಹಿಂಸೆ ಬಿಟ್ಟು!
ಅವೆರಡನ್ನು ಸ್ವೀಕರಿಸಲು
ಯಾರೂ ಸಿದ್ಧರಿಲ್ಲ!
-ಜೆ.ಬಿ. ಮಂಜುನಾಥ, ಪಾಂಡವಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.