ಮಕ್ಕಳು
ಗುತ್ತಿಗೆ ನೌಕರರು ಮತ್ತು ಘನತೆಯ ಬದುಕು
ರಾಜ್ಯದ ವಿವಿಧ ಇಲಾಖೆಗಳಲ್ಲಿ ಸುಮಾರು ಮೂರು ಲಕ್ಷದಷ್ಟು ಹೊರಗುತ್ತಿಗೆ ನೌಕರರಿದ್ದಾರೆ. ಸರ್ಕಾರಿ ಯಂತ್ರ ಸಾಂಗವಾಗಿ ಸಾಗಲು ಇವರ ಕೊಡುಗೆಯೂ ಇದೆ. ಆದರೆ, ಉದ್ಯೋಗ ಭದ್ರತೆ ಇಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಕಡಿಮೆ ವೇತನದಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಬಹಳಷ್ಟು ನೌಕರರಿಗೆ ಮಧ್ಯವಯಸ್ಸು ದಾಟಿದ್ದರೆ, ಕೆಲವರು ನಿವೃತ್ತಿ ಅಂಚಿನಲ್ಲಿದ್ದು, ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕೆಲಸದ ಒತ್ತಡದ ನಡುವೆ ಘನತೆಯ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಈಗಲಾದರೂ ರಾಜ್ಯ ಸರ್ಕಾರ ಈ ನೌಕರರಿಗೆ ಸೇವಾಭದ್ರತೆ ನೀಡಲು ಕ್ರಮವಹಿಸಬೇಕಿದೆ.
-ಅನಿತಾ ಎಂ.ಬಿ., ಶಿವಮೊಗ್ಗ
****
ಅತ್ಯಲ್ಪ ಪಿಂಚಣಿಯಿಂದ ಅಶಕ್ತರು ಕಂಗಾಲು
ಇಪಿಎಸ್–95 ಯೋಜನೆ ವ್ಯಾಪ್ತಿಗೆ ಬರುವ ಬಹುತೇಕ ಪಿಂಚಣಿದಾರರು ಈಗಾಗಲೇ ಎಪ್ಪತ್ತರ ಗಡಿ ದಾಟಿದ್ದಾರೆ. ಅವರಿಗೆ ಕನಿಷ್ಠ ₹1,000 ಪಿಂಚಣಿ ನೀಡಲಾಗುತ್ತಿದೆ. ಈ ಮೊತ್ತದಲ್ಲಿ ಜೀವನ ನಿರ್ವಹಣೆ ಸಾಧ್ಯವೆ? ಇನ್ನೊಂದು ದಶಕದೊಳಗೆ ಈ ಪಿಂಚಣಿದಾರರ ಸಂಖ್ಯೆಯೇ ಕಡಿಮೆಯಾಗಲಿದೆ. ಗೌರವಯುತ ಬದುಕಿಗೆ ಮಾಸಿಕ ಕನಿಷ್ಠ ₹7,500 ಪಿಂಚಣಿ ಮತ್ತು ತುಟ್ಟಿಭತ್ಯೆ ನಿಗದಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಲಾಗಿದೆ. ಆದರೆ, ಕೇಂದ್ರ ಕಾರ್ಮಿಕ ಸಚಿವರು ಈ ಬಗ್ಗೆ ಅಂತಿಮ ನಿರ್ಧಾರಕೈಗೊಂಡಿಲ್ಲ. ನೌಕರರ ಭವಿಷ್ಯ ನಿಧಿ ಸಂಘಟನೆಯು ಹಿರಿಯರ ಭವಿಷ್ಯವನ್ನು ಕತ್ತಲಿಗೆ ದೂಡದೆ ಪಿಂಚಣಿ ಮೊತ್ತ ಹೆಚ್ಚಳಕ್ಕೆ ಕ್ರಮವಹಿಸಬೇಕಿದೆ.
-ಕೆ.ಟಿ. ಸೋಮಶೇಖರ್, ಬೆಂಗಳೂರು
****
ಕರಾವಳಿ ಉತ್ಸವ: ಕನ್ನಡ ಪ್ರತಿಭೆ ಉಪೇಕ್ಷೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ 22ರಿಂದ 27ರವರೆಗೆ ‘ಕರಾವಳಿ ಉತ್ಸವ’ಕ್ಕೆ ಸಿದ್ಧತೆ ನಡೆದಿದೆ. ಇದಕ್ಕಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹6 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇವೆಂಟ್ ಮ್ಯಾನೇಜ್‌ಮೆಂಟ್‌ನವರು ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಗಾಯಕರಾದ ಶಂಕರ್ ಮಹದೇವನ್, ಮೀಕಾ ಸಿಂಗ್, ಸೋನು ನಿಗಮ್, ರಫ್ತಾರ್, ಮಹಮ್ಮದ್ ದಾನೀಶ್, ದಲೇರ್ ಮೆಹಂದಿ ಭಾಗವಹಿಸಲಿದ್ದಾರೆ. ಇವರನ್ನು ನೋಡಿದರೆ ಕಾರವಾರವು ಕರ್ನಾಟಕದಲ್ಲಿದೆಯೇ ಎನ್ನುವ ಅನುಮಾನ ಮೂಡುತ್ತದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ, ರಾಜ್ಯದಲ್ಲಿರುವ ಸ್ಥಳೀಯ ಗಾಯಕರು ಮತ್ತು ಸಂಗೀತಗಾರರು ಕಾಣದಿರುವುದು ಸೋಜಿಗವೇ ಸರಿ. ಇದು ಅನ್ಯಾಯದ ಪರಮಾವಧಿಯಲ್ಲದೆ ಬೇರೇನೂ ಅಲ್ಲ.
-ಚಂದ್ರಕಾಂತ ನಾಮಧಾರಿ, ಅಂಕೋಲಾ
****
ಅಪರಾಧಿಗೆ ಬೆಂಬಲ: ಸಮಾಜಕ್ಕೆ ಕಂಟಕ
ನ್ಯಾಯಾಲಯದ ಪರಿಭಾಷೆಯಲ್ಲಿ ಅಪರಾಧಗಳನ್ನು ಅಲ್ಪ, ಗಂಭೀರ ಮತ್ತು ಹೀನ ಎಂದು ವರ್ಗೀಕರಿಸಲಾಗಿದೆ. ಹೀನ ಅಪರಾಧಗಳೆಂದರೆ ಕೊಲೆ, ಅತ್ಯಾಚಾರ ಇತ್ಯಾದಿ. ಇಂತಹ ಅಪರಾಧ ಎಸಗಿದವರಲ್ಲಿ ರಾಜಕೀಯ ಮತ್ತು ಧಾರ್ಮಿಕ ನಾಯಕರಿದ್ದಾರೆ. ಇವರು ಒಬ್ಬರಿಗೊಬ್ಬರು ಬೆಂಬಲವಾಗಿದ್ದಾರೆ. ಇವರಿಂದ ಯಾರು ನೇರವಾಗಿ ಬಲಿಯಾಗಿದ್ದಾರೋ ಅವರಷ್ಟೆ ಇವರ ವಿರುದ್ಧ ಹೋರಾಡುತ್ತಾರೆ. ಉಳಿದವರು ತಮಗೆ ಸಂಬಂಧವಿಲ್ಲದಂತೆ ತಟಸ್ಥರಾಗಿರುತ್ತಾರೆ. ಇನ್ನೂ ದೌರ್ಭಾಗ್ಯ
ಎಂದರೆ, ಇಂತಹ ಅಪರಾಧಿಗಳ ಹಿಂದೆ ಮುಂದೆ ಕುಣಿದಾಡುವ ಲಕ್ಷಾಂತರ ಆರಾಧಕರಿದ್ದಾರೆ. ಸಾಮಾನ್ಯ ಜನರು ಇವರನ್ನು ಸಮಾಜಕ್ಕೆ ಅಪಾಯಕಾರಿ ಎಂದು ಪರಿಗಣಿಸುವುದಿಲ್ಲ. ಆದರೆ, ಸಮಾಜ, ದೇವರ ಹೆಸರಿನಲ್ಲಿ ನಡೆಯುವ ಮೋಸ ಮತ್ತು ಧಾರ್ಮಿಕ ಆಚರಣೆಗಳನ್ನು ಮಾನವೀಯ ಕಳಕಳಿಯಿಂದ ಪ್ರಶ್ನಿಸುವವರನ್ನು ಅಪಾಯಕಾರಿ ಎಂದು ಪರಿಗಣಿಸುವುದು ದುರದೃಷ್ಟಕರ.
-ಶಶಿಧರ ಪಾಟೀಲ, ಬಾಗಲಕೋಟೆ
****
ಸಾಮಾಜಿಕ ಬಹಿಷ್ಕಾರ ಮಸೂದೆಗೆ ಸ್ವಾಗತ
ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ, ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಮಸೂದೆ ಮಂಡಿಸಿರುವುದು ಸ್ವಾಗತಾರ್ಹ. ಬಹುತೇಕವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ಜನಾಂಗದ ಜನರೇ ಸಾಮಾಜಿಕ ಬಹಿಷ್ಕಾರಕ್ಕೆ ತುತ್ತಾಗುತ್ತಾರೆ. ಅಂತರ್ಜಾತಿ ವಿವಾಹ, ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆ, ದೇವಸ್ಥಾನ ಪ್ರವೇಶ ಇತ್ಯಾದಿ ಪ್ರಕರಣಗಳಲ್ಲಿ ಬಲಾಢ್ಯರು, ಕೆಳಸ್ತರದ ಜನರ ಮೇಲೆ ಅಮಾನವೀಯವಾಗಿ ವರ್ತಿಸುತ್ತಾರೆ. ಮಸೂದೆಯು ಕಾನೂನು ರೂಪ ಪಡೆದು ನ್ಯಾಯಸಮ್ಮತವಾಗಿ ಜಾರಿಗೊಂಡರೆ ಸಂವಿಧಾನದ ಆಶಯ ಈಡೇರಿದಂತಾಗುತ್ತದೆ.
-ಪ್ರಜ್ವಲ್ ಜಿ.ಟಿ., ಕೆರಿಬೋಸಾಗ
****
ಅಜ್ಞಾನದ ಕತ್ತಲಿಗೆ ಅಕ್ಷರವೇ ದೀಪ
ಶಾಲೆಯೆಂದರೆ ನಾಲ್ಕು ಗೋಡೆಗಳ ಕಟ್ಟಡವಲ್ಲ; ಅದು ಸಾವಿರಾರು ಕನಸುಗಳು ಮೊಳಕೆಯೊಡೆಯುವ ಪವಿತ್ರ ತಾಣ. ‘ಒಬ್ಬ ವಿದ್ಯಾರ್ಥಿ ಇದ್ದರೂ ಶಾಲೆ ಮುಚ್ಚಲ್ಲ’ ಎನ್ನುವ ಸರ್ಕಾರದ ನಿರ್ಧಾರ ಕೇವಲ ಆಡಳಿತಾತ್ಮಕ ಘೋಷಣೆಯಾಗಬಾರದು. ವಿಶೇಷವಾಗಿ ಗಡಿಭಾಗದ ಕನ್ನಡ ಶಾಲೆಗಳು ನಮ್ಮ ಭಾಷೆ ಮತ್ತು ಸಂಸ್ಕೃತಿಯ ಜೀವಂತ ಸ್ಮಾರಕಗಳು. ಅಲ್ಲಿ ಒಂದು ಮಗುವಿದ್ದರೂ, ಅದರ ಕಣ್ಣಲ್ಲಿ ಜ್ಞಾನದ ದೀಪ ಹಚ್ಚುವ ಜವಾಬ್ದಾರಿ
ಯನ್ನು ಸರ್ಕಾರ ಹೊರಬೇಕಿದೆ. ಪ್ರತಿ ಮಗುವಿಗೂ ಕಲಿಯುವ ಹಕ್ಕಿದೆ; ಆ ಹಕ್ಕನ್ನು ರಕ್ಷಿಸುವುದು ನಾಡಿನ ಕರ್ತವ್ಯ. ಅಕ್ಷರ ಕಲಿಸುವ ಮಂದಿರಗಳು ಮುಚ್ಚಬಾರದು; ಅಲ್ಲಿ ಜ್ಞಾನದ ಗಂಟೆ ಸದಾ ಮೊಳಗುತ್ತಿರಬೇಕು. ಸರ್ಕಾರ ವಚನ ನೀಡಿದರೆ ಸಾಲದು; ಅದರ ಪರಿಪಾಲನೆಯನ್ನೂ ಮಾಡಬೇಕು.
-ಬಸವಚೇತನ ಎಂ.ಎಚ್., ಬೀದರ್