ADVERTISEMENT

ವಾಚಕರ ವಾಣಿ | ಸದಸ್ಯತ್ವ ನೋಂದಣಿಗೆ ಇರಲಿ ಮಾನದಂಡ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ನವೆಂಬರ್ 2021, 20:15 IST
Last Updated 24 ನವೆಂಬರ್ 2021, 20:15 IST

ಕನ್ನಡ ಸಾಹಿತ್ಯ ಪರಿಷತ್ತಿಗೆ ಸರ್ಕಾರದ ಅನುದಾನ ಹೆಚ್ಚು ಹೆಚ್ಚು ಬರತೊಡಗಿದ ಮೇಲೆ ಕನ್ನಡದ ಕೆಲಸಕ್ಕಿಂತ ಸಮ್ಮೇಳನಗಳ ವೈಭವೀಕರಣ ಮಹತ್ವ ಪಡೆದಿದೆ. ಹಾಗಾಗಿ ಇದರ ಚುನಾವಣೆ ಮೇಲೆ ರಾಜಕಾರಣಿಗಳ ಹಸ್ತಕ್ಷೇಪ, ಜಾತಿ ಲೆಕ್ಕಾಚಾರ, ಹೆಚ್ಚು ಹಣ ಖರ್ಚು ಮಾಡುವವರು ಮಾತ್ರ ಚುನಾವಣೆಗೆ ನಿಲ್ಲುವ ಪರಿಸ್ಥಿತಿ ಉಂಟಾಗಿದೆ.

ಇತ್ತೀಚೆಗೆ ಕಸಾಪ ಸದಸ್ಯತ್ವ ‍ಪಡೆಯುತ್ತಿರುವವರಲ್ಲಿ ಹೆಚ್ಚಿನವರಿಗೆ ಚುನಾವಣಾ ಉದ್ದೇಶ ಇರುತ್ತದೆಯೇ ವಿನಾ ಪರಿಷತ್ತಿನ ಮೇಲಿನ ಆಸಕ್ತಿಯಲ್ಲ. ಮಂಡ್ಯದ ಕುಗ್ರಾಮವೊಂದರಲ್ಲಿ 600ಕ್ಕೂ ಹೆಚ್ಚು ಮಂದಿ ಸದಸ್ಯತ್ವ ಪಡೆದುಕೊಂಡಿರುವುದು ಇದೇ ಕಾರಣಕ್ಕೆ. ಜಿಲ್ಲಾ ಅಧ್ಯಕ್ಷ ಅಭ್ಯರ್ಥಿ ಲಕ್ಷ ಲಕ್ಷ ಖರ್ಚು ಮಾಡುವ ಪರಿಸ್ಥಿತಿ ಎದುರಾಗಿದೆ ಎಂದರೆ, ಕೇಂದ್ರ ಅಧ್ಯಕ್ಷಗಿರಿ ಅಭ್ಯರ್ಥಿ ಇನ್ನೆಷ್ಟು ಖರ್ಚು ಮಾಡಬಹುದು ಎಂಬುದನ್ನು ಊಹಿಸಿಕೊಳ್ಳಬಹುದು.

ಚೋಳರ ಕಾಲದಲ್ಲಿ ‘ಗ್ರಾಮ ಸಭೆ’ ಸದಸ್ಯ ಚುನಾವಣೆಗೆ ಸ್ಪರ್ಧೆ ಮಾಡಲು ಮಾನದಂಡಗಳು ಇದ್ದವು. ಅದರಲ್ಲಿ ಅವನಿಗೆ ವೇದದ ಜ್ಞಾನ ಇರಬೇಕಾದ ಅಂಶ ಒಂದು. ಅಂತಹುದರಲ್ಲಿ ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಲು, ಮತ ಹಾಕಲು ಮತ್ತು ಸದಸ್ಯತ್ವ ಪಡೆಯಲು ಮಾನದಂಡಗಳನ್ನು ರೂಪಿಸಲಿ. ಇಲ್ಲವಾದರೆ ಚುನಾವಣೆಗೆ ಸ್ಪರ್ಧಿಸುವ ಮಂದಿ ಚುನಾವಣಾ ಉದ್ದೇಶದಿಂದ ತಮ್ಮ ತಮ್ಮ ಕಡೆಯವರನ್ನು ಸದಸ್ಯರನ್ನಾಗಿ ನೋಂದಣಿ ಮಾಡುವ ಕಾರ್ಯಕ್ಕೆ ಕಡಿವಾಣ ಇಲ್ಲದಂತಾಗಿ ಈ ಸಂಸ್ಥೆಯ ಕಡೆ ಸಾಹಿತಿಗಳು ವಿಮುಖರಾಗುತ್ತಾರೆ. ಜೊತೆಗೆ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿಯನ್ನು 3ರಿಂದ 5 ವರ್ಷಕ್ಕೆ ಏರಿಕೆ ಮಾಡಿರುವುದು ಸೂಕ್ತವಲ್ಲ. ಅದನ್ನು ಮತ್ತೆ 3 ವರ್ಷಕ್ಕೆ ನಿಗದಿಪಡಿಸುವುದು ಒಳ್ಳೆಯದು.

- ಸಿ.ಸಿದ್ದರಾಜು ಆಲಕೆರೆ,ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.