ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಗುರುವಾರ, 18 ಸೆಪ್ಟೆಂಬರ್ 2025

ವಾಚಕರ ವಾಣಿ
Published 17 ಸೆಪ್ಟೆಂಬರ್ 2025, 23:30 IST
Last Updated 17 ಸೆಪ್ಟೆಂಬರ್ 2025, 23:30 IST
   

ಬೇವು ಬಿತ್ತಿ ಮಾವು ಬಯಸಿದರೆ...

‘ಭಾರತೀಯ ಭಾಷೆಗಳನ್ನು ಪ್ರತಿಯೊಬ್ಬರು ಗೌರವಿಸಬೇಕು’ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಆದರೆ, ಇಂದಿಗೂ ಒಕ್ಕೂಟ ಭಾರತದ ಆಡಳಿತ ಹಿಂದಿ, ಇಂಗ್ಲಿಷ್‌ನಲ್ಲಿ ನಡೆಯುತ್ತಿದೆ. ಆಯಾ ರಾಜ್ಯದೊಂದಿಗೆ ಆಯಾ ರಾಜ್ಯದ ಭಾಷೆಯಲ್ಲೇ ಆಡಳಿತ ವ್ಯವಹಾರ ನಡೆಸಲು ಕೇಂದ್ರಕ್ಕೆ ಏನು ತೊಂದರೆ? ಒಕ್ಕೂಟ ಭಾರತ ನಡೆಸುವ ಉದ್ಯೋಗ ನೇಮಕಾತಿ ಪರೀಕ್ಷೆಗಳು ಬಹುತೇಕ ಹಿಂದಿ, ಇಂಗ್ಲಿಷ್‌ನಲ್ಲಿ ನಡೆಯುತ್ತವೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆ ಮೂಲಕ ಪ್ರಾದೇಶಿಕ ಭಾಷೆಗಳ ಕತ್ತನ್ನು ಹಿಚುಕುತ್ತಿದ್ದರೆ ಕನ್ನಡ ಸೇರಿದಂತೆ ಭಾರತೀಯ ರಾಜ್ಯ ಭಾಷೆಗಳು ಹೇಗೆ ಬೆಳೆಯಲು ಸಾಧ್ಯ?

– ಗಿರೀಶ್ ಮತ್ತೇರ, ಚನ್ನಗಿರಿ

ADVERTISEMENT

************

ಬೆಂಗಳೂರಿಗರಿಗಷ್ಟೇ ಮನೆ ಸಾಕೇ? 

ಸುಪ್ರೀಂ ಕೋರ್ಟ್, ಕಟ್ಟಡದ ಸ್ವಾಧೀನಾನುಭವ ಪತ್ರ (ಒಸಿ) ಹಾಗೂ ನಿರ್ಮಾಣ ಮುಕ್ತಾಯ ಪತ್ರ ಪಡೆದಿರುವ ಕಟ್ಟಡಗಳಿಗಷ್ಟೇ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕೊಡಬೇಕೆಂದು ಕಳೆದ ವರ್ಷ ಆದೇಶಿಸಿತ್ತು. ಅದರಂತೆ ರಾಜ್ಯದಲ್ಲಿ ಅರ್ಹತೆ ಇಲ್ಲದ ಕಟ್ಟಡಗಳಿಗೆ ಈ ಸವಲತ್ತು ನಿಲ್ಲಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರವು 1,200 ಚದರ ಅಡಿವರೆಗಿನ ವಸತಿ ಕಟ್ಟಡಗಳಿಗೆ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ‘ಒಸಿ’ಯಿಂದ ವಿನಾಯಿತಿ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಆದೇಶಿಸಿದೆ. ಇದರಿಂದ ಬೆಂಗಳೂರಿನಲ್ಲಿ ಅಂದಾಜು 33 ಸಾವಿರ ಮನೆಗಳು ಅಥವಾ ನಿವೇಶನಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಸಿಗುತ್ತದೆ. 

ರಾಜಧಾನಿ ಹೊರತುಪಡಿಸಿ ರಾಜ್ಯದ ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಲಕ್ಷಾಂತರ ಮನೆಗಳ ನಿರ್ಮಾಣ ಕಾರ್ಯವು ‘ಒಸಿ’ ಇಲ್ಲದ ಕಾರಣಕ್ಕೆ ನಿಂತು ಹೋಗಿದೆ. ಬದುಕಿನಲ್ಲಿ ಒಂದು ಮನೆ ನಿರ್ಮಿಸಿಕೊಳ್ಳಬೇಕು ಎಂಬ ಲಕ್ಷಾಂತರ ಜನರ ಕನಸು ಅರ್ಧಕ್ಕೆ ನಿಂತಿದೆ. ಸರ್ಕಾರಕ್ಕೆ ಬೆಂಗಳೂರಿನ ಮೇಲಿರುವ ಕಾಳಜಿ, ಪ್ರೀತಿಯು ರಾಜ್ಯದ ಇತರ ನಗರಗಳ ಮೇಲೆ ಏಕಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ. 

– ರವಿ ಬಿ.ಎನ್., ಹರಿಹರ

************

ವೇಗದೂತ ಬಸ್‌ ನಿಲುಗಡೆ ಮಾಡಿ

ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ತೆರಳುವ ಬಿಎಂಟಿಸಿ ಬಸ್‌ಗಳ ನಿಲ್ದಾಣ, ಬೆಂಗಳೂರಿನ ಮಾದಾವರ ಮೆಟ್ರೊ ನಿಲ್ದಾಣದ ಬಳಿ ಇದೆ. ಈ ನಿಲ್ದಾಣದಲ್ಲಿ ಚಿತ್ರದುರ್ಗ, ತುಮಕೂರು ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿಯ ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುತ್ತಿಲ್ಲ. ಇದರಿಂದ ನೈಸ್ ರಸ್ತೆ ಮೂಲಕ ಪ್ರಾರಂಭಿಸಿರುವ ಬಿಎಂಟಿಸಿ ಬಸ್‌ ಸೇವೆ ಪಡೆಯಲು ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಬಸ್‌ಗಳ ನಿಲುಗಡೆಗೆ ಕೆಎಸ್‌ಆರ್‌ಟಿಸಿ ವಿಭಾಗವು
ಕ್ರಮವಹಿಸಬೇಕಿದೆ.

– ಚಂದ್ರಮೌಳಿ ಸ್ವಾಮಿ, ಕೂಡ್ಲಿಗಿ

************

ಗೌರವಧನ ಬಿಡುಗಡೆಗೆ ವಿಳಂಬ ಸರಿಯಲ್ಲ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ತರಬೇತಿ ಕೈಪಿಡಿಯಲ್ಲಿ ಸಮೀಕ್ಷೆದಾರರಿಗೆ ಸೂಕ್ತ ಗೌರವಧನ ನಿಗದಿಪಡಿಸಲಾಗು ವುದು ಎಂದು ಹೇಳಲಾಗಿದೆ. ಸೂಕ್ತ ಗೌರವಧನ ಎಂದರೆ ಎಷ್ಟು? ಅದನ್ನು ಮೊದಲೇ ನಿಗದಿಪಡಿಸಲಿ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆದ ಪರಿಶಿಷ್ಟ ಜಾತಿಯ ಒಳಮೀಸಲಾತಿ ಗಣತಿ ಮಾಡಿದವರಿಗೆ ₹3 ಸಾವಿರ ನೀಡುವುದಾಗಿ ಸರ್ಕಾರ ಹೇಳಿತ್ತು. ಸರ್ಕಾರವು ವರದಿ ಅಂಗೀಕರಿಸಿದರೂ ಇನ್ನೂ ಗಣತಿದಾರರ ಖಾತೆಗೆ ಹಣ ಜಮೆ ಆಗಿಲ್ಲ. ಸಮೀಕ್ಷೆ ವೇಳೆ ಶಿಕ್ಷಕರು ತಮ್ಮ ಹೆಂಡತಿ, ಮಕ್ಕಳು, ತಂದೆ–ತಾಯಿಯಿಂದ ದೂರವೇ ಇರುತ್ತಾರೆ. ಕುಟುಂಬಕ್ಕೆ ಸಮಯ ಕೊಡದೇ ದುಡಿಯುತ್ತಾರೆ. ಅವರಿಗೆ ಗೌರವಧನ ನೀಡುವಲ್ಲಿ ವಿಳಂಬ ಮಾಡುವುದು ಸರಿಯಲ್ಲ.

– ಮಹಾಂತೇಶ್ ಬಯ್ಯಾಪುರ, ಸವದತ್ತಿ

************

ಉತ್ಸವ ಸಾಲದು; ಅಭಿವೃದ್ಧಿ ಆಗಲಿ

ರಾಜ್ಯ ಸರ್ಕಾರದಿಂದ ‘ಕಲ್ಯಾಣ ಕರ್ನಾಟಕ ಉತ್ಸವ’ ಆಚರಿಸಿರುವುದು ಸರಿಯಷ್ಟೆ. ಕಲ್ಯಾಣ ಕರ್ನಾಟಕವೆಂದು ಘೋಷಿಸಿದರೂ ಈ ವ್ಯಾಪ್ತಿಯ ಜಿಲ್ಲೆಗಳು ಅಭಿವೃದ್ಧಿ ಯಾಗಿಲ್ಲ. ಇದರ ಹಿಂದೆ, ಈ ಭಾಗದ ರಾಜಕೀಯ ನಾಯಕರ ದುರ್ಬಲ ಇಚ್ಛಾಶಕ್ತಿ ಎದ್ದು ಕಾಣುತ್ತಿದೆ. ಕಳೆದ ವರ್ಷ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ಜರುಗಿತ್ತು. ಸಭೆಯ ಪ್ರಮುಖ ನಿರ್ಣಯಗಳು ಇನ್ನೂ ಜಾರಿಯಾಗಿಲ್ಲ.

ಈ ಭಾಗದ ಜನರು ಬೆಂಗಳೂರು, ಮುಂಬೈ, ಪುಣೆಗೆ ಉದ್ಯೋಗ ಅರಸಿ ಗುಳೆ ಹೋಗುವುದು ತಪ್ಪುತ್ತಿಲ್ಲ. ಕಲ್ಯಾಣದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕಿದೆ.

– ದುರಗಪ್ಪ ಬಂಡೇಬಾವಿ, ಲಿಂಗಸುಗೂರ

************

ಕುವೆಂಪು ‘ಭಾರತ ರತ್ನ’ಕ್ಕೆ ಅರ್ಹರು

ಕುವೆಂಪು ಕನ್ನಡ ನಾಡಿನ ಸಾಕ್ಷಿಪ್ರಜ್ಞೆ. ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದವರಲ್ಲಿ ಅಗ್ರಗಣ್ಯರು. ಜಗದಗಲಕ್ಕೂ ಮನುಜ ಮತ ವಿಶ್ವಪಥ ಎಂಬ ಸಂದೇಶ ಸಾರಿದ ಮೇರು ವ್ಯಕ್ತಿತ್ವ. ರಸಋಷಿಗೆ ಮರಣೋತ್ತರವಾಗಿ ‘ಭಾರತ ರತ್ನ’ ನೀಡಬೇಕೆಂದು ರಾಜ್ಯ ಸಚಿವ ಸಂಪುಟವು ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಶ್ಲಾಘನೀಯ. ಕೇಂದ್ರವು ಕುವೆಂಪು ಅವರಿಗೆ ‘ಭಾರತ ರತ್ನ’ ಘೋಷಿಸಿದರೆ ಪ್ರಶಸ್ತಿಯ ಮೌಲ್ಯ ಮತ್ತಷ್ಟು ಹೆಚ್ಚಲಿದೆ.

– ಅನಿಲ್ ಕುಮಾರ್, ನಂಜನಗೂಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.