ADVERTISEMENT

ವಾಚಕರ ವಾಣಿ | ಪ್ರಾಮಾಣಿಕ ಗಟ್ಟಿತನ ತೋರಬೇಕಿದೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 19:30 IST
Last Updated 21 ಮಾರ್ಚ್ 2022, 19:30 IST

‘ವಿಶ್ವವಿದ್ಯಾಲಯಗಳಲ್ಲಿನ ನೇಮಕಾತಿ ಲೋಪ ಸರಿಪಡಿಸುವ ಕೆಲಸ ತಕ್ಷಣ ಆಗಲಿ’ ಎಂದು ಆಗ್ರಹಿಸಿರುವ ಸಂಪಾದಕೀಯದಲ್ಲಿನ (ಪ್ರ.ವಾ., ಮಾರ್ಚ್‌ 21) ವಿಷಯ ನೂರಕ್ಕೆ ನೂರರಷ್ಟು ಸತ್ಯವಾದುದು. ಕಳೆದ ಹತ್ತಾರು ವರ್ಷಗಳಿಂದ ವಿಶ್ವವಿದ್ಯಾಲಯದ ಆಡಳಿತವನ್ನು ಹತ್ತಿರದಿಂದ ಗಮನಿಸಿರುವಂತೆ, ಕುಲಪತಿಯಿಂದ ಹಿಡಿದು ವಿಶ್ವವಿದ್ಯಾಲಯದಲ್ಲಿ ಕಸ ಗುಡಿಸುವ ವ್ಯಕ್ತಿಯ ನೇಮಕದವರೆಗೂ ಅಕ್ರಮಗಳು ನಡೆಯುತ್ತಲೇ ಇವೆ. ಕುಲಪತಿ ಸ್ಥಾನದ ಆಕಾಂಕ್ಷಿಗಳು ಬಡ್ಡಿ ದಂಧೆ ನಡೆಸುವವರ ಬಳಿ ಶೇ 10ರ ಬಡ್ಡಿ ದರದಲ್ಲಿ ಕೋಟಿಗಟ್ಟಲೆ ಸಾಲ ಪಡೆದು ಸಂಬಂಧಿಸಿದವರಿಗೆ ತಲುಪಿಸಿ ಕುಲಪತಿ ಆಗಿರುವ ಉದಾಹರಣೆಗಳು ಕರ್ನಾಟಕದಲ್ಲಿವೆ. ಇತ್ತೀಚಿನ ದಿನಗಳಲ್ಲಿ ಕುಲಪತಿಗಳ ಅಕ್ರಮ ನೇಮಕ, ವಿಶ್ವವಿದ್ಯಾಲಯಗಳಲ್ಲಿ ನೇಮಕಗೊಂಡ ಶಿಕ್ಷಕರಿಗೆ ಕನಿಷ್ಠ ವಿದ್ಯಾರ್ಹತೆಯೂ ಇಲ್ಲ ಎಂದು ನ್ಯಾಯಾಲಯವು ನೇಮಕಾತಿಯನ್ನು ರದ್ದುಪಡಿಸಿ ತೀರ್ಪು ನೀಡಿರುವ ಪ್ರಕರಣಗಳೂ ಇವೆ. ಅಕ್ರಮವಾಗಿ ನೇಮಕಾತಿಯಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದರೂ ಅಂತಹ ನೇಮಕಾತಿಗೆ ಕಾರಣರಾದವರಿಗೆ ಯಾವ ಶಿಕ್ಷೆಯೂ ಆಗದಿರುವುದು ಮಾತ್ರ ನಮ್ಮ ವ್ಯವಸ್ಥೆಯ ದುರಂತವೇ ಸರಿ.

ನೇಮಕಾತಿಯಲ್ಲಿ ಸಾಮರ್ಥ್ಯ ಮತ್ತು ಅರ್ಹತೆಯನ್ನು ಅಳತೆಗೋಲಾಗಿ ಇರಿಸಿಕೊಳ್ಳುವಂತಹ ವ್ಯವಸ್ಥೆಯನ್ನು ತರಲಾಗುವುದೆಂದು ಶಿಕ್ಷಣ ಸಚಿವರು ಪದೇ ಪದೇ ಹೇಳಿಕೆ ನೀಡುತ್ತಿರುತ್ತಾರೆ. ಆದರೆ ವ್ಯವಸ್ಥೆ ಮಾತ್ರ ಬದಲಾಗುತ್ತಿಲ್ಲ. ಅಂತಹ ಪ್ರಾಮಾಣಿಕ ಗಟ್ಟಿತನ ತೋರಿಸುವ ಸಚಿವರ ಅಗತ್ಯವಿದೆ. ಕನಿಷ್ಠಪಕ್ಷ ಅಂತಹ ಗಟ್ಟಿತನ ತೋರಿಸುವ ರಾಜ್ಯಪಾಲರಾದರೂ ಇದ್ದರೆ ಶಿಕ್ಷಣ ಕ್ಷೇತ್ರದ ಮೌಲ್ಯ ಉಳಿದೀತು.

-ಜಯಂತ ಕೆ.ಎಸ್., ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.