ವಸುಧೇಂದ್ರ ಅವರ ‘ನೈತಿಕತೆಗೆ ಕಳಂಕ’ ಪತ್ರಕ್ಕೆ (ವಾ.ವಾ., ಜುಲೈ 23) ಈ ಪ್ರತಿಕ್ರಿಯೆ. ಬೇರೆ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾಗುತ್ತಿರುವ ಉತ್ತಮ ಕೃತಿಗಳು ಜನಮಾನಸವನ್ನು ಸೆಳೆಯುತ್ತಿವೆ. ಆದರೆ ಸತ್ವಹೀನ ವಿಷಯಗಳಾಗಿದ್ದರೂ ‘ಭಾಷಾ ಗಿಮಿಕ್’ ಮಾಡುತ್ತಾ ಕನ್ನಡಿಗರ ಮನ ಸೆಳೆದಿದ್ದ ಕೆಲವು ಲೇಖಕರಲ್ಲಿ ಅನ್ಯ ಭಾಷೆಯಿಂದ ಬರುತ್ತಿರುವ ಉತ್ತಮ ಕೃತಿಗಳು ಕಳವಳ ಉಂಟುಮಾಡುತ್ತಿವೆ ಎಂದೆನಿಸುತ್ತಿದೆ.
ಯಾವುದೇ ಕೃತಿಯನ್ನು ಭಾಷಾಂತರ ಮಾಡುವಾಗ, ಕೃತಿಸ್ವಾಮ್ಯ ಪಡೆದವರಿಂದ ಪೂರ್ವಾನುಮತಿ ಪಡೆಯಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ದೇಶದಲ್ಲಿ ಸೌಹಾರ್ದ ಸ್ಥಾಪಿಸಲು ಸಹಾಯ ಮಾಡುವ ಕೃತಿಗಳ ಅನುವಾದಕ್ಕೆ ಮೂಲ ಲೇಖಕರ ಅನುಮತಿಗಾಗಿ ಕಾಯುತ್ತ ಕೂಡುವುದು, ಆ ಕೃತಿಯ ಪ್ರಸ್ತುತತೆ ಹೊಸಕಿ ಹಾಕಬಲ್ಲದು. ತುರ್ತು ಸಂದರ್ಭದಲ್ಲಿ ಎಷ್ಟೋ ಸಲ ವಿಧ್ಯುಕ್ತತೆಯನ್ನು ಬದಿಗಿಟ್ಟು ಪ್ರಮುಖ ವಿಚಾರಗಳನ್ನು ಜನರಿಗೆ ತಲುಪಿಸುವ ಕೆಲಸವು ಸಮಾಜದ ಒಳಿತಿನ ದೃಷ್ಟಿಯಿಂದ ಬಹು ಮುಖ್ಯವಾಗಿರುತ್ತದೆ.
ಸಾಹಿತ್ಯ ಮತ್ತು ಪ್ರಖರ ವಿಚಾರಗಳನ್ನು ಮಾರಾಟದ ಸರಕಾಗಿಸುವುದು ಸಲ್ಲದು. ಮಹತ್ವದ ಕೃತಿಯನ್ನು ಮಾನವ ಕುಲಕೋಟಿಗೆ ತಲುಪಿಸುವ ಕೆಲಸವು ಲೇಖಕನಿಗೆ ಮತ್ತು ಆ ಮೂಲಕ ಜನರಿಗೆ ಸಲ್ಲಿಸುವ ಉದಾರ ಮತ್ತು ಉಚಿತ ಸೇವೆಯೆಂದೇ ಪ್ರಕಾಶಕರು ಭಾವಿಸಬೇಕು. ಕನ್ನಡದಲ್ಲಿ ಓದುಗರ ಸಂಖ್ಯೆಯೇ ಕ್ಷೀಣಿಸುತ್ತಿರುವಾಗ, ನಾವು- ಪ್ರಕಾಶಕರು ಕೊಟ್ಯಧೀಶರಾಗಲು ಹವಣಿಸುತ್ತಿಲ್ಲ.
ಈಗಾಗಲೇ ಅನೇಕ ಪ್ರಕಾಶನ ಸಂಸ್ಥೆಗಳು ಮುಚ್ಚಿಹೋಗಿವೆ. ಕೆಲವು ಅವಸಾನದ ಅಂಚಿಗೆ ಬಂದು ನಿಂತಿವೆ ಎಂಬುದನ್ನು ಗಮನಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.