ADVERTISEMENT

ಫಿಲ್ಮ್ ಸಿಟಿ ಬೇಡ, ನಗರಕ್ಕೆ ಹೊಸ ‘ಶ್ವಾಸಕೋಶ’ ಬೇಕು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 16:27 IST
Last Updated 18 ಸೆಪ್ಟೆಂಬರ್ 2019, 16:27 IST

ಬೆಂಗಳೂರಿನ ಅಂಚಿನಲ್ಲಿರುವ ರೋರಿಕ್ ಎಸ್ಟೇಟನ್ನು ‘ಫಿಲ್ಮ್ ಸಿಟಿ’ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಈ ನಗರ ತನ್ನ ಸಹಜ ಚೆಲುವು, ತಣ್ಣನೆಯ ಹವಾಮಾನ, ನೈಸರ್ಗಿಕ ಭದ್ರತೆಯಿಂದಾಗಿ ಜನಕೋಟಿಯನ್ನು ಆಕರ್ಷಿಸಿಕೊಂಡು ಈಗಾಗಲೇ ಹೊರಲಾರದ ಹೊರೆ ಹೊತ್ತಿದೆ. ಧಾರಣಶಕ್ತಿಯನ್ನು ಕಳೆದುಕೊಂಡಿದೆ. ಫಿಲ್ಮ್ ಸಿಟಿಯನ್ನು ನಿರ್ಮಿಸಿದರೆ ವಾಹನ ದಟ್ಟಣೆ, ಪ್ರವಾಸಿಗರ ದಂಡು, ನೀರಿಗಾಗಿ ಬೇಡಿಕೆ, ತ್ಯಾಜ್ಯದ ರಾಶಿ, ವನ್ಯಜೀವಿಗಳ ಸಂಕಷ್ಟ ಎಲ್ಲವೂ ಹೆಚ್ಚಲಿವೆ. ಇಷ್ಟಕ್ಕೂ ಮನರಂಜನೆಯ ಹಪಹಪಿಯಿಂದಾಗಿಯೇ ನೆಲ, ನೀರು, ಗಾಳಿಯನ್ನೆಲ್ಲ ಈ ದುಃಸ್ಥಿತಿಗೆ ತಂದಿದ್ದೇವೆ. ಇನ್ನೆಷ್ಟು ಕೃತಕ ರಂಜನೆ ಬೇಕು ನಮಗೆ?

ಕಳೆದ ನೂರು ವರ್ಷಗಳಲ್ಲಿ ಈ ನಗರದಲ್ಲಿ ಏನೆಲ್ಲ ಕೃತಕಗಳನ್ನು ನಿರ್ಮಿಸಿಕೊಂಡ ನಾವು, ಒಂದೇ ಒಂದು ಹೊಸ ಲಾಲ್‍ಬಾಗನ್ನಾಗಲೀ ಕಬ್ಬನ್ ಪಾರ್ಕನ್ನಾಗಲೀ ನಿರ್ಮಾಣ ಮಾಡಿಲ್ಲ. ಬದಲಿಗೆ ಪ್ರಕೃತಿ ನೀಡಿದ ಎಲ್ಲ ಸವಲತ್ತು ಗಳನ್ನೂ ದುರುಪಯೋಗ ಮಾಡಿಕೊಂಡು ಇದನ್ನೊಂದು ನರಕ ಮಾಡಿದ್ದೇವೆ. ಇಲ್ಲಿ ಮತ್ತೊಂದು ಮಾಯಾನಗರಿ ಬೇಕಿಲ್ಲ. ಹೊಸದೊಂದು ‘ಶ್ವಾಸಕೋಶ’ ಬೇಕಿದೆ.

ನಾಗೇಶ ಹೆಗಡೆ, ಡಾ. ಕೇಶವ ಕೊರ್ಸೆ, ಡಾ. ರಾಜೇಗೌಡ ಹೊಸಹಳ್ಳಿ, ನ. ರವಿಕುಮಾರ್, ರಾಧಾಕೃಷ್ಣ ಭಡ್ತಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.