ADVERTISEMENT

ವಾಚಕರ ವಾಣಿ: ಶಿಥಿಲ ಆಡಳಿತ ವ್ಯವಸ್ಥೆಯ ಅಣಕ

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 19:31 IST
Last Updated 10 ಜೂನ್ 2022, 19:31 IST

ಶಂಕಿತ ಉಗ್ರ ಬೆಂಗಳೂರಿನಲ್ಲಿ ನಾಲ್ಕು ವರ್ಷಗಳ ಕಾಲ ಅಡಗಿದ್ದುದನ್ನು ಪತ್ತೆ ಮಾಡಿರುವ ನಮ್ಮ ಪೊಲೀಸರ ಕಾರ್ಯ ಶ್ಲಾಘನೀಯ. ಆದರೆ ಉಗ್ರನ ಪತ್ನಿ ರಾಜ್ಯದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿರು ವುದಲ್ಲದೆ ಆಧಾರ್ ಕಾರ್ಡ್ ಸಹ ಮಾಡಿಸಿಕೊಂಡಿರುವುದು ಶಿಥಿಲಗೊಂಡಿರುವ ನಮ್ಮ ಆಡಳಿತ ವ್ಯವಸ್ಥೆಯ ಅಣಕವಾಗಿದೆ. ಕಾಸು ಕೊಟ್ಟರೆ ರಾಜ್ಯವನ್ನೇ ಮಾರಲು ಸಿದ್ಧವಿರುವ ಕೆಲವು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಂದಾಗಿ ದೇಶವು ಇಂತಹ ಹಲವು ಅವಾಂತರಗಳನ್ನು ಎದುರಿಸಬೇಕಾಗಿದೆ.

ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ತೋಟಗಳಲ್ಲಿ ಕಡಿಮೆ ಕೂಲಿಗೆ ದುಡಿಯಲು ಬಂದಿರುವ ಬಾಂಗ್ಲಾದೇಶದ ಪ್ರಜೆಗಳು ಅಗತ್ಯ ದಾಖಲೆಗಳನ್ನು ಮಾಡಿಸಿಕೊಂಡು ಇಲ್ಲಿಯವರೇ ಆಗುತ್ತಿದ್ದಾರೆ. ದೇಶದ ಆಂತರಿಕ ಭದ್ರತೆಗೆ ಆತಂಕ ತಂದೊಡ್ಡುವ ಸಾಧ್ಯತೆ ಇರುವ ಈ ವಿದೇಶಿಯರನ್ನು ದೇಶದೊಳಕ್ಕೆ ಬಿಟ್ಟ, ಇವರಿಗೆ ಆಧಾರ್ ಕಾರ್ಡ್‌, ರೇಷನ್ ಕಾರ್ಡ್‌, ಚುನಾವಣಾ ಗುರುತಿನ ಚೀಟಿಯಂತಹ ದಾಖಲೆಗಳನ್ನು ಮಾಡಿಸಿಕೊಟ್ಟವರಿಗೆ ಕಠಿಣ ಶಿಕ್ಷೆ ಕೊಡಿಸಬೇಕಾಗಿದೆ. ಇಲ್ಲದಿದ್ದರೆ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿನ ಮೂಲನಿವಾಸಿಗಳು ಅಸ್ಸಾಂನಂತಹ ರಾಜ್ಯವು ಇನ್ನೂ ಎದುರಿಸುತ್ತಿರುವ ಸಮಸ್ಯೆಗಳನ್ನು ಎದುರಿಸುವ ಕಾಲ ಬಹುದೂರ ಇರಲಾರದು ಎನಿಸುತ್ತದೆ.

-ಮೋದೂರು ಮಹೇಶಾರಾಧ್ಯ, ಕಲ್ಕುಣಿಕೆ, ಹುಣಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.