ADVERTISEMENT

ವಾಚಕರ ವಾಣಿ | ತಿಪ್ಪಗೊಂಡನಹಳ್ಳಿಗೆ ನೇತ್ರಾವತಿ ಬಲಿ ಬೇಡ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 19:30 IST
Last Updated 25 ಮಾರ್ಚ್ 2022, 19:30 IST

ಒಂದು ಕಾಲದಲ್ಲಿ ಬೆಂಗಳೂರಿಗೆ ನೀರಿನ ಸೆಲೆಯಾಗಿದ್ದ ತಿಪ್ಪಗೊಂಡನಹಳ್ಳಿ ಅಣೆಕಟ್ಟನ್ನು ಪುನರುಜ್ಜೀವನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಶ್ಲಾಘನೀಯ. ಅಲ್ಲಿನ ಹೂಳೆತ್ತಲು ಮುಂದಾಗುವುದರ ಜೊತೆಗೆ ಸುತ್ತಲಿನ ಕಾವೇರಿಯ ಉಪನದಿಗಳೆಡೆಗೆ ತುರ್ತಾಗಿ ಗಮನಹರಿಸಬೇಕಿದೆ. ದೂರದ ಎತ್ತಿನಹೊಳೆಯ ನೀರನ್ನು ಚಿಕ್ಕಬಳ್ಳಾಪುರಕ್ಕೆ ಹೊತ್ತುತರುವ ಕಾರ್ಯದಲ್ಲಿ ಆಗುತ್ತಿರುವ ಅರಣ್ಯನಾಶಕ್ಕೆ ಸಾಕ್ಷಿಯಾಗಿದ್ದೇವೆ. ತಿಪ್ಪಗೊಂಡನಹಳ್ಳಿಗೆ ನೀರು ತರಲು ಎತ್ತಿನಹೊಳೆಯ ಮೇಲೆ ಮತ್ತಷ್ಟು ಭಾರ ಹಾಕುವುದನ್ನು ನಿಲ್ಲಿಸಿ, ಅರ್ಕಾವತಿ ಪಾತ್ರವನ್ನು ಶುಚಿಗೊಳಿಸಿದರೆ ಲಾಭದಾಯಕವಾಗಬಲ್ಲದು. ಕುಮುದ್ವತಿ, ಮಂಗಳಮುಖಿ, ಅರ್ಕಾವತಿ ನದಿಗಳು ಸೇರಿದಂತೆ ಹೆಸರಘಟ್ಟದಂತಹ ದೊಡ್ಡಕೆರೆಗಳೇ ತಿಪ್ಪಗೊಂಡನಹಳ್ಳಿಯ ಮೂಲಾಧಾರ. ಮಳೆಗಾಲದಲ್ಲಿ ಕೆರೆ–ಕೆರೆ ಸೇರಿ, ದೊಡ್ಡನದಿಯಂತೆ ಹರಿದು ತಿಪ್ಪಗೊಂಡನಹಳ್ಳಿ ಸೇರಿದ್ದನ್ನು ಕಂಡೇ ನಮ್ಮ ಹಿರಿಯರು ಅಲ್ಲಿ ಡ್ಯಾಂ ನಿರ್ಮಿಸಿರುವುದು.

ಗ್ರಾಮಾಂತರ ಬೆಂಗಳೂರಿನ ಮಳೆಯೇ ಈ ಎಲ್ಲ ಕೆರೆ, ನದಿಗಳ ಮೂಲ. ಮಳೆಗಾಲದಲ್ಲಿ ಸುಗಮವಾಗಿ ನೀರು ಹರಿಯುವಂತೆ ಮಾಡಲು, ಇಡೀ ಅರ್ಕಾವತಿ ಪಾತ್ರವನ್ನು ಸನ್ನದ್ಧಗೊಳಿಸಬೇಕು. ಜೊತೆಗೆ, ತಿಪ್ಪಗೊಂಡನಹಳ್ಳಿಗೆ ಹರಿಯುತ್ತಿರುವ ಕಾರ್ಖಾನೆಯ ವಿಷವನ್ನೂ ತಡೆಯಬೇಕು. ಇವು ದೀರ್ಘಕಾಲದಲ್ಲಿ ಬೆಂಗಳೂರಿನ ಕುಡಿಯುವ ನೀರಿಗೆ ಪರಿಹಾರವೇ ವಿನಾ ನೂರಾರು ಕಿಲೊಮೀಟರ್ ದೂರದ ಪಶ್ಚಿಮಘಟ್ಟದ ನಾಶದಿಂದಲ್ಲ.

–ಶಾಂತರಾಜು ಎಸ್.ಮಳವಳ್ಳಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.