ADVERTISEMENT

ವಾಚಕರ ವಾಣಿ: ನಾಟಿ ಔಷಧ ಪದ್ಧತಿ ನಶಿಸದಿರಲಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 19:30 IST
Last Updated 20 ಸೆಪ್ಟೆಂಬರ್ 2020, 19:30 IST

ಸಾಗರ ಸಮೀಪದ ನರಸೀಪುರದಲ್ಲಿ ನಾಟಿ ಔಷಧ ನೀಡುವುದನ್ನು ಉಪವಿಭಾಗಾಧಿಕಾರಿ ಆದೇಶದ ಮೇರೆಗೆ ಸ್ಥಗಿತಗೊಳಿಸಲಾಗಿದೆ (ಪ್ರ.ವಾ., ಸೆ. 13). ಅನೇಕ ಕಾಯಿಲೆಗಳಿಗೆ ಬಳಸುವ ನಾಟಿ ಔಷಧಕ್ಕೆ ಹೆಸರುವಾಸಿಯಾಗಿರುವ ನರಸೀಪುರದಲ್ಲಿ ಕ್ಷುಲ್ಲಕ ಕಾರಣಗಳನ್ನು ನೀಡಿ, ಔಷಧ ನೀಡುವುದನ್ನು ಏಕಾಏಕಿ ನಿಷೇಧಿಸಿದ್ದು ಖಂಡನೀಯ.

ನೆರೆಯ ರಾಜ್ಯಗಳಿಂದಲೂ ಔಷಧ ಪಡೆಯಲು ಜನ ಇಲ್ಲಿಗೆ ಬರುತ್ತಿದ್ದರು. ಯಾವುದೇ ಅಡ್ಡ ಪರಿಣಾಮ ಬೀರದ, ಕಡಿಮೆ ಖರ್ಚಿನಲ್ಲಿ ಸಿಗುವ ನಾಟಿ ಔಷಧವನ್ನು ಸರ್ಕಾರ ಪ್ರೋತ್ಸಾಹಿಸಿ ಬೆಳೆಸುವ ಬದಲು ನಿಷೇಧಿಸಲು ಮುಂದಾಗಿದ್ದು ಎಷ್ಟು ಸರಿ? ನಾಟಿ ಔಷಧ ಎಂದರೆ ಮುತ್ತಾತನ ಕಾಲದಿಂದಲೂ ಒಬ್ಬರಿಂದ ಒಬ್ಬರು ನೋಡಿ ಕಲಿತಿರುವ ವಿದ್ಯೆಯೇ ವಿನಾ ಯಾವುದೇ ಸಂಸ್ಥೆಯಲ್ಲಿ ತರಬೇತಿ ಪಡೆಯುವಂತಹದ್ದಲ್ಲ. ಸುಮಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ನಾಟಿ ಔಷಧ ಪದ್ಧತಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರಿಂದಲೇ ಜನ ಹುಡುಕಿಕೊಂಡು ಬರುತ್ತಿದ್ದರೇ ವಿನಾ ಯಾವುದೇ ಜಾಹೀರಾತು ಪ್ರಚಾರಗಳಿಂದಲ್ಲ ಎಂಬುದನ್ನು ನೆನಪಿಡಬೇಕು. ಮಲೆನಾಡಿನ ಅನೇಕ ಭಾಗಗಳಲ್ಲಿ ಇಂದಿಗೂ ಅಜ್ಜಂದಿರ ಕಾಲದಿಂದಲೂ ನಾಟಿ ಔಷಧ ಕೊಡುವ ಪದ್ಧತಿ ಇದೆ. ಇಲ್ಲಿ ಅನೇಕ ಜನಪ್ರತಿನಿಧಿಗಳೂ ಔಷಧ ತೆಗೆದುಕೊಂಡು ಗುಣಮುಖರಾಗಿರುವ ಉದಾಹರಣೆಗಳಿವೆ.

ನಿಷೇಧಿಸುವ ಪ್ರಕ್ರಿಯೆಯನ್ನು ಹೀಗೇ ಮುಂದುವರಿಸಿದರೆ, ಭವಿಷ್ಯದಲ್ಲಿ ನಾಟಿ ಔಷಧ ಪದ್ಧತಿ ನಶಿಸುವುದರಲ್ಲಿ ಎರಡು ಮಾತಿಲ್ಲ. ನಿಷೇಧದ ಹಿಂದೆ ಕಾಣದ ಕೈಗಳ ಕೈವಾಡವೂ ಇರಬಹುದು. ಸರ್ಕಾರ ಈ ಬಗ್ಗೆ ತುರ್ತಾಗಿ ಗಮನಹರಿಸಿ, ನಿಷೇಧವನ್ನು ಕೂಡಲೇ ಹಿಂಪಡೆದು ಷರತ್ತುಬದ್ಧ ಅನುಮತಿ ನೀಡಬೇಕು.

-ಮುರುಗೇಶ ಡಿ., ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.