ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ಹೃದಯಾಘಾತ: ಜಾಗೃತಿಯೇ ಮದ್ದು
‘ದಿಢೀರ್ ಹೃದಯಾಘಾತ: ಯಾಕೆ?’ ಲೇಖನದಲ್ಲಿ (ಪ್ರ.ವಾ., ಜೂನ್ 20) ಡಾ.ಲಕ್ಷ್ಮಣ ವಿ.ಎ. ಅವರು, ಹೃದಯಾಘಾತಕ್ಕೆ ಕಾರಣಗಳೇನು ಎಂಬುದನ್ನು ವಿವರಿಸಿದ್ದಾರೆ. ದೈಹಿಕ ಫಿಟ್‌ನೆಸ್ ಬಗ್ಗೆ ಯುವಪೀಳಿಗೆಗೆ ಅತಿಯಾದ
ಮೋಹ. ಇದು ಅವರನ್ನು ಸಾವಿನ ಬಾಗಿಲು ತಟ್ಟುವಂತೆ ಮಾಡುತ್ತಿದೆ. ಹೃದ್ರೋಗ ಕುರಿತು ಅವರಿಗಿರುವ ಅಜ್ಞಾನವೂ ಮತ್ತೊಂದು ಕಾರಣವಾಗಿದೆ. ಜಾಗೃತಿಯೊಂದೇ ಇದಕ್ಕೆ ಮದ್ದು.
⇒ಅನಿಲಕುಮಾರ ಮುಗಳಿ, ಧಾರವಾಡ
ಅರ್ಹರ ನೇಮಕವಾಗಲಿ
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳ ನೇಮಕಾತಿಯಲ್ಲಿ ಪದವೀಧರ ಮಹಿಳೆಯರಿಗೆ ಆದ್ಯತೆ ನೀಡುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮುಂದಾಗಿರುವುದು ವರದಿಯಾಗಿದೆ. ಇದು ಶ್ಲಾಘನೀಯ ಕ್ರಮವೂ ಆಗಿದೆ. ಆದರೆ, ಪೂರ್ವ ಪ್ರಾಥಮಿಕ ಶಿಕ್ಷಣವು ಚಿಣ್ಣರ ಬದುಕಿನಲ್ಲಿ ಮಹತ್ವದ ಘಟ್ಟ. ಮಕ್ಕಳ ಮನಸ್ಸನ್ನು ಸರಿಯಾಗಿ ಅರ್ಥೈಸಿಕೊಂಡು ಅವರಿಗೆ ಸ್ಪಂದಿಸುವವ
ರನ್ನು ನೇಮಿಸಬೇಕಿದೆ. ಉನ್ನತ ವಿದ್ಯಾಭ್ಯಾಸವೊಂದೇ ಈ ಹುದ್ದೆಗೆ ಮಾನದಂಡ
ವಾಗಬಾರದು. ಮಕ್ಕಳ ಕಲಿಕಾ ಸಾಮರ್ಥ್ಯ ಮತ್ತು ಅವರ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಒತ್ತು ನೀಡುವಂತಹ ಅಭ್ಯರ್ಥಿಗಳ ನೇಮಕದತ್ತ ಸರ್ಕಾರ ಗಮನ ಹರಿಸಲಿ.⇒ಗಿರಿಯಪ್ಪ ಕೊಳ್ಳಣ್ಣವರ, ತುಮಕೂರು
ಹಟಮಾರಿ ಧೋರಣೆ ಸರಿಯೇ?
ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಪರಿಸರವಾದಿಗಳು ಸೇರಿ ನಾಗರಿಕರ ಪ್ರಬಲ ವಿರೋಧವಿದೆ. ಇದನ್ನು ಲೆಕ್ಕಿಸದೆ ರಾಜ್ಯ ಸರ್ಕಾರವು ರೋಪ್ ವೇ ನಿರ್ಮಾಣಕ್ಕೆ ಮುಂದಾಗಿರುವುದು ಕಳವಳಕಾರಿ. ಈ ಬೆಟ್ಟವು ಭೌಗೋಳಿಕ ವೈವಿಧ್ಯಗಳಿಂದ ಕೂಡಿದೆ. ಬೆಂಗಳೂರು ಸೇರಿ ಸುತ್ತಲಿನ ಗ್ರಾಮಗಳಿಗೆ ಸ್ವಾಭಾವಿಕ ಜಲ ಸೆಲೆಯಾಗಿದೆ. ರೋಪ್ ವೇ ನಿರ್ಮಾಣದಿಂದ ಜಲಮೂಲಗಳಿಗೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚು. ರಿಯಲ್ ಎಸ್ಟೇಟ್ ಕುಳಗಳಿಗೆ ಅನುಕೂಲ ಕಲ್ಪಿಸುವ ಹುನ್ನಾರ ಇದರ ಹಿಂದಿದೆ. ಸರ್ಕಾರದ ನಿರ್ಧಾರವು ಹುಚ್ಚುತನದಿಂದ ಕೂಡಿದೆ. ತನ್ನ ಹಟಮಾರಿ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕಿದೆ.
⇒ರಮೇಶ್, ಬೆಂಗಳೂರು
ಎಲ್ಲದಕ್ಕೂ ಶಿಕ್ಷಕರೇ ಹೊಣೆಯಲ್ಲ
ಎರಡು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಕಳಪೆ ಸಾಧನೆ ತೋರಿದ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಜೊತೆಗೆ, ಅಂತಹ ಶಾಲೆಗಳ ಅನುದಾನ ಹಾಗೂ ಶಿಕ್ಷಕರ ವಾರ್ಷಿಕ ಮುಂಬಡ್ತಿ ಕಡಿತಕ್ಕೂ ರಾಜ್ಯ ಸರ್ಕಾರ ಮುಂದಾಗಿದೆ. ಇದೊಂದು ಸ್ವಾಗತಾರ್ಹ ಕ್ರಮವೇ ಆದರೂ ಕಳಪೆ ಫಲಿತಾಂಶಕ್ಕೆ ಶಿಕ್ಷಕರೊಬ್ಬರೇ ಕಾರಣವಲ್ಲ. ಅದಕ್ಕೆ ಶಿಕ್ಷಣ ವ್ಯವಸ್ಥೆಯಲ್ಲಿನ ಹಲವು ಲೋಪಗಳು ಕಾರಣವಾಗಿವೆ. ಹಲವು ಶಾಲೆಗಳಲ್ಲಿ ವಿಷಯವಾರು ಶಿಕ್ಷಕರೇ ಇಲ್ಲ. ಸುಸಜ್ಜಿತ ಕೊಠಡಿಗಳು ಮತ್ತು ಗ್ರಂಥಾಲಯವಿಲ್ಲ. ಶಿಕ್ಷಕರಿಗೆ ಕಾಲಕ್ಕೆ ತಕ್ಕಂತೆ ಪುನಶ್ಚೇತನ ಕಾರ್ಯಕ್ರಮ ನಡೆಸುವುದಿಲ್ಲ. ಅದರ ಬದಲಾಗಿ ಇಲಾಖೆಯ ಹತ್ತಾರು ಸುತ್ತೋಲೆಗಳಿಗೆ ಮಾಹಿತಿ ಒದಗಿಸುವುದರಲ್ಲೇ ಸಮಯ ವ್ಯರ್ಥವಾಗುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆ ಎಂದರೆ ನಿರ್ಗತಿಕ ಮಕ್ಕಳ, ಬಡವರ ಮಕ್ಕಳ ಶಾಲೆ ಎಂಬ ಹಣೆಪಟ್ಟಿ ಕಟ್ಟಲಾಗಿದೆ.
ಎಲ್ಲದಕ್ಕೂ ಶಿಕ್ಷಕರನ್ನೇ ಹೊಣೆ ಮಾಡಬಾರದು. ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ. ಕಡಿಮೆ ಫಲಿತಾಂಶಕ್ಕೆ ಆಯಾ ಬಿಇಒಗಳು ಮತ್ತು ಡಿಡಿಪಿಐ ಕೂಡ ಪರೋಕ್ಷವಾಗಿ ಕಾರಣರಾಗಿದ್ದಾರೆ. ಅವರ ಮುಂಬಡ್ತಿಯನ್ನೂ ತಡೆಹಿಡಿಯ ಬೇಕಲ್ಲವೇ?⇒ಸುರೇಂದ್ರ ಪೈ, ಭಟ್ಕಳ
ವಿಶೇಷ ಬೋಧನೆ ಮತ್ತು ಸವಾಲು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಳೆದ ವರ್ಷದಿಂದ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಕೊರತೆ ಇರುವ 3ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ಬೋಧನೆಯನ್ನು ಅನುಷ್ಠಾನಗೊಳಿಸಿದೆ. ಆದರೆ, ಇದಕ್ಕೆ ಸಂಬಂಧಿಸಿದ ನಮೂನೆಗಳು ಮತ್ತು ಅಂಕಿ ಅಂಶ ನಿರ್ವಹಿಸುವುದು ವಿದ್ಯಾರ್ಥಿ
ಗಳಿಗೆ ಕಲಿಸುವುದಕ್ಕಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಜೊತೆಗೆ, ಸವಾಲಿನಿಂದಲೂ ಕೂಡಿದೆ.ಈ ನಮೂನೆಗಳು ಮತ್ತು ಅಂಕಿ ಅಂಶಗಳಿಂದ
ವಿದ್ಯಾರ್ಥಿಗಳಿಗೆ ಮತ್ತು ಇಲಾಖೆಗೆ ಯಾವ ರೀತಿಯ ಉಪಯೋಗವಾಗುತ್ತದೆ ಎಂಬುದು ತಿಳಿಯದಾಗಿದೆ. ಆದರೆ, ಇದರಿಂದ ಮಾನವ ಸಂಪನ್ಮೂಲ ಮತ್ತು ಸಮಯ ವ್ಯರ್ಥವಾಗುತ್ತಿರುವುದು ಸತ್ಯ.
⇒ಅಶೋಕ ಎನ್.ಎಚ್., ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.