ವಾಚಕರ ವಾಣಿ
ಸೋಜಿಗದ ಸಂಗತಿ
ಮಡಿಕೇರಿಯಲ್ಲಿ ನಡೆದ ಸಂವಾದದಲ್ಲಿ ಅನುವಾದಕಿ ದೀಪಾ ಭಾಸ್ತಿ ಅವರು ಅನೇಕ ಭಾರತೀಯ ಭಾಷಿಕರಿಂದ ‘ಹಾರ್ಟ್ ಲ್ಯಾಂಪ್’ (ಮೂಲ: ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’) ಕೃತಿಯನ್ನು ತಮ್ಮ ಭಾಷೆಗಳಿಗೆ ಅನುವಾದಿಸಲು ಕೋರಿಕೆ ಬರುತ್ತಿದೆ. ಮಲಯಾಳ, ಅಸ್ಸಾಮಿ ಮತ್ತು ಒಡಿಶಾ ಭಾಷೆಗೆ ಅನುವಾದಿಸಲು ಅನುಮತಿ ನೀಡಿರುವೆ (ಪ್ರ.ವಾ., ಜೂನ್ 9) ಎಂದು ಹೇಳಿದ್ದನ್ನು ಓದಿ ಅಚ್ಚರಿಯಾಯಿತು. ಇದುವರೆಗೆ ಕನ್ನಡದ ನೂರಾರು ಪುಸ್ತಕಗಳು ನೇರವಾಗಿ ಮಲಯಾಳ ಭಾಷೆಗೆ ಅನುವಾದಗೊಂಡಿವೆ. ಅವು ಯಾವುವೂ ಇಂಗ್ಲಿಷ್ ಮೂಲಕ ಹೋಗಿಲ್ಲ.
ಭಾರತದ ಇತರ ರಾಜ್ಯಗಳಲ್ಲೂ ಕನ್ನಡದಿಂದ ನೇರವಾಗಿ ಆ ರಾಜ್ಯದ ಭಾಷೆಗೆ ಅನುವಾದಿಸಬಲ್ಲ ಕನ್ನಡಿಗರಿದ್ದಾರೆ. ಬುಕರ್ ಪ್ರಶಸ್ತಿಯು ಬಾನು ಮುಷ್ತಾಕ್ ಅವರ ಕಥೆಗಳಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿರುವುದು ನಿಜವಾದರೂ ಅವರ ಕೃತಿಯನ್ನು ಇತರ ಭಾರತೀಯ ಭಾಷೆಗಳಿಗೆ ಅನುವಾದಿಸಲು ಇಂಗ್ಲಿಷ್ ಅನುವಾದಕರ ಅನುಮತಿ ಪಡೆದು ಆ ಭಾಷೆಯ ಮೂಲಕ, ತಮ್ಮ ಭಾಷೆಗಳಿಗೆ ತರುವ ಸ್ಥಿತಿ ಬಂದಿರುವುದು ಒಂದು ದುರಂತವೇ ಸರಿ!
⇒ಲಕ್ಷ್ಮಿ ಚಂದ್ರಶೇಖರ್, ಬೆಂಗಳೂರು
ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವುದು ಬೇಡ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಹಲವು ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಬೆಂಗಳೂರಿನ ಪೊಲೀಸ್ ಕಮಿಷನರ್ ಸೇರಿ ಕೆಲವು ಅಧಿಕಾರಿಗಳ ವಿರುದ್ಧ ಅಮಾನತು ಅಸ್ತ್ರ ಪ್ರಯೋಗಿಸಿದೆ. ಇದಕ್ಕೆ ಬಹಳಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಪೊಲೀಸ್ ಇಲಾಖೆಯಲ್ಲೂ ಅಸಮಾಧಾನದ ಹೊಗೆ ಎದ್ದಿದೆ.
ವಿಜಯಿಯಾದ ಆರ್‌ಸಿಬಿ ತಂಡಕ್ಕೆ ಸರ್ಕಾರದಿಂದಲೇ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೀಗಿದ್ದರೂ ಪೊಲೀಸರನ್ನಷ್ಟೇ ಹೊಣೆ ಮಾಡುವುದು ಎಷ್ಟು ಸರಿ. ಮುಖ್ಯಮಂತ್ರಿಯವರ ನಿರ್ಧಾರವು ಪೊಲೀಸರ ಆತ್ಮಸ್ಥೈರ್ಯವನ್ನು ಕುಗ್ಗಿಸಲಿದೆ. ಅವರನ್ನಷ್ಟೇ ಬಲಿಪಶು ಮಾಡುವುದು ಸರಿಯಲ್ಲ. ಕೂಡಲೇ, ಅಮಾನತು ಆದೇಶವನ್ನು ಹಿಂಪಡೆಯುವುದು ಉತ್ತಮ.
⇒ಕೆ.ವಿ. ವಾಸು, ಮೈಸೂರು
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಸುಧಾರಣೆ ಕಾಣಲಿ...
‘ಅಭಿವೃದ್ಧಿ, ಜಿಡಿಪಿ ಮತ್ತು ಜನಹಿತ’ ಕುರಿತ (ವಿಶ್ಲೇಷಣೆ, ಜೂನ್ 9) ಲೇಖನವು ದೇಶದ ಒಟ್ಟು ಆಂತರಿಕ ಉತ್ಪಾದನೆ ಬಗೆಗಿನ ವಾಸ್ತವಾಂಶವನ್ನು ತೆರೆದಿಟ್ಟಿದೆ. ಈ ವರ್ಷದ ಅಂತ್ಯಕ್ಕೆ ಭಾರತವು ಜಪಾನ್ ದೇಶವನ್ನು ಹಿಂದಿಕ್ಕಿ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವರದಿ ಹೇಳಿದೆ.
ಆದರೆ ಶಿಕ್ಷಣ, ತಲಾ ಆದಾಯ, ಪೌಷ್ಟಿಕತೆ ಆಧಾರದ ಮೇಲೆ ಲೆಕ್ಕ ಹಾಕುವ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವು 130ನೇ ಸ್ಥಾನದಲ್ಲಿರುವುದು ಬೇಸರ ತಂದಿದೆ. ಜಿಡಿಪಿ ಗಾತ್ರ ಹೆಚ್ಚಾದ ಮಾತ್ರಕ್ಕೆ ದೇಶದ ಜನಸಾಮಾನ್ಯರ ಜೀವನಮಟ್ಟ ಸುಧಾರಿಸುವುದಿಲ್ಲ. ಸಂಪತ್ತು ಶ್ರೀಮಂತರ ಬಳಿ ಕ್ರೋಡೀಕರಣವಾಗುತ್ತಲೇ ಇದೆ.
ಭಾರತವು ಆರ್ಥಿಕತೆ ಸ್ಥಾನದಲ್ಲಿ ಹಂತ ಹಂತವಾಗಿ ಮೇಲಕ್ಕೇರಿದರೆ ಸಾಲದು. ಶಿಕ್ಷಣ, ನಿರುದ್ಯೋಗ, ಅಪೌಷ್ಟಿಕತೆ, ಬಡತನ ನಿರ್ಮೂಲನೆಗೆ ಒತ್ತು ನೀಡಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಸುಧಾರಣೆ ಕಾಯ್ದುಕೊಳ್ಳಬೇಕಿದೆ.
⇒ಶಾಂತಕುಮಾರ್, ಸರ್ಜಾಪುರ
ಪೂರ್ಣಾವಧಿ ಅಧಿಕಾರಿ ನೇಮಿಸಿ
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಪೂರ್ಣಾವಧಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಲ್ಲ. ಇದರಿಂದ ಮಂಡಳಿಯ ಕೆಲಸಗಳು ಸರಾಗವಾಗಿ ಆಗದೆ ಜನರು ಪರದಾಡುವಂತಾಗಿದೆ. ಸದ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯ ನಿರ್ವಹಣಾಧಿಕಾರಿಗೆ ಹೆಚ್ಚುವರಿಯಾಗಿ ವಕ್ಫ್ ಮಂಡಳಿಯ ಉಸ್ತುವಾರಿಯನ್ನು ನೀಡಲಾಗಿದೆ.
ಮತ್ತೊಂದೆಡೆ ಮಂಡಳಿಯ ಸಭೆಗಳು ನಿಯಮಿತವಾಗಿ ನಡೆಯುತ್ತಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಿ ಪೂರ್ಣಾವಧಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯ ನೇಮಕಕ್ಕೆ ಕ್ರಮಕೈಗೊಳ್ಳಬೇಕಿದೆ.
⇒ಅಬ್ದುಲ ರಝಾಕ ಡಿ. ಟಪಾಲ, ಕೆರೂರು
ಅಚ್ಚರಿ ತಂದ ಪ್ರಧಾನಿ ಮೌನ
ಬುಕರ್ ಪ್ರಶಸ್ತಿಗೆ ಭಾಜನರಾದ ಲೇಖಕಿ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರಿಗೆ ದೇಶದ ಅನೇಕ ಗಣ್ಯರು ಶುಭಾಶಯ ಕೋರಿ ಅವರ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿರುವ ಈ ಇಬ್ಬರಿಗೂ ಪತ್ರ ಬರೆದು ಅಭಿನಂದನೆ ಸಲ್ಲಿಸಿಲ್ಲ. ಕೊನೆಯ ಪಕ್ಷ ತಮ್ಮ ‘ಎಕ್ಸ್’ ಖಾತೆ ಮೂಲಕವೂ ಶುಭ ಕೋರಲಿಲ್ಲ.
ದೇಶದ ಯಾವುದೇ ಪ್ರಜೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಣನೀಯ ಸಾಧನೆಗೈದ ವೇಳೆ ಪ್ರಧಾನಿ ಅವರು, ಖುದ್ದಾಗಿ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ. ಕ್ರೀಡೆಯಲ್ಲಿ ಸೋತಾಗಲೂ ಕರೆ ಮಾಡಿ ಆತ್ಮವಿಶ್ವಾಸ ತುಂಬಿರುವ ನಿದರ್ಶನವಿದೆ. ಅವರ ಈ ನಡೆಯು ಅಭಿನಂದನಾರ್ಹ.
ಸದ್ಯ ಮೋದಿ ಅವರು ನಾರಿಶಕ್ತಿ ಅಭಿಯಾನದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಆದರೆ, ಬುಕರ್ ಪ್ರಶಸ್ತಿ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಈ ಮಹಿಳೆಯರ ಸಾಧನೆಯನ್ನು ಶ್ಲಾಘಿಸುವ ವಿಷಯದಲ್ಲಿ ಪ್ರಧಾನಿ ಅವರು ಮೌನ ತಳೆದಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ.
ಸುರೇಂದ್ರ ಪೈ, ಭಟ್ಕಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.