ADVERTISEMENT

ವಾಚಕರ ವಾಣಿ: ವೇತನ ವಿಳಂಬ ತರವೇ?

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 15:57 IST
Last Updated 24 ಆಗಸ್ಟ್ 2020, 15:57 IST

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಥಮ ದರ್ಜೆ ಸಹಾಯಕರೊಬ್ಬರು (ಎಫ್‌ಡಿಎ),
ತಾವು ನೇಮಕಗೊಂಡ ಒಂದು ವರ್ಷದ ನಂತರವೂ ಸಂಬಳ ದೊರೆಯದಿರುವುದಕ್ಕೆ ಮನನೊಂದು, ಕಚೇರಿ ಕೆಲಸಕ್ಕೆ ಧಕ್ಕೆಯಾಗದಂತೆ ರಾತ್ರಿ ಅವಧಿಯಲ್ಲಿ ಸೆಕ್ಯುರಿಟಿ ಕೆಲಸ ಮಾಡಲು ಇಲಾಖೆಯ ಆಯುಕ್ತರ ಅನುಮತಿ ಕೇಳಿರುವುದು (ಪ್ರ.ವಾ., ಆ. 20) ಶೋಚನೀಯ. ಇಲಾಖೆಗೆ ಸಿ ವೃಂದದ 100ಕ್ಕೂ ಹೆಚ್ಚು ಸಿಬ್ಬಂದಿ ನೇಮಕಗೊಂಡು ಒಂದು ವರ್ಷ ಕಳೆದಿದ್ದರೂ ಕೆಲವರಿಗೆ ಮಾತ್ರ ಕೆಲವು ತಿಂಗಳ ಸಂಬಳ ದೊರೆತಿದೆ, ಉಳಿದವರಿಗೆ ನೇಮಕಗೊಂಡ ದಿನದಿಂದಲೂ ಸಂಬಳ ಸಿಕ್ಕಿಲ್ಲದಿರುವುದು ಕಳವಳಕಾರಿ. ಸಂಬಳವೇ ಏಕಮಾತ್ರ ಆದಾಯದ ಮೂಲವಾಗಿ ಇರುವವರು ದೈನಂದಿನ ಜೀವನ ಸಾಗಿಸುವುದಾದರೂ ಹೇಗೆ? ತಾಂತ್ರಿಕ ಕಾರಣಗಳಿದ್ದಲ್ಲಿ, ಜೀವನ ನಿರ್ವಹಣೆಗೆ ಆಗುವಷ್ಟಾದರೂ ಹಣವನ್ನು ಮಧ್ಯಂತರವಾಗಿ ಬಿಡುಗಡೆ ಮಾಡಬಾರದೇಕೆ?

ಅನಿವಾರ್ಯ ಸ್ಥಿತಿಗೆ ಸಿಲುಕಿ, ಪ್ರೊಬೇಷನರಿ ಅವಧಿಯಲ್ಲೇ ಆಯುಕ್ತರಿಗೆ ಪತ್ರ ಬರೆದುದಕ್ಕೆ ಆ ವ್ಯಕ್ತಿಯ ಮೇಲೆ ಇಲಾಖೆ ಶಿಸ್ತು ಕ್ರಮವನ್ನೇನಾದರೂ ಜರುಗಿಸಿದರೆ ಆತನ ಗತಿ ಏನು? ಸಿಬ್ಬಂದಿಗೆ ಸಂಬಳ ಸಿಗದೆ ಒಂದು ವರ್ಷವೇ ಗತಿಸಿದ್ದರೂ ಆಯುಕ್ತರು ‘ನಾನು ಪರಿಶೀಲಿಸುತ್ತೇನೆ’ ಎಂದಿರುವುದು ಸೋಜಿಗ ಮೂಡಿಸುತ್ತದೆ. ಈವರೆಗೆ ವಿಷಯವನ್ನು ಸಂಬಂಧಪಟ್ಟ ಸಿಬ್ಬಂದಿ ಅವರ ಗಮನಕ್ಕೇ ತಂದಿಲ್ಲದಿರುವುದು (ನಿಜಕ್ಕೂ ತಂದಿಲ್ಲದಿದ್ದರೆ) ಇನ್ನೂ ಸೋಜಿಗದ ಸಂಗತಿ. ಇಂತಹ ವಿಷಯಗಳಲ್ಲಿ ಇಲಾಖೆ ಇಷ್ಟೊಂದು ಅಸೂಕ್ಷ್ಮವಾಗಬೇಕೇ?

-ಪುಟ್ಟೇಗೌಡ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.