ರಷ್ಯಾ– ಉಕ್ರೇನ್ ಯುದ್ಧ ಆರಂಭವಾದಾಗಿನಿಂದಲೂ ದಿನಪತ್ರಿಕೆಯಲ್ಲಿ ಯುದ್ಧದ ವರದಿಯನ್ನು ಓದುವಾಗ ನಾಗರಿಕರ ಮನಸ್ಸು ತಲ್ಲಣಿಸುತ್ತದೆ. ಆದರೆ ಈ ಯುದ್ಧದಲ್ಲಿ ಅತ್ಯಾಚಾರ ಸಹ ಒಂದು ಅಸ್ತ್ರವಾಗಿದೆ ಎಂಬುದನ್ನು ತಿಳಿದು (ಪ್ರ.ವಾ., ಜೂನ್ 20) ಆಘಾತವಾಯಿತು. ಬಹಳಷ್ಟು ಉನ್ನತಿಯನ್ನು ಸಾಧಿಸಿರುವ ರಷ್ಯಾದಂತಹ ದೇಶವೊಂದರ ಸೈನಿಕರು ಇಂತಹ ಹೀನ ಕೃತ್ಯ ಎಸಗಿದ್ದಾರೆಂದರೆ ಏನು ಹೇಳಬೇಕು? ಯುದ್ಧ, ಆಕ್ರಮಣದಂತಹ ನಾನಾ ಕಾರಣಗಳಿಗಾಗಿ ಸ್ತ್ರೀ ಸಮುದಾಯದ ಮೇಲೆ ಅತ್ಯಾಚಾರದ ಆಯುಧವನ್ನು ಬಳಸಿರುವ ಇತಿಹಾಸ ಇದೆ. ಆದರೆ ಇತಿಹಾಸದಿಂದ ಪಾಠ ಕಲಿತ ಜಗತ್ತು, 90ರ ದಶಕದ ನಂತರ ಶಿಕ್ಷಣ, ತಂತ್ರಜ್ಞಾನ, ಅಭಿವೃದ್ಧಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮಾನವೀಯ ಮೌಲ್ಯಗಳನ್ನು ಆಶಿಸುತ್ತಾ ಬದುಕುತ್ತಿದೆ. ಅದರಂತೆ, ರಾಷ್ಟ್ರಗಳು ಸೌಹಾರ್ದಯುತ ಅಂತರರಾಷ್ಟ್ರೀಯ ಸಂಬಂಧಕ್ಕೆ ಒತ್ತು ನೀಡುತ್ತಾ ಬಂದಿವೆ. ಆದರೆ ರಷ್ಯಾದ ಸೈನಿಕರ ಈಗಿನ ವರ್ತನೆಯು ನಾಗರಿಕ ಜಗತ್ತು ತಲೆ ತಗ್ಗಿಸುವಂತಿದೆ. ಸುವರ್ಣ ಸಿ.ಡಿ., ತರೀಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.