ADVERTISEMENT

ಪ್ರಜಾವಾಣಿ@75: ನನ್ನನ್ನು ಬೆಳೆಸಿದ್ದೇ ಪ್ರಜಾವಾಣಿ -ಡಾ.ಡಿ.ಎಸ್.ಚೌಗಲೆ

ಪ್ರಜಾವಾಣಿ ವಿಶೇಷ
Published 24 ಅಕ್ಟೋಬರ್ 2022, 1:15 IST
Last Updated 24 ಅಕ್ಟೋಬರ್ 2022, 1:15 IST
   

‘ನನ್ನನ್ನು ಬೆಳೆಸಿದ್ದೇಪ್ರಜಾವಾಣಿ’

‘ಪ್ರಜಾವಾಣಿ’ ಯಾವತ್ತಿಗೂ ಜನರ ದನಿಯಾದ ಏಕೈಕ ದೈನಿಕ. ಒಂದು ಪ್ರಸಂಗ ನೆನಪಾಗುತ್ತದೆ. ಎಸ್.ಎಂ.ಕೃಷ್ಣ ಅವರ ಆಡಳಿತವಿತ್ತು. ಆಗ ಸರ್ಕಾರ ಖಾಸಗಿ ಅನುದಾನಿತ ಕಾಲೇಜುಗಳ ಅನುದಾನವನ್ನು ಶೇಕಡ 15ರಷ್ಟು ಕಡಿತಗೊಳಿಸಲು ಹೊರಟಿತ್ತು. ಅಂದು ಆ ಅವೈಜ್ಞಾನಿಕ ನೀತಿಯನ್ನು ಖಂಡಿಸಿದ್ದೇ ನಮ್ಮ ಹೆಮ್ಮೆಯ ಪ್ರಜಾವಾಣಿ! ಈ ನೀತಿ ಮಾನವ ವಿರೋಧಿ ಹಾಗೂ ಕಾಲೇಜು ಮತ್ತು ಇತರ ಅನುದಾನಿತ ಶಾಲೆಗಳ ಶಿಕ್ಷಕರ, ಸಿಬ್ಬಂದಿಯ ಅನ್ನ ಕಸಿಯುವ ಅನಿಷ್ಟ ತಂತ್ರವೆಂದು ಸರ್ಕಾರಕ್ಕೆ ಚಾಟಿ ಬೀಸಿತು. ಅಭಿಯಾನ ಸ್ವರೂಪದಲ್ಲಿ ಅನುದಾನಿತ ಶಿಕ್ಷಕರ ಬೆನ್ನಿಗೆ ನಿಂತು ಅದರಲ್ಲಿ ಯಶಸ್ಸು ಕಂಡಿತು. ಶಿಕ್ಷಕರ ಸಂಬಳಕ್ಕೆ ಬೀಳಲಿದ್ದ ಕತ್ತರಿ ತಪ್ಪಿಸಿತು. ವರ್ತಮಾನದ ದುರಿತ ಕಾಲದಲ್ಲೂ ಜನರ ವಾಣಿಯಾಗಿ ಪ್ರಭುತ್ವಗಳ ದುರಾಡಳಿತ, ಜನವಿರೋಧಿ ನೀತಿಯನ್ನು ಕಟುವಾಗಿ ಟೀಕಿಸಿ, ವಿಮರ್ಶಿಸುತ್ತ ಬಂದಿದೆ. ಇದಷ್ಟೇ ಅಲ್ಲ, ನನ್ನನ್ನು ಬೆಳೆಸಿದ್ದೆ ಪ್ರಜಾವಾಣಿ. ಸಾಹಿತ್ಯ, ಚಿತ್ರಕಲೆ, ರಂಗಭೂಮಿ ಕುರಿತ ಬರಹಗಳನ್ನು ಎರಡು ದಶಕಗಳಿಗೂ ಮಿಕ್ಕಿದ ಅವಧಿಯಲ್ಲಿ ಪ್ರಕಟಿಸುತ್ತ ಬಂದಿದೆ. ಆ ನಿಟ್ಟಿನಲ್ಲಿ ನನ್ನೊಳಗೆ ಆತ್ಮವಿಶ್ವಾಸ ಹೆಚ್ಚಿಸಿದ್ದೂ ನಮ್ಮ ಪ್ರಜಾವಾಣಿಯೇ!

ಡಾ.ಡಿ.ಎಸ್.ಚೌಗಲೆ,ನಾಟಕಕಾರ, ಚಿತ್ರ ಕಲಾವಿದ, ಬೆಳಗಾವಿ

ADVERTISEMENT

****

‘ಸುದ್ದಿ ಬರೆಯಲು ಕಲಿತೆ’

‘ಪ್ರಜಾವಾಣಿ’ ಅಮೃತ ಮಹೋತ್ಸವ ವರ್ಷಕ್ಕೆ ಕಾಲಿಟ್ಟಿರುವುದು ಸಂತೋಷ ತಂದಿದೆ. ‘ಪ್ರಜಾವಾಣಿ’ಯನ್ನು ನಾನು ಐವತ್ತು ವರ್ಷಗಳಿಂದ ಓದುತ್ತಿದ್ದೇನೆ. ನನ್ನ ಊರು ರಾಮದುರ್ಗದಿಂದ ಮೂರು ಕಿಲೋಮೀಟರ್ ಇದ್ದರೂ ಕೂಡ ಪತ್ರಿಕೆಯನ್ನು ತಂದು ಓದುತ್ತಿದ್ದೇನೆ. ನನಗೀಗ 78 ವರ್ಷ. ಪ್ರಜಾವಾಣಿ ಓದಿದರೆ ಮನಸ್ಸಿಗೆ ಸಮಾಧಾನ. ಓದದಿದ್ದರೆ ಏನೋ ಕಳೆದುಕೊಂಡಂತಾಗುತ್ತದೆ. ನಾನು ಹೆಚ್ಚು ಕಲಿತವನಲ್ಲ. ಪತ್ರಿಕೆ ಓದುತ್ತಾ ಚಿಕ್ಕ ಚಿಕ್ಕ ಸುದ್ದಿಗಳನ್ನು ಬರೆಯಲು ಕಲಿತುಕೊಂಡಿದ್ದೇನೆ. ಪ್ರಜಾವಾಣಿಯು ಓದುಗರಿಂದ ಸಂಗ್ರಹಿಸಿದ ಹಣವನ್ನು ಕೂಡಿಸಿ ಮೊದಲ ವರ್ಷದ ಪಿಯುಸಿ ಓದುವ ಬಡ ಮಕ್ಕಳಿಗೆ ಪ್ರತಿ ವರ್ಷ ವಿದ್ಯಾರ್ಥಿ ವೇತನ ನೀಡುವ ಮೂಲಕ ಸಹಾಯ ಮಾಡುತ್ತಿದೆ. ಪ್ರಜಾವಾಣಿ ಪತ್ರಿಕೆ ಸದಾಕಾಲ ಸಮಾಜದ ಕಣ್ಣು ತೆರೆಸುವ ಕೆಲಸ ಮಾಡುತ್ತಾ ಹೋಗಲಿ. ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಶುಭ ಕೋರುತ್ತೇನೆ.

ಬಸಪ್ಪ ಎಸ್‌.ಮುಳ್ಳೂರ,ಹಲಗತ್ತಿ, ರಾಮದುರ್ಗ ತಾ.

****

‘ವಕೀಲನಾಗಲು ಪ್ರೇರೇಪಣೆ ನೀಡಿದ ಪ್ರಜಾವಾಣಿ’

1955ಲ್ಲಿ ನಾನು ಐದನೇ ತರಗತಿಯಲ್ಲಿದ್ದಾಗ ದಿ.ಕೆಂಗಲ್‌ ಹನುಮಂತಯ್ಯನವರು ಮೈಸೂರು ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಬೆಂಗಳೂರಿನ ಗಾಂಧಿನಗರದಲ್ಲಿ ಕ್ರಿಮಿನಲ್‌ ಲಾಯರ್‌ ಬೇಲೂರು ಶ್ರೀನಿವಾಸ ಅಯ್ಯಂಗಾರ್‌ ಮತ್ತು ಅವರ ಕುಟುಂಬದ ಇತರೆ ಆರು ಮಂದಿ ಒಂದು ರಾತ್ರಿ ಕೊಲೆಯಾಗಿದ್ದರು. ಮರುದಿನ ಬೆಳಿಗ್ಗೆ ಕೆಂಗಲ್ ಹನುಮಂತಯ್ಯನವರು, ಗೃಹ ಸಚಿವರು ಮತ್ತು ಐಜಿಪಿಗಳು ಸ್ಥಳಕ್ಕೆ ಭೇಟಿ ಕೊಟ್ಟ ಕುರಿತು ‘ಪ್ರಜಾವಾಣಿ’ ಮುಖಪುಟದಲ್ಲಿ ದೊಡ್ಡ ಸುದ್ದಿಯಾಯಿತು. ಮರುವರ್ಷ ಈ ಕೊಲೆ ಪ್ರಕರಣದ ವಿಚಾರಣೆ ಆರಂಭವಾಯಿತು. ಮೂರು ತಿಂಗಳ ಕಾಲ ಎಡೆಬಿಡದೇ ನಡೆಯಿತು. ವಿಚಾರಣೆಯ ವಿವರಗಳು ಪ್ರಜಾವಾಣಿ ಮುಖಪುಟದಿಂದಲೇ ಪ್ರಕಟವಾಗುತಿತ್ತು. ಜನರು ಪತ್ರಿಕೆಗಾಗಿ ಊರುಗಳಲ್ಲಿ, ಬಸ್‌ಗಳು
ನಿಲ್ಲುತ್ತಿದ್ದ ಜಾಗದಲ್ಲಿ ನಿಂತು ಪತ್ರಿಕೆ ಪಡೆದು ಓದುತ್ತಿದ್ದರು.

ನಾನು 13 ಜನರಿದ್ದ ಅವಿಭಕ್ತ ಕುಟುಂಬದಲ್ಲಿ ಒಬ್ಬ. ಅಕ್ಷರಾಭ್ಯಾಸ ಮಾಡುತ್ತಿದ್ದವನು ನಾನೊಬ್ಬನೇ. ಪ್ರತಿ ಸಂಜೆ 7.30ಕ್ಕೆ ನನ್ನ ದೊಡ್ಡಪ್ಪಂದಿರು ನನ್ನಿಂದ ಪ್ರಜಾವಾಣಿ ಓದಿಸುತ್ತಿದ್ದರು. ಅಷ್ಟರಲ್ಲಿ ನೆರೆಹೊರೆಯುವರು ಬಂದು ಸೇರುತ್ತಿದ್ದರು. ಅಲ್ಲಿ, ಎರಡು ಗುಂಪಾಗುತ್ತಿದ್ದು ಒಂದು ಪೊಲೀಸರ ಪರ, ಮತ್ತೊಂದು ಆರೋಪಿ ಪರ. ಆಗ ಆರೋಪಿ ಪರ ವಕೀಲರು ಭಾಷ್ಯಮ್ ಮತ್ತು ಮಹೇಶಚಂದ್ರ ಗುರು. ಭಾಷ್ಯಮ್‌ ಕ್ರಿಮಿನಲ್‌ ವಕೀಲ ಮತ್ತು ಕಾಂಗ್ರೆಸ್‌ ಧುರೀಣ. ಅವರ ಹೆಸರಿನಲ್ಲಿ ನಗರದಲ್ಲಿ ಎರಡು ವೃತ್ತಗಳಿವೆ. ಒಂದು ಗುಂಪು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕಾರ್ಯವೈಖರಿ ಪ್ರದರ್ಶಿಸಿದರೆ, ಇನ್ನೊಂದು ಗುಂಪು ಆರೋಪಿ ಪರ ವಕೀಲರ ಪಾಟಿ ಸವಾಲು ಮತ್ತು ಮಾತಿನ ಕೌಶಲ ಪ್ರಶಂಸಿಸುತಿತ್ತು. ಆಗಲೇ ನನಗೆ ಅನಿಸತೊಡಗಿತು. ನಾನು ಮುಂದೆ ಆಗುವುದಾದರೆ, ಜೀವನ್ಮರಣಗಳ ಮಧ್ಯೆ ಸೆಣಸುವ ವಕೀಲನಾಗಬೇಕೆಂದು. ಅಂದು ‘ಪ್ರಜಾವಾಣಿ’ ಉಂಟು ಮಾಡಿದ ಪ್ರೇರಣೆಯಿಂದ ವಕೀಲನಾಗಿ ವೃತ್ತಿಯನ್ನು 50 ವರ್ಷಗಳಿಂದ ಮುಂದುವರಿಸುತ್ತಿದ್ದೇನೆ.

ಸಿ.ಎಚ್.ಹನುಮಂತರಾಯ,ವಕೀಲರು

****
‘ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ’

‘ಪ್ರಜಾವಾಣಿ’ ಪತ್ರಿಕೆಯನ್ನು ಓದುವುದೇ ಖುಷಿ ನೀಡುವ ವಿಚಾರ. ಒಬ್ಬಳು ಅಥ್ಲೀಟ್‌ ಆಗಿ ನನ್ನ ಯಶಸ್ಸಿನಲ್ಲಿ ಪತ್ರಿಕೆಯ ಕೊಡುಗೆಯೂ ಇದೆ. ಯುವ ಕ್ರೀಡಾ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡಿದೆ. ಸುದ್ದಿಯನ್ನು ನಿಷ್ಪಕ್ಷಪಾತವಾಗಿ ಓದುಗರಿಗೆ ತಲುಪಿಸುವ ಕೆಲಸವನ್ನು ಹಲವು ದಶಕಗಳಿಂದ ಮಾಡಿಕೊಂಡು ಬರುತ್ತಿದೆ. ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಎನಿಸಿದೆ. ಈ ಪತ್ರಿಕೆ ಭವಿಷ್ಯದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ.

ಅಶ್ವಿನಿ ನಾಚಪ್ಪ,ಅಂತರರಾಷ್ಟ್ರೀಯ ಅಥ್ಲೀಟ್‌

****

ನಿಮ್ಮ ಅನಿಸಿಕೆಗಳನ್ನು pvat75@prajavani.co.in ಗೆ ಕಳುಹಿಸಿ. ಇನ್ನಷ್ಟು ಪ್ರತಿಕ್ರಿಯೆಗಳನ್ನು prajavani.net ನಲ್ಲಿ ಓದಬಹುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.